ಮಂಡ್ಯ ನಗರದ ಕಲಾ ಮಂದಿರದಲ್ಲಿ ಶನಿವಾರ ಶ್ರಮಿಕ ಶಕ್ತಿ ಸಹಯೋಗದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ ಬಿಲ್ ಜಾರಿ ವಿರೋಧ ಸಭಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಜನಶಕ್ತಿ ಸಂಘಟನೆಯ
ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಉದ್ಘಾಟಿಸಿ ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ ಅಭಿವೃದ್ಧಿ ಹೆಸರು ಹೇಳಿಕೊಂಡು ಬಂಡವಾಳ ಶಾಹಿಗಳ ಅನುಕೂಲಕ್ಕೆ ತಕ್ಕಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಜಮೀನು ಕಬಳಿಸ ಹೊರಟಿವೆ. ಎಲ್ಲರೂ ಸೇರಿ ಒಕ್ಕೋರಲಿನಿಂದ ಹೋರಾಟದ ಮೂಲಕ ನಮ್ಮ ಹಕ್ಕನ್ನು ಪ್ರತಿಪಾದಿಸಬೇಕಿದೆ ‘ ಎಂದರು.
ಬೆಂಗಳೂರಿನ ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣ ಭಾಗದಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಕಬಳಿಸಲು ಹೊರಟಿದೆ. ಈಗಾಗಲೇ ಹೋರಾಟ ನಡೆಯುತ್ತಿದ್ದು ಈ ಹೋರಾಟಕ್ಕೆ ಎಲ್ಲಾ ಸಂಫಟನೆಗಳ ಮುಖಂಡರು ಸೇರಿ ದೊಡ್ಡಮಟ್ಟದ ಹೋರಾಟ ರೂಪಿಸಬೇಕಿದೆ ಎಂದು ಕರೆ ನೀಡಿದರು.

ಈ ಹೋರಾಟದಲ್ಲಿ ಮಂಡ್ಯ ಜಿಲ್ಲೆಯ ರೈತ ಚಳುವಳಿಯ ರೈತರು ಅತಿಹೆಚ್ಚಾಗಿ ಪಾಲ್ಗೊಳ್ಳಬೇಕು, ರೈತ ಚಳುವಳಿ ಮುನ್ನಡೆಸಬೇಕು ನಮ್ಮ ಭೂಮಿಯನ್ನು ಉಳಿಸುವ ಹೋರಾಟಕ್ಕೆ ಜೀವ ತುಂಬಬೇಕು. ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಗಟ್ಟಿಯಾಗಿ ವಿರೋಧಿಸಲು ಸಾಧ್ಯ. ಈ ಮೂಲಕ ರೈತರ ಆಕ್ರೋಶದ ಬಿಸಿ ಮುಟ್ಟಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದುಡಿಯುವ ಕಾರ್ಮಿಕ ವರ್ಗಕ್ಕೆ 8 ರಿಂದ 12 ಗಂಟೆಗೆ ಕಾಲಮಿತಿ ಏರಿಕೆ ಸರಿಯಲ್ಲ. ಇದನ್ನ ವಾಪಸ್ ಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಹಿತ ಮರೆತಿವೆ. ದುಡಿಯುವ ವರ್ಗಗಳ ಬದುಕನ್ನು ಕಸಿಯುವ ಕೆಲಸ ಮಾಡುತ್ತಿವೆ. ಇಂತಹ ನಿಲುವುಗಳು ಕಾರ್ಮಿಕರನ್ನು ಇನ್ನಷ್ಟು ಘಾಸಿಗೊಳಿಸಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ ” ದುಡಿಯುವ ಕಾರ್ಮಿಕ ವಲಯಕ್ಕೆ ತಿಂಗಳಿಗೆ ಕನಿಷ್ಠ 35 ಸಾವಿರ ವೇತನ ನೀಡಬೇಕು. ಕಾರ್ಮಿಕರಿಗೆ ಭದ್ರತೆ ಒದಗಿಸುವುದರ ಜೊತೆಗೆ. ಉಚಿತ ಶಿಕ್ಷಣ, ಉದ್ಯೋಗ, ಮೂಲಭೂತ ಸೌಕರ್ಯ ಕಲ್ಪಿಸಿ, ವಸತಿ ಖಾತ್ರಿಪಡಿಸಬೇಕು. ನೂತನ ಶಿಕ್ಷಣ ನೀತಿಯನ್ನು ರದ್ದುಗೊಳಿಸಬೇಕು ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಮಾದಿಗರ ಕಿವಿಗೆ ಸರ್ಕಾರ ಹೂ ಮುಡಿಸಿದೆ : ಭಾಸ್ಕರ್ ಪ್ರಸಾದ್ ಕಿಡಿ
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯಾಧ್ಯಕ್ಷ ವರದರಾಜು, ಜನಶಕ್ತಿ ಸಂಘಟನೆಯ ಪೂರ್ಣಿಮಾ, ಸತೀಶ್ ಅರವಿಂದ್, ಚನ್ನಮ್ಮ, ರವಿ ಮೋಹನ್ ಸೇರಿದಂತೆ ಇನ್ನಿತರರು ಇದ್ದರು.