ದಕ್ಷಿಣ ಭಾರತದ ಎರಡು ಮುಖ್ಯ ರಾಜ್ಯಗಳು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದಿಂದ ಹೊರಗುಳಿದಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮೈತ್ರಿಕೂಟದ ಸಭೆಗಾದರೂ ಅವೆರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು, ಎರಡು ಪಕ್ಷಗಳ ಮುಖಂಡರನ್ನು ಒಳಗೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬಹುದಿತ್ತು.
ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿ ಸಭೆ ನಡೆಯುತ್ತಿದೆ. ಇಂದು ಮತ್ತು ನಾಳೆ (ಜುಲೈ 17, 18) ರಂದು ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ದೇಶದ ನಾನಾ ರಾಜ್ಯಗಳ ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರು ಉದ್ಯಾನನಗರಿಗೆ ಆಗಮಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಪಿಎಂನ ಸೀತಾರಾಮ್ ಯೆಚೂರಿ, ಎಸ್‌ಪಿಯ ಅಖಿಲೇಶ್ ಯಾದವ್, ಸಿಪಿಐನ ಡಿ ರಾಜಾ, ಜಮ್ಮು ಕಾಶ್ಮೀರದಿಂದ ಪಿಡಿಪಿಯ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ, ಆರ್‌ಜೆಡಿಯ ಲಾಲುಪ್ರಸಾದ್ ಯಾದವ್, ಶಿವಸೇನೆಯ (ಯುಬಿಟಿ) ಉದ್ಧವ್ ಠಾಕ್ರೆ ಮುಂತಾದವರು ಸೇರಿದಂತೆ 24 ಪಕ್ಷಗಳು ಅಂದಾಜು 49 ನಾಯಕರು ಮಹಾ ಮೈತ್ರಿಕೂಟದ ಭಾಗವಾಗಲಿದ್ದಾರೆ.
ಕರ್ನಾಟಕದ ವಿಧಾನಸಭೆಯ ಪ್ರಚಂಡ ವಿಜಯದೊಂದಿಗೆ ಆತ್ಮವಿಶ್ವಾಸದಿಂದ ಬೀಗುತ್ತಿರುವ ಕಾಂಗ್ರೆಸ್ ಮಹಾಮೈತ್ರಿಯ ನೇತೃತ್ವ ವಹಿಸಿದ್ದು, ಆತಿಥೇಯರ ಪಾತ್ರ ವಹಿಸಿದೆ. ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಇವರ ಜೊತೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇರಲಿದ್ದಾರೆ.
ಈ ಮಹಾಮೈತ್ರಿಯ ಗುಂಪನ್ನು ನೋಡಿದರೆ, ಎದ್ದು ಕಾಣುವ ಅಂಶ, ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರತಿನಿಧಿಗಳ ಗೈರು. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೊರತುಪಡಿಸಿದರೆ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಬಂದಿಲ್ಲ. ಸಿಪಿಐನಿಂದ ಡಿ ರಾಜಾ ಬಂದಿದ್ದರೂ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೈರು ಹಾಜರಿ ಎದ್ದು ಕಾಣುತ್ತಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆ ಆದ ನಂತರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಪಿಣರಾಯಿಗೆ ಕಾಂಗ್ರೆಸ್ ಆಹ್ವಾನ ನೀಡಿರಲಿಲ್ಲ. ಆಗ ಸಿಪಿಎಂ ಮುಖಂಡ ಪ್ರಕಾಶ್ ಕಾರಟ್ ಸೇರಿದಂತೆ ಹಲವರು ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದರು. ‘ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಏನೂ ಮಾಡಲಾಗುವುದಿಲ್ಲ, ಫ್ಯಾಸಿಸ್ಟ್ ಬಿಜೆಪಿ ವಿರುದ್ಧ ಜಾತ್ಯತೀತವಾದ ಪ್ರಜಾತಾಂತ್ರಿಕ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಇದರಿಂದ ಹಿನ್ನಡೆಯಾಗುತ್ತೆ’ ಎಂದು ಪ್ರಕಾಶ್ ಕಾರಟ್ ಟೀಕಿಸಿದ್ದರು. ಅದರ ನಂತರ ಕೊಂಚ ಬುದ್ಧಿ ಕಲಿತಂತಿರುವ ಕಾಂಗ್ರೆಸ್ ಈ ಬಾರಿ ಸಿಪಿಐ ಮತ್ತು ಸಿಪಿಎಂ ಅನ್ನು ಮೈತ್ರಿಕೂಟ ಸಭೆಗೆ ಆಹ್ವಾನಿಸಿದೆ.
ಆದರೆ, ಉತ್ತರ ಭಾರತದ ಪಕ್ಷಗಳು, ಮುಖಂಡರಿಗೆ ಹೋಲಿಸಿದರೆ, ಮಹಾಮೈತ್ರಿಯಲ್ಲಿ ಭಾಗವಹಿಸಿರುವ ದಕ್ಷಿಣದ ಬಿಜೆಪಿಯೇತರ ಪಕ್ಷಗಳ ಮುಖಂಡರು ತೀರಾ ಕಡಿಮೆ. ಅದರ ಬಗ್ಗೆ ರಾಜಕೀಯ ವಲಯದಲ್ಲಿ ವಿಭಿನ್ನ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಬಿಜೆಪಿಗೆ ದಕ್ಷಿಣದಲ್ಲಿ ಕರ್ನಾಟಕ ಬಿಟ್ಟರೆ ಉಳಿದ ಯಾವ ರಾಜ್ಯದಲ್ಲೂ ಅಸ್ತಿತ್ವ ಇಲ್ಲ. ಹೀಗಾಗಿ ಕಾಂಗ್ರೆಸ್‌ಗೆ ದಕ್ಷಿಣದಲ್ಲಿ ಪಕ್ಷವನ್ನು ಬೆಳೆಸುವ ಅವಕಾಶಗಳಿದ್ದವು. ಅದಕ್ಕಿಂತಲೂ ಹೆಚ್ಚಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ದಕ್ಷಿಣ ಭಾರತವೇ ಆರಂಭ ಬಿಂದುವನ್ನಾಗಿ ಮಾಡಿಕೊಳ್ಳುವ ಅವಕಾಶಗಳಿದ್ದವು. ಯಾಕೆಂದರೆ, ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದು, ಎಲ್ಲವೂ ಬಿಜೆಪಿ ವಿರೋಧಿ ಪಕ್ಷಗಳಾಗಿವೆ. ಇದೇ ಹಿನ್ನೆಲೆಯಲ್ಲಿಯೇ ರಾಹುಲ್ ಗಾಂಧಿ ದಕ್ಷಿಣದಿಂದಲೇ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು. ಆದರೆ, ತಮಿಳುನಾಡು ಬಿಟ್ಟರೆ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಕಾಂಗ್ರೆಸ್ ಪಾಲಿಗೆ ಈಗಲೂ ಸವಾಲಾಗಿಯೇ ಉಳಿದಿವೆ.
ವೈ ಎಸ್ ರಾಜಶೇಖರ ರೆಡ್ಡಿ ಇರುವವರೆಗೂ ಅವಿಭಜಿತ ಆಂಧ್ರಪ್ರದೇಶ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಪ್ರಬಲ ತೆಲುಗು ದೇಶಂ ಪಕ್ಷವನ್ನು ಸತತ ಎರಡು ಚುನಾವಣೆಗಳಲ್ಲಿ ಸೋಲಿಸಿ ಅಧಿಕಾರ ಹಿಡಿದಿದ್ದ ವೈಎಸ್‌ಅರ್, ಆಂಧ್ರದಿಂದ ಅತಿ ಹೆಚ್ಚು ಲೋಕಸಭಾ ಸದಸ್ಯರನ್ನು ಆರಿಸಿ ಕಳಿಸುವ ಮೂಲಕ ಕಾಂಗ್ರೆಸ್‌ನ ಬಲವಾಗಿದ್ದರು. ಆದರೆ, ವೈಎಸ್‌ಆರ್ ಅಕಾಲಿಕ ಸಾವು ಮತ್ತು ನಂತರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿದಂದಿನಿಂದ ಕಾಂಗ್ರೆಸ್‌ಗೆ ಎರಡೂ ತೆಲುಗು ರಾಜ್ಯಗಳಲ್ಲಿ ನೆಲೆಯೇ ಇಲ್ಲದಂತಾಗಿದೆ.
ಪ್ರತ್ಯೇಕ ತೆಲಂಗಾಣ ರಾಜ್ಯದ ಉದಯಕ್ಕೆ ಕಾರಣವಾದರೂ ಅದರ ಕ್ರೆಡಿಟ್ ಪಡೆಯಲು ಕಾಂಗ್ರೆಸ್‌ಗೆ ಬಿಆರ್‌ಎಸ್‌ನ ಕೆ ಚಂದ್ರಶೇಖರ ರಾವ್ ಅವಕಾಶವನ್ನೇ ನೀಡಲಿಲ್ಲ. 2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 19 ಸ್ಥಾನಗಳನ್ನು ಮಾತ್ರ. ಇನ್ನು 17 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು ಮೂರು ಸ್ಥಾನಗಳನ್ನು. ರೇವಂತ್ ರೆಡ್ಡಿ ಪಿಸಿಸಿ ಅಧ್ಯಕ್ಷರಾದ ನಂತರ ಅಲ್ಲಿ ಕಾಂಗ್ರೆಸ್ ಪರಿಸ್ಥಿತಿ ಬಿಜೆಪಿಗಿಂತ ಉತ್ತಮವಾಗಿದೆ ಎನ್ನುವುದು ಬಿಟ್ಟರೆ, ಅದು ಗದ್ದುಗೆ ಏರುವ ದಿನಗಳು ಬಹಳ ದೂರದಲ್ಲಿವೆ. ತೆಲಂಗಾಣ ಸಿಎಂ ಕೆಸಿಆರ್ ಕೇಜ್ರಿವಾಲ್ ಅವರಂತೆಯೇ ಮೋದಿಯವರ ಕಟು ಟೀಕಾಕಾರ. ದೆಹಲಿಗೇ ನುಗ್ಗಿ ಮೋದಿ ಅವರನ್ನು ಎದುರಿಸುವ ಛಾತಿ ತೋರಿದ ನಾಯಕ. ಅದನ್ನು ಪರಿಗಣನೆಗೆ ತೆಗೆದುಕೊಳ್ಳದ ಕಾಂಗ್ರೆಸ್, ತೆಲಂಗಾಣದ ಗದ್ದುಗೆಯ ಕನಸು ಕಾಣುತ್ತಾ ಕೆಸಿಆರ್ ವಿರುದ್ಧ ಸಮರಕ್ಕಿಳಿದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಜೆಡಿಎಸ್ ಅನ್ನು ಬೆಂಬಲಿಸಿತ್ತು ಎನ್ನುವುದೂ ಕಾಂಗ್ರೆಸ್‌ನ ಕೆಸಿಆರ್ ವಿರೋಧಕ್ಕೆ ಒಂದು ಕಾರಣವಿದ್ದಿರಬಹುದು.
ಇನ್ನು ರಾಜ್ಯ ಒಡೆದ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ಕೆಂಡ ಕಾರುತ್ತಿರುವ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ಗೆ ವಿಧಾನಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ ಒಬ್ಬನೇ ಒಬ್ಬ ಪ್ರತಿನಿಧಿಯೂ ಇಲ್ಲ. ಅಲ್ಲಿನ ಜನರ ಕಾಂಗ್ರೆಸ್ ವಿರೋಧಿ ಭಾವನೆ ನೋಡಿದರೆ, ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಇಲ್ಲಿ ಅಕೌಂಟ್ ತೆರೆಯುವುದು ಅನುಮಾನ. ಆಂಧ್ರದಲ್ಲಿ ಬಿಜೆಪಿ ಟಿಡಿಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿರುವುದರಿಂದ ವೈಎಸ್‌ಆರ್‌ಸಿಪಿ ಕೂಡ ಮೋದಿ ವಿರೋಧಿ ಪಾಳಯದಲ್ಲಿದೆ. ಜೊತೆಗೆ ಅದು ಕಾಂಗ್ರೆಸ್‌ನಿಂದಲೂ ಸಮಾನ ಅಂತರ ಕಾಯ್ದುಕೊಂಡಿದೆ.
ಕೊನೆಯ ಪಕ್ಷ ಆಂಧ್ರದಲ್ಲಿ ಮತ್ತು ತೆಲಂಗಾಣದಲ್ಲಿ ಬಿಜೆಪಿಯನ್ನು ಸೋಲಿಸಬೇಕೆನ್ನುವ ಕಾರಣಕ್ಕೆ ವೈ ಎಸ್ ಜಗನ್‌ಮೋಹನ್ ರೆಡ್ಡಿ ಮತ್ತು ಕೆಸಿಆರ್ ಅವರ ಬೆಂಬಲ ಪಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಹೀಗಾಗಿ ದಕ್ಷಿಣ ಭಾರತದ ಎರಡು ಮುಖ್ಯ ರಾಜ್ಯಗಳು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದಿಂದ ಹೊರಗುಳಿದಿವೆ. ಅದರಲ್ಲೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೈತ್ರಿಕೂಟದ ಸಭೆಗಾದರೂ ಅವೆರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು, ಎರಡು ಪಕ್ಷಗಳ ಮುಖಂಡರನ್ನು ಒಳಗೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬಹುದಿತ್ತು. ಆದರೆ, ಹಾಗಾಗಿಲ್ಲ. ದಕ್ಷಿಣದ ಎರಡು ತೆಲುಗು ರಾಜ್ಯಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಒಕ್ಕೂಟ ರಚನೆಯ ಕಾಂಗ್ರೆಸ್ ಪ್ರಯತ್ನಕ್ಕೆ ಸವಾಲಾಗಿಯೇ ಉಳಿಯಲಿವೆ.
ಈ ಸುದ್ದಿ ಓದಿದ್ದೀರಾ: ಬೆಂಗಳೂರಿನಲ್ಲಿ ವಿಪಕ್ಷಗಳ ಒಗ್ಗಟ್ಟಿನ ಸಭೆ : ಯುಪಿಎ ಹೆಸರು ಬದಲಾವಣೆ ಸಾಧ್ಯತೆ
ತೆಲಂಗಾಣ ರಾಷ್ಟ್ರ ಸಮಿತಿ ಎಂಬ ತಮ್ಮ ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ ಎಂದು ಬದಲಾಯಿಸಿರುವ ಕೆಸಿಆರ್ ರಾಷ್ಟ್ರ ರಾಜಕರಣದಲ್ಲಿ ಮಹತ್ವದ ಪಾತ್ರ ವಹಿಸುವ ಇರಾದೆ ಹೊಂದಿದ್ದಾರೆ. ಅವರು ಕೆಲವು ತಿಂಗಳ ಹಿಂದೆ ಮೋದಿ ವಿರೋಧಿ ಕೂಟವೊಂದನ್ನು ರಚಿಸುವ ಸೂಚನೆ ನೀಡಿದ್ದರು. ತೆಲಂಗಾಣದ ಖಮ್ಮಂನಲ್ಲಿ ಕೆಸಿಆರ್ ಆಯೋಜಿಸಿದ್ದ ರ್‍ಯಾಲಿಯಲ್ಲಿ ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಡಿ ರಾಜಾ, ಪಿಣರಾಯಿ ವಿಜಯನ್ ಮುಂತಾದವರು ಭಾಗವಹಿಸಿದ್ದರು. ಹೀಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಪ್ರತ್ಯೇಕವಾಗಿ ಬಿಜೆಪಿ ವಿರೋಧಿ ಕೂಟಗಳನ್ನು ರಚಿಸಿಕೊಳ್ಳುವುದರಿಂದ ಅಂತಿಮವಾಗಿ ಬಿಜೆಪಿ ವಿರೋಧಿ ಬಲ ಛಿದ್ರಗೊಂಡು ಬಿಜೆಪಿಗೇ ಅನುಕೂಲವಾಗುತ್ತದೆ. ಇದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕಿದೆ. ಒಂದು ದೊಡ್ಡ ಗುರಿ ಸಾಧನೆಗಾಗಿ ಕೊಂಚ ಬಾಗುವುದನ್ನೂ ಕಾಂಗ್ರೆಸ್ ಕಲಿಯಬೇಕಿದೆ.
‘ಕಾಂಗ್ರೆಸ್, ದೇಶದಲ್ಲಿ ಯಾವ ರೀತಿಯ ಬಿಜೆಪಿ ವಿರೋಧಿ ನಿಲುವು ತಳೆಯಲು ಹೊರಟಿದೆ’ ಎಂದು ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸದೇ ಇದ್ದುದಕ್ಕೆ ಸಂಬಂಧಿಸಿದಂತೆ ಕೇರಳದ ಎಲ್‌ಡಿಎಫ್‌ನ ಸಂಚಾಲಕ ಇ ಪಿ ಜಯರಾಜನ್ ಪ್ರಶ್ನಿಸಿದ್ದರು. ಅಂಥದ್ದೇ ಪ್ರಶ್ನೆ ಈಗ ಮತ್ತೆ ಹುಟ್ಟಿಕೊಂಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾ ಮೈತ್ರಿಕೂಟದ ಸಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಉತ್ತರ ಭಾರತದ ರಾಜ್ಯಗಳು ಹತ್ತಿರವಾಗಿ, ದಕ್ಷಿಣದ ರಾಜ್ಯಗಳು ದೂರವಾಗಿದ್ದು ಹೇಗೆ ಎಂದು ಕೇಳುತ್ತಿದ್ದಾರೆ.