ಕರ್ನಾಟಕದ ಚುನಾವಣಾ ಫಲಿತಾಂಶ : ‘ಬಿಜೆಪಿ ಮುಕ್ತ ದಕ್ಷಿಣ ಭಾರತ’ದ ಮುನ್ಸೂಚನೆಯೇ?

Date:

ಕರ್ನಾಟಕದ ಚುನಾವಣಾ ಫಲಿತಾಂಶ ಬಿಜೆಪಿಯನ್ನು ದಿಕ್ಕುಗೆಡಿಸಿದ್ದರೆ, ಬಿಜೆಪಿಯೇತರ ಪಕ್ಷಗಳಲ್ಲಿ ಹುಮ್ಮಸ್ಸು ತುಂಬಿದೆ. 2023ರಲ್ಲಿ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣದ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಕರ್ನಾಟಕದಂಥದ್ದೇ ಫಲಿತಾಂಶ ಆ ರಾಜ್ಯಗಳಲ್ಲೂ ಬಂದರೆ, ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯ ಜೊತೆಗೆ ದೇಶದ ಹಲವು ರಾಜ್ಯಗಳಲ್ಲಿಯೂ ಅಧಿಕಾರ ಕಳೆದುಕೊಳ್ಳಲಿದೆ ಎನ್ನಲಾಗುತ್ತಿದೆ.  

ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲು ಬಿಜೆಪಿಗೆ ಮರ್ಮಾಘಾತ ಉಂಟುಮಾಡಿದೆಯೇ? ಬಿಜೆಪಿ ಮುಕ್ತ ಕರ್ನಾಟಕದ ಮುನ್ಸೂಚನೆ ಇದಾಗಿದೆಯೇ?

ಇಂಥ ಕೆಲವು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಈ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇದರ ಕಾವು ಬಿಜೆಪಿ ಥಿಂಕ್ ಟ್ಯಾಂಕ್‌ಗೂ ತಗುಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ತೆಗೆದುಕೊಂಡಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಿಂದೆಂದೂ ಕಾಣದ ರೀತಿ ರಾಜ್ಯಕ್ಕೆ ಬಂದು ಮೂಲೆ ಮೂಲೆಯಲ್ಲಿ ರೋಡ್ ಶೋಗಳನ್ನು ಮಾಡಿದರು. ಅಮಿತ್ ಶಾ ವ್ಯಾಪಕವಾಗಿ ಪ್ರಚಾರ ಸಭೆಗಳನ್ನು ಮಾಡಿದರು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಬಂದು ಬಿಜೆಪಿಗೆ ಮತ ನೀಡಿ ಎಂದು ಬೇಡಿಕೊಂಡರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚುನಾವಣೆಯಲ್ಲಿ ಹಿಂದುತ್ವವೂ ಸೇರಿದಂತೆ ತನ್ನ ‘ಪಾರಂಪರಿಕ ಅಸ್ತ್ರ’ಗಳೆಲ್ಲವನ್ನು ಬಿಜೆಪಿ ಪ್ರಯೋಗಿಸಿತ್ತು. ಕಾಂಗ್ರೆಸ್ ಹನುಮನಿಗೆ ಅವಮಾನ ಮಾಡಿದೆ ಎಂದು ಹಿಂದೂಗಳ ಭಾವನೆ ಕೆರಳಿಸಲು ನೋಡಿತು. ಬಜರಂಗ ದಳ ನಿಷೇಧದ ವಿಚಾರವನ್ನು ದೊಡ್ಡ ಇಶ್ಯೂ ಆಗಿ ಮಾಡಲು ಪ್ರಯತ್ನಿಸಿತು. ಹೀಗೆ ಬಿಜೆಪಿ ತನ್ನ ಬತ್ತಳಿಕೆಯಲ್ಲಿರುವ ಸಕಲ ಅಸ್ತ್ರಗಳನ್ನೂ ಈ ಚುನಾವಣೆಯಲ್ಲಿ ಬಳಸಿತು. ಆದರೂ ಬಿಜೆಪಿ ಹೀನಾಯ ಸೋಲು ಕಂಡಿತು. ಕಾಂಗ್ರೆಸ್ ಅಭೂತಪೂರ್ವ ಗೆಲುವು ಪಡೆಯಿತು. ಈ ಗೆಲುವು ಕರ್ನಾಟಕದ ನೆರೆಹೊರೆಯ ರಾಜ್ಯಗಳಲ್ಲೂ ಬಿಜೆಪಿಯೇತರ ಪಕ್ಷಗಳಲ್ಲಿ ಹುಮ್ಮಸ್ಸು ತಂದಿದ್ದು, ಹೊಸ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಬಹುದು ಎನ್ನುವ ಭರವಸೆ ಮೂಡಿಸಿದೆ.   

ಕರ್ನಾಟಕ ಹೊರತುಪಡಿಸಿದರೆ, ದಕ್ಷಿಣ ಭಾರತದ ಇತರೆ ಯಾವ ರಾಜ್ಯದಲ್ಲೂ ಬಿಜೆಪಿ ಪ್ರಾಬಲ್ಯ ಹೊಂದಿಲ್ಲ. ಕನಿಷ್ಠ ಮುಖ್ಯ ವಿರೋಧ ಪಕ್ಷವಾಗುವಷ್ಟು ಬಲವೂ ಅದಕ್ಕಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿದ್ದು, ಪ್ರಬಲ ನಾಯಕತ್ವ ಹೊಂದಿವೆ. ತಮಿಳುನಾಡಿನ ಎಂ ಕೆ ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್, ತೆಲಂಗಾಣದ ಕೆ ಚಂದ್ರಶೇಖರ್ ರಾವ್, ಆಂಧ್ರಪ್ರದೇಶದ ಜಗನ್‌ಮೋಹನ್ ರೆಡ್ಡಿ ಸರ್ಕಾರಗಳಿಗೆ ಹೋಲಿಸಿದರೆ, ಬಿಜೆಪಿ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಅವರಿಗೆ ಪೈಪೋಟಿ ನೀಡುವಂಥ ನಾಯಕರ ಕೊರತೆ ಆ ಪಕ್ಷದಲ್ಲಿದೆ.

ಅಣ್ಣಾಮಲೈ ಮಾತಿನಲ್ಲಿ ಪ್ರಬಲ, ಪಕ್ಷ ಸಂಘಟನೆಯಲ್ಲಿ ದುರ್ಬಲ

ಕರ್ನಾಟಕದ ಚುನಾವಣಾ ಫಲಿತಾಂಶದ ನಂತರ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕುರ್ಚಿ ಅಲುಗಾಡುತ್ತಿದೆ. ಅಣ್ಣಾಮಲೈ ಕರ್ನಾಟಕದ ಚುನಾವಣೆಯ ವೇಳೆ ಬಿಜೆಪಿ ಚುನಾವಣಾ ಉಸ್ತುವಾರಿಯೂ ಆಗಿದ್ದರು. ಡಿಎಂಕೆ ಸರ್ಕಾರದ ವಿರುದ್ಧ ಮುಗಿಬೀಳುವುದರಲ್ಲಿ ಮುಂದಿರುವ ಅವರು ಪಕ್ಷ ಸಂಘಟನೆಯಲ್ಲಿ, ತಮ್ಮ ಮಿತ್ರ ಪಕ್ಷವಾದ ಎಐಎಡಿಎಂಕೆ ಜೊತೆಗೆ ಸಮನ್ಯಯ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಮಾತುಗಳಿವೆ. ಇಂಥ ದುರ್ಬಲ ನಾಯಕತ್ವದೊಂದಿಗೆ ಐದು ದಶಕಗಳಿಂದ ತಮಿಳುನಾಡಿನ ಮೇಲೆ ಬಿಗಿ ಹಿಡಿತ ಸಾಧಿಸಿರುವ ದ್ರಾವಿಡ ಪಕ್ಷಗಳನ್ನು ಸೋಲಿಸುವುದು ಅಸಾಧ್ಯದ ಸಂಗತಿ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ತಮಿಳುನಾಡು ವಿಧಾನಸಭೆಯಲ್ಲಿ ಇರುವುದು ಕೇವಲ ನಾಲ್ಕು ಬಿಜೆಪಿ ಶಾಸಕರು. ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 38 ಲೋಕಸಭಾ ಕ್ಷೇತ್ರಗಳ ಪೈಕಿ ಡಿಎಂಕೆ 37 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಒಂದು ಕ್ಷೇತ್ರದಲ್ಲಿಯೂ ಗೆದ್ದಿರಲಿಲ್ಲ.

‘ಹಿಂದುತ್ವ ಕೈಬಿಡದಿದ್ದರೆ ಉಳಿಗಾಲವಿಲ್ಲ’ ಎಂದ ಬಿಜೆಪಿ ಮುಖಂಡ

ತೆಲಂಗಾಣದ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ಅಲ್ಲಿ ಈ ವರ್ಷದ ಕೊನೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಮುಸ್ಲಿಮರು, ಅಹಿಂದ ಸಮುದಾಯಗಳೇ ಹೆಚ್ಚಾಗಿರುವ ತೆಲಂಗಾಣದಲ್ಲಿ ಕರ್ನಾಟಕದ ಗೆಲುವು ಬಿಜೆಪಿಯಲ್ಲಿ ತಲ್ಲಣ ಉಂಟು ಮಾಡಿದೆ. ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಾರು ಸಂಜಯ್ ಅವರನ್ನು ಬದಲಿಸಬೇಕೆನ್ನುವ ಒತ್ತಡ ಪಕ್ಷದಲ್ಲಿ ಆರಂಭವಾಗಿದೆ. ಸದಾ ಹಿಂದುತ್ವದ ಜಪ ಮಾಡುವ ಬಂಡಾರು ಸಂಜಯ್‌ರಿಂದ ಪಕ್ಷದ ಕಾರ್ಯಕರ್ತರ ಸಂಖ್ಯೆ ಕೊಂಚವೂ ಬೆಳೆಯುತ್ತಿಲ್ಲ ಎನ್ನುವ ಅಸಮಾಧಾನ ಬಿಜೆಪಿ ಮುಖಂಡರಿಂದಲೇ ವ್ಯಕ್ತವಾಗಿದೆ.

ಕೆಸಿಆರ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಈಟೆಲ ರಾಜೇಂದರ್, ನಂತರ ಬಿಜೆಪಿ ಸೇರಿದ್ದರು. ಕರ್ನಾಟಕ ಚುನಾವಣಾ ಫಲಿತಾಂಶದ ನಂತರ ಅವರು ಅಮಿತ್ ಶಾ ಮುಂದೆ ಹಲವು ಸೂತ್ರಗಳನ್ನು ಮಂಡಿಸಿದ್ದಾರೆ. ಅದರಲ್ಲಿ ಹೈದರಾಬಾದ್ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸುವುದು, ಮುಸ್ಲಿಂ ಮೀಸಲಾತಿ, ಹಿಜಾಬ್‌ನಂಥ  ಹಿಂದುತ್ವದ ಅಜೆಂಡಾ  ನೆಚ್ಚಿಕೊಂಡು ಹೋದರೆ, ತೆಲಂಗಾಣದಲ್ಲಿ ಬಿಜೆಪಿಗೆ ಯಶಸ್ಸು ಸಿಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ನೆಲೆ ಸಿಗಬೇಕೆಂದರೆ, ಜನರಿಗೆ ಕಲ್ಯಾಣ ಕಾರ್ಯಕ್ರಮಗಳು, ಆರ್ಥಿಕತೆಯನ್ನು ಉತ್ತೇಜಿಸುವಂಥ ಯೋಜನೆಗಳು, ಅಹಿಂದ ಮತದಾರರಿಗೆ ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ರೂಪಿಸಬೇಕೆಂದೂ ಅವರು ಸೂಚಿಸಿದ್ದಾರೆ.

ಗ್ರೇಟರ್ ಹೈದರಾಬಾದ್ ಚುನಾವಣೆ ಸೇರಿದಂತೆ ಉಪಚುನಾವಣೆಯ ಗೆಲುವಿನಿಂದ ಬಿಜೆಪಿ ಅಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಆದರೆ, ಅವೆಲ್ಲ ಅಭ್ಯರ್ಥಿಗಳ ವೈಯಕ್ತಿಕ ಚರಿಷ್ಮಾದ ಕಾರಣಕ್ಕೆ ಗೆಲುವು ಕಂಡಂಥವು. 2019ರಲ್ಲಿ ಮೋದಿ ಅಲೆಯ ಹೊರತಾಗಿಯೂ ಅಲ್ಲಿ ಬಿಜೆಪಿಗೆ ದಕ್ಕಿದ್ದು ಕೇವಲ ನಾಲ್ಕು ಲೋಕಸಭಾ ಸ್ಥಾನಗಳು. ಅಲ್ಲಿನ  ವಿಧಾನಸಭೆಯಲ್ಲಿರುವುದು ಕೇವಲ ಇಬ್ಬರು ಬಿಜೆಪಿ ಶಾಸಕರು. ಬಿಆರ್‌ಎಸ್‌ ಬಿಟ್ಟು ಬಂದವರೇ ಈಗಲೂ ಬಿಜೆಪಿಗೆ ಆಸರೆ. ಚುನಾವಣೆಗೆ ಮುನ್ನ ಅವರೆಲ್ಲ ಮತ್ತೆ ಬಿಆರ್‌ಎಸ್ ಸೇರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.                

ಆಂಧ್ರದಲ್ಲಿ ಬಿಜೆಪಿಯ ಶೂನ್ಯ ಸಂಪಾದನೆ!  

ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳಾದ ವೈಎಸ್‌ಆರ್‌ಸಿಪಿ ಮತ್ತು ತೆಲುಗು ದೇಶಂ ಪಕ್ಷಗಳದ್ದೇ ಪಾರುಪತ್ಯ. ಅಲ್ಲಿನ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಒಂದು ಸ್ಥಾನವನ್ನೂ ಗೆಲ್ಲಲಾಗಿಲ್ಲ. ಇನ್ನು 25 ಲೋಕಸಭಾ ಕ್ಷೇತ್ರಗಳ ಪೈಕಿ ವೈಎಸ್‌ಆರ್‌ಸಿಪಿ 22 ಕ್ಷೇತ್ರಗಳನ್ನು ಗೆದ್ದಿದ್ದರೆ, ಟಿಡಿಪಿ 3 ಕ್ಷೇತ್ರಗಳಲ್ಲಿ ಗೆದ್ದಿದೆ.

ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಜೆಪಿಯು ತೆಲುಗು ದೇಶಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಚಿಂತಿಸುತ್ತಿದೆ. ಟಿಡಿಪಿಯ ಚಂದ್ರಬಾಬು ನಾಯ್ಡು ಈ ಹಿಂದೆ ಎನ್‌ಡಿಎ ಭಾಗವಾಗಿದ್ದರು. ಜೊತೆಗೆ ಏಕಾಂಗಿಯಾಗಿ ತಾನು ನೆಲೆ ಕಾಣಲು ಸಾಧ್ಯವೆ ಇಲ್ಲ ಎಂದು ಬಿಜೆಪಿಗೆ ಮನವರಿಕೆಯಾಗಿರುವುದರಿಂದ ಮೈತ್ರಿ ಬಗ್ಗೆ ಚಿಂತಿಸುತ್ತಿದೆ ಎನ್ನಲಾಗಿದೆ. ಇಷ್ಟಾದರೂ ಮೈತ್ರಿ ಯತ್ನ ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎನ್ನುವುದರ ಬಗ್ಗೆ ರಾಜಕೀಯ ವಲಯದಲ್ಲಿ ಅನುಮಾನಗಳಿವೆ.

ಆರ್‌ಎಸ್‌ಎಸ್‌ ಕೇಡರ್‌ಗಳಿದ್ದರೂ ಬಿಜೆಪಿಗೆ ನೆಲೆಯಿಲ್ಲ

ಇನ್ನು ಕೇರಳದ್ದು ಬೇರೊಂದು ರೀತಿಯ ಕಥೆ. ಕೇರಳದಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪ್ರಭಾವ ಹೆಚ್ಚಾಗಿದ್ದು, ಅಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ದಶಕಗಳಿಂದ ತಿಣುಕುತ್ತಲೇ ಇದೆ. ಇಲ್ಲಿಯೂ ವಿಧಾನಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ ಬಿಜೆಪಿಯ ಒಬ್ಬನೇ ಒಬ್ಬ ಪ್ರತಿನಿಧಿಯೂ ಇಲ್ಲ ವಿಚಿತ್ರ ವೆಂದರೆ, ಕೇರಳದಲ್ಲಿ ಆರ್‌ಎಸ್‌ಎಸ್‌ ಪ್ರಬಲವಾಗಿದೆ. ಸಂಘದ ಕೇಡರ್‌ಗಳ ಸಂಖ್ಯೆ ಗಣನೀಯವಾಗಿದೆ. ಆದರೂ ಅಲ್ಲಿನ ಚುನಾವಣೆಗಳಲ್ಲಿ ಖಾತೆ ತೆರೆಯಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಏನೆಲ್ಲ ಕರಸತ್ತು ಮಾಡಿದರೂ ಅಲ್ಲಿನ ಕ್ರಿಶ್ಚಿಯನ್ ಸಮುದಾಯ ಬಿಜೆಪಿಯನ್ನು ನಂಬುತ್ತಿಲ್ಲ.   

ಲೋಕಸಭೆಯ ಒಟ್ಟು 543 ಕ್ಷೇತ್ರಗಳ ಪೈಕಿ ದಕ್ಷಿಣ ಭಾರತದ ರಾಜ್ಯಗಳು 130 ಕ್ಷೇತ್ರಗಳನ್ನು ಹಂಚಿಕೊಂಡಿವೆ. ಈ 130 ಕ್ಷೇತ್ರಗಳ ಪೈಕಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಕೇವಲ 29 ಸ್ಥಾನಗಳನ್ನು ಮಾತ್ರ. ಅವುಗಳ ಪೈಕಿ 25 ಕ್ಷೇತ್ರಗಳು ಕರ್ನಾಟಕದ ಕ್ಷೇತ್ರಗಳು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದರಿಂದ ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಾಗದಿದ್ದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಎರಡಂಕಿ ಮುಟ್ಟುವುದು ಕೂಡ ಅನುಮಾನ. ಸದ್ಯ ಬಿಜೆಪಿ ಹೈಕಮಾಂಡ್‌ಗೆ ಇದೇ ದೊಡ್ಡ ತಲೆನೋವಾಗಿದೆ.

ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಪ್ರಧಾನಿ ಮೋದಿ ಮತ್ತಿತರ ಬಿಜೆಪಿ ಮುಖಂಡರು ಪದೇ ಪದೆ ಘೋಷಿಸುತ್ತಿರುತ್ತಾರೆ. ಈಗ ನೋಡಿದರೆ, ದಕ್ಷಿಣ ಭಾರತ ‘ಬಿಜೆಪಿ ಮುಕ್ತ’ ಆಗುವ ದಿನಗಳು ಸನಿಹದಲ್ಲೆ ಇವೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಕರ್ನಾಟಕದ ಚುನಾವಣಾ ಫಲಿತಾಂಶ ಬಿಜೆಪಿಯನ್ನು ದಿಕ್ಕುಗೆಡಿಸಿದ್ದರೆ, ಬಿಜೆಪಿಯೇತರ ಪಕ್ಷಗಳಲ್ಲಿ ಹುಮ್ಮಸ್ಸು ತುಂಬಿದೆ. 2023ರಲ್ಲಿ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಕರ್ನಾಟಕದಂಥದ್ದೇ ಫಲಿತಾಂಶ ಆ ರಾಜ್ಯಗಳಲ್ಲೂ ಬಂದರೆ, ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯ ಜೊತೆಗೆ ದೇಶದ ಹಲವು ರಾಜ್ಯಗಳಲ್ಲಿಯೂ ಅಧಿಕಾರ ಕಳೆದುಕೊಳ್ಳಲಿದೆ ಎನ್ನಲಾಗುತ್ತಿದೆ.  

+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ V/s ಪಿಣರಾಯಿ; ಕೇರಳದಲ್ಲಿ ಲೋಕಸಭಾ ಚುನಾವಣಾ ಅಬ್ಬರ

ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಒಂದು ವಾರವಷ್ಟೇ ಬಾಕಿ...

ಮೊದಲ ಹಂತದ ಮತದಾನ | ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಮನೆಯಲ್ಲಿ ಬಾಂಬ್ ಪತ್ತೆ, ಮಣಿಪುರದಲ್ಲೂ ಹಿಂಸಾಚಾರ

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪಶ್ಚಿಮ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...

ತಡವಾಗಿ ತಲುಪಿದ ವಿಮಾನ; ಒಲಿಂಪಿಕ್ ಅರ್ಹತಾ ಪಂದ್ಯದಿಂದ ಹೊರಗುಳಿದ ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಸುಜೀತ್ ಕಲ್ಕಲ್‌

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಡೆ ಕ್ಷಣದಲ್ಲಿ ಪದಕ ಕಳೆದುಕೊಂಡ ಕುಪ್ತಿಪಟು ದೀಪಕ್ ಪೂನಿಯಾ...