ಸೊರಬ ತಾಲೂಕಿನಲ್ಲಿ ರಸ್ತೆ ದಾಟುವಾಗ ಲಾರಿಯೊಂದು ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.ಶಿರಸಿಯ ಅತಾವುಲ್ಲಾ ಖಾನ್ ಹಾಗೂ ಫರೀನಾ ಬೇಗಂ ಅವರ ಪುತ್ರ ಮುಹಮ್ಮದ್ ಆಹಿಲ್ ಖಾನ್ (3) ಮೃತ ಬಾಲಕ.
ಅಂಗನವಾಡಿಯಲ್ಲಿದ್ದ ಬಾಲಕ ಅಜ್ಜಿಯನ್ನು ಕಂಡು ರಸ್ತೆ ದಾಟುತ್ತಿರುವ ವೇಳೆ ಘಟನೆ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಬಾಲಕನ ಸಾವಿಗೆ ಕಾರಣ ಎಂದು ಮೃತ ಬಾಲಕನ ಅಜ್ಜಿ ನಸೀಮಾ ಬಾನು ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನ ತಾಯಿ ಫರೀನಾ ಬೇಗಂ ಹೆರಿಗೆಗೆಂದು ತವರಿಗೆ ಬಂದಿದ್ದರು. ಘಟನಾ ಸ್ಥಳದಲ್ಲಿ ಮೃತ ಬಾಲಕನ ಸಂಬಂಧಿಗಳು ಹಾಗೂ ಊರ ಗ್ರಾಮಸ್ಥರ ರೋಧನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿ ಆಕ್ರಂದನ ವ್ಯಕ್ತಪಡಿಸಿದರು. ಮತ್ತೊಂದೆಡೆ ಮೃತ ಬಾಲಕ ತಂದೆ ಉದ್ಯೋಗ ನಿಮಿತ್ತ ದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಬಿ. ಈಶ್ವರಪ್ಪ ಮಾತನಾಡಿ, ಗ್ರಾಮದಲ್ಲಿ ರಸ್ತೆ ಅಗಲೀಕರಣವಾಗುತ್ತಿದೆ. ಅಂಗನವಾಡಿ ಕೇಂದ್ರವು ರಸ್ತೆಯ ಪಕ್ಕದಲ್ಲಿರುವುದೇ ಘಟನೆಗೆ ಕಾರಣ ಎಂದಿದ್ದಾರೆ. ಅದನ್ನು ಸ್ಥಳಾಂತರ ಮಾಡಬೇಕು ಎಂದರು.
ನೂತನ ಅಂಗನವಾಡಿ ಕಟ್ಟಡವನ್ನು ಗ್ರಾಮದ ಒಳ ಭಾಗದಲ್ಲಿ ನಿರ್ಮಿಸಲು ನಿವೇಶನ ನೀಡಲಾಗುವುದು. ಜೊತೆಗೆ, ಟಿಪ್ಪರ್, ಕ್ಯಾಂಟರ್ ಸೇರಿದಂತೆ ಇತರೆ ಲಾರಿಗಳು ಗ್ರಾಮಗಳ ಪರಿಮಿತಿಯಲ್ಲಿ ವೇಗಮಿತಿಯಿಲ್ಲದೇ ವಾಹನ ಚಲಾಯಿಸುತ್ತಾರೆ. ಅವರ ಮೇಲೆ ಸಂಬಂಧ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.