ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ವಿಚ್ಛೇದನ ಪಡೆಯುತ್ತಿರುವ ಮಹಿಳೆಗೆ ನೀಡಲಾಗುವ ಪರಿಹಾರ ಮೊತ್ತವನ್ನು ಮುಂಬೈನ ಸೆಷನ್ಸ್ ನ್ಯಾಯಾಲಯವು 5 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಹಾಗೆಯೇ ಆಕೆಯ ಪತಿ ಅತಿ ಶ್ರೀಮಂತ. ಲಿಫ್ಟ್ ಕಂಪನಿಯನ್ನು ನಡೆಸುತ್ತಿರುವ ಮಹಿಳೆಯ ಪತಿ ಮತ್ತು ಅವರ ಕುಟುಂಬವು ಕೋಟ್ಯಾಧಿಪತಿಗಳು ಎಂದು ಕೋರ್ಟ್ ಹೇಳಿದೆ.
ಈ ಪರಿಹಾರದ ಜೊತೆಗೆ ಮಹಿಳೆ ಮತ್ತು ಅವರ ಮಗಳಿಗೆ ನೀಡಲಾಗುವ ಮಾಸಿಕ ಜೀವನಾಂಶವನ್ನು ನ್ಯಾಯಾಲಯವು ಒಂದು ಲಕ್ಷ ರೂಪಾಯಿಯಿಂದ 1.5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. “ದೂರುದಾರರು ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಾಗ ಎದುರಿಸಿದ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ” ಎಂದು ಕೋರ್ಟ್ ಈ ಸಂದರ್ಭದಲ್ಲೇ ಹೇಳಿದೆ.
ಇದನ್ನು ಓದಿದ್ದೀರಾ? ದುಡಿಯುವ ಸಾಮರ್ಥ್ಯವಿರುವ ಪತ್ನಿ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್
ಈ ತೀರ್ಪು ನೀಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ(ದಿಂಡೋಶಿ ನ್ಯಾಯಾಲಯ) ಎಸ್ ಜೆ ಅನ್ಸಾರಿ, ಮಹಿಳೆ 20 ವರ್ಷಗಳ ಕಾಲ ‘ಚಿತ್ರಹಿಂಸೆ ಮತ್ತು ಅವಮಾನ’ವನ್ನು ಸಹಿಸಿಕೊಂಡಿದ್ದರಿಂದ ಮ್ಯಾಜಿಸ್ಟ್ರೇಟ್ ನೀಡಿದ 5 ಲಕ್ಷ ರೂ.ಗಳ ಆರಂಭಿಕ ಪರಿಹಾರವು ಅಲ್ಪ ಎಂದು ತೀರ್ಪು ನೀಡಿದೆ.
41 ವರ್ಷದ ಸಂತ್ರಸ್ತೆ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿಯಲ್ಲಿ ಮ್ಯಾಜಿಸ್ಟ್ರೇಟ್ ಹೊರಡಿಸಿದ ಪರಿಹಾರ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. 1997ರ ಡಿಸೆಂಬರ್‌ನಲ್ಲಿ ಮದುವೆಯಾದಾಗಿನಿಂದ ಪತಿ ಮತ್ತು ಅತ್ತೆ-ಮಾವರಿಂದ ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ದೌರ್ಜನ್ಯವನ್ನು ತಾನು ಅನುಭವಿಸಿದ್ದೇನೆ. ಕೊನೆಗೆ ತಡೆಯಲಾಗದೆ ಕಾನೂನು ಮೊರೆ ಹೋಗಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಇನ್ನು ಮಹಿಳೆ ಈ ಪರಿಹಾರದ ಮೊತ್ತ ಅತಿ ಕಡಿಮೆ ಎಂದು ಹೇಳಿದರೆ, ಆಕೆಯ ಪತಿಯ ಪರ ವಕೀಲರು ಪರಿಹಾರವನ್ನು ಪಡೆಯಲು ಮಹಿಳೆ ಅರ್ಹರಲ್ಲ ಎಂದು ವಾದಿಸಿದ್ದಾರೆ. ಮಕ್ಕಳ ಶೈಕ್ಷಣಿಕ, ಜೀವನದ ವೆಚ್ಚವನ್ನು ತಾನೇ ಭರಿಸುತ್ತೇನೆ. ಇದರಿಂದಾಗಿ ನನ್ನ ಬಳಿ ಏನೂ ಉಳಿಯದು ಎಂದು ಪತಿ ಹೇಳಿಕೊಂಡಿದ್ದಾನೆ.
ಆದರೆ ಕೋರ್ಟ್ ಆರೋಪಿ ವ್ಯಕ್ತಿ ಮತ್ತು ಆತನ ತಂದೆ 2012ರಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಭೂಮಿ ಮತ್ತು ಫ್ಲಾಟ್ ಖರೀದಿಸಿರುವುದನ್ನು ಗಮನಿಸಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ಆರೋಪಿತ ವ್ಯಕ್ತಿ ಸಾಬೀತುಪಡಿಲು ಸಾಧ್ಯವಾಗಿಲ್ಲ. ಲಿಫ್ಟ್ ಕಂಪನಿಯಲ್ಲಿ ಉತ್ತಮ ಆದಾಯವಿದೆ. ಕೋಟ್ಯಾಧಿಪತಿಗಳಾಗಿರುವವರು ಐದು ಲಕ್ಷ ರೂಪಾಯಿ ಪರಿಹಾರ ನೀಡುವುದು ಅತಿ ಕಡಿಮೆ ಎಂದು ಕೋರ್ಟ್ ಹೇಳಿದ್ದು ಮೊತ್ತ ಏರಿಸಿದೆ.
