ದುಡಿಯುವ ಸಾಮರ್ಥ್ಯ ಹೊಂದಿರುವ ಪತ್ನಿ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, ಪ್ರಕರಣವೊಂದರಲ್ಲಿ ಜೀವನಾಂಶ ಮೌಲ್ಯವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ.
ವಿಚ್ಛೇದನ ಪ್ರಕರಣವೊಂದರಲ್ಲಿ ವಿಚ್ಛೇದನ ಪಡೆದ ಮಹಿಳೆಯರು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ರಾಜೇಂದ್ರ ಬಾದಮಿಕರ್, ಮಾಸಿಕ ಜೀವನಾಂಶವನ್ನು 10,000 ರೂ.ನಿಂದ 5,000 ರೂ.ಗೆ ಕಡಿತಗೊಳಿಸಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದಾರೆ.
“ವಿವಾಹಕ್ಕೂ ಮುನ್ನ ಉದ್ಯೋಗದಲ್ಲಿದ್ದ ಮಹಿಳೆ, ವಿವಾಹವಾದ ಬಳಿಕ ಉದ್ಯೋಗ ತೊರೆದು ಮನೆಯಲ್ಲಿದ್ದಾರೆ. ಇದಕ್ಕೆ ಸಕಾರಣವಿಲ್ಲ. ಅವರಿಗೆ ದುಡಿಯುವ ಸಾಮರ್ಥ್ಯವಿದೆ. ಹೀಗಾಗಿ, ಅವರು ಹೆಚ್ಚಿನ ಜೀವನಾಂಶ ಕೋರುವಂತಿಲ್ಲ” ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದಲ್ಲಿ ಪತಿಯಿಂದ ದೂರವಿದ್ದ ಮಹಿಳೆ ವಿಚ್ಚೇದನ ಪಡೆದು ತನ್ನ ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು. ತಮಗೆ ಜೀವನಾಂಶ ಕೊಡಿಸುವಂತೆ ಕೋರಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಪತ್ನಿಗೆ ಮಾಸಿಕ 10,000 ರೂ. ಹಾಗೂ 3 ಲಕ್ಷ ರೂ. ಪರಿಹಾರ ನೀಡುವಂತೆ ಪತಿಗೆ ಆದೇಶ ನೀಡಿತ್ತು.
ಈ ಸುದ್ದಿ ಓದಿದ್ದೀರಾ?: ಜಮ್ಮು ಕಾಶ್ಮೀರ| ಜುಲೈ 11ರಂದು ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ
ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿದ್ದ ಪತಿ ಸೆಷನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ಕೋರ್ಟ್, ಜೀವನಾಂಶವನ್ನು 10,000 ರೂ.ನಿಂದ 5,000 ರೂ.ಗೆ ಕಡಿತಗೊಳಿಸಿ ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಿರುವ ಕೋರ್ಟ್, ಸೆಷನ್ಸ್ ಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದಿದೆ.
ಪತಿ ಆಸ್ತಿಯಲ್ಲಿ ಪತ್ನಿಗೂ ಸಮಪಾಲು ಎಂದಿರುವ ಮದ್ರಾಸ್ ಹೈಕೋರ್ಟ್
ಕುಟುಂಬದ ನಿರ್ವಹಣೆಯಲ್ಲಿ ಹಲವು ಪಾತ್ರಗಳನ್ನು ಪತ್ನಿಯು ಸಮರ್ಥವಾಗಿ ನಿಭಾಯಿಸುತ್ತಾರೆ. ಆಕೆಯ ಸಾಮರ್ಥ್ಯವನ್ನು ಪತಿಯ ಎಂಟು ಗಂಟೆಯ ದುಡಿಮೆಯೊಂದಿಗೆ ಹೋಲಿಕೆ ಮಾಡಲಾಗದು. ಗೃಹಿಣಿಯು ನೇರವಾಗಿ ಆರ್ಥಿಕ ಕೊಡುಗೆ ನೀಡಬೇಕಾಗಿಲ್ಲ. ಆದರೆ, ಪ್ರತಿದಿನವೂ ಮಕ್ಕಳ ಪಾಲನೆ, ಅಡುಗೆ, ಮನೆ ಕೆಲಸ ಸೇರಿದಂತೆ ದಿನದ 24 ಗಂಟೆಯೂ ದುಡಿಯುತ್ತಾಳೆ. ಆಕೆಗೆ ಪತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕು ಇದೆ ಎಂದು ಮದ್ರಾಸ್ ಹೈಕೋರ್ಟ್ ಜೂನ್ 26ರ ತನ್ನ ತೀರ್ಪಿನಲ್ಲಿ ಹೇಳಿತ್ತು.