ಕರ್ನಾಟಕದ ಅಂಬೇಡ್ಕರ್ ಎಂದೇ ಹೆಸರಾಗಿರುವ ಸಾಮಾಜಿಕ, ದಲಿತ ಹಕ್ಕುಗಳ ಹೋರಾಟಗಾರ, ದಲಿತ ಸಾಹಿತ್ಯ ಸಂಘಟನೆಯ ಪ್ರವರ್ತಕ, ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ದಲಿತ ಚೇತನ ಪ್ರೊ.ಬಿ ಕೃಷ್ಣಪ್ಪನವರ 88ನೇ ಜನ್ಮದಿನಾಚರಣೆಯನ್ನು ದಾವಣಗೆರೆ ಜಿಲ್ಲೆ ಹರಿಹರ ನಗರದ ರಾಷ್ಟ್ರೀಯ ಹೆದ್ದಾರಿ ಬಳಿಯ ಮೈತ್ರಿವನದ ಅವರ ಸಮಾದಿ ಬಳಿ ದಲಿತ ಸಂಘಟನೆಗಳು ಹೋರಾಟಗಾರರು ಸೇರಿ ಆಚರಿಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ, “ಎಲ್ಲಾ ದಲಿತ ಸಂಘಟನೆಗಳು ಹುಟ್ಟಲು ಪ್ರೊ.ಕೃಷ್ಣಪ್ಪನವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಮೂಲಕಾರಣ. ದಲಿತರ, ಶೋಷಿತರ ಹಕ್ಕುಗಳಿಗೆ ಹೋರಾಟ ನಡೆಸಿ ಸ್ವಾಭಿಮಾನದ ಬದುಕು ತಿಳಿಸಿ ಕೊಟ್ಟವರು. ಅವರ ಹೋರಾಟ, ಆದರ್ಶಗಳೇ ಇಂದಿನವರಿಗೆ ಸ್ಪೂರ್ತಿ” ಎಂದು ಸ್ಮರಿಸಿದರು.

ಈ ವೇಳೆ ಮುಖಂಡರಾದ ಹರಿಹರ ಮಹಾಂತೇಶ, ಹರೋಸಾಗರ ಸಿದ್ದರಾಮಣ್ಣ, ವಿಜಯಲಕ್ಷ್ಮಿ, ನಾಗರಾಜ್ ಚಿತ್ತಾನಳ್ಳಿ, ಪ್ರದೀಪ್, ದಲಿತ ವಾಣಿಜ್ಯ ಮಂಡಳಿ ಅಧ್ಯಕ್ಷ ಮಂಜು ಕಬ್ಬೂರು, ಶಾಂತಿನಗರ ಮಂಜುನಾಥ್, ಹುಲಿಕಟ್ಟೆ ಚನ್ನಬಸಪ್ಪ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ದಲಿತ ಚೇತನ ಪ್ರೊ.ಬಿ ಕೃಷ್ಣಪ್ಪ;
ಜೂನ್ 9, 1938ರಲ್ಲಿ ಹರಿಹರದಲ್ಲಿ ಜನಿಸಿದ ಪ್ರೊ.ಬಸಪ್ಪ ಕೃಷ್ಣಪ್ಪನವರು ಸುಮಾರು ಮೂವತ್ತು ವರ್ಷಗಳ ಕಾಲ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ನಿವೃತ್ತರಾದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬಾಲ್ಯ ವಿವಾಹಕ್ಕೆ ಯತ್ನ ಮದುವೆ ಬೇಡವೆಂದು ಅಂಗಲಾಚಿದ ಬಾಲಕಿಯ ರಕ್ಷಣೆ; ಐವರ ಮೇಲೆ ದೂರು ದಾಖಲು
70ರ ದಶಕದಲ್ಲಿ ಬಸವಲಿಂಗಪ್ಪ ಸಚಿವರಾಗಿದ್ದಾಗ ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದಿದ್ದು, ನಂತರದಲ್ಲಿ ಆದ ಬೆಳವಣಿಗೆಗೆಳಿಂದ ಪ್ರಭಾವಿತರಾದ ಕೃಷ್ಣಪ್ಪನವರು
ಸಮಾನ ಮನಸ್ಕರೊಂದಿಗೆ ದಲಿತ ಸಾಹಿತ್ಯ ಚಳುವಳಿ ಹುಟ್ಟಿಗೆ ಕಾರಣರಾದರು. ಮುಂದೆ ಅದು ದಲಿತ ಸಂಘರ್ಷ ಸಮಿತಿಯ ರೂಪ ತಳೆದು ಅದರ ಸಂಸ್ಥಾಪಕ ಅಧ್ಯಕ್ಷರಾಗಿ ದಲಿತ ಹಕ್ಕುಗಳಿಗೆ, ಅಸ್ಪೃಶ್ಯತೆ ನಿವಾರಣೆಗೆ, ಶೋಷಣೆ ತಡೆಯಲು ಅನೇಕ ಹೋರಾಟ ಕೈಗೊಂಡರು. ಕೇವಲ ದಲಿತರಲ್ಲದೇ ಎಲ್ಲಾ ವರ್ಗದ ಬಡ ಜನರಿಗಾಗುವ ಶೋಷಣೆ, ದೌರ್ಜನ್ಯವನ್ನು ಖಂಡಿಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೃಷ್ಣಪ್ಪನವರು ಕಾರ್ಯನಿರ್ವಹಿಸಿದ್ದು ಅವರ ಹಿರಿಮೆ.