ಚುನಾವಣೆ ಪೂರ್ವ ಕೊಟ್ಟಿದ್ದ ಮಾತಿನಂತೆ ಮೊದಲ ಅಧಿವೇಶನದಲ್ಲೇ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆ ಮಂಡಿಸಲು ವಿಶೇಷ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಪಡೆದಿದ್ದಾರೆ.
ವಿಶೇಷ ಸಚಿವ ಸಂಪುಟ ಸಭೆ ನಡೆಸುವುದಕ್ಕೆ ಎರಡು ದಿನಗಳ ಮೊದಲು ದಲಿತ ಸಮುದಾಯಗಳ ಮುಖಂಡರು, ವಕೀಲರುಗಳ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವ್ಯಕ್ತವಾದ ಒಕ್ಕೊರಲ ತೀರ್ಮಾನದಂತೆ ದೂರು ದಾಖಲಿಸಲು ಕಾಲಮಿತಿ ತೆಗೆಯಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಚಾರಿತ್ರಿಕ ಹೆಜ್ಜೆ ಇಟ್ಟಿದೆ.
ತಿದ್ದುಪಡಿಯಲ್ಲಿ ಏನಿದೆ?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಂಚಿಕೆಯಾದ ಜಮೀನನ್ನು ಸರ್ಕಾರದ ಅನುಮತಿಯಿಲ್ಲದೆ ಪರಭಾರೆ ಮಾಡಿದ ಸಂದರ್ಭದಲ್ಲಿ ಜಮೀನು ಮಾಲೀಕರು ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 5(1)ರ ಅನ್ವಯ ದೂರು ದಾಖಲಿಸಲು ಕಾಲಮಿತಿ ತೆಗೆದು ಹಾಕುವ ಕುರಿತು ಕಾಯ್ದೆ ತಿದ್ದುಪಡಿ ಮಾಡಲು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
2023-24ನೇ ಆಯವ್ಯಯದಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಇನ್ನಷ್ಟು ಬಲಪಡಿಸುವ ಕುರಿತು ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತುತ ಅಧಿವೇಶನದಲ್ಲಿಯೇ ತಿದ್ದುಪಡಿ ಮಂಡಿಸುವ ಗುರಿಯೊಂದಿಗೆ ಮುಂದಡಿಯಿಟ್ಟಿದ್ದಾರೆ.
ಜುಲೈ 17 ರಂದು ವಿಧಾನಸೌಧದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಗಳ ಮುಖಂಡರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದಿದ್ದರು. ಇದೀಗ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿಗೆ ಅನುಮೋದನೆ ಪಡೆದುಕೊಂಡು ವಿಧಾನಮಂಡಲದಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಹಿತರಕ್ಷಣೆ ಕುರಿತು ಮುಖ್ಯಮಂತ್ರಿ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಧಿವೇಶನ | ಕಾನೂನು ಪ್ರಕ್ರಿಯೆ ಸಂಹಿತೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ 199 ದಿನಗಳಿಂದ ಆಹೋರಾತ್ರಿ ಧರಣಿ
ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ 199 ದಿನಗಳಿಂದ ದಿನಗಳ ಕಾಲ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಹಿಂದಿನ ಬಿಜೆಪಿ ನೇತೃತ್ವದದ ರಾಜ್ಯ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆರಂಭಗೊಂಡ ಹೋರಾಟ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ಮುಂದುವರಿದಿದೆ.
ಪ್ರತಿಭಟನಾ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ. ಜಿ ಪರಮೇಶ್ವರ್, ಕೆ ಆರ್ ರಮೇಶ್ ಕುಮಾರ್, ಎಚ್ ಸಿ ಮಹದೇವಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭೇಟಿ ನೀಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿದ್ದರು.
2022ರ ಡಿಸೆಂಬರ್ 11ರಂದು ದಲಿತ ಸಂಘರ್ಷ ಸಮಿತಿ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿಯೂ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿತ್ತು.
ಸಧನದಲ್ಲಿ ಮಂಡಿಸಿದ ಬಳಿಕ ಹೋರಾಟ ಹಿಂದಕ್ಕೆ
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆಯನ್ನು ಮಂಡಿಸಲು ವಿಶೇಷ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಸಧನದಲ್ಲಿ ಮಂಡಿಸಿದ ಬಳಿಕವೇ ಹೋರಾಟವನ್ನು ಹಿಂಪಡೆಯಲಾಗುವುದು ಎಂದು ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ್ ಅವರು ಈದಿನ.ಕಾಮ್ ಗೆ ತಿಳಿಸಿದರು.