ಪಕೃತಿ ವಿಕೋಪ ಸೇರಿದಂತೆ ಅನೇಕ ತುರ್ತು ಸಂದರ್ಭದಲ್ಲಿ ಸಾರ್ವಜನಿಕರನ್ನು ಆಪತ್ತಿನಿಂದ ಕಾಪಾಡಲು ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿರ್‌ಎಫ್) ಸದಾ ಸಿದ್ಧವಾಗಿರುತ್ತದೆ ಎಂದು ಎಸ್‌ಡಿಆರ್‌ಎಫ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಎಸ್ ಕಿರಣ ಕುಮಾರ ತಿಳಿಸಿದರು.
ದಾವಣಗೆರೆ ನಗರದ ಪಿ ಜೆ ಬಡಾವಣೆಯಲ್ಲಿರುವ ಸೆಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಆಯೋಜಿಸಿದ ಪ್ರಕೃತಿ ವಿಕೋಪ ನಿರ್ವಹಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯಂತೆ ಯಾವುದೇ ವಿಪತ್ತುಗಳನ್ನು ಎದುರಿಸಲು ಸನ್ನದ್ಧವಾಗಿರುವಂತೆ ಸರ್ಕಾರ ದಾವಣಗೆರೆ ಜಿಲ್ಲೆಯಲ್ಲಿ ಒಂದು ತಂಡವನ್ನು ಸ್ಥಾಪನೆ ಮಾಡಿದೆ. ಸ್ಥಳೀಯವಾಗಿ ನಡೆಯುವ ಯಾವುದೇ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ನಮ್ಮ ತಂಡ ಯಾವ ಸಮಯದಲ್ಲಿಯೇ ಆಗಲಿ, ಅವುಗಳನ್ನು ಎದುರಿಸಲು ನಮ್ಮ ರಾಜ್ಯ ವಿಪತ್ತು ಸ್ಪಂದನಾ ಪಡೆ(ಎಸ್‌ಡಿಆರ್‌ಎಫ್) ಸದಾ ಸನ್ನದ್ಧವಾಗಿರುತ್ತದೆ” ಎಂದರು.
“ವಿಪತ್ತುಗಳನ್ನು ಎದುರಿಸಲು ಸರ್ಕಾರವು ಎನ್‌ಡಿಆರ್‌ಎಫ್, ಎಸ್‌ಡಿಐಎಫ್ ತಂಡಗಳನ್ನು ತಯಾರು ಮಾಡಿ, ತರಬೇತಿ, ಅವಶ್ಯಕವಾದ ವಸ್ತುಗಳನ್ನು ನೀಡಿದೆ. ಇದರಿಂದ ಸಾವು ನೋವುಗಳನ್ನು ತಡೆಯಲು ಶ್ರಮಿಸಬಹುದಾಗಿದೆ. ನಮ್ಮ ರಾಜ್ಯದ ಪ್ರಮುಖ ಐದು ಭಾಗಗಳಾದ ಬೆಂಗಳೂರು, ಮಂಗಳೂರು, ಬೆಳಗಾವಿ, ಕಲಬುರಗಿ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ ಈ ಎಸ್‌ಡಿಆರ್‌ಎಫ್ ತಂಡವನ್ನು ಆರಂಭಿಸಿದೆ. ಸರ್ಕಾರ ಪ್ರತಿಯೊಂದು ಶಾಲೆಗಳ ಮಕ್ಕಳಿಗೆ ಪ್ರಕೃತಿ ವಿಕೋಪಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಾಹಿತಿ ನೀಡಲು ಅವಕಾಶ ಮಾಡಿಕೊಟ್ಟಿದೆ” ಎಂದು ಹೇಳಿದರು.
ಸಿಡಿಲು ಬಡಿಯುವ ಸಂದರ್ಭ, ಮಳೆಯಿಂದ ಪ್ರವಾಹ ಬಂದ ಸಂದರ್ಭ, ವಿದ್ಯುತ್ ಅವಘಡ, ಅಪಘಾತವಾದ ಸಂದರ್ಭ ಸೇರಿದಂತೆ ಯಾವುದೇ ಪ್ರಕೃತಿ ವಿಕೋಪಗಳು ಬಂದಾಗ ಹೇಗೆ ಎದುರಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದು, ಇದರ ಬಗ್ಗೆ ನೀವುಗಳೂ ಕೂಡ ನಿಮ್ಮ ತಂದೆ ತಾಯಿಯರಿಗೆ, ಪೋಷಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗಳು ಏನು ಮಾಡುತ್ತಿವೆ?: ಪ್ರಗತಿಪರ ಸಂಘಟನೆಗಳು
ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ ಮಾತನಾಡಿ, “ಪ್ರಕೃತಿ ವಿಕೋಪ ಬಂದಾಗ ಎದುರಿಸುವುದು ಬಹಳ ಕಷ್ಟಕರ. ಅಂಥದರಲ್ಲಿ ಈ ತಂಡದವರು ತಮ್ಮ ಜೀವವನ್ನೂ ಲೆಕ್ಕಿಸದೇ ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಾರೆ. ಎಲ್ಲ ಮಕ್ಕಳು ತಮ್ಮ ಓದಿನ ಜೊತೆಗೆ ಇಂತಹ ತರಬೇತಿಗಳನ್ನು ಪಡೆದು ಮುಂದೆ ನೀವೂ ಕೂಡ ಇಂತಹ ಕಾರ್ಯಗಳಲ್ಲಿ ಭಾಗವಹಿಸುವಂತಾಗಿ” ಎಂದು ಕರೆ ನೀಡಿದರು.
ಎಸ್‌ಡಿಆರ್ ಎಫ್ ಸಬ್ಇನ್ಸ್‌ಪೆಕ್ಟರ್ ವೆಂಕಟರಾಯ ನಾಯಕ್, ಸಿಬ್ಬಂದಿ ವರ್ಗ, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ಎಂ ಕೆ ಮಂಜುಳಾ, ವೈಲೆಟ್, ಕ್ಲಮೆನ್ಸಿಯಾ, ಸೈಟ್ ಮಾಸ್ಟರ್ ರವೀಂದ್ರ ಸ್ವಾಮಿ, ಗೌಡ್, ಕ್ಯಾಪ್ಟನ್ ನಯನ, ಎಚ್ ಎಂ ರಜನಿ ಹಾಗೂ ಶಾಲಾ ಶಿಕ್ಷಕರು, ಮಕ್ಕಳು ಇದ್ದರು.