ಉದ್ಯೋಗ ಖಾತರಿ ಚೀಟಿ (ಜಾಬ್ ಕಾರ್ಡ್) ವಿತರಿಸುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅವರು ಹಾರಿಕೆ ಮಾತುಗಳನ್ನಾಡುತ್ತಾರೆ. ಕೂಡಲೇ ಉದ್ಯೋಗ ಕಾರ್ಡ್ ವಿತರಣೆ ಮಾಡಬೇಕು ಎಂದು ಮನರೇಗಾ ಕಾರ್ಮಿಕ ಲಕ್ಕವ್ ತೆಗ್ಗಿ ಆರೋಪಿಸಿದರು.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ಅನಗವಾಡಿಯ ಗ್ರಾಮ ಪಂಚಾಯತ್ ಎದುರು ಮನರೇಗಾ ಅಡಿಯಲ್ಲಿ ಕೆಲಸ ಮಾಡಲು ಗ್ರಾಮೀಣ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಲಕ್ಕವ್ ತೆಗ್ಗಿ, “ಕಳೆದ ಎರಡು ತಿಂಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಹಾಗೂ ಜಾಬ್ ಕಾರ್ಡ್ ಸಲುವಾಗಿ ಅನಗವಾಡಿ ಗ್ರಾಮ ಪಂಚಾಯಿತಿಗೆ ಹೋಗಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಅಕೌಂಟ್‌ಗಳ ಜೆರಾಕ್ಸ್ ಪ್ರತಿಗಳನ್ನು ಒದಗಿಸಿದರೂ ಕೂಡ ನಮಗೆ ಕೆಲಸ ನೀಡುತ್ತಿಲ್ಲ. ಗ್ರಾಮ ಪಂಚಾಯತಿಯವರನ್ನು ಕೇಳಿದರೆ, ಬೇಜವಾಬ್ದಾರಿ ಮಾತುಗಳನ್ನಾಡುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಯಲ್ಲಿಯೇ ಚಿಕ್ಕ ಮಕ್ಕಳನ್ನು ಕರೆದುಕೊಂಡು ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ. ಗ್ರಾಮ ಪಂಚಾಯತಿಯವರು ಸೌಜನ್ಯಕ್ಕಾದರೂ ಬಂದು ಮಾತನಾಡಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಕಾಲುವೆ ಸ್ವಚ್ಛಗೊಳಿಸುವಂತೆ ರೈತ ಸಂಘ ಆಗ್ರಹ
ತಾಲೂಕು ಪಂಚಾಯಿತಿ ಇಒ ಸಿದ್ದು ನಕ್ಕರಗುಂದಿಯವರು ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾಕಾರರೊಂದಿಗೆ ಮಾತನಾಡಿ, “ಒಂದು ವಾರದೊಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ತಾಲೂಕು ಸಂಚಾಲಕಿ ಸವಿತಾ, ಸಂಘಟಕರು ಮಸ್ತಾನ ನದಾಫ್, ಕಸ್ತೂರಿ ತೆಗ್ಗಿ, ಶಾಂತಾಭಾಯಿ ಹಿರೇಮಠ, ಮುಡಿಯವ್ವ ತೆಗ್ಗಿ, ರೇಷ್ಮಾ ನದಾಫ್, ರಾಜು ತೆಗ್ಗಿ, ಮಲ್ಲಪ್ಪ ಕಿರುಸೂರ್ ಹಾಗೂ ಸಂಘಟನೆಯ ಕಾರ್ಯಕರ್ತರು ಇದ್ದರು.
ಬಾಗಲಕೋಟೆ ಜಿಲ್ಲಾ ವಾಲೆಂಟಿಯರ್ ಖಾಜಾಮೈನುದ್ದಿಣ ತಹಶೀಲ್ದಾರ್ ಬೀಳಗಿ ಮಾಹಿತಿ ಆಧರಿಸಿದ ವರದಿ