ಸುಂದರ ಪ್ರವಾಸಿ ತಾಣ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಹನಿಮೂನ್‌ಗಾಗಿ ಶಿಲ್ಲಾಂಗ್‌ಗೆ ತೆರಳಿದ್ದ ನವ ವಿವಾಹಿತೆ ತಮ್ಮ ಪತಿಯನ್ನು ಕೊಂದಿದ್ದಾರೆ. ಅದನ್ನು, ‘ಹನಿಮೂನ್ ಕೊಲೆ’ ಎಂದೇ ಕರೆಯಲಾಗುತ್ತಿದೆ. ಈ ಹತ್ಯೆಯು ಭೀಕರ, ಅಮಾನವೀಯ ಕೃತ್ಯವಾಗಿದೆ. ಹಾಗೆಯೇ ಈ ಕೊಲೆಯ ಹಿಂದೆ ಪಿತೃಪ್ರಭುತ್ವ, ಜಾತಿ-ವರ್ಗ ತಾರತಮ್ಯ ಹಾಗೂ ಊಳಿಗಮಾನ್ಯ ಶೋಷಣೆಯ ಹಿನ್ನೆಲೆಯೂ ಇದೆ.
ಕೊಲೆ ಆರೋಪಿ ಸೋನಮ್ ಮತ್ತು ಹತ್ಯೆಯಾದ ರಾಜಾ ರಘುವಂಶಿ ಇತ್ತೀಚೆಗೆ ವಿವಾಹವಾಗಿದ್ದರು. ಹನಿಮೂನ್‌ಗಾಗಿ ಶಿಲ್ಲಾಂಗ್‌ಗೆ ತೆರಳಿದ್ದರು. ಹನಿಮೂನ್ ಪ್ರವಾಸದಲ್ಲಿಯೇ ತನ್ನ ಪತಿಯನ್ನು ಕೊಲ್ಲಲು ಸೋನಮ್ ಸಂಚು ರೂಪಿಸಿದ್ದರು. ಆಕೆ ತನ್ನ ಪ್ರೇಮಿಯನ್ನು ವಿವಾಹವಾಗುವ ಉದ್ದೇಶದಿಂದಲೇ ಪತಿಯನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಪ್ರಕರಣದ ಹಿನ್ನೆಲೆ ಬೇರೆ ಕತೆಯನ್ನೇ ಹೇಳುತ್ತಿದೆ.
ಪೊಲೀಸರು ಹೇಳುವಂತೆ, ಯುವತಿ ಸೋನಮ್ ತನ್ನ ಪ್ರೇಮಿ, ತಳ ಸಮುದಾಯದ ರಾಜ್ ಕುಶ್ವಾಹ ಎಂಬಾತನನ್ನು ಮದುವೆಯಾಗಲು ಬಯಸಿದ್ದರು. ಅದಕ್ಕಾಗಿ ಕೊಲೆ ಮಾಡಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಆದರೆ, ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಪ್ರೇಮಿಗಾಗಿ ಕೊಲೆ ಮಾಡಿದ್ದಾರೆ ಎಂಬ ಅಂಶವನ್ನು ಮೀರಿ, ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ವ್ಯವಸ್ಥೆಯೂ ಈ ಹತ್ಯೆಗೆ ಪಾಲುದಾರ ಎಂಬುದು ಸ್ಪಷ್ಟವಾಗುತ್ತದೆ.
ಸೋನಮ್ ತನ್ನ ಹಳೆಯ ಪ್ರೇಮಿಗಾಗಿ ಕೊಲೆ ಮಾಡಿದ್ದಾಳೆ, ನಿರ್ದಯಿ ಎಂದು ದೂಷಿಸುವುದು ಹೇಳಿದಷ್ಟು ಸರಳವಲ್ಲ.
ಇಲ್ಲಿ, ನಾವು ಸಮಾಜಕ್ಕೆ ಕೇಳಲೇಬೇಕಾದ ಪ್ರಶ್ನೆಗಳಿವೆ: ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಮಾರ್ಗಗಳನ್ನು ಹುಡುಕಲಾಗದೆ ಕೊಲೆಯೇ ಉತ್ತಮ ಮಾರ್ಗ ಎಂಬ ಆಲೋಚನೆ ಸೋನಮ್‌ಗೆ ಯಾಕೆ ಬಂದಿತು? ಅಂತಹ ಆಲೋಚನೆಯನ್ನು ಸಮಾಜವು ಹೇಗೆ ಬೆಳೆಸುತ್ತದೆ? ಮಿತಿ, ಎಲ್ಲೆಗಳನ್ನು ಮೀರಿದ ಪ್ರೀತಿಯು ಜೀವಕ್ಕೆ ಅಪಾಯಕಾರಿಯಾಗುವಷ್ಟು ಮಹಿಳೆಯನ್ನು ಮೂಲೆಗುಂಪು ಮಾಡುತ್ತದೆಯೇ?
ಉತ್ತರ ಇಲ್ಲ. ಆದರೆ, ಕಾರಣ ಹಲವು- ಅದರಲ್ಲಿ ಒಂದು, ಪಿತೃಪ್ರಭುತ್ವದ ಹಿಂಸೆ.
ಸೋನಮ್ ತನ್ನ ಗಂಡನ ಕೊಲೆಗೆ ಯೋಜನೆ ರೂಪಿಸುವಾಗ, ನಿರ್ಧಾರವನ್ನು ತೆಗೆದುಕೊಳ್ಳುವಾಗ ಪೂರ್ಣ ಸ್ವತಂತ್ರವಾಗಿ ವರ್ತಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ. ಆದರೆ, ಪಿತೃಪ್ರಭುತ್ವದ ಸಮಾಜದಲ್ಲಿ, ಶತಮಾನಗಳ ಸಾಮಾಜಿಕ ಕಟ್ಟಳೆಗಳಲ್ಲಿ, ಧಾರ್ಮಿಕ ನಿಯಂತ್ರಣ, ಜಾತಿ ಗಡಿಗಳು ಹಾಗೂ ಪುರುಷಾಡಳಿತದ ಕುಟುಂಬಗಳ ರಚನೆಗಳಿಂದಾಗಿರುವ ಮಿತಿಗಳಲ್ಲಿ ಈ ಸ್ವಾತಂತ್ರ್ಯವು ಗೌಣವಾಗಿದೆ.
ಸೋನಮ್ ತನಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು ಎಂಬ ಕಾರಣಕ್ಕಾಗಿ ಕೊಲ್ಲಲಿಲ್ಲ. ಆಕೆಗೆ ಯಾವುದೇ ಸ್ವಾತಂತ್ರ್ಯವಿಲ್ಲ ಎಂಬ ಕಾರಣಕ್ಕಾಗಿ ಕೊಂದಿದ್ದಾಳೆ ಎನ್ನುತ್ತಾರೆ ಲೇಖಕ ಆನಂದ್ ಪ್ರಧಾನ್.
ಕೆಳ ಜಾತಿಯ ಯುವಕನನ್ನು ಪ್ರೀತಿಸುವ ಆಕೆಯ ಆಯ್ಕೆಯು ಕುಟುಂಬಕ್ಕೆ ಮಾತ್ರವಲ್ಲ, ಆಕೆಯ ಸುತ್ತಲಿನ ಇಡೀ ಸಮಾಜಕ್ಕೂ ಒಪ್ಪಿತವಾಗಿರಲಿಲ್ಲ. ಈ ವಿರೋಧಕ್ಕೆ ಕಾರಣವಿಷ್ಟೇ, ಆಕೆಯ ಪ್ರೇಮಿ ದಲಿತ ಎಂಬುದು.
ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗಿರುವ ಆಕೆಯ ತಂದೆಯೂ ಕೂಡ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ‘ಭಾವನಾತ್ಮಕ ಬ್ಲ್ಯಾಕ್‌ಮೇಲ್’ ತಂತ್ರವನ್ನೇ ಸೋನಮ್ ಮೇಲೆ ಪ್ರಯೋಗಿಸಿದ್ದರು. “ಕುಟುಂಬಕ್ಕೆ ಅವಮಾನ ತರಬೇಡ. ನಿನ್ನ ತಂದೆಯ ಘನತೆಯನ್ನು ಕೊಲ್ಲಬೇಡ” ಎಂದು ಆಕೆಯನ್ನು ಭಾವನಾತ್ಮಕ ಬಂಧನದಲ್ಲಿಟ್ಟಿದ್ದರು.
ಸೋನಮ್‌ಗೆ, ಪ್ರೀತಿ ಕೇವಲ ವೈಯಕ್ತಿಕ ಭಾವನೆಯಾಗಿರಲಿಲ್ಲ. ಅದು ಆಕೆಯ ಬದುಕಿನ ಭಾಗವಾಗಿತ್ತು. ಆದರೆ, ಆಕೆ ಇಚ್ಛಿಸಿದ ಬದುಕನ್ನು ಆಕೆಯಿಂದ ಕಸಿದುಕೊಳ್ಳಲಾಗಿತ್ತು. ಈ ವಾದದಲ್ಲಿ ಆಕೆಯ ತಪ್ಪನ್ನು ಕ್ಷಮಿಸಿಬಿಡುವ ಅಥವಾ ಮುಚ್ಚಿಹಾಕುವ ಉದ್ದೇಶವಿಲ್ಲ. ಕೊಲೆ ಯಾವುದೇ ಷರತ್ತು, ವಿನಾಯತಿ ಇಲ್ಲದ ಅಪರಾಧ. ಆದರೆ, ಈ ಪ್ರಕರಣದ ಹಿಂದೆ ಸಾಮಾಜಿಕ ದಬ್ಬಾಳಿಕೆಯ ಪಾತ್ರವೂ ಪ್ರಧಾನವಾಗಿದೆ. ಅದರೊಂದಿಗೆ ವ್ಯಕ್ತವಾಗುವ ಪ್ರಶ್ನೆ ಇಷ್ಟೇ: ಸೋನಮ್‌ಗೆ ರಾಜ್ ಕುಶ್ವಾಹನನ್ನು ಪ್ರೀತಿಸಲು ಮತ್ತು ವಿವಾಹವಾಗಲು ಸಾಮಾಜಿಕ ಅನುಮತಿ ಇದ್ದಿದ್ದರೆ, ರಾಜಾ ರಘುವಂಶಿ ಇನ್ನೂ ಜೀವಂತವಾಗಿರುತ್ತಿದ್ದ ಅಲ್ಲವೇ?
ಜಾತಿ, ವರ್ಗ ಮತ್ತು ನಿಯಂತ್ರಣ
ಭಾರತೀಯ ಸಮಾಜದಲ್ಲಿ ಯಾವುದೇ ವ್ಯಕ್ತಿಯನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ನಿಯಂತ್ರಿಸುವ ಕಪಟ ರೂಪಗಳಲ್ಲಿ ಪಿತೃಪ್ರಭುತ್ವ ಮಾತ್ರವಲ್ಲದೆ, ಜಾತಿಯೂ ಇದೆ. ನಾವು ಯಾರನ್ನು ಪ್ರೀತಿಸಬಹುದು, ಮದುವೆಯಾಗಬಹುದು, ಏನನ್ನು ತಿನ್ನಬೇಕು-ತಿನ್ನಬಾರದು ಎಂಬುದನ್ನು ಜಾತಿ ನಿರ್ಧರಿಸುತ್ತದೆ. ಜಾತೀಯತೆಯೊಳಗೆ ಲಿಂಗ ತಾರತಮ್ಯವನ್ನೂ ಬಗೆದು ನೋಡಿದರೆ, ಹೆಣ್ಣುಮಕ್ಕಳ ಮೇಲಿನ ನಿಯಂತ್ರಣವು ಹೆಚ್ಚು ಕ್ರೂರವಾಗಿದೆ. ಮಹಿಳೆಯರ ದೇಹ, ಅವರ ಆಯ್ಕೆಗಳು ಜಾತಿ ಶುದ್ಧತೆಯ ಸಂಕೇತವೆಂದು ಹೇರಲಾಗಿದೆ.
ಸೋನಮ್ ಅವರ ಪ್ರೇಮಿ ರಾಜ್ ಕುಶ್ವಾಹ ಕೆಳಜಾತಿಯವರು. ಸಮಾಜದಲ್ಲಿ ಕೆಳ ಸ್ಥಾನಮಾನ ಹೊಂದಿರುವವರು. ಈ ಕೆಳ ಜಾತಿ ಮತ್ತು ಕೆಳ ಸ್ಥಾನಮಾನ ಎಂಬ ಎರಡು ಗುರುತುಗಳು ಆಕೆಯ ಕುಟುಂಬದ ದೃಷ್ಟಿಯಲ್ಲಿ ರಾಜ್ ಸಂಪೂರ್ಣವಾಗಿ ತಮ್ಮ ಕುಟುಂಬಕ್ಕೆ ಸೂಕ್ತವಲ್ಲದ ವ್ಯಕ್ತಿಯಾಗಿ ಕಾಣಿಸಿದ್ದಾರೆ.
ಈ ಜಾತಿ ಮತ್ತು ಪುರುಷಾಧಿಪತ್ಯದ ವ್ಯವಸ್ಥೆಯೊಳಗೆ ಪ್ರೀತಿಯನ್ನು ನಿಷೇಧಿಸಲಾಗಿಲ್ಲ. ಆದರೆ, ಜಾತಿಯ ಕಟ್ಟಳೆಯನ್ನು ಮೀರಿ ಪ್ರೀತಿಸಲು ಧೈರ್ಯ ಮಾಡುವ ಹೆಣ್ಣುಮಕ್ಕಳನ್ನು ಹೆಚ್ಚಾಗಿ ಶಿಕ್ಷಿಸಲಾಗುತ್ತದೆ. ಅವರನ್ನು ಹೊಡೆದು, ಬಂಧಿಸಿ ಅಥವಾ ಇನ್ನೂ ಕೆಟ್ಟದಾಗಿ ಅಧೀನದಲ್ಲಿ ಇರಿಸಿಕೊಳ್ಳಲಾಗುತ್ತದೆ. ಮಾತ್ರವಲ್ಲದೆ, ಗೌರವ, ಮರ್ಯಾದೆ ಹೆಸರಿನಲ್ಲಿ ಕೊಲೆಯನ್ನೇ ಮಾಡಲಾಗುತ್ತದೆ.
ಆದರೆ, ಆಧುನೀಕರಣಕ್ಕೆ ಒಡ್ಡಿಕೊಳ್ಳುತ್ತಿರುವ ಭಾರತದಲ್ಲಿ ಯುವತಿಯರು ಉನ್ನತ ಶಿಕ್ಷಣ ಪಡೆದು, ಉದ್ಯೋಗಕ್ಕೆ ಸೇರುತ್ತಿದ್ದಾರೆ. ಯುವಕರು ಮತ್ತು ಯುವತಿಯರು ತಮ್ಮ ಜಾತಿಯನ್ನು ಮೀರಿ ಸ್ನೆಹಿತರಾಗುತ್ತಿದ್ದಾರೆ. ಮಾತ್ರವಲ್ಲ, ಪ್ರೀತಿಯನ್ನೂ ಮಾಡುತ್ತಿದ್ದಾರೆ. ಜಾತಿ, ಧರ್ಮಗಳನ್ನು ಮೀರಿದ ಪ್ರೀತಿಯೊಂದಿಗೆ ಅವರು ತಮ್ಮ ಭವಿಷ್ಯ ಕುರಿತು ಸುಂದರ ಕನಸುಗಳನ್ನು ಕಾಣುತ್ತಲೇ ಇರುತ್ತಾರೆ. ಆದರೆ, ಕೆಲವೊಮ್ಮೆ ಸೋನಮ್ ರೀತಿಯ ಪ್ರಕರಣಗಳಂತೆ, ಸಾಮಾಜಿಕ ಮತ್ತು ಕೌಟುಂಬಿಕ ದಮನವು ಅವರ ಕಸನನ್ನು ದುರಂತ ಫಲಿತಾಂಶವಾಗಿ ಬದಲಿಸಿಬಿಡುತ್ತದೆ.
ಈ ಲೇಖನ ಓದಿದ್ದೀರಾ?:ಆಪರೇಷನ್ ಸಿಂಧೂರ್ – ಇನ್ನೂ ಉತ್ತರಿಸದ ಪ್ರಶ್ನೆಗಳು
ಸೋನಮ್ ಎಸಗಿದ ಕೊಲೆ ಪ್ರಕರಣದಲ್ಲಿ, ಜಾತಿ ಕುರಿತಾದ ಹಿಂಸೆಯು ಸದ್ದಿಲ್ಲದೆ ಅಡಗಿದೆ. ರಾಜಾ ಹತ್ಯೆಯು – ಆತ ತಪ್ಪಾದ ವಿವಾಹ ಮಾಡಿಕೊಂಡ ಎಂಬ ಕಾರಣಕ್ಕೆ ಮಾತ್ರವಲ್ಲ, ಜಾತಿ ಪ್ರಾಬಲ್ಯದ ಆಯಾಮದಲ್ಲಿ ‘ಇದೇ ಸರಿಯಾದ ಮದುವೆ’ ಎಂಬ ವ್ಯಾಖ್ಯಾನದಿಂದಲೂ ಸಂಭವಿಸಿದೆ. ರಾಜಾ ಅವರ ಕೊಲೆ ವೈಯಕ್ತಿಕವಾಗಿರಬಹುದು. ಆದರೆ, ಅದರ ಹಿಂದಿನ ಕಾರಣಗಳು ಆಳವಾಗಿ ಬೇರೂರಿರುವ ಸಾಮಾಜಿಕ, ರಾಜಕೀಯ ಹಾಗೂ ಕೌಟುಂಬಿಕ ವಿಷಯಗಳಾಗಿವೆ.
ಉತ್ತಮ ಯುವತಿ – ಈಗ ಕೊಲೆ ಆರೋಪಿ
ಸೋನಮ್ ದೈವಭಕ್ತೆ. ಏಕಾದಶಿಯಂದು ಧಾರ್ಮಿಕ ಉಪವಾಸ ಆಚರಿಸುತ್ತಿದ್ದರು. ಅದೇ ದಿನ ಆಕೆ ತನ್ನ ಗಂಡನನ್ನು ಕಂದಕಕ್ಕೆ ತಳ್ಳಿದ್ದರು. ಈ ವೈರುದ್ಯವು ಅಸ್ವಾಭಾವಿಕ ಎಂಬಂತೆ ಕಾಣುತ್ತದೆ. ಆದರೆ, ಇದು ಅಸಾಮಾನ್ಯವಾದುದ್ದಲ್ಲ. ಭಾರತದಲ್ಲಿ ಮಹಿಳೆಯರು ಭಾವನಾತ್ಮಕ ಮತ್ತು ಲೈಂಗಿಕ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ, ಅದಕ್ಕಾಗಿ ಧಾರ್ಮಿಕ ಆಚರಣೆಯನ್ನು ಆಚರಿಸುವ ಸಂಸ್ಕೃತಿಯಲ್ಲಿ ಬೆಳೆದಿದ್ದಾರೆ.
ಆದರ್ಶ ಮಹಿಳೆ ಪರಿಶುದ್ಧ, ವಿಧೇಯ, ತ್ಯಾಗಮಯಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮೌನವಾಗಿರಬೇಕು. ತನ್ನ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡಬೇಕು ಎಂದು ಸಮಾಜವು ನಿರೀಕ್ಷಿಸುತ್ತದೆ. ಆದರೆ, ಆಕೆ ತನ್ನ ಇಡೀ ಜೀವನವನ್ನು ಯಾರೊಂದಿಗೆ ಕಳೆಯಬೇಕು ಎಂಬ ಆಯ್ಕೆಯನ್ನು ಆಕೆಯೇ ಮಾಡಿಕೊಳ್ಳಬಾರದು ಎಂಬ ನಿರ್ಬಂಧವನ್ನೂ ಹೇರುತ್ತದೆ.
ಒಬ್ಬ ಮಹಿಳೆ ಈ ಸಾಮಾಜಿಕ ಪಿತೃಪ್ರಧಾನ ನೀತಿ-ಧೋರಣೆಯನ್ನು ಉಲ್ಲಂಘಿಸಿದಾಗ, ಆಕೆ ‘ಉತ್ತಮ /ಆದರ್ಶ ಮಹಿಳೆ’ ಎಂಬ ಪಟ್ಟ ಕಳೆದುಕೊಳ್ಳುತ್ತಾಳೆ. ಜನರ ಕಲ್ಪನೆಯಲ್ಲಿ ‘ಅಪಾಯಕಾರಿ ಮಹಿಳೆ’ ಆಗಿಬಿಡುತ್ತಾಳೆ.
ಆದರೆ, ಮಹಿಳೆಯರು ತಮ್ಮ ಮೇಲೆ ಹೇರಲಾದ ವಿರೋಧಾಭಾಸವಾದ ಕಟ್ಟುಪಾಡುಗಳನ್ನು ಮೌನವಾಗಿ ಎಷ್ಟು ದಿನ ಸಹಿಸಿಕೊಳ್ಳಬಹುದು? ಮಹಿಳೆಯರು ತಮ್ಮ ಆಯ್ಕೆಯನ್ನು ನಿರ್ಧರಿಸುವ, ಅಭಿಪ್ರಾಯವನ್ನು ವ್ಯಕ್ತಪಡಿಸುವ, ಅಪೇಕ್ಷಿಸುವ, ಭಿನ್ನಾಭಿಪ್ರಾಯ ಅಭಿವ್ಯಕ್ತಿಸುವ ಅಥವಾ ಕನಸು ಕಾಣುವ ಹಕ್ಕನ್ನು ಎಷ್ಟು ದಿನ ಕಳೆದುಕೊಳ್ಳಲು ಸಾಧ್ಯ? ಮಹಿಳೆಯರನ್ನು ಎಲ್ಲ ಆಯಾಮಗಳಲ್ಲೂ ನಿಯಂತ್ರಿಸುವ ಸಮಾಜದಲ್ಲಿ, ಯಾವುದೋ ಒಂದು ಕ್ಷಣದಲ್ಲಿ ದಂಗೆಯೂ ಸ್ಫೋಟಕ ಅಥವಾ ಕೆಲವೊಮ್ಮೆ ಹಿಂಸಾತ್ಮಕ ರೂಪಗಳನ್ನು ಪಡೆಯಬಹುದು.
ಈ ಲೇಖನ ಓದಿದ್ದೀರಾ?: ಗುಜರಾತ್ | ಅಕ್ರಮ ವಲಸೆ ಹಣೆಪಟ್ಟಿ: 8,500 ಕುಟುಂಬಗಳ ನಿರ್ನಾಮ!
ಸೋನಮ್ ಪ್ರಕರಣವು ಅಂತಹ ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿದೆ. ಸೋನಮ್ ಎಸಗಿದ ಅಪರಾಧ ಭಯಾನಕವಾದದ್ದು. ಆದರೆ, ಆಕೆ ಅನುಭವಿಸಿದ ಸಾಮಾಜಿಕ ಹಿಂಸೆ, ದಮನ, ದೌರ್ಜನ್ಯವು ಸಾಮಾನ್ಯವೆಂಬಂತೆ ಹಿಂದಿನಿಂದಲೂ ಹೇರಿಕೆಯಾಗಿ ನಡೆದುಕೊಂಡೇ ಬಂದಿದೆ. ಅದರ ವಿರುದ್ಧದ ಆಕೆಯ ಪ್ರತಿರೋಧವು ಏನೂ ಅರಿಯದ ರಾಜಾನ ಕೊಲೆಯಲ್ಲಿ ವ್ಯಕ್ತಗೊಂಡಿದೆ.
ಪ್ರೀತಿಯ ಹಕ್ಕನ್ನು ಕೊಲ್ಲುವ ಸಮಾಜ
ಸೋನಮ್ ಪ್ರಕರಣವು ಸಾಮಾಜಿಕ ಕಟ್ಟುಪಾಡು ಮಾದರಿಯ ಪ್ರತಿಬಿಂಬವಾಗಿದೆ. ಮರ್ಯಾದೆಯ ಹೆಸರಿನಲ್ಲಿ ದಂಪತಿಗಳನ್ನು ಕೊಲ್ಲುವ, ಯುವಜನರನ್ನು ಒಪ್ಪಿಗೆಯೇ ಇಲ್ಲದ ವಿವಾಹಕ್ಕೆ ಒತ್ತಾಯಿಸುವ ಅಥವಾ ಪ್ರೀತಿಯನ್ನು ಭಯ ಮತ್ತು ಶಿಕ್ಷೆಯಿಂದ ಚಿವುಟಿ ಹಾಕುವ ಭಯಾನಕ ವಿದ್ಯಮಾನ ವ್ಯವಸ್ಥೆಯೊಳಗೆ ಬೇರೂರಿದೆ. ಜೊತೆಗೆ, ಈಗ ‘ಲವ್ ಜಿಹಾದ್’ ಎಂಬ ಭ್ರಮಾಲೋಕದ ಗುಮ್ಮನನ್ನು ಸಮಾಜದಲ್ಲಿ ಹುಟ್ಟುಹಾಕಲಾಗಿದೆ. ಭ್ರಮಾತ್ಮಕ ಗುಮ್ಮ ‘ಲವ್ ಜಿಹಾದ್’ ವಿರುದ್ಧದ ಕಾನೂನುಗಳು ಜಾರಿಗೊಳ್ಳುತ್ತಿರುವ, ಅಂತರ್ಜಾತಿ ಪ್ರೀತಿಯನ್ನು ಅಪರಾಧೀಕರಿಸಿದ ದೇಶದಲ್ಲಿ ಸೋನಮ್ ರೀತಿಯ ಪ್ರಕರಣಗಳು ಅಗತ್ಯವಾಗಿ ಅಲ್ಲ, ಅನಿವಾರ್ಯವಾಗಿ ಘಟಿಸಿಬಿಡುತ್ತವೆ.
ಪ್ರೀತಿ ಮತ್ತು ಪ್ರತಿರೋಧದ ನಡುವೆ- ನಿಯಂತ್ರಿತ ಗಡಿಗಳನ್ನು ದಾಟಿ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆ, ಪಿತೂರಿ ಮತ್ತು ಕೊಲೆಯ ಕಥೆಯಾಗಿ ಮಾರ್ಪಟ್ಟಿದ್ದಾರೆ. ಏಕೆ? ಏಕೆಂದರೆ, ನೋಯಿಸದೆ ಪರಸ್ಪರ ಮುಕ್ತವಾಗಿ ಪ್ರೀತಿಸುವ ಅಥವಾ ಮದುವೆಯಾಗುವ ಅಥವಾ ಪ್ರೀತಿಯಿಂದ ಹೊರಹೋಗುವ ಧೈರ್ಯಶಾಲಿ ಕ್ರಿಯೆಗೆ ನಮ್ಮ ಸಾಮಾಜಿಕ ಕಲ್ಪನೆಯಲ್ಲಿ ಅವಕಾಶವಿಲ್ಲ.
ಇದೆಲ್ಲದರ ನಡುವೆ ಕಾಡುವ ಪ್ರಶ್ನೆ, ‘ಸೋನಮ್ ಏಕೆ ಕೊಂದಳು?‘ ಮಾತ್ರವಲ್ಲ, ‘ವೈಯಕ್ತಿಕ ಅಥವಾ ತಮ್ಮಿಷ್ಟದ ಆಯ್ಕೆ ಮಾಡಿಕೊಳ್ಳುವುದು ಅಸಾಧ್ಯವೆಂದು ತೋರುವ ಸಮಾಜವನ್ನು ನಾವು ಇನ್ನೂ ಏಕೆ ನಿರ್ಮಿಸುತ್ತಿದ್ದೇವೆ?‘
ರಾಜಾ ರೀತಿಯಲ್ಲಿ ಹೆಚ್ಚಿನವರು ಸಾಯುವುದನ್ನು ಮತ್ತು ಹೆಚ್ಚಿನವರು ಸೋನಮ್ ರೀತಿ ಅಪರಾಧಿಗಳಾಗಿ ಬದಲಾಗುವುದನ್ನು ತಡೆಯಲು ಭಾರತೀಯ ಸಮಾಜವು ಬಯಸುವುದೇ ಆದರೆ, ಆಧುನಿಕತೆಯನ್ನು ಶಪಿಸುವ ಅಥವಾ ಹೆಣ್ಣುಮಕ್ಕಳ ಸ್ವಾತಂತ್ರ್ಯ-ಶಿಕ್ಷಣವನ್ನು ದೂಷಿಸುವ ಬದಲಾಗಿ ಉತ್ತಮವಾದದ್ದು ಮತ್ತು ಹೆಚ್ಚಿನದನ್ನು ಮಾಡಬೇಕಿದೆ.
ಭಾರತೀಯ ಸಮಾಜವು ಯುವಜನರ ವೈಯಕ್ತಿಕ ಜೀವನದ ಮೇಲೆ ಪಿತೃಪ್ರಭುತ್ವ, ಜಾತಿ, ಧರ್ಮ ಹಾಗೂ ವರ್ಗ (ಸ್ಥಾನಮಾನ)ದ ಹಿಡಿತವನ್ನು ಸಡಿಲಗೊಳಿಸಲು ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಬೇಕು. ಕುಟುಂಬಗಳು ತಮ್ಮ ಮಕ್ಕಳ ಪ್ರೀತಿಯನ್ನು ಕುಟುಂಬದ ಗೌರವಕ್ಕೆ ಮಾರಕವೆಂದು ಭಾವಿಸುವುದನ್ನು ಬಿಡಬೇಕು. ಸಮಾಜವು ಮಹಿಳೆಯರಿಗೆ ಸ್ವಂತ ಇಚ್ಛೆ ಮತ್ತು ಆಯ್ಕೆಯನ್ನು ಹೊಂದಿದ್ದಕ್ಕಾಗಿ ಶಿಕ್ಷಿಸುವುದನ್ನು ನಿಲ್ಲಿಸಬೇಕು. ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು.
ಸೋನಮ್ ಎಸಗಿದ ಕೃತ್ಯವನ್ನು ಖಂಡಿಸಿದರೆ ಮಾತ್ರವೇ ಸಾಲದು. ಇದೊಂದೇ ದಾರಿ ಎಂಬಂತೆ ತೋರುವ ಸಾಮಾಜಿಕ ರಚನೆಯನ್ನು ಕೆಡವಬೇಕು. ಇದಾವುದೂ ಆಗದಿದ್ದರೆ, ಇಂತಹ ಭೀಕರ ಘಟನೆಗಳು ಮತ್ತೆಲ್ಲಿಯಾದರೂ ಘಟಿಸುವ ಅಪಾಯ ಇದ್ದೇ ಇದೆ. ಸಮಾಜ, ಕುಟುಂಬಗಳು ಎಚ್ಚೆತ್ತುಕೊಳ್ಳುವ, ತಮ್ಮ ಧೋರಣೆಗಳನ್ನು ಬದಲಾಯಿಸಿಕೊಳ್ಳುವ ಕಾಲ ಬಂದಿದೆ.
ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ