ತೆಂಬಾ ಬಾವುಮಾ….ಈ ಹೆಸರನ್ನು ಇನ್ನು ಮುಂದೆ ಎಲ್ಲ ಕ್ರಿಕೆಟ್ ಪ್ರೇಮಿಗಳು ನೆನಪಿನಲ್ಲಿಡಬೇಕಿದೆ. ಕಾರಣ ದಕ್ಷಿಣ ಆಫ್ರಿಕಾಕ್ಕೆ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ತಂದುಕೊಟ್ಟ ನಾಯಕ ಎಂಬ ಕೀರ್ತಿಗೆ ತೆಂಬಾ ಬಾವುಮಾ ಪಾತ್ರರಾಗಿದ್ದಾರೆ.
‘ಕ್ರಿಕೆಟ್ ಕಾಶಿ’ ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಳೆದ ಬಾರಿಯ ಚಾಂಪಿಯನ್ ಬಲಿಷ್ಠ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
1998ರಲ್ಲಿ ಏಕದಿನ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ, ಈವರೆಗೆ ಯಾವುದೇ ಐಸಿಸಿ ಟ್ರೋಫಿ ಗೆದ್ದಿರಲಿಲ್ಲ. ಸೆಮಿಫೈನಲ್, ಫೈನಲ್ ಸೇರಿದಂತೆ ಹಲವು ಪ್ರಮುಖ ಪಂದ್ಯಗಳಲ್ಲಿ ಸೋಲನ್ನಪ್ಪುತ್ತಲೇ ಬಂದಿತ್ತು. ಪರಿಣಾಮ ಕಳೆದ ಎರಡೂವರೆ ದಶಕಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ‘ಚೋಕರ್ಸ್’ ಹಣೆಪಟ್ಟಿ ಕಟ್ಟಿಕೊಂಡಿತ್ತು.

ಈಗ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಬಲಿಷ್ಠ ಆಸೀಸ್ ತಂಡವನ್ನು ಫೈನಲ್‌ನಲ್ಲಿ ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸೌತ್ ಆಫ್ರಿಕಾ ತಂಡದ ನಾಯಕ ತೆಂಬಾ ಬಾವುಮಾ ಇತಿಹಾಸ ಸೃಷ್ಟಿಸಿದ್ದಾರೆ. ಜೊತೆಗೆ ಟೆಂಬಾ ಬವುಮಾ, ಈ ಶತಮಾನದಲ್ಲಿ ಐಸಿಸಿ ಪ್ರಶಸ್ತಿ ಗೆದ್ದ ಮೊದಲ ದಕ್ಷಿಣ ಆಫ್ರಿಕಾದ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅವಮಾನ ಅನುಭವಿಸಿದ್ದ ನಾಯಕ ತೆಂಬಾ ಬಾವುಮಾ
ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡರೂ ಅತ್ಯುತ್ತಮ ಬೌಲಿಂಗ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ಕ್ರಂ ಮತ್ತು ನಾಯಕ ಬವುಮಾರವರ ದಿಟ್ಟ ಆಟದಿಂದ ಆಸ್ಟ್ರೇಲಿಯಾ ಕಡೆ ವಾಲಿದ್ದ ಪಂದ್ಯವನ್ನು ಗೆದ್ದು ಟೆಸ್ಟ್ ಚಾಂಪಿಯನ್ ಆಗಿದ್ದಾರೆ.

ನಾಯಕ ತೆಂಬಾ ಬಾವುಮಾ ನಿಂದನೆ, ಟ್ರೋಲ್, ಅವಮಾನ ಅನುಭವಿಸಿದ್ದಾರೆಂದರೆ ಅದನ್ನು ಹೇಳತೀರದು. ಅವರ ಕಪ್ಪು ಬಣ್ಣ, ಎತ್ತರ, ಆಟದ ಶೈಲಿಯ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ನಿಂದನೆಗೊಳಗಾಗಿದ್ದರು.
“ತೆಂಬಾ ಬವುಮಾ ಅಕಾಡೆಮಿ” ಹೆಸರಿನಲ್ಲಿ ಹತ್ತಾರು ಟ್ರೋಲ್ ಪೇಜ್‌ಗಳನ್ನು ಕೂಡ ಮಾಡಿ, ಅವಮಾನ, ನಿಂದನೆ ಮಾಡಲಾಗುತ್ತಿತ್ತು. ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ವಿಫಲವಾದರೆ ಆ ಅಕಾಡೆಮಿ ಗೆ ಸ್ವಾಗತ ಎಂದು ಗೇಲಿ ಮಾಡಲಾಗುತ್ತಿತ್ತು.
ಆಫ್ರಿಕಾದಲ್ಲಿನ ಕ್ರೀಡಾ ಮೀಸಲಾತಿಯಿಂದ ಬವುಮ ನಂತವರು ಅವಕಾಶ ಗಿಟ್ಟಿಸುತ್ತಿದ್ದು ನೈಜ ಕ್ರಿಕೆಟ್ ಹಾಳಾಗುತ್ತದೆ ಎಂದೆಲ್ಲಾ ಆರೋಪಿಸಿ ಅವರನ್ನು ನಿಂದಿಸಲಾಗಿತ್ತು. ಅವೆಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡಿದ್ದ ಬವುಮಾರವರು ಇಂದು ತಮ್ಮ ಸಮರ್ಥ ನಾಯಕತ್ವದ ಮೂಲಕ ‘ಮೆರಿಟ್’ ಎಂದು ಹೀಯಾಳಿಸುವವರಿಗೆ ತಮ್ಮ ಪ್ರತಿಭೆಯ ಮೂಲಕವೇ ಚಾಟಿಯೇಟು ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ತಾಳ್ಮೆಯ ಆಟವಾಡಿದ್ದ ನಾಯಕ ಬಾವುಮಾ, 134 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ನೆರವಿನೊಂದಿಗೆ 66 ರನ್ ಗಳಿಸಿದ್ದಲ್ಲದೇ, ಶತಕ ಗಳಿಸಿದ್ದ ಏಡನ್ ಮಾರ್ಕರಮ್ ಜೊತೆಗೆ 3ನೇ ವಿಕೆಟ್‌ಗೆ 147 ರನ್ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
ಇದೊಂದೇ ಪಂದ್ಯ ಮಾತ್ರವಲ್ಲದೇ ನಾಯಕ ಬಾವುಮಾ, ಡರ್ಬನ್ ಟೆಸ್ಟ್ ಪಂದ್ಯದಲ್ಲಿ 70 ಮತ್ತು 113 ರನ್‌ಗಳನ್ನು ಗಳಿಸಿ ಗೆಲುವಿಗೆ ಕಾರಣವಾಗಿದ್ದರು. ಇನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವ ಮೊದಲು ಸೌತ್ ಆಫ್ರಿಕಾ ಬವುಮಾ ನಾಯಕತ್ವದಲ್ಲಿ 8 ಟೆಸ್ಟ್ ಪಂದ್ಯಗಳನ್ನು ಗೆದ್ದಿತ್ತು. ಒಟ್ಟು 12 ಪಂದ್ಯಗಳನ್ನು ಆಡಿದ್ದು, 8 ಗೆಲುವು, 3 ಸೋಲು ಮತ್ತು 1 ಡ್ರಾ ಫಲಿತಾಂಶದೊಂದಿಗೆ ಫೈನಲ್ ತಲುಪಿ ಈಗ ಚಾಂಪಿಯನ್ ಪಟ್ಟ ಪಡೆದಿದೆ.
ಇದನ್ನು ಓದಿದ್ದೀರಾ? ‘ಚೋಕರ್ಸ್’ ಪಟ್ಟದಿಂದ ಕೊನೆಗೂ ಮುಕ್ತಿ: ಸೌತ್ ಆಫ್ರಿಕಾ ಈಗ ‘ವಿಶ್ವ ಟೆಸ್ಟ್ ಚಾಂಪಿಯನ್’
ಬವುಮ ಟೆಸ್ಟ್, ಏಕದಿನ ಮತ್ತು ಟಿಟ್ವೆಂಟಿ ಮೂರು ವಿಭಾಗಗಳಲ್ಲಿ ಸಮರ್ಥ ಆಟಗಾರ ಮಾತ್ರವಲ್ಲದೇ, ನಾಯಕತ್ವವನ್ನೂ ಸಹ ಸರಿಯಾಗಿ ನಿಭಾಯಿಸಿದ್ದಾರೆ. ಬಲಿಷ್ಠ ಆಸೀಸ್ ಅನ್ನು ಮಣಿಸಿ, ಬರೋಬ್ಬರಿ 27 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾಕ್ಕೆ ಐಸಿಸಿ ಟ್ರೋಫಿ ತಂದುಕೊಡುವ ಮೂಲಕ, ದೇಶವನ್ನು ಒಂದಾಗಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾ ಮೀಸಲಾತಿ (ಕೋಟಾ ವ್ಯವಸ್ಥೆ)
ವರ್ಣಭೇದ ನೀತಿಯಿಂದ ನಲುಗುತ್ತಿದ್ದ ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾ ಮೀಸಲಾತಿ (ಕೋಟಾ ವ್ಯವಸ್ಥೆ)ಯನ್ನು ತರಲಾಗಿದೆ. ದೇಶದ ಇತಿಹಾಸದಲ್ಲಿ ವರ್ಣ ತಾರತಮ್ಯ ಮತ್ತು ರಾಜಕೀಯ ಒತ್ತಡದಿಂದಾಗಿ ಕ್ರೀಡೆಯಲ್ಲಿ ಸಮಾನತೆಯನ್ನು ತರಲು ಜಾರಿಗೊಳಿಸಲಾದ ಒಂದು ನೀತಿಯಾಗಿದೆ.
ಈ ವ್ಯವಸ್ಥೆಯ ಮೂಲಕ ಕ್ರಿಕೆಟ್, ರಗ್ಬಿ, ನೆಟ್‌ಬಾಲ್ ಮತ್ತು ಇತರ ಕ್ರೀಡೆಗಳಲ್ಲಿ ಶ್ವೇತೇತರ (ಕಪ್ಪು, ಕಲರ್ಡ್, ಭಾರತೀಯ) ಆಟಗಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಕ್ರಿಕೆಟ್ ಸೌತ್ ಆಫ್ರಿಕಾ (CSA) 2016ರಲ್ಲಿ ರಾಷ್ಟ್ರೀಯ ತಂಡಕ್ಕೆ ಕೋಟಾ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ನೀತಿಯ ಪ್ರಕಾರ, ಒಂದು ಋತುವಿನಾದ್ಯಂತ ಸರಾಸರಿಯಾಗಿ ಆಡುವ 11 ಆಟಗಾರರಲ್ಲಿ ಕನಿಷ್ಠ 6 ಶ್ವೇತೇತರ ಆಟಗಾರರಿರಬೇಕು, ಇವರಲ್ಲಿ ಕನಿಷ್ಠ 2 ಜನ ಕಪ್ಪು ಆಫ್ರಿಕನ್ನರಾಗಿರಬೇಕು ಎಂಬುದಾಗಿದೆ.