ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ತಾಂತ್ರಿಕ ದೋಷಗಳೇ ಪ್ರಮುಖ ಕಾರಣವೆಂದು ಈಗಾಗಲೇ ಚರ್ಚೆಯಾಗುತ್ತಿದೆ. ವಿಮಾನವು ಹಾರಾಟಕ್ಕೆ ಸಮರ್ಪಕವಾಗಿರಲಿಲ್ಲ ಎಂಬ ಅಂಶಗಳು ಗಮನ ಸೆಳೆಯುತ್ತಿವೆ. ಈ ನಡುವೆ, ವಿಮಾನಯಾನ ತಜ್ಞ ಮತ್ತು ಅನುಭವಿ ಪೈಲಟ್ ಕ್ಯಾಪ್ಟನ್ ಸ್ಟೀವ್ ಅವರು ತಾಂತ್ರಿಕವಾಗಿ ಯಾವೆಲ್ಲ ದೋಷಗಳು ಕಾರಣವಾದವು ಎಂಬುದರ ಬಗ್ಗೆ ವಿಶ್ಲೇಷಿಸಿ, ವಿವರಿಸಿದ್ದಾರೆ. ಅಪಘಾತಕ್ಕೆ ಎಂಜಿನ್ ವೈಫಲ್ಯಕ್ಕಿಂತ ಹೆಚ್ಚಾಗಿ ಇತರ ಅನೇಕ ಕಾರಣಗಳಿವೆ ಎಂದು ಸೂಚಿಸಿದ್ದಾರೆ.
ಬೋಯಿಂಗ್ 777 ಮತ್ತು ಬೋಯಿಂಗ್ 787 ಎರಡನ್ನೂ ಹಾರಿಸಿದ ಅನುಭವ ಹೊಂದಿರುವ ಕ್ಯಾಪ್ಟನ್ ಸ್ಟೀವ್ ಅವರು, “ಅಪಘಾತಕ್ಕೀಡಾದ ವಿಮಾನದ ಲಿಫ್ಟ್ ಸರಿ ಇರಲಿಲ್ಲ. ಫ್ಲಾಪ್ ಸೆಟ್ಟಿಂಗ್ ತೀರಾ ಅಸಮರ್ಪಕವಾಗಿತ್ತು” ಎಂದು ಹೇಳಿದ್ದಾರೆ.
“ಬೋಯಿಂಗ್ 787 ಹಲವು ವಿಧಗಳಲ್ಲಿ 777 ಗಿಂತ ಹೆಚ್ಚು ಸಮರ್ಥವಾಗಿರುತ್ತದೆ. ಅಪಘಾತಕ್ಕೀಡಾದ ವಿಮಾನದ ವಿಡಿಯೋಗಳನ್ನು ಹತ್ತಿರದಿಂದ ಗಮನಿಸಿದಾಗ ನಾನು ಕಂಡುಕೊಂಡ ಮೊದಲ ವಿಷಯವೆಂದರೆ ಮೂಗಿನಾಕಾರದ ವಿಮಾನದ ಮುಂಭಾಗವು ದುಂಡಾಗಿರುವುದಕ್ಕಿಂತ ಹೆಚ್ಚು ಸಮತಟ್ಟಾಗಿ ಕಾಣುತ್ತದೆ. ಜೊತೆಗೆ, ವಿಮಾನದ ಫ್ಲಾಪ್ ಅಂದರೆ, ರೆಕ್ಕೆಯ ಮುಂಭಾಗ ಸರಿಯಾಗಿ ಜೋಡಣೆಯಾದಂತೆ ಇರಲಿಲ್ಲ. ಇದು ಟೇಕ್ ಆಫ್ ಸಮಯದಲ್ಲಿ ಲಿಫ್ಟ್ ಮೇಲೆ ಪರಿಣಾಮ ಬೀರುವ ಪ್ರಮುಖ ಘಟಕವಾಗಿದೆ” ಎಂದು ತಿಳಿಸಿದ್ದಾರೆ.
“ಬೋಯಿಂಗ್ 787 ಹೆಚ್ಚು ತೂಕ ಹೊಂದಿದ್ದು, ಅವುಗಳು ಹೆಚ್ಚಾಗಿ ಫ್ಲಾಫ್ಸ್ ಫೈವ್‌ನ ಸಹಾಯದಿಂದ ಹಾರುತ್ತವೆ. ಫ್ಲಾಪ್‌ಗಳಿಗೆ ಮೊಣಚಾದ ಸಾಧನಗಳನ್ನು ಅಳವಡಿಸಲಾಗಿರುತ್ತದೆ. ಹಿಂಭಾಗದಲ್ಲಿ ಫ್ಲಾಪ್‌ಗಳು ಐದು ಡಿಗ್ರಿಯಷ್ಟು ವಿಸ್ತರಿಸುತ್ತವೆ. ಆದಾಗ್ಯೂ, ಅಪಘಾತದ ವೀಡಿಯೊದಲ್ಲಿರುವ ವಿಮಾನದಲ್ಲಿನ ಫ್ಲಾಪ್ ನಿಯೋಜನೆ ಸರಿ ಇದ್ದಂತಿಲ್ಲ” ಎಂದು ಹೇಳಿದ್ದಾರೆ.
ವಿಡಿಯೋಗಳನ್ನು ಬಳಸಿ ಘಟನೆಯನ್ನು ಅನುಕ್ರಮವಾಗಿ ಗಮನಿಸಿರುವ ಅವರು, “ವಿಮಾನವು ಹಾರಾಟ ಆರಂಭಿಸುವ ಆರಂಭದಲ್ಲಿ ಅದರ ಲ್ಯಾಂಡಿಂಗ್ ಗೇರ್ ಇನ್ನೂ ಕೆಳಗಿತ್ತು ಎಂಬುದು ಕಾಣುತ್ತದೆ. ಇದು ಸರಿಯಾದ ಕ್ರಮವಾಗಿರಲಿಲ್ಲ. ವಿಮಾನವು ಹಾರಿ, ನೆಲದಿಂದ ಸುಮಾರು 50 ಅಡಿ ಎತ್ತರಕ್ಕೆ ಹೋಗುವಷ್ಟರಲ್ಲಿ ಗೇರ್‌ಗಳನ್ನು ಹಿಂಪಡೆಯಲಾಗುತ್ತದೆ. ಆದರೆ, ಇಲ್ಲಿ ಅದು ಆಗಿಲ್ಲ” ಎಂದು ವಿವರಿಸಿದ್ದಾರೆ.
“ನಾವು ಎರಡೂ ಎಂಜಿನ್‌ಗಳನ್ನು ನೋಡಬಹುದು. ಅವುಗಳು ಒತ್ತಡವನ್ನು ಉಂಟುಮಾಡುತ್ತವೆಯೇ ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ. ಆದರೂ, ಅವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬುದಕ್ಕೆ ಯಾವುದೇ ಜ್ವಾಲೆ, ಸ್ಪಾರ್ಕ್‌ಗಳು ಕಂಡುಬಂದಿಲ್ಲ. ಮುಖ್ಯ ವಿಚಾರವೆಂದರೆ, ವಿಮಾನವು ಲಿಫ್ಟ್ ಕಳೆದುಕೊಂಡಿದ್ದರಿಂದಲೇ ಹಾರಾಟ ನಿಲ್ಲಿಸಿದೆ” ಎಂದು ತಿಳಿಸಿದ್ದಾರೆ.
“ಎರಡೂ ಎಂಜಿನ್‌ಗಳು ವಿಫಲವಾಗುವುದು ಸಾಮಾನ್ಯವಾಗಿ ಪಕ್ಷಿಗಳ ಹಿಂಡು ಡಿಕ್ಕಿಯಾದಾಗ. ಆದರೆ, ವಿಡಿಯೋದಲ್ಲಿ ಅಂತಹ ಯಾವುದೇ ದೃಶ್ಯವು ಕಾಣುವುದಿಲ್ಲ. ಎಂಜಿನ್‌ಗಳಿಂದ ಬೆಂಕಿಯ ಜ್ವಾಲೆ ಹೊರಹೊಮ್ಮಿಲ್ಲ. ಘಟನೆಗೆ ಮತ್ತೊಂದು ಸಂಭಾವ್ಯ ಕಾರಣ ಇರಬಹುದು. ಅದು, ಪೈಲಟ್ ಸೂಕ್ತ ಸಮಯದಲ್ಲಿ ಸಹ-ಪೈಲಟ್‌ಗೆ ‘ಗೇರ್ ಅಪ್’ ಮಾಡಿ ಎಂದು ಹೇಳಿದಾಗ, ಸಹ-ಪೈಲಟ್ ಫ್ಲಾಪ್ ಹ್ಯಾಂಡಲ್ಅನ್ನು ಹಿಡಿದು ಗೇರ್ ಬದಲಿಗೆ ಫ್ಲಾಪ್‌ಗಳನ್ನು ಮೇಲಕ್ಕೆತ್ತಿರಬಹುದು ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ, ಹಾಗೆ ಆಗಿದ್ದಲ್ಲಿ, ಅದು ದೊಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ. ವಿಮಾನ ತನ್ನ ಹಾರಾಟವನ್ನು ನಿಲ್ಲಿಸಲು ಅದೇ ಕಾರಣವೂ ಆಗುತ್ತದೆ. ಹಾರಾಟದ ಸಮಯದಲ್ಲಿ ಫ್ಲಾಪ್‌ಗಳು ಸಂಪೂರ್ಣವಾಗಿ ಹಿಂತೆಗೆದುಕೊಂಡಿದ್ದರಿಂದ ರೆಕ್ಕೆಗಳ ಮೇಲಿನ ಲಿಫ್ಟ್ ಕೆಲಸ ಮಾಡುವುದಿಲ್ಲ” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಶಿಲ್ಲಾಂಗ್ ಹನಿಮೂನ್ ಪ್ರಕರಣ: ಪಿತೃಪ್ರಭುತ್ವದಲ್ಲಿ ಮಹಿಳಾ ಸ್ವಾತಂತ್ರ್ಯದ ಹತ್ಯೆಯಿಂದ ಸಂಭವಿಸಿದ ಕೊಲೆ
“ವಿಮಾನದ ಮೂಗು (ಮುಂಭಾಗ) ಮೇಲಕ್ಕೆ ಏರಲು ಆರಂಭಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಅದು ಯಾಕೆ ಹಾಗೆ ಆಗುತ್ತದೆ ಎಂದರೆ, ವಿಮಾನವು ತಾನು ಹಾರಲು ತನ್ನ ರೆಕ್ಕೆಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ತಾನು ಹಾರಲು ರೆಕ್ಕೆಯ ಲಿಫ್ಟ್ ಸಕ್ರಿಯವಾಗಿ ಕೆಲಸ ಮಾಡುವಂತೆ ಮಾಡಲು ಪ್ರಯತ್ನಿಸುತ್ತದೆ. ಆ ಸಮಯದಲ್ಲಿ, ಫ್ಲಾಪ್‌ಗಳು ಮೇಲಕ್ಕೆ ಬರುತ್ತಿದ್ದರೆ, ರೆಕ್ಕೆಗಳು ಗಾಳಿಯ ಹರಿವನ್ನು ಪಡೆಯಲು ಅದರ ಮೂಗು ಇನ್ನೂ ಹೆಚ್ಚು ಮೇಲಕ್ಕೆ ಹೋಗುತ್ತದೆ” ಎಂದು ವಿವರಿಸಿದ್ದಾರೆ.
“ಒಂದು ವೇಳೆ, ರೆಕ್ಕೆ ಮತ್ತು ಲಿಫ್ಟ್‌ನ ಕೆಲಸವು ಸರಿಯಾಗಿ ನಡೆಯದಿದ್ದರೆ, ಫೈಲಟ್‌ಗೆ ವಿಮಾನದ ಮೇಲಿನ ನಿಯಂತ್ರಣ ತಪ್ಪುತ್ತದೆ. ಅವರು ವಾಯುವೇಗವನ್ನು ಕಳೆದುಕೊಳ್ಳುತ್ತಾರೆ. ನಿರ್ದಿಷ್ಟ ಎತ್ತರವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಗೇರ್ ಮೇಲಕ್ಕೆ ಬಾರದೆ, ಫ್ಲಾಪ್‌ಗಳು ಮೇಲಕ್ಕೆ ಬಂದಿವೆ ಎಂಬುದು ಅವರಿಗೆ ತಿಳಿಯದೇ ಇರಬಹುದು” ಎಂದು ಹೇಳಿದ್ದಾರೆ.
“ವಿಡಿಯೋದಲ್ಲಿ ನಾವು ನೋಡುವಂತೆ, ನಿರ್ದಿಷ್ಟ ಎತ್ತರದಿಂದ, ವಿಮಾನವು ಇದ್ದಕ್ಕಿದ್ದಂತೆ ಇಳಿಯಲು ಪ್ರಾರಂಭಿಸುತ್ತದೆ. ಪೈಲಟ್ ವಿಮಾನದ ಮೂಗನ್ನು ಸ್ವಲ್ಪ ಹೆಚ್ಚು ಮೇಲಕ್ಕೆ ಎಳೆಯಲು ಯತ್ನಿಸುತ್ತಾರೆ. ಆದರೂ ಪ್ರಯೋಜವಾಗುವುದಿಲ್ಲ. ವಿಮಾನವು ಎಳೆದಾಡಲು ಅರಂಭಿಸುತ್ತದೆ. ಇದು, ವಿಮಾನ ಹಾರಲು ಅರಂಭಿಸಿದ ಮೇಲೂ ಲ್ಯಾಂಡಿಂಗ್ ಗೇರ್‌ಗಳು ಹೊರಗೇ ಇದ್ದಿದ್ದರಿಂದ ಸಂಭವಿಸುತ್ತದೆ” ಎಂದು ಹೇಳಿದ್ದಾರೆ.
“ನನ್ನ ಅಭಿಪ್ರಾಯಗಳಲ್ಲಿ ಕೆಲವು ತಪ್ಪುಗಳು ಇರಬಹುದು. ಆದರೆ, ವಿಮಾನದ ಹಾರಾಟದ ಲಕ್ಷಣಗಳು, ನನಗೆ, ರೆಕ್ಕೆಯ ಮೇಲೆ ಯಾವುದೇ ಲಿಫ್ಟ್‌ಗಳು ಕಾಣಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಅದಕ್ಕೆ ಏಕೈಕ ಕಾರಣ, ವಿಮಾನವು ಸರಿಯಾದ ಫ್ಲಾಪ್ ಸೆಟ್ಟಿಂಗ್ ಅನ್ನು ಹೊಂದಿಲ್ಲದೇ ಇರುವುದು ಮಾತ್ರ” ಎಂದು ಅವರು ತಿಳಿಸಿದ್ದಾರೆ.