ಭಾನುವಾರ ಕೇದಾರನಾಥ ಬಳಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಎರಡು ವರ್ಷದ ಮಗು ಮತ್ತು ಪೈಲಟ್ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಹೆಲಿಕಾಪ್ಟರ್ ಸೇವಾ ನಿರ್ವಹಣಾ ಸಂಸ್ಥೆ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗೌರಿಕುಂಡ್ ಮತ್ತು ತ್ರಿಯುಗಿನಾರಾಯಣ ನಡುವಿನ ಗೌರಿ ಮಾಯ್ ಖಾರ್ಕ್ ಅರಣ್ಯದಲ್ಲಿ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಬೆಲ್ 407 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.
ಇದನ್ನು ಓದಿದ್ದೀರಾ? ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ
ಆರ್ಯನ್ ಏವಿಯೇಷನ್‌ನ ವ್ಯವಸ್ಥಾಪಕ ಕೌಶಿಕ್ ಪಾಠಕ್ ಮತ್ತು ವ್ಯವಸ್ಥಾಪಕ ವಿಕಾಸ್ ತೋಮರ್ ವಿರುದ್ಧ ಸೋನ್‌ಪ್ರಯಾಗ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ವಿಮಾನ ಕಾಯ್ದೆ 1934ರ ಸೆಕ್ಷನ್ 10ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೀವ್ ನಖೋಲಿಯಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜೂನ್ 15ರಂದು ಆರ್ಯನ್ ಏವಿಯೇಷನ್‌ಗೆ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಬೆಳಿಗ್ಗೆ 6ರಿಂದ 7ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಈ ಅಪಘಾತವು ಅದಕ್ಕೂ ಮೊದಲು ಬೆಳಿಗ್ಗೆ 5:30ಕ್ಕೆ ಸಂಭವಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದಲ್ಲದೆ, ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಮತ್ತು ಮಂಜಿನಿಂದ ಕೂಡಿದ್ದರೂ, ಹೆಲಿಕಾಪ್ಟರ್ ಹಾರುವ ಮೊದಲು ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲಿಸಲಾಗಿಲ್ಲ ಎಂದು ಆರೋಪಿಸಲಾಗಿದೆ. ಹಾಗೆಯೇ ಹೆಲಿಕಾಪ್ಟರ್ ಸಂಸ್ಥೆಯು ಡಿಜಿಸಿಎ ಮತ್ತು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ ಮಾರ್ಗಸೂಚಿಯನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಮಾರ್ಗಸೂಚಿ ಉಲ್ಲಂಘಿಸಿದ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕರು ಈ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಸೇರಿಸಲಾಗಿದೆ.
