ಭ್ರಷ್ಟಾಚಾರದ ಆರೋಪದ ಮೇಲೆ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ವಾಗ್ದಂಡನೆ ನಿಲುವಳಿ ಹೊರಡಿಸುವ ಮೂಲಕ ನ್ಯಾಯಾಧೀಶರ ನೇಮಕಾತಿಗಳನ್ನು ನಿಯಂತ್ರಣಕ್ಕೆ ಪಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ. ನ್ಯಾಯಾಧೀಶರ ನೇಮಕಾತಿ ಸಂಬಂಧ ಈ ಹಿಂದಿನ ವ್ಯವಸ್ಥೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‌ಜೆಎಸಿ) ತರುವ ಮೂಲಕ ನ್ಯಾಯಾಧೀಶರ ನೇಮಕಾತಿ ನಿಯಂತ್ರಿಸಲು ಮುಂದಾಗಿದೆ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮಂಗಳವಾರ ಆರೋಪಿಸಿದ್ದಾರೆ.
ಇನ್ನು ಜಸ್ಟೀಸ್ ವರ್ಮಾ ಮತ್ತು ಜಸ್ಟೀಸ್ ಶೇಖರ್ ಯಾದವ್ ವಿಚಾರದಲ್ಲಿ ಸರ್ಕಾರವು ತಾರತಮ್ಯ ನಿಲುವನ್ನು ಹೊಂದಿದೆ ಎಂದೂ ಸಿಬಲ್ ದೂರಿದ್ದಾರೆ. ಬಹಿರಂಗವಾಗಿ ಕೋಮುವಾದದ ಹೇಳಿಕೆಗಳನ್ನು ನೀಡುವ ಜಸ್ಟೀಸ್ ಶೇಖರ್ ವಿರುದ್ಧ ವಿಪಕ್ಷಗಳು ಇತ್ತೀಚೆಗೆ ವಾಗ್ದಂಡನೆ ನಿಲುವಳಿ ಸಲ್ಲಿಸಲು ಆಗ್ರಹಿಸಿದೆ. ನ್ಯಾಯಮೂರ್ತಿ ವರ್ಮಾ ವಿರುದ್ಧ ವಾಗ್ದಂಡನೆ ನಿಲುವಳಿ ಪ್ರಸ್ತಾಪನೆ ಸಲ್ಲಿಸಲು ಸರ್ಕಾರ ಮುಂದಾಗಿದೆ.
ಇದನ್ನು ಓದಿದ್ದೀರಾ? ಬಹುಸಂಖ್ಯಾತರ ಇಚ್ಛೆಯಂತೆ ದೇಶ, ಕಾನೂನು ನಡೆಯುತ್ತದೆ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ!
ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದ ವರ್ಮಾ ಅವರ ನಿವಾಸದಲ್ಲಿ ನಡೆದ ಅಗ್ನಿ ಅವಘಡದ ವೇಳೆ ಹಲವು ಸುಟ್ಟ ನಗದು ಚೀಲಗಳು ಪತ್ತೆಯಾಗಿದ್ದವು. ಜಸ್ಟೀಸ್ ಶೇಖರ್ ಯಾದವ್ ಅವರು ಹಲವು ಬಾರಿ ಸಾರ್ವಜನಿಕವಾಗಿ ಕೋಮುವಾದದ ಹೇಳಿಕೆಗಳನ್ನು ನೀಡಿದ್ದಾರೆ. ಇಬ್ಬರು ನ್ಯಾಯಾಧೀಶರ ವಿಚಾರದಲ್ಲಿ ಕೇಂದ್ರ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ನಡೆಯುತ್ತಿದೆ.
ಜಸ್ಟೀಸ್ ವರ್ಮಾ ಅವರನ್ನು ನ್ಯಾಯಾಧೀಶರ ಸ್ಥಾನದಿಂದ ತೆಗೆದುಹಾಕಲು ಕೇಂದ್ರ ಸರ್ಕಾರವು ವಾಗ್ದಂಡನೆ ನಿಲುವಳಿ ಸಲ್ಲಿಸಲು ಮುಂದಾಗಿರುವಾಗ ಕೋಮುವಾದದ ಹೇಳಿಕೆ ನೀಡುವ ಜಸ್ಟೀಸ್ ಶೇಖರ್ ಯಾದವ್ ವಿರುದ್ಧ ವಾಗ್ದಂಡನೆ ನಿಲುವಳಿ ಸಲ್ಲಿಸುವುದಿಲ್ಲ ಏಕೆ ಎಂಬುದು ವಿಪಕ್ಷಗಳ ಪ್ರಶ್ನೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಸಿಬಲ್, ”ಕೊಲಿಜಿಯಂ ವ್ಯವಸ್ಥೆಯನ್ನು ಕೊನೆಗೊಳಿಸುವುದು ಮತ್ತು ನ್ಯಾಯಾಧೀಶರ ನೇಮಕಾತಿಯನ್ನು ನಿಯಂತ್ರಿಸುವುದು ಸರ್ಕಾರದ ಉದ್ದೇಶ” ಎಂದು ಆರೋಪಿಸಿದ್ದಾರೆ.
ನ್ಯಾಯಮೂರ್ತಿ ವರ್ಮಾ ಬಗ್ಗೆ ಮಾತನಾಡಿದ ಸಿಬಲ್, “ನಾನು ಈ ಹಿಂದೆ ವಾದಿಸಿದ ಅತ್ಯುತ್ತಮ ನ್ಯಾಯಾಧೀಶರಲ್ಲಿ ಒಬ್ಬರು ವರ್ಮಾ ಎಂದು ನಾನು ಅತ್ಯಂತ ಜವಾಬ್ದಾರಿಯಿಂದ ಹೇಳಬಲ್ಲೆ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿರುವ ಯಾವುದೇ ವಕೀಲರನ್ನು ನೀವು ಕೇಳಿ, ಈ ನ್ಯಾಯಾಧೀಶರ ತಪ್ಪಿಲ್ಲ ಎಂದು ತಿಳಿಯುತ್ತದೆ. ಅವರ ಬಗ್ಗೆ ಅಲಹಾಬಾದ್‌ನಲ್ಲಿರುವ ಯಾವುದೇ ವಕೀಲರನ್ನು ನೀವು ಕೇಳಬಹುದು” ಎಂದಿದ್ದಾರೆ.
ಇದನ್ನು ಓದಿದ್ದೀರಾ? ನ್ಯಾ.ಯಶವಂತ್ ವರ್ಮಾ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ ಪ್ರಕರಣ; ರಾಜೀನಾಮೆಗೆ ಸುಪ್ರೀಂ ಸೂಚನೆ
“ನೀವು(ಸರ್ಕಾರ) ಯಾವುದೇ ಪುರಾವೆಗಳಿಲ್ಲದ ನ್ಯಾಯಾಧೀಶರನ್ನು(ವರ್ಮಾ) ಗುರಿಯಾಗಿಸಿಕೊಂಡಿದ್ದೀರಿ. ಹಾಗೆಯೇ ಸಾರ್ವಜನಿಕವಾಗಿ ಪುರಾವೆ ಇರುವ ನ್ಯಾಯಾಧೀಶರನ್ನು(ಯಾದವ್) ರಕ್ಷಿಸುತ್ತಿದ್ದೀರಿ” ಎಂದು ಸಿಬಲ್ ದೂರಿದ್ದಾರೆ.
“ನ್ಯಾಯಮೂರ್ತಿ ವರ್ಮಾ ಪ್ರಕರಣದಲ್ಲಿ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದಂದು ನಿಲುವಳಿ ಮಂಡಿಸಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬಯಸಿದ್ದಾರೆ. ಯಾಕಾಗಿ? ನೀವು ಶೇಖರ್ ಯಾದವ್ ಅವರನ್ನು ಏಕೆ ರಕ್ಷಿಸುತ್ತಿದ್ದೀರಿ” ಎಂದು ಸಿಬಲ್ ಪ್ರಶ್ನಿಸಿದ್ದಾರೆ.
“ನ್ಯಾಯಾಧೀಶರನ್ನು ನೇಮಿಸುವ ಅಧಿಕಾರವನ್ನು ಕೊಲಿಜಿಯಂನಿಂದ ಕಿತ್ತುಕೊಂಡು ಅದನ್ನು ಎನ್‌ಜೆಎಸಿಗೆ ನೀಡುವುದು ಸರ್ಕಾರದ ಈ ಆಟದ ಹಿಂದಿರುವ ಯೋಜನೆ. ಆದರೆ ಅದನ್ನು ವಿರೋಧ ಪಕ್ಷಗಳು ಏಕೆ ಅರಿತುಕೊಳ್ಳುತ್ತಿಲ್ಲ. ಸರ್ಕಾರದ ಈ ಆಟದ ಹಿಂದಿರುವ ಉದ್ದೇಶವನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
“ಯಾವುದೇ ತನಿಖೆ ಮತ್ತು ಕಾರ್ಯವಿಧಾನವಿಲ್ಲದೆ ಹೈಕೋರ್ಟ್ ನ್ಯಾಯಾಧೀಶ ವರ್ಮಾ ವಿರುದ್ಧ ನಿರ್ಧಾರ ತೆಗೆದುಕೊಂಡಿದೆ. ನ್ಯಾಯಾಧೀಶರ ವಿಚಾರಣೆಯೂ ನಡೆದಿಲ್ಲ. ಇದು ಸಂಪೂರ್ಣವಾಗಿ ಆಘಾತಕಾರಿ” ಎಂದರು.
