ಗುಜರಾತ್ ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ ಕನಿಷ್ಠ 190 ಮಂದಿಯ ಗುರುತು ಪತ್ತೆಯಾಗಿದೆ. ಡಿಎನ್‌ಎ ಪರೀಕ್ಷೆಗಳ ಮೂಲಕ ಗುರುತಯ ಪತ್ತೆಹಚ್ಚಲಾಗಿದೆ. 32 ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 159 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ಜೂನ್ 12ರಂದು 242 ಪ್ರಯಾಣಿಕರು ಮತ್ತು ಸಿಬ್ಬಂದಿಯಿಂದ ಏರ್ ಇಂಡಿಯಾ AI-171 ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನಲ್ಲಿ ಪತನಗೊಂಡಿದೆ. ಒಬ್ಬ ಪ್ರಯಾಣಿಕರನ್ನು ಹೊರತುಪಡಿಸಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ: ಮೃತರ ಸಂಖ್ಯೆಯ ಬಗ್ಗೆ ಹೆಚ್ಚಿದ ಗೊಂದಲ, ಅಧಿಕಾರಿಗಳು ಮೌನ
ವಿಮಾನ ವೈದ್ಯರಿದ್ದ ಹಾಸ್ಟೆಲ್ ಒಂದಕ್ಕೆ ಅಪ್ಪಳಿಸಿದ ಕಾರಣದಿಂದಾಗಿ ಮೆಸ್‌ನಲ್ಲಿ ಊಟ ಮಾಡುತ್ತಿದ್ದವರು ಸೇರಿದಂತೆ ಹಲವು ಮಂದಿ ಸಾವನ್ನಪ್ಪಿದ್ದಾರೆ. ವೈದ್ಯರು ಹೇಳಿದಂತೆ ಒಟ್ಟು 270 ಮೃತದೇಹಗಳು ಲಭಿಸಿದೆ. ವಿಮಾನದಲ್ಲಿ ಇದ್ದದ್ದು 242 ಮಂದಿ. ಆದ್ದರಿಂದ ಹಾಸ್ಟೆಲ್‌ನಲ್ಲಿ 28 ಮಂದಿ ಮೃತಪಟ್ಟಿದ್ದಾರೆಯೇ ಎಂಬ ಪ್ರಶ್ನೆಯಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಮೃತದೇಹಗಳ ಹಸ್ತಾಂತರದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ, “ಬುಧವಾರ ಬೆಳಿಗ್ಗೆವರೆಗೆ, 190 ಡಿಎನ್‌ಎ ಮಾದರಿಗಳ ಹೊಂದಾಣಿಕೆಯಾಗಿದೆ. 159 ಶವಗಳನ್ನು ಈಗಾಗಲೇ ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಇತರ ಮೃತದೇಹಗಳ ಡಿಎನ್‌ಎ ಮಾದರಿಗಳನ್ನು ಹೊಂದಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ” ಎಂದು ತಿಳಿಸಿದ್ದಾರೆ.
“ಅಪಘಾತದ ಬಳಿಕ 71 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಪೈಕಿ ಕೇವಲ ಏಳು ಮಂದಿ ಮಾತ್ರ ಪ್ರಸ್ತುತ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇತರೆ 12 ರೋಗಿಗಳನ್ನು ಅಹಮದಾಬಾದ್ ಮತ್ತು ದಾಹೋದ್‌ನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಿಕಿತ್ಸೆಯ ವೇಳೆ ಮೂವರು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಡಾ. ರಾಕೇಶ್ ಜೋಶಿ ಮಾಹಿತಿ ನೀಡಿದ್ದಾರೆ.
ಇನ್ನು ವಿಮಾನದಲ್ಲಿದ್ದ ವ್ಯಕ್ತಿಗಳ ಮತ್ತು ಹಾಸ್ಟೆಲ್ ಸೇರಿದಂತೆ ವಿಮಾನ ದುರಂತ ನಡೆದ ಸ್ಥಳದಲ್ಲಿ ಸಾವನ್ನಪ್ಪಿದವರು ಸೇರಿದಂತೆ 250 ಮಂದಿಯ ಕಟುಂಬಸ್ಥರ ಡಿಎನ್ಎ ಸಂಗ್ರಹಿಸಲಾಗಿದೆ ಎಂದು ಈ ಹಿಂದೆ ರಾಜ್ಯ ಸರ್ಕಾರ ಹೇಳಿದೆ. ಆಸ್ಪತ್ರೆಯ ವೈದ್ಯರು 270 ಶವಗಳು ಪತ್ತೆಯಾಗಿದೆ ಎಂದಿದ್ದಾರೆ. 270 ಜನರ ಅಂಕಿ ಅಂಶ ನಿಖರವಾಗಿದ್ದರೂ 16 ಹೆಚ್ಚುವರಿ ಸಾವುಗಳ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟೀಕರಣವಿಲ್ಲ.
