ತಮಿಳು ಕಾಲೊನಿ ನಿವಾಸಿಗಳಿಗಾಗಿ ಮಂಡ್ಯ ನಗರದ ಹೊರವಲಯದ ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ನಿರ್ಮಿಸಿದ ಸ್ಲಂಬೋರ್ಡ್ ವಸತಿ ಗೃಹಗಳಿಗೆ ಮುಸ್ಲಿಂ ಸಮುದಾಯದ ಕೆಲವು ಜನರು ಅತಿಕ್ರಮವಾಗಿ ಪ್ರವೇಶಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣದ ಸೃಷ್ಟಿಯಾಗಿತ್ತು.
ಖಾಲಿ ಮನೆಗಳನ್ನು ಹಿಡಿದುಕೊಂಡರೆ ಆ ಮನೆಗಳು ಅವರಿಗೇ ಸೇರುತ್ತವೆಂಬ ಸುಳ್ಳು ವದಂತಿ ಹಿನ್ನೆಲೆಯಲ್ಲಿ ನಗರದ ನಾನಾ ಬಡಾವಣೆಗಳಲ್ಲಿ ವಾಸಿಸುತ್ತಿದ್ದ ಮುಸ್ಲಿಮರು ಬುಧವಾರ ಲಾರಿಗಳ ಮೂಲಕ ತಂಡೋಪ ತಂಡವಾಗಿ ಬಂದು ತಮಗಿಷ್ಟವಾದ ಮನೆಗಳಿಗೆ ಪ್ರವೇಶ ಮಾಡಿದರು. ಸಾಕಷ್ಟು ಮನೆ ಪಾತ್ರೆ ಸಾಮಾನುಗಳು ಹಾಗೂ ಬಟ್ಟೆಗಳೊಂದಿಗೆ ಬಂದಿದ್ದರು ಎನ್ನಲಾಗಿದೆ.
ವಿಷಯ ತಿಳಿದ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್, ಕಂದಾಯ ಇಲಾಖೆ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಮನೆಗಳಿಗೆ ಪ್ರವೇಶ ಮಾಡಿದ ಜನರು ಮತ್ತು ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ “ತಮಗ್ಯಾರಿಗೂ ಸ್ವಂತ ಮನೆ ಅಥವಾ ನಿವೇಶನಗಳಿಲ್ಲ. ಈ ಮನೆಗಳು ಖಾಲಿ ಇರುವುದರಿಂದ ನಮಗೆ ಕೊಡಿ. ನಾವು ಇಲ್ಲೇ ವಾಸಿಸುತ್ತೇವೆ. ಕಾನೂನು ಬದ್ಧವಾಗಿ ಹಂಚಿಕೆ ಪ್ರಕ್ರಿಯೆ ನಡೆಯುವವರೆಗೆ ಬೇಕಿದ್ದರೆ ಬಾಡಿಗೆ ಪಾವತಿಸಲು ನಾವು ಸಿದ್ಧ” ಎಂದು ಮುಸ್ಲಿಂ ಸಮುದಾಯದ ಜನರು ಒತ್ತಾಯಿಸಿದರು.
“ತಮಿಳು ಕಾಲೊನಿ ನಿವಾಸಿಗಳ ಸ್ಥಳಾಂತರಕ್ಕೆ ನ್ಯಾಯಾಲಯದ ತಡೆಯಾಜ್ಞೆಯಿದೆ. ಹೀಗಾಗಿ ಸ್ಥಳಾಂತರ ಮಾಡಿಲ್ಲ. ಕೆರೆಯಂಗಳದಲ್ಲಿ ನಿರ್ಮಿಸಿರುವ ಈ ಮನೆಗಳು ತಮಿಳು ಕಾಲೊನಿ ನಿವಾಸಿಗಳಿಗಾಗಿ ಮೀಸಲಾಗಿವೆ. ನಿಮಗೆ ಮನೆಗಳಿಲ್ಲವೆಂದರೆ ನೀವು ಅರ್ಜಿಗಳನ್ನು ಕೊಡಿ. ಮುಂದಿನ ಹಂತದಲ್ಲಿ ನಿಮ್ಮ ಅರ್ಜಿಗಳನ್ನು ಪರಿಗಣಿಸುತ್ತೇವೆ” ಎಂದು ಅಧಿಕಾರಿಗಳು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕನ್ನಡ ನಾಡಿನ ಏಕೀಕರಣಕ್ಕೆ ಮುನ್ನುಡಿ ಬರೆದ ಜಿಲ್ಲೆ ಬಳ್ಳಾರಿ: ಯಶವಂತ್‌ರಾಜ್ ನಾಗಿರೆಡ್ಡಿ
ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, “ಅತಿಕ್ರಮ ಪ್ರವೇಶ ಮಾಡುವುದು ಕಾನೂನುಬಾಹಿರ. ಹೀಗಾಗಿ ನೀವು ತಕ್ಷಣವೇ ಮನೆಗಳನ್ನು ಖಾಲಿ ಮಾಡಬೇಕು. ಸುಳ್ಳು ವದಂತಿಯಿಂದ ನೀವೆಲ್ಲಾ ಬಂದಿದ್ದೀರಿ” ಎಂದು ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಎಲ್ಲರೂ ಮನೆಗಳನ್ನು ಬಿಟ್ಟು ಹಿಂತಿರುಗಿದ್ದಾರೆ.