ಜೂನ್ ಮೊದಲ ವಾರದಲ್ಲಿ ವಾಡಿಕೆಯಂತೆ ಬರಬೇಕಾದ ಮುಂಗಾರು ಮಳೆ ಜುಲೈ ಎರಡನೇ ವಾರದಲ್ಲಿ ಉಂಟಾಗಿದೆ. ಜೂನ್ ತಿಂಗಳು ಕಳೆದರೂ ಗರಿಷ್ಠ ಮಟ್ಟದಲ್ಲಿ ಬಿತ್ತನೆ ಕಾರ್ಯ ಮುಗಿಸದ ರೈತರು ಆಕಾಶದತ್ತ ಮುಖ ಮಾಡುವಂತಾಗಿತ್ತು. ಜೂನ್ ಕೊನೆಯ ವಾರದಲ್ಲಿ ಅಷ್ಟಿಷ್ಟು ಉದುರಿದ ತುಂತುರು ಮಳೆಯಿಂದ ಬಿತ್ತನೆ ಪೂರ್ಣಗೊಳಿಸಿದ ರೈತರು ಮತ್ತೆ ಮಳೆಗಾಗಿ ಇಣುಕಿ ನೋಡುವಂತಾಗಿತ್ತು. ಇದೀಗ ಜುಲೈ ಎರಡನೇ ವಾರದಲ್ಲಿ ಬೆಂಬಿಡದೆ ಸುರಿಯುತ್ತಿರುವ ತುಂತುರು ಹಾಗೂ ಸಾಧಾರಣ ಮಳೆಯಿಂದ ರೈತರು ಇನ್ನೊಂದು ರೀತಿಯ ಸಂಕಷ್ಟಕ್ಕೆ ಸಿಲುಕಿದ್ದು, ಚಿಂತೆಗೀಡಾಗಿದ್ದಾರೆ.
ಮಳೆ ಆಶ್ರಿತ ಬೆಳೆಗಳಿಗೆ ಮಳೆ ಅತಿಯಾದರೆ ಅತಿವೃಷ್ಟಿ, ಮಳೆಯಾಗದಿದ್ದರೆ ಅನಾವೃಷ್ಟಿ. ಹೀಗಾಗಿ ತಾಪಮಾನಕ್ಕೆ ಹೊಂದಿಕೊಳ್ಳುವ ಬೆಳೆ ಸೋಯಾಬಿನ್ ಬೆಳೆಯೇ ಜಿಲ್ಲೆಯಾದ್ಯಂತ ಅಧಿಕವಾಗಿ ಬಿತ್ತನೆ ಮಾಡುತ್ತಿದ್ದಾರೆ. ಸೋಯಾ ಜೊತೆಗೆ ಬಿತ್ತನೆ ಮಾಡಿದ ತೊಗರಿ, ಉದ್ದು, ಹೆಸರು, ಹತ್ತಿ ಸೇರಿದಂತೆ ಇತರೆ ಮುಂಗಾರು ಬೆಳೆಗಳು ಅತಿಯಾದ ಮಳೆಯಿಂದಾಗಿ ಜಲಾವೃತವಾಗಿವೆ. ಮಳೆ ಕೈಕೊಟ್ಟ ಕಾರಣಕ್ಕೆ ದಿಕ್ಕೆಟ್ಟು ಹೋಗಿದ್ದ ರೈತರು ಇದೀಗ ಅತಿಯಾದ ಮಳೆಯಿಂದ ಇನ್ನಷ್ಟು ಹೈರಾಣಾಗಿ ಕಂಗಾಲಾಗಿದ್ದಾರೆ.
ಬೆಳೆ ಹಾನಿ, ಪರಿಹಾರಕ್ಕೆ ಆಗ್ರಹ:
ಕಮಲನಗರ ತಾಲೂಕಿನ ಬೆಳಕುಣಿ (ಚೌ) ಗ್ರಾಮದ ವೀರಪ್ಪ ಚಾಮಲೆ ಅವರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮುಗಿಸಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಸಂಪೂರ್ಣ ಬೆಳೆ ನೀರುಪಾಲಾಗಿದೆ. ಸಾಲ ಸೋಲ ಮಾಡಿ ಬಿತ್ತನೆ ಮಾಡಿದ ನಮಗೆ ಬೆಳೆ ಕೈಕೊಟ್ಟಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

“ಕಾಡುಪ್ರಾಣಿಗಳ ಹಾವಳಿಗೆ ಬೇಸತ್ತು ರೈತರು ಬೆಳೆ ರಕ್ಷಣೆಗೆ ಹೊಲಗಳಿಗೆ ಸೋಲಾರ್ ಬೇಲಿ ಹಾಕಿಕೊಂಡಿದ್ದಾರೆ. ಆದರೆ ಸತತವಾಗಿ ಸುರಿದ ಮಳೆಯಿಂದ ಸೋಲಾರ್ ಬಳಕೆಗೆ ಬರಲಿಲ್ಲ. ಇದರಿಂದ ಕಾಡು ಹಂದಿಗಳು ಕಬ್ಬಿನ ಗದ್ದೆಗೆ ನುಗ್ಗಿ ಎರಡು ಎಕರೆಯಲ್ಲಿ ಬೆಳೆದ ಕಬ್ಬು ಅಲ್ಲಲ್ಲಿ ನೆಲಕ್ಕುರುಳಿದೆ. ಹಗಲಿರುಳು ಶ್ರಮಿಸಿ ಬೆಳೆದ ಬೆಳೆ ಕೈಗೆ ಬಾರದಂತಾಗಿದೆ” ಎಂದು ಔರಾದ್ ತಾಲೂಕಿನ ರೈತ ಮಹಿಳೆ ಲಕ್ಷ್ಮಿಬಾಯಿ ಅವಲತ್ತುಕೊಂಡಿದ್ದಾರೆ.
ಕೆಸರು ಗದ್ದೆಯಂತಾದ ರಸ್ತೆಗಳು:
“ಜಿಟಿಜಿಟಿ ಮಳೆಗೆ ಜಿಲ್ಲೆಯ ಹಲವು ಗ್ರಾಮಗಳ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಜನರು ಓಡಾಡಲು ಪರದಾಡುವಂತಾಗಿದೆ. ಬೀದರ್ ನಗರದ ಹಳೆ ಬಸ್ ನಿಲ್ದಾಣ ಮುಂಭಾಗ, ನೌಬಾದ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳು ಅಪಾಯಕ್ಕೆ ಸಿಲುಕಿವೆ. ಈ ಹಿಂದೆ ಬೀದರ್ ಉತ್ಸವ ಸಂದರ್ಭದಲ್ಲಿ ತರಾತುರಿಯಲ್ಲಿ ರಸ್ತೆ ಕಾಮಗಾರಿ ಮುಗಿಸಿದ ರಸ್ತೆಗಳೇ ಮಳೆಗೆ ಕಿತ್ತು ಬರುತ್ತಿವೆ. ಇದೀಗ ಇಬ್ಬರು ಸಚಿವರು ಹೊಂದಿರುವ ಜಿಲ್ಲಾ ಕೇಂದ್ರದಲ್ಲಿ ಗುಂಡಿಗಳ ದರ್ಬಾರ್ ಹೆಚ್ಚಾಗಿದ್ದು ಜನಜೀವನ ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಜಿಲ್ಲಾಡಳಿತ ಗುಂಡಿ ಮುಚ್ಚಲು ಮುಂದಾಗಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್ | ಕೃಷಿ ಡಿಪ್ಲೊಮಾ ಕೋರ್ಸ್ ರದ್ದು; ಪುನರಾರಂಭಕ್ಕೆ ಎಬಿವಿಪಿ ಆಗ್ರಹ
ಮನೆ ಗೋಡೆ ಕುಸಿತ; ಪರಿಹಾರಕ್ಕೆ ಆಗ್ರಹ
ಸತತವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಮನೆ ಗೋಡೆ ಕುಸಿದು ಬಿದ್ದ ಘಟನೆಗಳು ಜರುಗಿವೆ. ಔರಾದ್, ಹುಮನಾಬಾದ್, ಭಾಲ್ಕಿ, ಕಮಲನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆ ಗೋಡೆ ಕುಸಿದಿದ್ದು ಪರಿಹಾರ ನೀಡುವಂತೆ ಸಂತ್ರಸ್ತ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಜಲಾವೃತವಾದ ರಸ್ತೆ, ಸಂಚಾರ ಸ್ಥಗಿತ
ಕರ್ನಾಟಕ ಅಲ್ಲದೆ ಪಕ್ಕದ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಗಡಿ ಭಾಗದ ಗ್ರಾಮಗಳ ರಸ್ತೆಗಳು ಜಲಾವೃತಗೊಂಡಿದೆ. ತೆಲಂಗಾಣಾ ರಾಜ್ಯದ ಕೊತ್ತೂರ್ ಡ್ಯಾಮ್ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಹೆಚ್ಚುವರಿ ನೀರು ಸಿಂದೋಲ್ ಗ್ರಾಮದ ಹಳ್ಳದ ಮೂಲಕ ಹರಿಯುತ್ತಿದ್ದು, ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸಿಂದೊಲ್ ಬ್ರಿಡ್ಜ್ ಮೇಲಿಂದ ಹಾದು ಹೋಗುವ ಮನ್ನಳ್ಳಿ- ಭಂಗೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಕಮಲನಗರ ತಾಲೂಕಿನ ಖಣಗಾಂವ- ಔರಾದ, ಚಿಟಗುಪ್ಪ ತಾಲೂಕಿನ ಉಡುಮನಳ್ಳಿ – ಕರಕನಳ್ಳಿ ಮಾರ್ಗದ ಸಂಪರ್ಕ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.