ಇರಾನ್-ಇಸ್ರೇಲ್ ಸಂಘರ್ಷದಲ್ಲಿ ರಾಜತಾಂತ್ರಿಕ ಮಧ್ಯಸ್ಥಿಕೆಯ ಮೂಲಕ ರಷ್ಯಾದ ಪ್ರಭಾವವನ್ನು ವೃದ್ಧಿಸಲು ಪುಟಿನ್ ಪ್ರಯತ್ನಿಸುತ್ತಿದ್ದಾರೆ. ಪೈಪೋಟಿಗೆ ಬಿದ್ದ ಅಮೆರಿಕ ಅಡ್ಡಗಾಲು ಹಾಕುತ್ತಿದೆ...
ಇಸ್ರೇಲ್-ಇರಾನ್ ಸಂಘರ್ಷ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳು ಪರಸ್ಪರ ಡ್ರೋನ್, ಕ್ಷಿಪಣಿ ದಾಳಿಯಲ್ಲಿ ನಿರತವಾಗಿವೆ. ಆಸ್ಪತ್ರೆಗಳು, ಜನವಸತಿ ಕಟ್ಟಡಗಳು, ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡುತ್ತಿವೆ. ಸಾವು-ನೋವುಗಳು ವರದಿಯಾಗುತ್ತಿವೆ.
ಆದರೆ ಇದು, ಇರಾನ್-ಇಸ್ರೇಲ್ ದೇಶಗಳಿಗಷ್ಟೇ ಸೀಮಿತವಾದ ಸಂಘರ್ಷವಾಗಿ ಉಳಿದಿಲ್ಲ, ಉಳಿಯುವುದೂ ಇಲ್ಲ. ಇಸ್ರೇಲ್ ಬೆನ್ನಿಗೆ ಬಲಾಢ್ಯ ಅಮೆರಿಕ ನಿಂತಿದೆ. ಇದು ಸಹಜವಾಗಿಯೇ ರಷ್ಯಾ ಮತ್ತು ಚೀನಾದ ನಾಯಕರು ಇತ್ತ ಗಮನ ಹರಿಸುವಂತೆ, ತಮ್ಮ ಪಾತ್ರಗಳ ಕುರಿತು ಪ್ರತಿಕ್ರಿಯಿಸುವಂತೆ ಮಾಡಿದೆ. ಗುರುವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್, ಒಂದು ಗಂಟೆ ಕಾಲ ಟೆಲಿಫೋನ್ ಸಂಭಾಷಣೆಯಲ್ಲಿ ನಿರತರಾಗಿ, ಇರಾನ್ ಮೇಲೆ ಇಸ್ರೇಲ್ ನಡೆಸಿರುವ ದಾಳಿಯನ್ನು ಖಂಡಿಸಿದ್ದಾರೆ.
ರಷ್ಯಾದ ಪರಮಾಣು ಇಂಧನ ನಿಗಮದ ಮುಖ್ಯಸ್ಥರು, ಇರಾನ್‌ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಇಸ್ರೇಲ್ ದಾಳಿ ಮಾಡಿದರೆ, ಅದು ಚೆರ್ನೋಬಿಲ್ ಶೈಲಿಯ ದುರಂತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ಮುಂದುವರೆದು, ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ತೀವ್ರವಾಗಿ ವಿರೋಧಿಸಿರುವ ಪುಟಿನ್, ‘ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲಿದೆ’ ಎಂಬ ಗಂಭೀರ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನು ಓದಿದ್ದೀರಾ?: ಅಮೆರಿಕದ ಟ್ರಂಪ್ ಎಂಬ ಹುಚ್ಚನೂ, ಇರಾನಿನ ಇಸ್ಲಾಮಿಕ್ ಖಮೇನಿಯೂ: ಏನಾಗಲಿದೆ ಮಧ್ಯ ಪ್ರಾಚ್ಯ?
ಇರಾನ್-ಇಸ್ರೇಲ್ ಸಂಘರ್ಷದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾತ್ರವು ಮಧ್ಯಸ್ಥಿಕೆಯ ಒಂದು ಸಂಕೀರ್ಣ ಮತ್ತು ತಂತ್ರಾತ್ಮಕ ಪ್ರಯತ್ನವಾಗಿದೆ. ಇದು ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳೊಂದಿಗಿನ ಸಂಬಂಧಗಳು ಮತ್ತು ಮಧ್ಯಪ್ರಾಚ್ಯದಲ್ಲಿ ರಷ್ಯಾದ ಪ್ರಭಾವವನ್ನು ಕಾಯ್ದುಕೊಳ್ಳುವ ಹಿತಾಸಕ್ತಿಯನ್ನು ಹೊಂದಿದೆ.

ಪುಟಿನ್, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಶಮನಗೊಳಿಸಲು ರಷ್ಯಾದ ಮಧ್ಯಸ್ಥಿಕೆಯನ್ನು ಪದೇ ಪದೇ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಕಾರಣ, ಈಗಾಗಲೇ ರಷ್ಯಾ, ಉಕ್ರೇನ್‌ನೊಂದಿಗೆ ಕಾದಾಟಕ್ಕಿಳಿದು ಮೂರು ವರ್ಷಗಳಾಗುತ್ತ ಬಂದಿದೆ. ಉಕ್ರೇನ್ ಪುಟ್ಟ ದೇಶವಾದರೂ, ಅದಕ್ಕೆ ನ್ಯಾಟೋ ದೇಶಗಳು ಸಹಕರಿಸುತ್ತಿರುವುದರಿಂದ, ರಷ್ಯಾದ ಶಸ್ತ್ರಾಸ್ತ್ರಗಳು ವಿನಿಯೋಗವಾಗಿವೆ, ಲೆಕ್ಕವಿಲ್ಲದಷ್ಟು ಸಾವು-ನೋವುಗಳೂ ಸಂಭವಿಸಿವೆ. ಇದರಿಂದ ಪುಟಿನ್, ಯುದ್ಧವೆಂದಾಕ್ಷಣ- ಅದು ಯಾವುದೇ ದೇಶಗಳ ನಡುವೆ ನಡೆದರೂ- ಕೊಂಚ ಹಿಂದೇಟು ಹಾಕುತ್ತಿದ್ದಾರೆ.
ಅದರಲ್ಲೂ ಇರಾನ್ ಮೇಲೆ ಇಸ್ರೇಲ್ ಮುಗಿಬಿದ್ದಿರುವ ಈ ಹೊತ್ತಿನಲ್ಲಿ ಪುಟಿನ್ ಇರಾನ್ ಪರ ನಿಂತಿದ್ದಾರೆ. ಅದಕ್ಕೆ ಕಾರಣ, ರಷ್ಯಾದ ಗ್ಯಾಸ್‌ಪ್ರಾಮ್‌ನಂತಹ ಕಂಪನಿಗಳು ಇರಾನ್‌ನ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವುದು. 2011ರಲ್ಲಿ ಇರಾನ್‌ನ ಬುಶೆಹರ್‌ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾ ಸಹಾಯ ಮಾಡಿದೆ. ಅಷ್ಟೇ ಅಲ್ಲ, ಹೆಚ್ಚುವರಿ ಎರಡು ಘಟಕಗಳನ್ನು ನಿರ್ಮಿಸಲು ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಾಗೆಯೇ, ಇರಾನ್‌ನ ಪರಮಾಣು ಕೇಂದ್ರಗಳಲ್ಲಿ, ವಿಶೇಷವಾಗಿ ಬುಶೆಹರ್‌ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದಲ್ಲಿ ರಷ್ಯಾದ ತಂತ್ರಜ್ಞರು ಮತ್ತು ಪರಮಾಣು ತಜ್ಞರು ಕೆಲಸ ಮಾಡುತ್ತಿದ್ದಾರೆ.
ಕಳೆದ ವಾರ ಪುಟಿನ್, ಇರಾನ್‌ನ ಪರಮಾಣು ವಿದ್ಯುತ್ ಸ್ಥಾವರದಲ್ಲಿ ನೂರಾರು ರಷ್ಯಾದ ಪರಮಾಣು ತಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ತಜ್ಞರು ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದ್ದಾರೆ ಮತ್ತು ರಷ್ಯಾದ ಒಪ್ಪಂದದಡಿ ಈ ಸಹಕಾರವು ಮುಂದುವರಿಯುತ್ತದೆ ಎಂದಿದ್ದಾರೆ.
ಇದಲ್ಲದೆ, ರಷ್ಯಾವು ಇರಾನ್‌ನೊಂದಿಗೆ ದೀರ್ಘಕಾಲದ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧವನ್ನು ಹೊಂದಿದೆ. 2025ರ ಜನವರಿಯಲ್ಲಿ ಸಹಿ ಮಾಡಲಾದ ಸಮಗ್ರ ಕಾರ್ಯತಂತ್ರದ ಒಡಂಬಡಿಕೆಯಿಂದ, ಎರಡು ದೇಶಗಳ ನಡುವಿನ ವ್ಯಾವಹಾರಿಕ ಸಂಬಂಧ ಗಟ್ಟಿಯಾಗಿದೆ. ಆದಾಗ್ಯೂ, ಈ ಒಡಂಬಡಿಕೆಯು ಸೈನಿಕ ಒಕ್ಕೂಟವನ್ನು ಒಳಗೊಂಡಿಲ್ಲ. ರಷ್ಯಾ, ಇರಾನ್‌ಗೆ ನೇರ ಸೈನಿಕ ಸಹಾಯವನ್ನು ಒದಗಿಸುವ ಸಾಧ್ಯತೆಯೂ ಇಲ್ಲ. ಏಕೆಂದರೆ ಇದು ಉಕ್ರೇನ್‌ನಲ್ಲಿ ರಷ್ಯಾದ ಸಂಪನ್ಮೂಲಗಳನ್ನು ಒತ್ತಡಕ್ಕೆ ಒಳಪಡಿಸಬಹುದು ಮತ್ತು ಇಸ್ರೇಲ್‌ನೊಂದಿಗಿನ ಸಂಬಂಧಗಳನ್ನು ಮತ್ತಷ್ಟು ಕೆಡಿಸಬಹುದು. ರಷ್ಯಾವು ಇರಾನ್‌ಗೆ ಶಹೇದ್ ಡ್ರೋನ್‌ಗಳಂತಹ ಕೆಲವು ತಂತ್ರಜ್ಞಾನವನ್ನು ಒದಗಿಸಿದೆ. ಆದರೆ ಇರಾನ್ ಈಗ ಸ್ವಾವಲಂಬಿಯಾಗಿ ಇಂತಹ ಡ್ರೋನ್‌ಗಳನ್ನು ಉತ್ಪಾದಿಸುತ್ತಿದೆ. ಆದ್ದರಿಂದ ಇರಾನ್‌ಗೆ ರಷ್ಯಾ ರಾಜಕೀಯ ಬೆಂಬಲವನ್ನು ಮಾತ್ರ ವ್ಯಕ್ತಪಡಿಸಿದೆ.
ಇದೇ ರೀತಿ ರಷ್ಯಾ, ಇಸ್ರೇಲ್‌ನೊಂದಿಗೂ ಸಂಬಂಧಗಳ ಸಮತೋಲನವನ್ನು ಕಾಪಾಡಿಕೊಂಡಿದೆ. ಇಸ್ರೇಲ್‌ನಲ್ಲಿ ರಷ್ಯನ್ ಮಾತನಾಡುವ ದೊಡ್ಡ ಸಮುದಾಯವಿದೆ. ಇರಾನ್‌ನೊಂದಿಗಿನ ಒಡಂಬಡಿಕೆಯಿಂದಾಗಿ, ರಷ್ಯಾದ ಮಧ್ಯಸ್ಥಿಕೆಯ ಪ್ರಯತ್ನಗಳನ್ನು ಕೆಲವು ತಜ್ಞರು ಪಕ್ಷಪಾತದಿಂದ ಕೂಡಿದೆ ಎಂದು ಟೀಕಿಸಿದರೂ, ಇಸ್ರೇಲ್‌ನೊಂದಿಗಿನ ಸ್ನೇಹ-ಸಂಬಂಧಕ್ಕೆ ಕುಂದುಂಟಾಗದಂತೆ ರಷ್ಯಾ ನಿರ್ವಹಿಸಿದೆ.
ಇದನ್ನು ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷ ಶುರುವಾಗಿದ್ದು ಎಲ್ಲಿಂದ? ಇತಿಹಾಸದ ಹಿನ್ನೋಟ!
ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ತೈಲ ಬೆಲೆಗಳ ಏರಿಕೆಯು ರಷ್ಯಾದ ಆರ್ಥಿಕತೆಗೆ, ತಾತ್ಕಾಲಿಕ ಉತ್ತೇಜನಕ್ಕೆ ಅನುಕೂಲವಾಗಿದೆ. ಏಕೆಂದರೆ ರಷ್ಯಾವು ತೈಲ ರಫ್ತಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದಲ್ಲದೆ, ಸಂಘರ್ಷವು ಉಕ್ರೇನ್‌ನ ಮೇಲಿನ ರಷ್ಯಾದ ಆಕ್ರಮಣದಿಂದ ಪಾಶ್ಚಿಮಾತ್ಯ ದೇಶಗಳ ಗಮನವನ್ನು ಬೇರೆಡೆಗೆ ತಿರುಗಿಸಿದೆ.
ಈ ಎಲ್ಲ ಕಾರಣಗಳಿಂದಾಗಿಯೇ, ಇಸ್ರೇಲ್-ಇರಾನ್ ಸಂಘರ್ಷದ ನಡುವೆಯೇ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಇಬ್ಬರೊಂದಿಗೂ ಮಾತನಾಡಿ, ಶಾಂತಿಯುತ ಪರಿಹಾರಕ್ಕಾಗಿ ರಾಜತಾಂತ್ರಿಕ ಮಾರ್ಗವನ್ನು ಒತ್ತಾಯಿಸಿದ್ದಾರೆ.
ಪುಟಿನ್ ಮಧ್ಯಸ್ಥಿಕೆಯ ಪ್ರಯತ್ನಗಳನ್ನು ಉಕ್ರೇನ್‌ನಲ್ಲಿ ರಷ್ಯಾದ ಕಾರ್ಯಾಚರಣೆಯೊಂದಿಗೆ ಹೋಲಿಕೆ ಮಾಡಿ ನೋಡಬೇಕಾಗಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪುಟಿನ್ ಮಧ್ಯಸ್ಥಿಕೆಯನ್ನು ತಿರಸ್ಕರಿಸಿದ್ದಾರೆ. ಮೊದಲು ಉಕ್ರೇನ್ ಜೊತೆಗಿನ ಸಂಘರ್ಷವನ್ನು ಕೊನೆಗೊಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ಇರಾನ್-ಇಸ್ರೇಲ್ ಸಂಘರ್ಷದಲ್ಲಿ ರಾಜತಾಂತ್ರಿಕ ಮಧ್ಯಸ್ಥಿಕೆಯ ಮೂಲಕ ರಷ್ಯಾದ ಪ್ರಭಾವವನ್ನು ವೃದ್ಧಿಸಲು ಪುಟಿನ್ ಪ್ರಯತ್ನಿಸುತ್ತಿದ್ದಾರೆ. ಆದರೆ ಇರಾನ್‌ನೊಂದಿಗಿನ ಒಡಂಬಡಿಕೆ ಮತ್ತು ಉಕ್ರೇನ್‌ನಲ್ಲಿ ರಷ್ಯಾದ ಕಾರ್ಯಾಚರಣೆಯಿಂದಾಗಿ ಈ ಪಾತ್ರವು ಸೀಮಿತವಾಗಿದೆ. ರಷ್ಯಾವು ಇರಾನ್‌ಗೆ ರಾಜಕೀಯ ಬೆಂಬಲವನ್ನು ಒದಗಿಸುತ್ತದೆ ಮತ್ತು ತೈಲ ಬೆಲೆ ಏರಿಕೆಯಂತಹ ಆರ್ಥಿಕ ಲಾಭಗಳನ್ನು ಪಡೆಯುತ್ತದೆ. ಆದರೆ ಇದು ಇಸ್ರೇಲ್‌ನೊಂದಿಗಿನ ಸಂಬಂಧಗಳನ್ನು ಮತ್ತಷ್ಟು ಕೆಡಿಸಬಹುದು ಎಂದು ಅಂದಾಜಿಸಲಾಗುತ್ತಿದೆ.
ಪುಟಿನ್ ತಂತ್ರವು ರಷ್ಯಾದ ಜಾಗತಿಕ ಸ್ಥಾನಮಾನವನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿರುವುದರಿಂದ, ಇದರ ಯಶಸ್ಸು ಇರಾನ್ ಮತ್ತು ಇಸ್ರೇಲ್ ನಡುವಿನ ಒಡಂಬಡಿಕೆಯ ಮೇಲೆ ಅವಲಂಬಿತವಾಗಿದೆ. ಹಾಗೆಯೇ ಇದೇ ಜಾಗತಿಕ ಸ್ಥಾನಮಾನಕ್ಕಾಗಿ ಪೈಪೋಟಿಗೆ ನಿಂತಿರುವ ಅಮೆರಿಕ ಕೂಡ, ಆ ಕ್ರೆಡಿಟ್ ಪುಟಿನ್ ಪಾಲಾಗದಂತೆ ತಡೆಯುವಲ್ಲಿ ಶಕ್ತಿಮೀರಿ ಶ್ರಮಿಸುತ್ತಿದೆ.
ಒಟ್ಟಿನಲ್ಲಿ ಯುದ್ಧಕೋರ ಮನಸ್ಥಿತಿಯ ಇಬ್ಬರು ಬಲಿಷ್ಠರು, ಸಣ್ಣಪುಟ್ಟ ದೇಶಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು, ತಮ್ಮ ವ್ಯಾಪಾರ-ವಹಿವಾಟು ಮತ್ತು ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಆಡುತ್ತಿರುವ ಆಟವನ್ನು ಇಡೀ ಜಗತ್ತು ನೋಡಬೇಕಾಗಿದೆ. ಇಲ್ಲಿ ಮನುಷ್ಯಪ್ರೀತಿ, ಕರುಣೆ, ಶಾಂತಿಗಳಿಗೆ ಬೆಲೆ ಇಲ್ಲ; ಅಧಿಕಾರ, ಅಟ್ಟಹಾಸ, ಸವಾರ್ಧಿಕಾರವೇ ಎಲ್ಲ.

ಲೇಖಕ, ಪತ್ರಕರ್ತ