ಮಧ್ಯಪ್ರದೇಶ ವಿಶೇಷ ಕಾರ್ಯಪಡೆ(STF) ಸುಮಾರು 2,283 ಕೋಟಿ ರೂಪಾಯಿಗಳ ಪ್ಯಾನ್-ಇಂಡಿಯಾ ಹೂಡಿಕೆ ಹಗರಣವನ್ನು ಬಯಲಿಗೆಳೆದಿದೆ. ಈ ಪ್ರಕರಣದಲ್ಲಿ ಇಬ್ಬರು ಮಾಸ್ಟರ್‌ಮೈಂಡ್‌ಗಳಾದ ದೀಪಕ್ ಶರ್ಮಾ ಮತ್ತು ಮದನ್ ಮೋಹನ್ ಕುಮಾರ್ ಎಂಬವರನ್ನು ದೆಹಲಿಯಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.
ಶೆಲ್ ಸಂಸ್ಥೆಗಳಾದ ಯಾರ್ಕರ್ ಎಫ್‌ಎಕ್ಸ್ ಮತ್ತು ಯಾರ್ಕರ್ ಕ್ಯಾಪಿಟಲ್ ಮೂಲಕ ಬೋಟ್‌ಬ್ರೋನಂತಹ ಆನ್‌ಲೈನ್ ವ್ಯಾಪಾರ ವೇದಿಕೆ ಹೆಸರಲ್ಲಿ ಏಳು ರಾಜ್ಯಗಳಲ್ಲಿ ಸಾವಿರಾರು ಹೂಡಿಕೆದಾರರನ್ನು ವಂಚಿಸಲಾಗಿದೆ. ಇಂದೋರ್ ನಿವಾಸಿ ಇಶಾನ್ ಸಲೂಜಾ ಅವರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಸಲೂಜಾ ಅವರಿಗೆ 20.18 ಲಕ್ಷ ರೂಪಾಯಿಗಳ ಹೂಡಿಕೆಗೆ 6-8% ಮಾಸಿಕ ಲಾಭ ನೀಡುವ ಭರವಸೆ ನೀಡಲಾಗಿತ್ತು.
ಇದನ್ನು ಓದಿದ್ದೀರಾ? ‘ಭಾರತದಲ್ಲಿ ಬಹುದೊಡ್ಡ ಬದಲಾವಣೆ ನಡೆಯಲಿದೆ’; ಅದಾನಿ ಬಣ್ಣ ಬಯಲು ಮಾಡಿದ್ದ ಹಿಂಡೆನ್‌ಬರ್ಗ್ ಹೀಗೆ ಹೇಳಿದ್ಯಾಕೆ?
ಆರೋಪಿಗಳು ರೈನೆಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಕಿಂಡೆಂಟ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಖಾತೆಗಳಿಗೆ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸುತ್ತಿದ್ದರು. ಬಳಿಕ ಹಣವನ್ನು ಯುಸ್ ಡಾಲರ್‍ಗೆ ಪರಿವರ್ತಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಮಧ್ಯಪ್ರದೇಶ ವಿಶೇಷ ಕಾರ್ಯಪಡೆಯು 20ಕ್ಕೂ ಹೆಚ್ಚು ಅನುಮಾನಾಸ್ಪದ ಬ್ಯಾಂಕ್ ಖಾತೆಗಳಲ್ಲಿ ಸುಮಾರು 90 ಕೋಟಿ ರೂಪಾಯಿಗಳನ್ನು ಸ್ಥಗಿತಗೊಳಿಸಿದೆ.
ಕಿಂಡೆಂಟ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ 2023-24ನೇ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ 1.10 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಘೋಷಿಸಿದೆ. ಆದರೆ 2023ರ ಜನವರಿಯಿಂದ 2024ರ ಡಿಸೆಂಬರ್‌ವರೆಗೆ ಒಟ್ಟು ಸುಮಾರು 7,020 ಕೋಟಿ ರೂ.ಗಳ ವಹಿವಾಟು ನಡೆಸಿದೆ.
ಅದೇ ರೀತಿ, ರೈನೆಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ 2023–24ನೇ ಹಣಕಾಸು ವರ್ಷದಲ್ಲಿ 7.80 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ತೋರಿಸಿದೆ. ಆದರೆ ಅದೇ ಅವಧಿಯಲ್ಲಿ 15,800 ಕೋಟಿ ರೂ.ಗಳ ವಹಿವಾಟು ನಡೆಸಿದೆ. ಒಟ್ಟಾರೆಯಾಗಿ, ಎರಡೂ ಕಂಪನಿಗಳು 16 ಬ್ಯಾಂಕ್ ಖಾತೆಗಳಲ್ಲಿ ಸುಮಾರು 22,830 ಕೋಟಿ ರೂ.ಗಳನ್ನು ಪಡೆದಿವೆ. ಬಳಿಕ ಆ ಹಣವನ್ನು ಇತರೆ ಖಾತೆಗಳಿಗೆ ವರ್ಗಾಯಿಸಲಾಗಿದೆ.
ಎರಡೂ ಕಂಪನಿಗಳು ಆರ್‌ಬಿಐ ಅಥವಾ ಸೆಬಿಯಲ್ಲಿ ನೋಂದಾಯಿಸದೆ ಕಾರ್ಯನಿರ್ವಹಿಸುತ್ತಿದ್ದವು. ಹಲವು ಹಣಕಾಸು ಮತ್ತು ನಿಯಂತ್ರಕ ನಿಯಮಗಳನ್ನು ಉಲ್ಲಂಘಿಸಿವೆ. ಸದ್ಯ ಜಾರಿ ನಿರ್ದೇಶನಾಲಯ (ED) ಸಹ FEMA ಕಾಯ್ದೆಯಡಿಯಲ್ಲಿ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಆರೋಪಿಗಳು ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಜನರಿಗೆ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
