2023ರ ಜನವರಿಯಲ್ಲಿ ಭಾರತದ ಶ್ರೀಮಂತ ವ್ಯಕ್ತಿ ಹಾಗೂ ನರೇಂದ್ರ ಮೋದಿ ಅವರ ಆಪ್ತ ಸ್ನೇಹಿತ ಗೌತಮ್ ಅದಾನಿ ಗ್ರೂಪ್‌ನ ವಂಚನೆಯನ್ನು ಅಮೆರಿಕಾ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ಬಯಲಿಗೆಳೆದು ಅದಾನಿಯ ನಿದ್ದೆಯನ್ನು ಕಸಿದುಕೊಂಡಿತ್ತು. ಅಲ್ಲದೇ, ಈ ವರದಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ, ಮತ್ತೊಂದು ಅಂತಹದ್ದೇ ಸ್ಪೋಟಕ ಸುದ್ದಿಯನ್ನು ಹಿಂಡೆನ್‌ಬರ್ಗ್ ವರದಿ ಮಾಡಿದೆ.
ವರದಿ ಪ್ರಕಟಿಸುವ ಮೊದಲು ಹಿಂಡೆನ್‌ಬರ್ಗ್ ಸಂಸ್ಥೆ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆಗಸ್ಟ್ 10ರಂದು ಬೆಳಗ್ಗೆ 05:34ಕ್ಕೆ ಟ್ವೀಟ್ ಮಾಡಿದ್ದು, ‘ಶೀಘ್ರದಲ್ಲೇ ಭಾರತದಲ್ಲಿ ಏನೋ ಬಹುದೊಡ್ಡ ಬದಲಾವಣೆ ನಡೆಯಲಿದೆ’ ಎಂದು ಸಂಸ್ಥೆ ಬರೆದುಕೊಂಡಿತ್ತು. ಈ ಹಿಂದೆಯೂ ಕೂಡ ಸ್ಪೋಟಕ ಸುದ್ದಿ ನೀಡಿದ್ದ ಹಿಂಡೆನ್‌ಬರ್ಗ್, ಈಗ ಏಕಾಏಕಿ ಈ ರೀತಿ ಪೋಸ್ಟ್ ಮಾಡಿರುವುದು ಹಲವು ಜನರಿಗೆ ಸಾಮಾನ್ಯವಾಗಿ ಆಶ್ಚರ್ಯ ಮತ್ತು ಕುತೂಹಲ ಎರಡು ಮೂಡಿಸಿತ್ತು. ಅಲ್ಲದೇ, ಭಾರತದ ಕೇಂದ್ರಿತ ವರದಿ ಪ್ರಕಟಿಸುವುದಾಗಿ ತಿಳಿಸಿತ್ತು. ಅದಾನಿ ಗ್ರೂಪ್‌ನ ಆಂತರಿಕ ವ್ಯಾಪಾರ ಮತ್ತು ಷೇರು ಮಾರುಕಟ್ಟೆಯಲ್ಲಿ ನಿಯಮ ಉಲ್ಲಂಘನೆಗಳನ್ನು ಮಾಡುತ್ತಿದೆ ಎಂದು ಆರೋಪಿಸಿ ಹಿಂಡೆನ್‌ಬರ್ಗ್ ವರದಿ ಪ್ರಕಟ ಮಾಡಿದ ಸುಮಾರು ಒಂದುವರೆ ವರ್ಷಗಳ ಬಳಿಕ ಮತ್ತೊಂದು ಸ್ಪೋಟಕ ವರದಿಯನ್ನು ಪ್ರಕಟ ಮಾಡಲು ಮುಂದಾಗಿದೆ.
ಅಂದಹಾಗೆ, 2023ರ ಜನವರಿಯಲ್ಲಿ ಅದಾನಿ ಗ್ರೂಪ್ ಎಸಗಿದ ವಂಚನೆಯ ಬಗ್ಗೆ ಹಿಂಡೆನ್‌ಬರ್ಗ್ ಒಂದು ವರದಿಯನ್ನು ಪ್ರಕಟಿಸಿತ್ತು. ಈ ವರದಿಯಿಂದ ಅದಾನಿಯಂತಹ ಬಲಿಷ್ಠ ಕಂಪನಿಯೇ ಅಲ್ಲೋಲಕಲ್ಲೋಲವಾಗುವಂತೆ ಮಾಡಿತ್ತು. “ಹೂಡಿಕೆದಾರರಿಗೆ ಅದಾನಿ ಗ್ರೂಪ್ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ಹಿಂಡೆನ್‌ಬರ್ಗ್ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಈ ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಯ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿತ್ತು. ಭಾರೀ ನಷ್ಟ ಕೂಡ ಉಂಟಾಗಿತ್ತು. ಅಲ್ಲದೆ, ಅದಾನಿ ಗ್ರೂಪ್ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೂಡ ಆ ಸಮಯದಲ್ಲಿ ವ್ಯಾಪಕವಾಗಿ ಕೇಳಿಬಂದಿದ್ದವು.
ಹಿಂಡೆನ್‌ಬರ್ಗ್ ವರದಿ ಕುರಿತು ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಮೊರೆ ಹೋಗಿದ್ದರು. ಅಲ್ಲದೆ, ಅದಾನಿ ಗ್ರೂಪ್ ಅಕ್ರಮ ಪತ್ತೆಹಚ್ಚುವಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ವಿಫಲವಾಗಿದೆ. ಹಾಗಾಗಿ, ತನಿಖೆಗೆ ಎಸ್ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ, ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ನಂತರ ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಯಲ್ಲಿ 16 ಕಂಪನಿಗಳು ಭಾರೀ ಲಾಭ ಮಾಡಿಕೊಂಡ ವಿಚಾರ ದೃಢಪಟ್ಟಿತ್ತು.
ಇದಾದ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. ”ಅದಾನಿ ಗ್ರೂಪ್ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ” ಎಂದು ಉಲ್ಲೇಖಿಸಿತ್ತು.
ಅದಾನಿ ಗ್ರೂಪ್, ವಿದೇಶಗಳಲ್ಲಿ ನಕಲಿ ಕಂಪನಿಗಳ ಮೂಲಕ ತನ್ನ ಕಂಪನಿಗಳ ಷೇರು ದರವನ್ನು ಕೃತಕವಾಗಿ ಏರಿಸಿದೆ ಎಂದು ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಆರೋಪಿಸಿತ್ತು. ಆದರೆ, ಅದಾನಿ ಗ್ರೂಪ್ ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಮಾರುಕಟ್ಟೆ ನಿಯಂತ್ರಣ ಸೆಬಿ ಅದನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಸಮಿತಿಯ ವರದಿ ತಿಳಿಸಿದೆ.
ಗೌತಮ್ ಅದಾನಿ-ಹಿಂಡೆನ್‌ಬರ್ಗ್ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ”ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಆಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಇದರಿಂದಾಗಿ ಗೌತಮ್ ಅದಾನಿ ನೇತೃತ್ವದ ಗ್ರೂಪ್‌ಗೆ ರಿಲೀಫ್ ಸಿಕ್ಕಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿ ಅದಾನಿ ಕಂಪನಿಗೆ ಕ್ಲೀನ್ ಚಿಟ್ ನೀಡುವುದರೊಂದಿಗೆ ಸದ್ಯಕ್ಕೆ ಈ ವಿವಾದ ಕೊನೆಗೊಂಡಿದೆ.
ಇದೀಗ, ಕಳೆದ ವರ್ಷ ಹಿಂಡೆನ್‌ಬರ್ಗ್ ಪ್ರಕಟಿಸಿದ್ದ ವರದಿಗೆ ಅದಾನಿ ಕಂಪನಿ ಅಲುಗಾಡಿ ಹೋಗಿತ್ತು. ಅದಾನಿ ಕಂಪನಿಗಳ ಷೇರು ಮೌಲ್ಯ ಕುಸಿತವಾಗಿ ಹೂಡಿಕೆದಾರರಿಗೆ ಅಪಾರ ನಷ್ಟ ಸಂಭವಿಸಿತ್ತು. ರಾಜಕೀಯವಾಗಿಯೂ ಈ ವರದಿ ಬಿರುಗಾಳಿಯನ್ನು ಎಬ್ಬಿಸಿತ್ತು. ಈ ಹೊಡೆತದಿಂದ ಚೇತರಿಸಿಕೊಳ್ಳಲು ಅದಾನಿ ಕಂಪನಿಗೆ ತಿಂಗಳುಗಳೇ ಹಿಡಿದಿತ್ತು. ಇದೀಗ, ತಾನೇ ಆಘಾತದಿಂದ ಹೊರಬರುತ್ತಿರುವ ಅದಾನಿ ಕಂಪನಿಗೆ ಹಿಂಡೆನ್‌ಬರ್ಗ್ ಮತ್ತೊಂದು ಸ್ಪೋಟಕ ವರದಿಯನ್ನು ಬಹಿರಂಗ ಪಡಿಸುವುದಾಗಿ ಪೋಸ್ಟ್ ಮಾಡಿ ನಿದ್ದೆಗೆಡಿಸಿತ್ತು. ಹಿಂಡೆನ್‌ಬರ್ಗ್ ಈ ಘೋಷಣೆ ದೇಶಾದ್ಯಂತ ಕುತೂಹಲ ಕೆರಳಿಸಿತ್ತಲ್ಲದೆ, ಹಲವು ರಾಜಕೀಯ ಮುಖಂಡರು ಮತ್ತು ಕಂಪನಿಗಳ ಮುಖ್ಯಸ್ಥರು ಬೆವರುವಂತೆ ಮಾಡಿತ್ತು.
ಹಾಗಿದ್ದರೇ, ಈಗ ಅಂದರೆ 2024ರ ಆಗಸ್ಟ್‌ನಲ್ಲಿ ಹಿಂಡೆನ್‌ಬರ್ಗ್ ಬಿಡುಗಡೆ ಮಾಡಿರುವ ವರದಿಯಲ್ಲಿ ಏನಿದೆ? ಅನ್ನೋದನ್ನ ನೋಡದಾದ್ರೆ… ಈ ಬಾರಿ ಹಿಂಡೆನ್‌ಬರ್ಗ್ ಸಂಸ್ಥೆ ನೇರವಾಗಿ ಸೆಬಿ ಬುಡಕ್ಕೆ ಕೈಹಾಕಿದೆ. ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಮತ್ತವರ ಪತಿ ಧವಳ್ ಬುಚ್ ವಿರುದ್ಧ ಹಿಂಡನ್‌ಬರ್ಗ್ ನೇರವಾಗಿ ಆರೋಪ ಮಾಡಿದೆ.
ಅದಾನಿ ಗ್ರೂಪ್ ವಿದೇಶದಲ್ಲಿ ಹೊಂದಿರುವ ಎರಡು ಶೆಲ್ ಕಂಪನಿಗಳಲ್ಲಿ ಸೆಬಿ ಅಧ್ಯಕ್ಷೆಯಾಗಿರುವ ಮಾಧಬಿ ಪುರಿ ಬುಚ್ ಹಾಗೂ ಅವರ ಪತಿ ಧವಳ್ ಬುಚ್ ಪಾಲು ಹೊಂದಿದ್ದಾರೆ ಎಂದು ಕೆಲ ದಾಖಲೆಗಳನ್ನು ಉಲ್ಲೇಖಿಸಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಆರೋಪಿಸಿದೆ. ಬರ್ಮುಡಾ ಹಾಗೂ ಮಾರಿಷಸ್ ಫಂಡ್‌ಗಳಲ್ಲಿ ಗಂಡ-ಹೆಂಡತಿಯ ಪಾಲು ಇರುವುದಾಗಿ ಹಿಂಡೆನ್‌ಬರ್ಗ್ ಸಂಸ್ಥೆಯು ಸ್ಫೋಟಕ ವರದಿ ಬಯಲು ಮಾಡಿದೆ.
ಬರ್ಮುಡಾ ಮತ್ತು ಮಾರಿಷಸ್‌ನಲ್ಲಿರುವ ರಹಸ್ಯ ಫಂಡ್‌ಗಳಲ್ಲಿ ಈ ಇಬ್ಬರು ಗುಪ್ತವಾಗಿ ಪಾಲುಗಳನ್ನು ಹೊಂದಿದ್ದರು ಎಂದು ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಹೇಳಿದೆ. ಹಾಗೆಯೇ, 2023ರ ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಆರೋಪಿಸಿರುವ ವಿಚಾರದ ಬಗ್ಗೆ ಸೆಬಿ ಸ್ವಲ್ಪವೂ ತನಿಖೆಗೆ ಆಸಕ್ತಿ ತೋರಿಲ್ಲ. ಅದಾನಿಯ ಮಾರಿಷಸ್ ಹಾಗೂ ಇತರ ಸಾಗರೋತ್ತರ ನಕಲಿ ಕಂಪನಿಗಳ ಬಗ್ಗೆ ಸೆಬಿ ನಿರಾಸಕ್ತಿ ತೋರಿದೆ ಎಂದು ಹಿಂಡೆನ್‌ಬರ್ಗ್ ವಿಷಾದಿಸಿದೆ.
ವಿಸ್ಲ್ ಬ್ಲೋವರ್ ರೆಕಾರ್ಡ್ ದಾಖಲೆಗಳನ್ನು ಉಲ್ಲೇಖಿಸಿರುವ ವರದಿಯು, ಮಾಧಬಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ 2015ರ, ಜೂ.5ರಂದು ಸಿಂಗಾಪುರದ ಐಪಿಇ ಪ್ಲಸ್ ಫಂಡ್ 1ರಲ್ಲಿ ತಮ್ಮ ಖಾತೆಗಳನ್ನು ತೆರೆದಿದ್ದಂತೆ ಕಂಡುಬಂದಿದೆ ಎಂದು ಹೇಳಿದೆ. ಸಾಗರೋತ್ತರ ಮಾರಿಷಸ್ ಫಂಡ್ ಅದಾನಿ ಗ್ರೂಪ್‌ನ ನಿರ್ದೇಶಕರೋರ್ವರು ಇಂಡಿಯಾ ಇನ್ಫೋಲೈನ್ ಮೂಲಕ ಸ್ಥಾಪಿಸಿದ್ದರು ಮತ್ತು ಅದನ್ನು ತೆರಿಗೆ ಸ್ವರ್ಗ ಮಾರಿಷಸ್‌ನಲ್ಲಿ ನೋಂದಾಯಿಸಿದ್ದರು ಎಂದು ಹಿಂಡೆನ್‌ಬರ್ಗ್ ಪ್ರತಿಪಾದಿಸಿದೆ.
ಈ ಇಂಡಿಯಾ ಇನ್ಫೋಲೈನ್ ಎಂಬುದು ವೈರ್‌ಕಾರ್ಡ್ ಹಗರಣದಲ್ಲಿ ಸಂಬಂಧ ಹೊಂದಿದೆ. ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಈ ಸಾಗರೋತ್ತರ ಫಂಡ್‌ಗಳ ಸಹಾಯದಿಂದ ವಿದ್ಯುತ್ ಉಪಕರಣಗಳಿಗೆ ಹೆಚ್ಚಿನ ಬೆಲೆಪಟ್ಟಿ ಕೊಟ್ಟು ಅದಾನಿ ಗ್ರೂಪ್‌ನಿಂದ ಹಣ ವರ್ಗಾಯಿಸಿಕೊಂಡು ಅದನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆಗೆ ಬಳಸಲಾಗಿದೆ ಎನ್ನುವುದು ಹಿಂಡನ್‌ಬರ್ಗ್ ವರದಿಯಲ್ಲಿ ಮಾಡಿರುವ ಆರೋಪವಾಗಿದೆ.
ಮಾಧಬಿ ಪುರಿ ಬುಚ್ ಅವರು 2015ರಿಂದಲೂ ಗೌತಮ್ ಅದಾನಿ ಕಂಪನಿಗಳಲ್ಲಿ ತಮ್ಮ ವೈಯಕ್ತಿಕ ಹಣವನ್ನು ಹೂಡಿಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಸೆಬಿ ಮುಖ್ಯಸ್ಥೆ, ತನ್ನ ಪತಿ ನಿರ್ದೇಶಕರಾಗಿರುವ ಅಗೋರಾ ಅಡ್ವೈಸರಿ ಹೆಸರಿನ ಕನ್ಸಲ್ಟಿಂಗ್ ಬಿಸಿನೆಸ್‌ನಲ್ಲಿ ಶೇ.99ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಈ ದಾಖಲೆಯು ಮೇಲ್ನೋಟಕ್ಕೆ ತೋರಿಸಿದೆ.
2022ರಲ್ಲಿ ಈ ಸಂಸ್ಥೆಯು ಕನ್ಸಲ್ಟಿಂಗ್‌ನಿಂದ 2,61,000 ಡಾಲರ್ ಆದಾಯವನ್ನು ವರದಿ ಮಾಡಿದೆ. ಇದು ಮಾಧಬಿ ಬುಚ್ ಬಹಿರಂಗಗೊಳಿಸಿರುವ ತನ್ನ ಸೆಬಿ ವೇತನದ 4.4 ಪಟ್ಟು ಆಗಿದೆ ಎಂದು ಹೇಳಿರುವ ವರದಿಯು, ಸಾಗರೋತ್ತರ ಸಿಂಗಾಪುರ ಸಂಸ್ಥೆಗೆ ಹಣಕಾಸು ಹೇಳಿಕೆಗಳನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿಯನ್ನು ನೀಡಲಾಗಿತ್ತು. ಅದು ತನ್ನ ಕನ್ಸ್‌ಲ್ಟಿಂಗ್ ವ್ಯವಹಾರದಿಂದ ಗಳಿಸಿದ್ದ ಆದಾಯದ ಮೊತ್ತ ಮತ್ತು ಅದನ್ನು ಯಾರಿಂದ ಪಡೆದಿತ್ತು ಎನ್ನುವುದು ಅಸ್ಪಷ್ಟವಾಗಿರಲು ಅವಕಾಶ ಕಲ್ಪಿಸಿತ್ತು ಎಂದು ಹೇಳಿದೆ.
ಇಂಡಿಯಾ ಇನ್ಫೋಲೈನ್‌ನಿಂದ ನಿರ್ವವಹಿಸಲಾದ ಇಎಂ ರಿಸರ್ಜೆಂಟ್ ಫಂಡ್ ಭಾರತೀಯ ಮೂಲದ ಷೇರುದಾರರ ವಿರುದ್ಧ ಸೆಬಿ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದೂ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಅಚ್ಚರಿ ವ್ಯಕ್ತಪಡಿಸಿದೆ. ಹಾಗೆಯೇ, ರಿಯಲ್ ಎಸ್ಟೇಟ್ ಹೂಡಿಕೆ ಯಂತ್ರಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಇತ್ತೀಚೆಗೆ ಆಸಕ್ತಿ ತೋರಿದ್ದರು. ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಸೆಬಿ ಮುಖ್ಯಸ್ಥೆ ಮತ್ತವರ ಪತಿ ಆರ್‌ಇಐಟಿಗಳಲ್ಲಿ ಹಿತಾಸಕ್ತಿ ಹೊಂದಿದ್ದಾರೆ ಎನ್ನುವುದನ್ನು ಗುರುತಿಸಿದೆ.
ಆದರೆ, ಈ ಆರೋಪವನ್ನು ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಅಲ್ಲಗಳೆದಿದ್ದಾರೆ. “ಈ ಆರೋಪಗಳು ಆಧಾರರಹಿತವಾಗಿದೆ. ನಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ, ಸೆಬಿಯಿಂದ ಶೋಕಾಸ್ ನೋಟಿಸ್ ಪಡೆದಿರುವ ಹಿಂಡೆನ್‌ಬರ್ಗ್ ಈಗ ಚಾರಿತ್ರ್ಯ ಹರಣಕ್ಕೆ ಮುಂದಾಗಿದೆ” ಎಂದು ದಂಪತಿ ಹೇಳಿಕೊಂಡಿದ್ದಾರೆ.
ಅಮೆರಿಕದ ಹಿಂಡೆನ್‌ಬರ್ಗ್ ವಿಶ್ವದ ಪ್ರಸಿದ್ಧ ತನಿಖಾ ಏಜೆನ್ಸಿ ಎಂದು ಗುರುತಿಸಿಕೊಂಡಿದೆ. 2023ರ ಜನವರಿ 24ಕ್ಕೆ ಅದಾನಿ ಗ್ರೂಪ್ ವಂಚನೆ ಬಗ್ಗೆ ವರದಿ ಬಿಡುಗಡೆಯಾಗುತ್ತಿದ್ದಂತೆ ಅದಾನಿ ಗ್ರೂಪ್ ಷೇರು $150 ಬಿಲಿಯನ್ ಡಾಲರ್ ಕುಸಿತ ಕಂಡಿತ್ತು.
ಅದಾನಿ ಸಮೂಹದ ಆಂತರಿಕ ವ್ಯಾಪಾರ ಮತ್ತು ಷೇರು ಮಾರುಕಟ್ಟೆಯಲ್ಲಿನ ಇತರ ಉಲ್ಲಂಘನೆಗಳ ವಿರುದ್ಧ ಆರೋಪಗಳನ್ನು ಪ್ರಕಟಿಸಿದ ಒಂದು ವರ್ಷದ ನಂತರ ಅಮೆರಿಕಾ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ತನ್ನ ಎಕ್ಸ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಗ್ ಬ್ರೇಕಿಂಗ್ ನ್ಯೂಸ್ ಪ್ರಕಟ ಮಾಡಿದ್ದು, ಭಾರೀ ಸಂಚಲನ ಉಂಟು ಮಾಡಿದೆ. ಈ ವರದಿ ಯಾವ ರೀತಿಯ ಸ್ವರೂಪ ಪಡೆಯುತ್ತದೆ. ಷೇರು ಮಾರುಕಟ್ಟೆ ಕುಸಿಯುತ್ತಾ ಅನ್ನುವ ಆತಂಕ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ…