ಕಲಬುರಗಿ | ರೈತ, ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ; ಜು.9ರಂದು ರಸ್ತೆ ತಡೆ ಚಳವಳಿ

Date:

Advertisements

ಕಲಬುರಗಿ ಜಿಲ್ಲೆಯಾದ್ಯಂತ ಜುಲೈ 9ರಂದು ರೈತರ ಕಾರ್ಮಿಕರ ಬೇಡಿಕೆಗಳಿಗಾಗಿ ಆಗ್ರಹಿಸಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ನಗರದ ಜಗತ್ ಸರ್ಕಲ್‌ನಲ್ಲಿ ಜಮಾ ಆಗಿ ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ಚಳವಳಿ ನಡೆಸಿ ದೇಶದ ಪ್ರಧಾನಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕೆಪಿಆರ್‌ಎಸ್‌ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಹೇಳಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, “ಕಲಬುರಗಿಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್‌ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡರಿಂದಲೂ ಪಾರಾಗಿ ಬೆಳೆ ಬಂದರೂ ಕೂಡ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗುವಂತೆ ಮಾಡಿದೆ. ಹೊರ ದೇಶದ ತೊಗರಿಯನ್ನು ಆಮದು ಮಾಡಿಕೊಂಡು ರೈತರು ತೊಗರಿ ಕಟಾವು ಮಾಡುವ ಸಂದರ್ಭದಲ್ಲಿ ಮಾರುಕಟ್ಟೆಗೆ ಹೊರದೇಶದ ತೊಗರಿ ತಂದು ಇಡೀ ರೈತರ ಮಾರುಕಟ್ಟೆ ನೆಲಕಚ್ಚಿಹೊಗಿದೆ. ತೊಗರಿ ಮಾರ್ಕೆಟಿಂಗ್ ಸರ್ವನಾಶವಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ರೈತರು ಕಂಗಾಲಾಗುವಂತೆ ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ತೊಗರಿ ಮಂಡಳಿಯು ಕೆಎಂಎಫ್‌ ಮಾದರಿಯಂತೆ ಕೆಲಸ ಮಾಡಬೇಕು, ಕೆಎಂಎಫ್‌ನವರು ರೈತರಿಂದ ಹಾಲು ಖರೀದಿಸಿ ಅದರ ಉತ್ಪನ್ನಗಳನ್ನು ತಯಾರಿಸುವಂತೆ ಮಾಡುತ್ತಾರೆ. ತೊಗರಿ ಮಂಡಳಿ ರೈತರಿಂದ ತೊಗರಿ ಖರೀದಿಸಿ ಅದರ ಉತ್ಪನ್ನಗಳನ್ನು ತಯಾರಿಸುವಂತೆ ಆಗಬೇಕು. ಕ್ಷೀರಭಾಗ್ಯದ ಅಡಿ ಶಾಲೆಗಳಿಗೆ ಹಾಲು ನೀಡುವಂತೆ ಅಕ್ಷರ ದಾಸೋಹ ಅಡಿ ತೊಗರಿ ಬೇಳೆ ಪೂರೈಸುವಂತಾಗಬೇಕು” ಎಂದು ಒತ್ತಾಯಿಸಿದರು.

Advertisements

“ಮತ್ತೊಂದೆಡೆ ಬೆಂಬಲ ಬೆಲೆ(MSP) ಕಾನೂನು ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ಮಿನಾಮೇಷ ಎಣಿಸುತ್ತಿದೆ. ಡಾ. ಎಂ ಎಸ್ ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ c2+50% ಸೇರಿಸಿ ಬೆಲೆ ನಿಗದಿಪಡಿಸಬೇಕು” ಎಂದು ರೈತ ಸಂಘದ ಪರವಾಗಿ ಒತ್ತಾಯಿಸಿದರು.

“ಕಲಬುರಗಿ ಜಿಲ್ಲೆ ತೊಗರಿ ನಾಡು ಎಂಬ ಕೀರ್ತಿಗೆ ಪಾತ್ರವಾದಂತೆ ಇತ್ತೀಚೆಗೆ ಕಬ್ಬು ಬೆಳೆಗಾರರು ಕಬ್ಬಿನ ಮೇಲೆ ಅವಲಂಭಿತರಾಗಿದ್ದು, ಸಿಹಿ ಬೆಳೆದು ಕಹಿ ಉಣ್ಣುವಂತಾಗಿದೆ. ಅಲ್ಲದೆ ‘ರೈತರ ಮಂಡಿ ಉದ್ದ ಕಬ್ಬು, ಎದೆಯುದ್ದ ಸಾಲʼ ಎಂಬ ಅಪಕೀರ್ತಿಗೂ ಪಾತ್ರವಾಗಿದೆ. ಕೃಷಿ ಕಾಯಕ ಮಾಡುವುದು ಹಿರಿಮೆಯ ಸಂಕೇತವೆಂಬ ಭಾವನೆ ಕಣ್ಮರೆಯಾಗಿ ಶಾಪವಾಗಿ ಪರಿಣಮಿಸಿದೆ. ಇದರಿಂದಾಗಿ ರೈತರ ಆತ್ಮಹತ್ಯೆಯೂ ನಿಂತಿಲ್ಲ. ಜತೆಗೆ ಕೃಷಿ ಮಾಡುವ ಯುವ ರೈತರಿಗೆ ಉತ್ತಮ ಜೀವನ ನಡೆಸುವ ಭರವಸೆ ಇಲ್ಲವೆಂಬ ಕಾರಣಕ್ಕೆ ಯುವತಿಯರು ಮದುವೆಯಾಗಲು ಮುಂದೆ ಬರುತ್ತಿಲ್ಲ. ಹಾಗಾಗಿ ನಾವು ನಮ್ಮ ಬೆವರಿನ ಪಾಲನ್ನು ಬಂಡವಾಳಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷೆ ಮಾಡುತ್ತಿದ್ದೇವೆ” ಎಂದು ಹೇಳಿದರು.

“ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ದೇಶದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಸುಮಾರು 5 ಕೋಟಿ ಮಂದಿ ಕಬ್ಬು ಬೆಳೆಗಾರರು ಈ ದೇಶದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದು ಟನ್ ಕಬ್ಬು ಬೆಳೆಯಲು ಸುಮಾರು ₹3,500 ಖರ್ಚು ಬರುತ್ತಿದೆ. ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಲೆ ನಿಗದಿಪಡಿಸಿದರೆ ಟನ್‌ಗೆ ₹5000ಕ್ಕೂ ಹೆಚ್ಚು ಬೆಲೆ ನೀಡಬೇಕು. ಆದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ 2023-24ನೇ ಸಾಲಿಗೆ ಒಂದು ಕೆ.ಜಿ. ಕಬ್ಬಿಗೆ 1 ಪೈಸೆ, ಕ್ವಿಂಟಾಲ್‌ಗೆ ₹10, ಟನ್‌ಗೆ ₹100ಗಳನ್ನು ಮಾತ್ರ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ಇದು ರೈತ ಕುಲಕ್ಕೆ ಮಾಡಿದ ಅವಮಾನವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮನೆ ನಿವೇಶನ ಕೋರಿ ಸರ್ಕಾರಿ ಭೂಮಿಗಳಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಕೋರಿ 94 ಸಿ 94 ಸಿಸಿ ಅರ್ಜಿ ಸಲ್ಲಿಸಿರುವುದು, ಬಡವರು ಫಾರಂ ನಂಬರ್ 50, 53, 57ರಲ್ಲಿ ತಮ್ಮ ಬಗರು ಸಾಗುವಳಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರ ನ್ಯಾಯಬದ್ಧವಾದ ಕೋರಿಕೆಯನ್ನು ಸಮಾರೋಪಾದಿಯಲ್ಲಿ ತಿರಸ್ಕರಿಸಲಾಗುತ್ತಿದೆ. ಈ ರೈತ, ಕೂಲಿಕಾರರ ಮನೆ ನಿವೇಶನ ಭೂಮಿ ಹಕ್ಕನ್ನು ಖಾತರಿಪಡಿಸಬೇಕಾಗಿದ್ದ ಸರ್ಕಾರ ವಿವಿಧ ನೆಪಗಳನ್ನು ಮುಂದು ಮಾಡಿ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಒಕ್ಕಲೆಬ್ಬಿಸಲಾಗುತ್ತಿದೆ” ಎಂದು ಆರೋಪಿಸಿದರು.

“ಈಗಾಗಲೇ ಮಂಜೂರಾಗಿದ್ದು, ದುರಸ್ತು, ಪೋಡಿ ಆಗದೆ ಇರುವ ರೈತರ ಭೂಮಿಯನ್ನೂ ಕೂಡ ಕಿತ್ತುಕೊಳ್ಳುತ್ತಿದೆ. ಸಕ್ರಮಾತಿ ಸಮಿತಿ ಅಧಿಕಾರವನ್ನು ಕಂದಾಯ ಇಲಾಖೆ ಅಧಿಕಾರಿಗಳೇ ಚಲಾಯಿಸಿ ಬಗರು ಹುಕುಂ ಸಾಗುವಳಿ ಸಕ್ರಮ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ಕರ್ನಾಟಕ ಭೂಕಂದಾಯ ಕಾಯ್ದೆ 49 ಎ, 49 ಬಿ ಕಲಂಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಕಾನೂನು ಬಾಹಿರವಾಗಿದೆ” ಎಂದು ಹೇಳಿದರು.

“ಸ್ವತಂತ್ರ ಪೂರ್ವದಲ್ಲಿ 1904ರಲ್ಲಿ ಕೊಟ್ಟಿರುವಂತಹ ಡಿಸಿಸಿ ಬ್ಯಾಂಕ್ ಸಹಕಾರ ಸಂಘಗಳ ಚಳುವಳಿಯಾಗಿ ಚಿಮ್ಮಿರುವ ಗ್ರಾಮಾಂತರ ಮತ್ತು ಗ್ರಾಮೀಣ ಜನರ ಜೀವನ ಸುಧಾರಣೆಗಾಗಿ ಪ್ರಾರಂಭವಾದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಎಂದು ತನ್ನದೇ ಆದ ಚಾಪು ಮೂಡಿಸಿ ಹೆಸರುವಾಸಿಯಾದ ಡಿಸಿಸಿ ಬ್ಯಾಂಕ್ ರೈತರ ಹಿತ ಕಾಪಾಡುವ ಉದ್ದೇಶದಿಂದ ಬ್ಯಾಂಕ್ ಖ್ಯಾತಿ ಪಡೆದಿದೆ. ಆದರೆ ಇವಾಗ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುವ, ರೈತರಿಗೆ ದ್ರೋಹ ಬಗೆಯುತ್ತಿರುವ, ರೈತರ ಹತ್ತಿರ ಮೋಸ ಮಾಡಿ ಹಣ ಸುಲಿಗೆ ಮಾಡುತ್ತಿರುವ ಬ್ಯಾಂಕ್ ಅಧಿಕಾರಿಗಳ ಮೇಲೆ ಪೊಲೀಸ್ ಕೇಸ್ ಹಾಕಿ ಜೈಲಿಗೆ ತಳ್ಳಿ ಸೇವೆಯಿಂದ ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.

“ರೈತರು ಬೆಳೆದ ಬೆಳೆಗಳಿಗೆ C2+ 59 ಸೇರಿಸಿ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಮಾಡಬೇಕು. ಸಾಲದ ಭಾದೆ ತಾಳಲಾರದೆ. ಸರಣಿ ರೈತರ ಆತ್ಮಹತ್ಯೆ ತಡೆಗಟ್ಟಬೇಕು. ಕಲಬುರಗಿ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಪಂಪ್ ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಕೂಡಿಸುವುದನ್ನು ತಡೆಗಟ್ಟಬೇಕು. 2020 ವಿದ್ಯುತ್ ಕಾಯ್ದೆ–ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ವಾಪಸ್ ಪಡೆಯಬೇಕು.‌ ರೈತರ ಬೆಳೆವಿಮೆ ಹಣ ಬಿಡುಗಡೆ ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು” ಎಂದು ಒತ್ತಾಯಿಸುವುದಾಗಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಮದ್ಯ ಸೇವಿಸಿ ವಾಹನ ಚಲಾಯಿಸಿದ ಇಬ್ಬರು ಚಾಲಕರಿಗೆ ತಲಾ ₹10 ಸಾವಿರ ದಂಡ

“ಸರ್ಕಾರಿ ಗೈರಾಣಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುತ್ತಿರುವುದನ್ನು ತಡೆಗಟ್ಟಿ ಕೂಡಲೇ ಹಕ್ಕುಪತ್ರ ಕೊಡಬೇಕು. ರೈತರ ಜಮೀನು ಅಳತೆ ಮಾಡಿಸಲು ಸರ್ಕಾರಿ ಫೀಸ್ ಕಟ್ಟಿ ಅರ್ಜಿ ಸಲ್ಲಿಸಿದ ರೈತರಿಗೆ ಟಿಪ್ಪಣಿ ಹೆಸರಿನಲ್ಲಿ ₹40,000 ಹಣ ಸುಲಿಗೆ ಮಾಡುತ್ತಿರುವುದನ್ನು ನಿಲ್ಲಿಸಿ ಸರಳವಾಗಿ ರೈತರ ಟಿಪ್ಪಣಿ ತಯಾರಿಸಿ ಕೊಡಬೇಕು. ರೈತರನ್ನು ಸತಾಯಿಸುವ ಸರ್ವೇ ಅಧಿಕಾರಿಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯಾದ್ಯಂತ ಹದಗೆಟ್ಟ ಮುಖ್ಯ ರಸ್ತೆಗಳು ಡಾಂಬರೀಕರಣ ರಸ್ತೆ ಮಾಡಬೇಕು. ವಿದ್ಯುತ್ ತಿದ್ದುಪಡಿ ಕಾಯ್ದೆ 2022 ವಾಪಸ್ ಪಡೆಯಬೇಕೆಂದು ಆಗ್ರಹಿಸಲಾಗುವುದು” ಎಂದರು.

“ರಾಷ್ಟ್ರೀಯ ಶಿಕ್ಷಣ ನೀತಿ 2020 ರದ್ದಾಗಬೇಕು. ಸಂವಿಧಾನದ ಆಶಯಗಳ ಮೇಲಿನ ದಾಳಿ ನಿಲ್ಲಿಸಬೇಕು. ಎಂಟು ಗಂಟೆ ಕೆಲಸದ ಅವಧಿ ಕಾಯಂ, ತನ್ನ ಸುರಕ್ಷತೆ ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು ಸೇರಿದಂತೆ ಇತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಹೊರೆ ರೂಪಿಸಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಪಡಿಸಬೇಕು. ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲ ಸಂಘಟಿತ ಅಸಂಘಟಿತ ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಮ್ ನೌಕರರಿಗೂ ರಾಷ್ಟ್ರ ವ್ಯಾಪಿ ₹26,000 ಹಾಗೂ ರಾಜ್ಯ ವ್ಯಾಪಿ ₹36,000 ಕನಿಷ್ಠ ವೇತನ ನಿಗದಿಪಡಿಸಬೇಕು” ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X