ರಜೆಯ ಮೇಲೆ ಮನೆಗೆ ತೆರಳಿದ್ದ 25 ವರ್ಷದ ಯೋಧರೊಬ್ಬರು ಜಮ್ಮು ಮತ್ತು ಕಾಶ್ಮೀರ ಕುಲ್ಗಾಮ್ ಜಿಲ್ಲೆಯಿಂದ ನಾಪತ್ತೆಯಾಗಿದ್ದಾರೆ. ಆದರೆ ತಮ್ಮ ಪುತ್ರನನ್ನು ಅಪಹರಿಸಲಾಗಿದೆ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ.
ಅಚಾತಲ್ ಪ್ರದೇಶದ ನಿವಾಸಿಯಾದ ಜಾವೇದ್ ಅಹ್ಮದ್ ವಾನಿ ಅವರು ಕುಲ್ಗಾಮ್ ಜಿಲ್ಲೆಯ ಲಡಾಖ್ ಪ್ರದೇಶದ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈದ್ ಹಬ್ಬದ ಪ್ರಯುಕ್ತ ರಜೆಯ ಮೇಲೆ ಮನೆಗೆ ತೆರಳಿದ್ದರು. ಜುಲೈ 29ರ ರಾತ್ರಿ 8 ಗಂಟೆ ಸುಮಾರಿಗೆ ಪಾರನ್‌ಹಾಲ್‌ನಲ್ಲಿ ಜಾವೇದ್ ಅಹ್ಮದ್ ಅವರ ಕಾರು ಪತ್ತೆಯಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಜಾವೇದ್ ಅಹ್ಮದ್ ವಾನಿ ದಿನಸಿ ವಸ್ತುಗಳನ್ನು ಖರೀದಿಸಲು ಚೋವಲ್ಗಾಮ್ ಪ್ರದೇಶಕ್ಕೆ ಹೋಗಿದ್ದರು. ಎಷ್ಟು ಹೊತ್ತಾದರೂ ಅವರು ಮನೆಗೆ ವಾಪಸ್ ಆಗಿರಲಿಲ್ಲ. ಅವರ ಕುಟುಂಬವು ಜಾವೇದ್ ಅವರನ್ನು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹುಡುಕಲು ಪ್ರಾರಂಭಿಸಿತ್ತು. ಹುಡುಕಾಟದ ವೇಳೆ ಪರಾನ್ಹಾಲ್ ಗ್ರಾಮದಲ್ಲಿ ಅವರ ಕಾರಿನಲ್ಲಿ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಯೋಧನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕ್ರಿಕೆಟ್‌ನಲ್ಲಿ ನಿಮ್ಮ ಪುತ್ರ ಎಷ್ಟು ರನ್ ಸ್ಕೋರ್ ಮಾಡಿದ್ದಾರೆ? ಅಮಿತ್ ಶಾಗೆ ಸ್ಟಾಲಿನ್ ಪುತ್ರ ತಿರುಗೇಟು
“ನನ್ನ ಮಗನನ್ನು ಲಡಾಖ್‌ನಲ್ಲಿ ನಿಯೋಜಿಸಲಾಗಿತ್ತು. ಈದ್ ಪ್ರಯುಕ್ತ ಮನೆಗೆ ಬಂದಿದ್ದ ಆತ ನಾಳೆ ಕರ್ತವ್ಯಕ್ಕೆ ಸೇರಬೇಕಿತ್ತು. ನಿನ್ನೆ ಸಂಜೆ ಮಾರುಕಟ್ಟೆಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಹೊರಟಿದ್ದ. ಆತನನ್ನು ಕೆಲವರು ತಡೆದು ಅಪಹರಿಸಿದ್ದಾರೆ. ನಾನು ಅವರಿಗೆ ಮನವಿ ಮಾಡುತ್ತೇನೆ, ದಯವಿಟ್ಟು ನನ್ನ ಮಗನನ್ನು ಬಿಡುಗಡೆ ಮಾಡಿ” ಎಂದು ಯೋಧನ ತಾಯಿ ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ.
ಈ ಹಿಂದೆಯೂ ಈ ಪ್ರದೇಶದಲ್ಲಿ ರಜೆಯ ಮೇಲೆ ಆಗಮಿಸಿದ್ದ ಹಲವಾರು ಸೈನಿಕರನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದರು.