ಬೆಂಗಳೂರು ಮೂಲದ ಕಂಪನಿಯ ಸಂಸ್ಥಾಪಕ ಬ್ರಿಜ್ ಸಿಂಗ್ ಎಂಬವರು ತಮ್ಮ ಸಂಸ್ಥೆಯನ್ನು ನೋಂದಾಯಿಸಲು ಎದುರಿಸುತ್ತಿರುವ ಸಂಕಷ್ಟವನ್ನು ಹಂಚಿಕೊಂಡು, ಅಮೆರಿಕಕ್ಕೆ ಮರಳಲು ಸಮಯವಾಗಿದೆ ಎಂದು ನೋವು ತೋಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
“ನಿಮ್ಮ ಸಮಸ್ಯೆಯ ಬಗ್ಗೆ ಕೇಳಿ ಬೇಸರವಾಯಿತು. ಕಂಪನಿಯ ಸ್ಥಾಪನೆಯನ್ನು ಸಾಮಾನ್ಯವಾಗಿ ಸಿಎಎಸ್ ಮಾಡುತ್ತದೆ. ಆರ್ಒಸಿ (ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಮತ್ತು ಎಲ್ಲ ರಾಜ್ಯಗಳಿಗೂ ಒಂದೇ ಆಗಿರುತ್ತದೆ) ಅನುಮೋದನೆ ಪಡೆಯಲು 15-20 ದಿನಗಳಿಗಿಂತ ಹೆಚ್ಚು ತೆಗೆದುಕೊಳ್ಳಬಾರದು. ನಿಮಗೆ ಏನಾದರೂ ಸಮಸ್ಯೆಯಿದ್ದರೆ ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ಅದನ್ನು ಬಗೆಹರಿಸಲು ಸಂತೋಷಪಡುತ್ತೇನೆ” ಎಂದು ಸಚಿವ ಎಂ ಬಿ ಪಾಟೀಲ್ ಅವರು, ಬ್ರಿಜ್ ಸಿಂಗ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
“ನನ್ನ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ನಿಮ್ಮನ್ನು ನಿಜವಾಗಿಯೂ ಶ್ಲಾಘಿಸುವೆ. ಈ ಟ್ವೀಟ್ ನನಗೆ ಹೆಚ್ಚು ಆತ್ಮವಿಶ್ವಾಸ ನೀಡಿದೆ. ಅಗತ್ಯವಿದ್ದರೆ ನಿಮ್ಮ ತಂಡವನ್ನು ನಾನು ಭೇಟಿಯಾಗುವೆ. ನಿಮ್ಮ ಬೆಂಬಲಕ್ಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ” ಎಂದು ಉದ್ಯಮಿ ಬ್ರಿಜ್ ಸಿಂಗ್ ಟ್ವೀಟಿಸಿದ್ದಾರೆ.
ಉದ್ಯಮಿ ಬ್ರಿಜ್ ಸಿಂಗ್ ಅವರು ತಮ್ಮ ಸಂಸ್ಥೆಯನ್ನು ನೋಂದಾಯಿಸಲು ಎದುರಿಸುತ್ತಿರುವ ಸಂಕಷ್ಟವನ್ನು ಹಂಚಿಕೊಂಡಿದ್ದು, ಅಮೆರಿಕಕ್ಕೆ ಮರಳುವ ಸಮಯ ಬಂದಿದೆ ಎಂದು ನೋವು ತೋಡಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ; ಸಿ.ಟಿ ರವಿ ಸ್ಪಷ್ಟನೆ
ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಅವರು ಎರಡು ತಿಂಗಳು ಕಳೆದರೂ ತನ್ನ ಕಂಪೆನಿಯನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ನಾನು ಅಮೆರಿಕಕ್ಕೆ ಮರಳುವ ಸಮಯ ಬಂದಿದೆ. ಇದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರು ಮತ್ತು ಭಾರತದ ಬಗ್ಗೆ ಪ್ರೀತಿಯಿದೆ. ಭಾರತದಲ್ಲಿ ಸಂಸ್ಥೆಯನ್ನು ನೋಂದಾಯಿಸಲು ಎರಡು ತಿಂಗಳುಗಳ ಕಾಲ ಪ್ರಯತ್ನಿಸಿದರೂ ಪೂರ್ಣಗೊಂಡಿಲ್ಲ ಎಂದು ಸಿಂಗ್ ಟ್ವೀಟ್ ಮಾಡಿದ್ದರು.