ಹಿಂಸಾಚಾರ ಪೀಡಿತ ಮಣಿಪುರ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ‘ಇಂಡಿಯಾ’ ಒಕ್ಕೂಟದ 21 ವಿರೋಧ ಪಕ್ಷದ ಸಂಸದರ ನಿಯೋಗವು ಎರಡು ದಿನಗಳ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಕುಕಿ ಮತ್ತು ಮೀಟೀ ಸಮುದಾಯಗಳ ನಿರಾಶ್ರಿತರ ಶಿಬಿರಗಳಲ್ಲಿನ ಕರಾಳ ಅನುಭವಗಳನ್ನು ನಿಯೋಗ ಬಿಚ್ಚಿಟ್ಟಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಂಡಿಯಾ ನಿಯೋಗದ ಭಾಗವಾಗಿರುವ ಕಾಂಗ್ರೆಸ್ ಸಂಸದೆ ಫುಲೋದೇವಿ ನೇತಮ್, “ನಾವು ಭೇಟಿ ನೀಡಿದ ನಿರಾಶ್ರಿತ ಶಿಬಿರದ ಒಂದು ಸಭಾಂಗಣದಲ್ಲಿ 400 ರಿಂದ 500 ಜನರು ತಂಗಿದ್ದಾರೆ. ಮಣಿಪುರ ಸರ್ಕಾರ ಅವರಿಗೆ ಸೀಮಿತ ಆಹಾರ ಮಾತ್ರ ನೀಡುತ್ತಿದೆ. ಮಕ್ಕಳಿಗೆ ಸರಿಯಾದ ಆಹಾರ ನೀಡುತ್ತಿಲ್ಲ. ಸರಿಯಾದ ಶೌಚಾಲಯ ಅಥವಾ ಸ್ನಾನಗೃಹದ ಸೌಲಭ್ಯವಿಲ್ಲ. ಸಂತ್ರಸ್ತರು ಶಿಬಿರಗಳಲ್ಲಿ ವಾಸಿಸುವ ರೀತಿ ತುಂಬಾ ಹೃದಯ ವಿದ್ರಾವಕವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮಣಿಪುರ ರಾಜ್ಯವು ಶಾಂತಿಯುತವಾಗಿದೆ ಎಂಬ ಸರ್ಕಾರದ ಹೇಳಿಕೆ ನಿಜವಾಗಿದ್ದರೆ, ಕಳೆದ ಮೂರು ತಿಂಗಳಿನಿಂದ ಪರಿಹಾರ ಶಿಬಿರಗಳನ್ನು ನಡೆಸುವ ಅಗತ್ಯವೇನು?” ಎಂದು ಫುಲೋದೇವಿ ನೇತಮ್ ಪ್ರಶ್ನಿಸಿದ್ದಾರೆ.
ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರನ್ನು ಭೇಟಿಯಾದ ನಂತರ ಮಾತನಾಡಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, “ಎಲ್ಲ 21 ಸಂಸದರು ರಾಜ್ಯಪಾಲರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿದ ನಂತರ ಅವರು ಕೂಡ ನಮ್ಮೊಂದಿಗೆ ಮಾತನಾಡಿ ಹಿಂಸಾಚಾರ ಹಾಗೂ ಶಿಬಿರಗಳಲ್ಲಿನ ಪರಿಸ್ಥಿತಿಯ ಬಗ್ಗೆ ನೋವು ಮತ್ತು ದುಃಖವನ್ನು ವ್ಯಕ್ತಪಡಿಸಿದರು. ಮಣಿಪುರ ರಾಜ್ಯದ ಎರಡು ದಿನಗಳ ಭೇಟಿಯಲ್ಲಿ ನಾವು ಏನು ನೋಡಿದ್ದೇವೆ, ನಮಗಾದ ಅನುಭವವನ್ನು ರಾಜ್ಯಪಾಲರಿಗೆ ಹೇಳಿದ ನಂತರ ಪರಿಸ್ಥಿತಿಯ ಗಂಭೀರತೆಯನ್ನು ಅವರು ಸಹ ಅರ್ಥ ಮಾಡಿಕೊಂಡರು“ ಎಂದು ಹೇಳಿದರು.
“ನಾವು ಎಲ್ಲ ಸಮುದಾಯಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಹಾರವನ್ನು ಕಂಡುಕೊಳ್ಳೋಣ ಎಂದು ಮಣಿಪುರ ರಾಜ್ಯಪಾಲರು ಸಲಹೆ ನೀಡಿದರು. ಒಟ್ಟಾಗಿ ಮಣಿಪುರಕ್ಕೆ ಸರ್ವಪಕ್ಷ ನಿಯೋಗವನ್ನು ಕಳುಹಿಸಬೇಕು ಮತ್ತು ಎಲ್ಲ ಸಮುದಾಯಗಳ ಮುಖಂಡರೊಂದಿಗೆ ಮಾತನಾಡಬೇಕು. ಇದರಿಂದ ಜನರಲ್ಲಿರುವ ಅಪನಂಬಿಕೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅನುಸೂಯಾ ಉಯ್ಕೆ ತಿಳಿಸಿರುವುದಾಗಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಪ್ರತೀಕಾರ ಕ್ರಮವಾಗಿ ಅತ್ಯಾಚಾರ; ಬಯಲಿಗೆ ಬಾರದ ನೂರಾರು ಪ್ರಕರಣಗಳು
ಪತಿ, ಪುತ್ರನ ಮೃತದೇಹಗಳನ್ನು ನೋಡಬೇಕು
ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ ಸುಶ್ಮಿತಾ ದೇವ್ ಮಾತನಾಡಿ, “ಈಶಾನ್ಯ ರಾಜ್ಯಗಳಿಂದ ಬಂದವರು ಸಂಸತ್ತಿನಲ್ಲಿ ನಮ್ಮನ್ನು ಮರೆತುಬಿಡುತ್ತಾರೆ ಎಂಬ ಭಾವನೆ ಇದೆ. ಪ್ರತಿಪಕ್ಷಗಳ ಒಕ್ಕೂಟವು ತಮ್ಮೊಂದಿಗೆ ನಿಂತಿದೆ ಎಂಬುದನ್ನು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡುತ್ತೇವೆ. ಕಣಿವೆ ರಾಜ್ಯದ ಘಟನೆಗೆ ಪ್ರಧಾನಿ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನದವರೆಗೂ ನಮ್ಮ ಒಕ್ಕೂಟ ಹೋರಾಟ ನಡೆಸಲಿದೆ” ಎಂದು ರಾಜ್ಯದ ಜನತೆಗೆ ಭರವಸೆ ನೀಡಿದರು.
“ನಮ್ಮ ನಿಯೋಗವು ಮೇ 4 ರಂದು ಮಣಿಪುರದಲ್ಲಿ ಜನಸಮೂಹದಿಂದ ಬೆತ್ತಲೆ ಮೆರವಣಿಗೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇಬ್ಬರು ಮಹಿಳೆಯರಲ್ಲಿ ಒಬ್ಬ ಸಂತ್ರಸ್ತೆ ಹಾಗೂ ಆಕೆಯ ತಾಯಿಯನ್ನು ಭೇಟಿ ಮಾಡಿದವು. ಸಂತ್ರಸ್ತೆಯ ತಾಯಿ ಗಲಭೆಯಲ್ಲಿ ಕೊಲ್ಲಲ್ಪಟ್ಟ ತನ್ನ ಪುತ್ರ ಹಾಗೂ ಪತಿಯ ಮೃತದೇಹಗಳನ್ನು ನೋಡಲು ಅವಕಾಶ ಕಲ್ಪಿಸುವಂತೆ ನಮಗೆ ಮನವಿ ಮಾಡಿದರು” ಎಂದು ಸುಶ್ಮಿತಾ ದೇವ್ ತಿಳಿಸಿದ್ದಾರೆ.