ಸುದ್ದಿ ಮಾಧ್ಯಮಗಳು ಬಂಡವಾಳಶಾಹಿಗಳ ಕೈಗೆ ಸಿಲುಕಿರುವುದು ಪ್ರಜಾಪ್ರಭುತ್ವಕ್ಕೆ ಎದುರಾದ ಅಪಾಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ರಾಯಚೂರು ನಗರದಲ್ಲಿ ಜಿಲ್ಲಾ ಕಾರ್ಯನಿರತ ಪ್ರತಕರ್ತರ ಸಂಘ ಹಾಗೂ ರಿಪೋರ್ಟರ್ಸ್ ಗಿಲ್ಡ್‌ಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರತಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
“ಪತ್ರಿಕೆಗಳು ಇಂದಿಗೂ ವಿಶ್ವಾಸ ಉಳಿಸಿಕೊಂಡಿವೆ. ಆದರೆ ಓದುಗರ ಸಂಖ್ಯೆ ಇಳಿಕೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಮುದ್ರಣ ಮಾಧ್ಯಮ ಮಾತ್ರ ಅಧಿಕೃತವಾಗಿದ್ದ ಕಾಲವೊಂದಿತ್ತು. ಆದರೀಗ ದೃಶ್ಯಮಾಧ್ಯಮದೊಂದಿಗೆ ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಚಾರ ಪಡೆಯುತ್ತಿವೆ. ಪತ್ರಕರ್ತರು ಆರ್ಥಿಕವಾಗಿ ಸದೃಢವಾದರೆ ಮಾತ್ರ ಉತ್ತಮ ಸೇವೆ ಪಡೆಯಬಹುದು” ಎಂದು ಹೇಳಿದರು.
“ಪತ್ರಿಕೆಗಳು ಸಬಲವಾಗಲು ರಾಜ್ಯ ಸರ್ಕಾರ ಹೊಸ ಜಾಹೀರಾತು ನೀತಿ ರೂಪಿಸಿ ಜಾರಿಗೊಳಿಸಲು ಸಿದ್ದತೆಯಲ್ಲಿದೆ. ಪತ್ರಕರ್ತರ ಸಮಸ್ಯೆಗಳ ನಿವಾರಣೆಗೂ ರಾಜ್ಯ ಸರ್ಕಾರ ಚಿಂತನೆ ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಜೆಟ್‌ನಲ್ಲಿ ಪತ್ರಕರ್ತರ ಮಾಸಾಶನವನ್ನು ಹೆಚ್ಚಿಸಲು ನಿರ್ಧರಿಸಿದೆ. ಪತ್ರಕರ್ತರಿಗೆ ವಸತಿ, ನಿವೇಶನ ಹಾಗೂ ಗ್ರಾಮೀಣ ಪಾಸ್ ಒದಗಿಸಲು ಸಕಾರಾತ್ಮಕವಾಗಿ ಕ್ರಮವಹಿಸಲಿದೆ” ಎಂದರು.
“ಪತ್ರಕರ್ತರಿಗೆ ಸೇವಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸುವ ಅವಶ್ಯಕತೆಯಿದೆ. ಪತ್ರಿಕೆಗಳು ಉಳಿದರೆ ಪತ್ರಕರ್ತರು ಉಳಿಯಲು ಸಾಧ್ಯ. ಪತ್ರಿಕೆಗಳನ್ನು ಉಳಿಸಿ ಬೆಳೆಸಲು ಪರ್ಯಾಯ ಚಿಂತನೆಗಳು ನಡೆಯಬೇಕಿದೆ. ಪತ್ರಿಕೆಗಳು ಸರ್ಕಾರವನ್ನೇ ಉರುಳಿಸುವಷ್ಟು ಪ್ರಭಾವಿಶಾಲಿಗಳಾಗಿದ್ದವು. ಆದರೆ, ಪ್ರಸ್ತುತದಲ್ಲಿ ಪತ್ರಿಕೆಗಳ ಪ್ರಸಾರ ಸಂಖ್ಯೆ ಕುಂಠಿತವಾಗುತ್ತಿದ್ದು, ಓದುಗರು ಸಂಖ್ಯೆ ಇಳಿಕೆಯಾಗುತ್ತಿರುವುದು ಕಳವಳಕಾರಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ನ್ಯಾಯಾಲಯಗಳಲ್ಲೂ ವಿಕಲಚೇತನರಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಬೇಕಿದೆ : ಸುಪ್ರೀಂ ನ್ಯಾಯಮೂರ್ತಿ ಎಸ್.ಎ ಬೋಪಣ್ಣ
“ಸಮಾಜ ಪತ್ರಿಕೆಗಳನ್ನು ಬೆಳೆಸಲು ಚಿಂತಿಸಬೇಕಿದೆ. ಪತ್ರಕರ್ತರು ನಕಾರಾತ್ಮಕ ಸುದ್ದಿಗಳಿಗಿಂತ ಹೆಚ್ಚು ಸಕಾರಾತ್ಮಕ ಸುದ್ದಿಗಳಿಗೆ ಒತ್ತು ನೀಡಬೇಕಾದ ಅವಶ್ಯಕತೆಯಿದೆ. ನಕಾರಾತ್ಮಕ ವರದಿಗಳಿಗಿಂದ ಸಮಾಜಕ್ಕೆ ಸಂದೇಶ ನೀಡುವ, ಜಾಗೃತಿ ಮೂಡಿಸುವ ಕೆಲಸ ಪತ್ರಕರ್ತರಿಂದ ನಡೆಯಲಿ” ಎಂದರು.
ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು, ಶಾಸಕರುಗಳಾದ ಹಂಪನಗೌಡ ಬಾದರ್ಲಿ, ಡಾ.ಶಿವರಾಜಪಾಟೀಲ್, ಹಂಪಯ್ಯನಾಯಕ, ದದ್ದಲ ಬಸನಗೌಡ, ಕರೆಮ್ಮ ನಾಯಕ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್‌ಪಿ ನಿಖಿಲ್ ಬಿ. ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಆರ್ ಗುರುನಾಥ, ಚನ್ನಬಸವ, ಶಿವಮೂರ್ತಿ ಹೀರೆಮಠ, ಎಂ ಪಾಷಾ, ವಿಜಯ ಜಾಗಟಕಲ್ ಉಪಸ್ಥಿತರಿದ್ದರು.