ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ನೋಂದಣಿಗೆ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳ ಲಾಗಿನ್ ಐಡಿ ದುರ್ಬಳಕೆ ಮಾಡಿಕೊಂಡು, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆಯುತ್ತಿರುವ ಕಂಪ್ಯೂಟರ್ ಸೆಂಟರ್‌ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿದೆ. ಇದಕ್ಕೆ ಸಹಕರಿಸಿದವರ ಲಾಗಿನ್ ಐಡಿಗಳನ್ನು ರದ್ದುಮಾಡಲಾಗಿದೆ.
ಈ ಕುರಿತು ವರದಿ ಮತ್ತು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಹೊಸದುರ್ಗ ಪುರಸಭೆ ಮುಖ್ಯ ಅಧಿಕಾರಿ, ಸಿಡಿಪಿಒ, ಪೊಲೀಸ್, ಹೊಸದುರ್ಗ ಟೌನ್ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕರ ತಂಡ ಹೊಸದುರ್ಗ ಪಟ್ಟಣದ ಖಾಸಗಿ ಕಂಪ್ಯೂಟರ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ದಾಳಿಯ ವೇಳೆ ಹೊಸದುರ್ಗ ಪಟ್ಟಣದ ಜೈನ್ ದೇವಸ್ಥಾನ ಬಳಿಯ ಜನಸ್ನೇಹಿ ಕಂಪ್ಯೂಟರ್, ಎಸ್‌ಜೆಎಂ ಬಡಾವಣೆಯ ಮಾರುತಿ ನರ್ಸಿಂಗ್ ಹೋಂ ಹತ್ತಿರದ ಸ್ಪೂರ್ತಿ ಆನ್‌ಲೈನ್ ಸೆಂಟರ್, ಅಜ್ಜಂಪುರ ರಸ್ತೆಯ ವೈಷ್ಣವಿ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಅಕ್ರಮವಾಗಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿ ಹಣ ಪಡೆಯುತ್ತಿರುವುದು ಕಂಡುಬಂದಿದೆ.
ಈ ಹಿನ್ನೆಲೆ ಕ್ರಮ ಕೈಗೊಂಡು ಕಂಪ್ಯೂಟರ್ ಸೆಂಟರ್‌ಗಳಿಗೆ ಮುಟ್ಟುಗೋಲು ಹಾಕಿದ್ದು, ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ದಾಳಿ ಮಾಹಿತಿ ಗೊತ್ತಾದ ಬಳಿಕ ಪಟ್ಟಣದ ಹಲವು ಕಂಪ್ಯೂಟರ್ ಮಾಲೀಕರು ಅಂಗಡಿ ಮುಚ್ಚಿ ಪರಾರಿಯಾಗಿದ್ದಾರೆ. ಈ ಸೆಂಟರ್‌ಗಳನ್ನು ಸೀಜ್ ಮಾಡಲಾಗಿದೆ.
ಅಕ್ರಮವಾಗಿ ಲಾಗಿನ್ ಐಡಿ ಬಳಕೆ
ಪ್ರಕರಣಗಳಲ್ಲಿ ಸರ್ಕಾರದಿಂದ ಲಾಗಿನ್ ಐಡಿ ಪಡೆದ ವ್ಯಕ್ತಿಗಳು ಖಾಸಗಿ ಕಂಪ್ಯೂಟರ್ ಸೆಂಟರ್‌ಗಳಿಗೆ ಲಾಗಿನ್ ಐಡಿ ನೀಡಿದ್ದಾರೆ. ಇದು ಅಪರಾಧ ಕೃತ್ಯವಾಗಿದೆ. ಜನಸ್ನೇಹಿ ಕಂಪ್ಯೂಟರ್ ಸೆಂಟರ್‌ನಲ್ಲಿ ಕಬ್ಬಳ ಗ್ರಾಮ ಕೇಂದ್ರದ ಲಾಗಿನ್ ಐಡಿ, ಸ್ಪೂರ್ತಿ ಆನ್‌ಲೈನ್ ಸೆಂಟರ್‌ನಲ್ಲಿ ಆನಿವಾಳ ಗ್ರಾಮ ಒನ್ ಕೇಂದ್ರ ಲಾಗಿನ್ ಐಡಿ ಹಾಗೂ ವೈಷ್ಣವಿ ಕಂಪ್ಯೂಟರ್ ಸೆಂಟರ್‌ನಲ್ಲಿ ದೊಡ್ಡಘಟ್ಟ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ಬಳಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಗ್ರಾಮ್ ಒನ್ ಕೇಂದ್ರಗಳ ನೋಂದಣಿ ಲಾಗಿನ್ ಐಡಿಯನ್ನು ನಿರ್ಬಂಧಿಸಿ, ಕಪ್ಪುಪಟ್ಟಿ(ಬ್ಲ್ಯಾಕ್ ಲಿಸ್ಟ್)ಗೆ ಸೇರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಹಣ ವಸೂಲಿ ಆರೋಪ; 3 ಸೈಬರ್ ಕೇಂದ್ರಗಳ ವಿರುದ್ಧ ಎಫ್‌ಐಆರ್
ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಹಣ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ನೊಂದಣಿ ಸುಗಮವಾಗಿ ನೆರವೇರುತ್ತಿದೆ. ಗ್ರಾಮಗಳಲ್ಲಿ ಗ್ರಾಮ ಒನ್, ನಗರ ಪ್ರದೇಶದಲ್ಲಿ ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ನೋಂದಣಿ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.