ಕೇಂದ್ರ ಸರ್ಕಾರ ಜಾರಿಮಾಡಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ ಕಾರ್ಮಿಕರ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‌ಗೆ ಬೆಂಬಲಿಸಿ ದೇವದುರ್ಗ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಎಪಿಎಂಸಿಯಿಂದ ಮಿನಿವಿಧಾನಸೌಧದವರೆ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಸಿಐಟಿಯು,ಜೆಸಿಟಿಯು ಸಂಘಟನೆಯಿಂದ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ದುಡಿವ ವರ್ಗಕ್ಕೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇವು ಮಾಲೀಕರ ಪರವಾಗಿದ್ದು ಕಾರ್ಮಿಕರನ್ನು ಶೋಷಣೆ ಮಾಡಲಿವೆ. ನಾಲ್ಕು ಸಂಹಿತೆ ಜಾರಿಯಾದರೆ ದುಡಿಯುವ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಂಡು ಕಂಪನಿ ಗುಲಾಮರಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಆರೋಪಿಸಿದರು.
ಕೂಡಲೇ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಅಂಗನವಾಡಿ, ಬಿಸಿಯೂಟ, ಗ್ರಾಪಂ ನೌಕರರು, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 31ಸಾವಿರ ರೂ. ವೇತನ ಜಾರಿಮಾಡಬೇಕು. ಗುತ್ತಿಗೆ ಪದ್ಧತಿ ಕೈಬಿಟ್ಟು ಕಾಯಂ ಪದ್ಧತಿ ಜಾರಿಗೊಳಿಸಬೇಕು. ವಿದ್ಯುತ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆದು ಖಾಸಗೀಕರಣ ಕೈಬಿಡಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಜಾರಿಗೊಳಿಸಬೇಕು. ನರೇಗಾ ಕೆಲಸವನ್ನು 200ದಿನಕ್ಕೆ ಹೆಚ್ಚಿಸಿ 600ರೂ. ಕೂಲಿ ನೀಡಬೇಕು. ಕಾರ್ಮಿಕರಿಗೆ ಆರೋಗ್ಯ ವಿಮೆ ಸೇರಿ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿಗಾಗಿ ಪಂಚಾಯಿತಿಗೆ ಬೀಗ
ಪ್ರತಿಭಟನೆ ಸಂದರ್ಭದಲ್ಲಿ ಕೆಲ ಹೋರಾಟಗಾರರು ಮಿನಿವಿಧಾನಸೌಧಕ್ಕೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಕೆಲವರನ್ನು ಬಂಧಿಸಿ ಬಿಡುಗಡೆ ಮಾಡಿದರು.
ಮುಖಂಡರಾದ ರಂಗಮ್ಮ ಅನ್ವರ, ಈಶಮ್ಮ ಊಟಿ, ರಮಾದೇವಿ, ಮರಿಯಮ್ಮ, ಶೋಭಾ, ಶ್ರೀಲೇಖಾ, ಈರಮ್ಮ, ಗೌರಿ, ಪಂಚಯ್ಯ ಗಬ್ಬೂರು, ಹೊನ್ನಪ್ಪ ನಾಯಕ, ಪಾಂಡುರಂಗ ನಾಯಕ, ಶಬ್ಬೀರ್, ಯಲ್ಲಪ್ಪ, ಶೇಖಮ್ಮ ಇದ್ದರು.

