ಕರ್ನಾಟಕದಲ್ಲಿ ನಾಲ್ಕೈದು ದಿನಗಳಿಂದ ಮಳೆಯಿಲ್ಲದೇ ಜಲಾಶಯಗಳಿಗೂ ಒಳ ಹರಿವು ತಗ್ಗಿದೆ. ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಯ ನೀರು ಹರಿದು ಆಲಮಟ್ಟಿ ಜಲಾಶಯನ್ನು ತುಂಬಿಸಿದೆ. ಜಲಾಶಯಕ್ಕೆ ಈಗಲೂ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬರುತ್ತಿದೆ. ಅದೇ ರೀತಿ ಕಬಿನಿ ಜಲಾಶಯವೂ ತುಂಬಿದೆ. ಕಬಿನಿ ಒಳಹರಿವು ಕೂಡ ಕಡಿಮೆಯಾಗಿದೆ. ಮಲೆನಾಡಿನಲ್ಲಿ ಮಳೆ ಕಾಣೆಯಾಗಿ ಮೂರು ಜಲಾಶಯಗಳಲ್ಲಿ ನೀರಿನ ಒಳ ಹರಿವು ಇಳಿಕೆಯಾಗಿದೆ.
ಕೆಆರ್‌ಎಸ್‌ನ : ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಮಂಗಳವಾರ ಸಂಜೆಗೆ 113.42 ಅಡಿ ತಲುಪಿದ್ದು, ಜಲಾಶಯಕ್ಕೆ ಒಳ ಹರಿವು 6391 ಕ್ಯೂಸೆಕ್‌ಗೆ ಇಳಿದಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಜಲಾಶಯ ಭರ್ತಿಯಾಗಿತ್ತು. ಒಳ ಹರಿವು 23081 ಕ್ಯೂಸೆಕ್ ಇತ್ತು. ಹೊರಹರಿವಿನ ಪ್ರಮಾಣ ಈಗ 3193 ಕ್ಯೂಸೆಕ್ ಇದ್ದರೆ ಹಿಂದಿನ ವರ್ಷ 22,872 ಕ್ಯೂಸೆಕ್ ನೀರನ್ನು ಇದೇ ಅವಧಿಯಲ್ಲಿ ಹೊರ ಬಿಡಲಾಗುತ್ತಿತ್ತು.
ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿದೆ. ಈವರೆಗೂ 35.304 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಭರ್ತಿಗೆ ಇನ್ನೂ 15 ಟಿಎಂಸಿಯಷ್ಟು ನೀರು ಬೇಕಾಗಿದೆ.
“ಕೃಷ್ಣರಾಜಸಾಗರ ಜಲಾಶಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ನೀರಿನ ಪ್ರಮಾಣ ಕಡಿಮೆಯಿದೆ. ಆದರೂ ಕೊಡಗಿನಲ್ಲಿ ಮಳೆಯಾದರೆ ಮತ್ತಷ್ಟು ನೀರು ಜಲಾಶಯಕ್ಕೆ ಹರಿದು ಬರಬಹುದು. ಮೊದಲ ವಾರದಲ್ಲಿ ಮಳೆ ಮುನ್ಸೂಚನೆ ಇರುವುದರಿಂದ ನೀರಿನ ನಿರೀಕ್ಷೆಯಿದೆ” ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಲಮಟ್ಟಿ : ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಮುಂದುವರೆದಿರುವುದರಿಂದ ಒಳಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಇದೆ. ಆದರೆ ನಾಲ್ಕೈದು ದಿನಕ್ಕೆ ಹೋಲಿಸಿದರೆ ಒಳಹರಿವಿನ ಪ್ರಮಾಣ ಇಳಿಕೆಯಾಗಿರುವುದು ಕಂಡು ಬಂದಿತು. ಮಂಗಳವಾರ ಜಲಾಶಯಕ್ಕೆ 1,28,158 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 518.71 ಮೀಟರ್ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಈವರೆಗೂ 108.347 ಟಿಎಂಸಿ ನೀರು ಸಂಗ್ರಹವಾಗಿದ್ದು, 90.727 ಟಿಎಂಸಿಯಷ್ಟು ನೀರಿನ ಪ್ರಮಾಣ ಬಳಕೆಗೆ ಲಭ್ಯವಾಗಿದೆ.
ಈ ನಡುವೆ ಜಲಾಶಯದಿಂದ 57,731 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು, ಕೆರೆ ತುಂಬಿಸಲು 280 ಕ್ಯೂಸೆಕ್, ವಿದ್ಯುತ್ ಉತ್ಪಾದನೆಗೆ 42,000 ಕ್ಯೂಸೆಕ್, ನದಿ ಮೂಲಕ 15,000 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ.
ಜಲಾಶಯದ ಒಳಹರಿವಿನ ಪ್ರಮಾಣ ಒಂದು ಲಕ್ಷಕ್ಕೂ ಅಧಿಕವಾಗಿ ಬರುತ್ತಲೇ ಇದೆ. ಜಲಾಶಯ ಭರ್ತಿಯಾಗಿದ್ದು, ಹೊರಕ್ಕೆ ನೀರು ಹರಿಸಲಾಗುತ್ತಿದೆ. ಪೂರ್ಣಗೊಳ್ಳಲು ಇನ್ನೂ ಹದಿನೈದು ಟಿಎಂಸಿಯಷ್ಟು ನೀರು ಬೇಕಾಗಿದೆ. ಜಲಾಶಯ ದೃಷ್ಟಿಯಿಂದ ಹೆಚ್ಚಿನ ನೀರು ಸಂಗ್ರಹಿಸುತ್ತಿಲ್ಲ. ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನೀರು ಬರುವ ಸಾಧ್ಯತೆಯಿದೆ.
ಕಬಿನಿ : ಕೇರಳದಲ್ಲಿ ನಾಲ್ಕೈದು ದಿನಗಳಿಂದಲೇ ಮಳೆ ಕಡಿಮೆಯಾಗಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಆದರೆ ಈವರೆಗೂ ಸುರಿದ ಮಳೆಗೆ ಜಲಾಶಯ ಭರ್ತಿಯಾಗಿದೆ. ಸದ್ಯ ಜಲಾಶಯದಲ್ಲಿ 2,283.40 ಅಡಿ ನೀರಿದೆ. ಗರಿಷ್ಠ ಮಟ್ಟ2284 ಅಡಿ. ಜಲಾಶಯಕ್ಕೆ ಮಂಗಳವಾರ 4373 ಕ್ಯೂಸೆಕ್ ನೀರು ಒಳ ಬರುತ್ತಿತ್ತು. ಹಿಂದಿನ ವರ್ಷ ಇದೇ ದಿನ 7072 ಕ್ಯೂಸೆಕ್ ಒಳಹರಿವು ಇತ್ತು. ಹೊರ ಹರಿವಿನ ಪ್ರಮಾಣ 3500 ಕ್ಯೂಸೆಕ್ ನೀರು ಇದೆ. ಹಿಂದಿನ ವರ್ಷ ಇದೇ ದಿನ 6500 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿತ್ತು. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿದ್ದು, ಸದ್ಯ 19.12 ಕ್ಯೂಸೆಕ್ ಸಂಗ್ರಹವಾಗಿದೆ. ಅಗತ್ಯ ಬಳಕೆಗೆ 9.31 ಟಿಎಂಸಿ ನೀರು ಲಭ್ಯವಿದೆ.
“ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿ ನೀರು ಹದಿನೈದು ದಿನದಿಂದಲೇ ಹೊರ ಬಿಡಲಾಗುತ್ತಿದೆ. ನಾಲ್ಕೈದು ದಿನಗಳಿಗೆ ಹೋಲಿಸಿದರೆ ಒಳಹರಿವಿನ ಪ್ರಮಾಣ ಕಡಿಮೆಯಾಗಿರುವುದರಿಂದ ಹೊರ ಹರಿವು ತಗ್ಗಿದೆ. ಕೇರಳದಲ್ಲಿ ಮತ್ತೆ ಮಳೆ ಬಂದರೆ ಜಲಾಶಯದಿಂದ ನೀರು ಹೊರಬಿಡಲೇಬೇಕಾಗುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಿರುವುದರಿಂದ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳಹರಿವು ಕುಸಿತ ಕಂಡಿದೆ. ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯಕ್ಕೆ 13,660 ಕ್ಯೂಸೆಕ್ ಮಾತ್ರ ಒಳಹರಿವು ಇದೆ. ನೀರಿನ ಮಟ್ಟ 1,787.9 ಅಡಿಗೆ ತಲುಪಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಸಲು ಆಗ್ರಹ
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯಕ್ಕೆ 5,756 ಕ್ಯೂಸೆಕ್ ಒಳಹರಿವು ಇದ್ದು, ನೀರಿನ ಮಟ್ಟ 162.8 ಅಡಿಗೆ ಏರಿಕೆಯಾಗಿದೆ. ತುಂಗಾ ಜಲಾಶಯ ಭರ್ತಿಯಾಗಿದ್ದು 10,493 ಕ್ಯೂಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಮೂರೂ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ತಗ್ಗಿದೆ. ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯ ಭರ್ತಿಯಾಗಲು ಇನ್ನೂ ಭಾರೀ ಮಳೆಯೇ ಬೇಕೆಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.