ನಿತ್ಯದ ಬದುಕು ಆರಂಭವಾಗುವುದೇ ಹಾಲಿನೊಂದಿಗೆ. ಬೆಳಗ್ಗೆ ಎದ್ದು ಬಿಸಿ ಬಿಸಿ ಕಾಫಿ-ಚಹಾ ಅಥವಾ ಹಾಲು ಸವಿದು ಉಳಿದ ಕೆಲಸಗಳನ್ನು ಹಲವರು ಆರಂಭಿಸುತ್ತಾರೆ. ಅಂತೆಯೇ, ದಿನನಿತ್ಯ ಜನರ ಜೇಬಿಗೆ ಕತ್ತರಿ ಬೀಳುವುದೂ ಹಾಲಿನಿಂದಲೇ ಆರಂಭವಾಗುತ್ತದೆ.
ಭಾಗಶಃ ಒಂದು ಲೀಟರ್‌ಗೂ ಅಧಿಕ ಹಾಲು ಬಳಕೆ ಮಾಡುವವರು ಅರ್ಧ ಲೀಟರ್‌ನ ಎರಡು ಹಾಲಿನ ಪ್ಯಾಕೇಟ್‌ಗಳನ್ನು ಖರೀದಿಸುವುದು ಹೆಚ್ಚು. ಆ ರೀತಿಯಲ್ಲಿ ಹಾಲು ಖರೀದಿಸುವವರಿಗೆ ನಿತ್ಯವೂ ಲೀಟರ್ ಹಾಲಿಗೆ ಎರಡು ರೂಪಾಯಿ ಕತ್ತರಿ ಬೀಳುತ್ತದೆ. ಇದಕ್ಕೆ, ಹಾಲಿನ ಅವೈಜ್ಞಾನಿಕ ದರ ಪರಿಷ್ಕರಣೆಯೇ ಕಾರಣವೆಂದು ಹಲವರು ದೂರುತ್ತಿದ್ದಾರೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಪರಿಷ್ಕರಣೆ ಮಾಡಿದೆ. ಅದರಂತೆ, ‘ಶುಭಂ’ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಲಾಗಿದ್ದು, 45 ರೂ. ಇದ್ದ ಬೆಲೆಯು 48 ರೂ. ಆಗಿದೆ. ಆದರೆ, ಅರ್ಧ ಲೀಟರ್ ಹಾಕಿಗೆ 25 ರೂ. ನಿಗದಿ ಮಾಡಲಾಗಿದೆ. ಅಂದರೆ, ಅರ್ಧ ಲೀಟರ್‌ನ ಎರಡು ಪ್ಯಾಕೇಟ್ ಹಾಲನ್ನು ಖರೀದಿಸಿದರೆ, ಲೀಟರ್ ಹಾಲಿಗೆ 50 ರೂ. ಭರಿಸಬೇಕಾಗುತ್ತದೆ. ಇದರಿಂದ 2 ರೂ.ಗಳನ್ನು ಹೆಚ್ಚುವರಿಯಾಗಿ ಗ್ರಾಹಕರು ವ್ಯಯಿಸಬೇಕಾಗುತ್ತದೆ. ಅರ್ಧ ಲೀಟರ್ ಹಾಲಿಗೆ 24 ರೂ. ನಿಗದಿ ಮಾಡಬೇಕಿತ್ತು. ಆದರೆ, 1 ರೂ. ಹೆಚ್ಚಾಗಿ ನಿಗದಿ ಮಾಡಲಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.
‘ಟೋನ್’ ಹಾಲಿನ ಕತೆಯೂ ಅದೇ ಹಾಕಿದ್ದು, ಪ್ರತಿ ಲೀಟರ್ ಹಾಲಿನ ಬೆಲೆಯನ್ನು 39 ರೂ.ನಿಂದ 42 ರೂ.ಗೆ ಏರಿಸಲಾಗಿದೆ. ಆದರೆ, ಅರ್ಧ ಲೀಟರ್ ಹಾಲಿಗೆ 21 ರೂ. ಬದಲಾಗಿ, 22 ರೂ. ನಿಗದಿ ಮಾಡಲಾಗಿದೆ. ಇದರಿಂದ ಅರ್ಧ ಲೀಟರ್‌ನ ಎರಡು ಪ್ಯಾಕೆಟ್‌ಗಳನ್ನು ಖರೀದಿಸುವವರು 2 ರೂ. ಹೆಚ್ಚುವರಿ ಮತ್ತವನ್ನು ಭರಿಸಬೇಕಾಗುತ್ತದೆ.
ಹಾಲಿನ ದರ ಪರಿಷ್ಕರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಂಎಫ್ ಅಧಿಕಾರಿಗಳು, “ಪ್ರತಿ ಲೀಟರ್‌ಗೆ 3 ರೂ. ಏರಿಕೆ ಮಾಡಲಾಗಿದೆ. ಅದರಂತೆ ಅರ್ಧ ಲೀಟರ್‌ಗೆ 1.50 ರೂ. ಏರಿಸಬೇಕಿತ್ತು. ಅಂದರೆ, ಶುಭಂ ಹಾಲಿಗೆ ಅರ್ಧ ಲೀಟರ್‌ಗೆ 23 ರೂ.ನಿಂದ 24.50 ರೂಗೆ, ಅರ್ಧ ಲೀಟರ್ ಟೋನ್ಡ್ ಹಾಲಿಗೆ 20ರಿಂದ 21.50 ರೂ.ಗೆ ಏರಿಸಬೇಕಿತ್ತು. ಆದರೆ, ಚಿಲ್ಲರೆ ಸಮಸ್ಯೆಯಿಂದಾಗಿ ಕ್ರಮವಾಗಿ 25 ರೂ. ಮತ್ತು 22 ರೂ. ನಿಗದಿ ಮಾಡಲಾಗಿದೆ. ಹೆಚ್ಚುವರಿ ಮೊತ್ತವನ್ನು ಸರಿದೂಗಿಸಲು ಅರ್ಧ ಲೀಟರ್ ಹಾಲಿನ ಜೊತೆಗೆ 10 ಎಂಎಲ್ ಹೆಚ್ಚು ಹಾಲನ್ನು ಸೇರಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಕೆಎಂಎಫ್‌ನ ಈ ಸಮರ್ಥನೆ ನ್ಯಾಯಸಮ್ಮತವಾಗಿಲ್ಲವೆಂದು ಗ್ರಾಹಕರು ಕಿಡಿಕಾರಿದ್ದಾರೆ.