- ಸುದ್ದಿ ಬಿತ್ತರಿಸುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ
- ಆರೋಪಿ ತಂಡದ ಬಲೆಗೆ ಬಿದ್ದ 10ಕ್ಕೂ ಹೆಚ್ಚು ಬಲಿಪಶುಗಳು
ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಆನಂದ್ ಅಲಿಯಾಸ್ ಫಿಗರ್, ಆತ್ಮಾನಂದ ಅಲಿಯಾಸ್ ಕೃಷ್ಣೇಗೌಡ, ಶ್ರೀನಿವಾಸ ಅಲಿಯಾಸ್ ರೇಷ್ಮೆನಾಡು ಶ್ರೀನಿವಾಸ ಹಾಗೂ ಕೇಶವಮೂರ್ತಿ ಬಂಧಿತರು.
ಈ ಬಂಧಿತರು ಕಳೆದ ನಾಲ್ಕು ವರ್ಷಗಳಿಂದ ‘ಎಕೆ ನ್ಯೂಸ್’ ಎಂಬ ಕನ್ನಡ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಚಾನೆಲ್ ಜನಪ್ರಿಯವಾಗುತ್ತಿದ್ದಂತೆ, ಪರವಾನಗಿ ರಹಿತರು ಹಾಗೂ ಅಕ್ರಮ ಮಾರಾಟಗಾರರನ್ನು ಗುರಿಯಾಗಿಸಿಕೊಂಡು, ಅವರ ವಿರುದ್ದ ಸುದ್ದಿ ಬಿತ್ತರಿಸುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದರು. ಪೊಲೀಸರ ಕ್ರಮಕ್ಕೆ ಹೆದರಿ ಹಲವು ಅಂಗಡಿ ಮಾಲೀಕರು ಈ ಆರೋಪಿ ತಂಡಕ್ಕೆ ಭಾರಿ ಮೊತ್ತದ ಹಣ ನೀಡಿದ್ದಾರೆ.
ಸಿಸಿಬಿ ಈ ಆರೋಪಿ ತಂಡದ ಚಟುವಟಿಕೆ ಮೇಲೆ ನಿಗಾ ಇರಿಸಿದೆ. ಆದರೆ, ಯಾವುದೇ ಸಂತ್ರಸ್ತರು ದೂರು ನೀಡಲು ಮುಂದೆ ಬಂದಿಲ್ಲ. ಕೆ.ಆರ್.ಪುರದಲ್ಲಿ ಮಾಂಸದ ಅಂಗಡಿ ನಡೆಸುತ್ತಿರುವ ಸಾದಿಕ್ ಖಾನ್ ದೂರು ನೀಡಲು ಮುಂದಾಗಿದ್ದು, ಆರೋಪಿ ತಂಡದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಸೂಚಿಸಿದೆ.
“ಈ ಆರೋಪಿ ತಂಡದ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇದೆ. ಆದರೆ, ಯಾವುದೇ ದೂರುಗಳು ದಾಖಲಾಗಿಲ್ಲ. ದೂರು ದಾಖಲಿಸಲು ಸಂತ್ರಸ್ತರನ್ನು ಸಂಪರ್ಕಿಸಿದರೂ, ಹಲವಾರು ಸಂತ್ರಸ್ತರು ದೂರು ನೀಡಲು ನಿರಾಕರಿಸಿದರು. 10ಕ್ಕೂ ಹೆಚ್ಚು ಬಲಿಪಶುಗಳು ಈ ಆರೋಪಿ ತಂಡ ಬೀಸಿದ ಬಲೆಗೆ ಬಿದ್ದಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಳ್ಳತನಕ್ಕೆ ಸಂಚು ರೂಪಿಸಿದ್ದ ನೋಕಿಯಾ ಮಾಜಿ ಎಂಜಿನಿಯರ್ ಬಂಧನ
“ಎಸ್ಪಿ ರಸ್ತೆಯಲ್ಲಿರುವ ಅನೇಕ ಅಂಗಡಿಗಳ ಮಾಲೀಕರು ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಣ ಸುಲಿಗೆ ಮಾಡಿದ್ದಾರೆ. ಈ ಸಂತ್ರಸ್ತರು ಕೂಡ ಪೊಲೀಸ್ ಠಾಣೆಗೆ ದೂರು ನೀಡಲು ನಿರಾಕರಿಸಿದ್ದಾರೆ. ಆರೋಪಿಗಳಿಂದ ಒಂದು ಕಾರು, ಮೊಬೈಲ್ ಫೋನ್ಗಳು ಮತ್ತು 13,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ” ಎಂದರು.