- ಅನಧಿಕೃತವಾಗಿ ಹಾಕಲಾಗುತ್ತಿರುವ ಫ್ಲೆಕ್ಸ್ ಬ್ಯಾನರ್ ತಡೆಗೆ ಕ್ರಮ ಕೈಗೊಳ್ಳದ ಬಿಬಿಎಂಪಿ
- ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಂಡರೂ ತಲಾ 50 ಸಾವಿರ ದಂಡ ವಿಧಿಸಲು ಸೂಚನೆ
ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೆ? ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ? …ಹೀಗಂತ ಸರ್ಕಾರವನ್ನು ಪ್ರಶ್ನಿಸಿದ್ದು ಹೈಕೋರ್ಟ್.
ಬೆಂಗಳೂರಿನಲ್ಲಿ ಅನಧಿಕೃತವಾಗಿ ಹಾಕಲಾಗುತ್ತಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಗಳ ತಡೆಗೆ ಬಿಬಿಎಂಪಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
‘ಚುನಾವಣೆ ವೇಳೆ 60 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿದೆ. ಆದರೆ ಕೇವಲ 134 ದೂರು ಪರಿಗಣಿಸಿ, 40 ಎಫ್‌ಐಆರ್ ದಾಖಲಿಸಲಾಗಿದೆ. ಫ್ಲೆಕ್ಸ್ ಅಳವಡಿಸಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಮೇಲೆ ಕ್ರಮ ಏಕಿಲ್ಲ’ ಎಂದು ಹೈಕೋರ್ಟ್ ದ್ವಿಸದಸ್ಯ ಪೀಠ ಪ್ರಶ್ನಿಸಿದೆ.
‘ಬೆಂಗಳೂರು ಸುಂದರವಾಗಿ ಕಾಣಬೇಕು ಎಂಬುವುದು ಸರ್ಕಾರಕ್ಕೆ ಬೇಕಿಲ್ಲವೆ? ನಗರದ ತುಂಬೆಲ್ಲಾ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ಇರಬೇಕೆಂದು ಸರ್ಕಾರದ ಅಪೇಕ್ಷೆಯೇ? ಬ್ರ್ಯಾಂಡ್ ಬೆಂಗಳೂರಿಗೆ ಫ್ಲೆಕ್ಸ್, ಬ್ಯಾನರ್ಗಳಿಂದ ಕಳಂಕ ಅಂಟುತ್ತಿದೆ. ನಗರದ ತುಂಬೆಲ್ಲಾ ಫ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಲೇ ಇವೆ. ಬೆಂಗಳೂರನ್ನು ಅದರಷ್ಟಕ್ಕೇ ಬಿಡಲಾಗಿದೆ. ಇದು ಅಚ್ಚರಿ, ಆಘಾತಕಾರಿ ಹಾಗೂ ಆತ್ಮಸಾಕ್ಷಿ ಕಲಕುವಂತಹದ್ದಾಗಿದೆ. ಬಿಬಿಎಂಪಿ ಅಸಹಾಯಕತೆಯಿಂದ ಕೈ ಎತ್ತಿದೆ. ನೀವೇನು ಕ್ರಮ ಕೈಗೊಂಡಿದ್ದೀರಿ’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್, ಇನ್ನು ಮುಂದೆ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಂಡರೂ ತಲಾ 50 ಸಾವಿರ ದಂಡ ವಿಧಿಸಿ ಎಂದು ಸೂಚನೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಆರ್‌ಪಿಎಫ್ ಕಾನ್‌ಸ್ಟೆಬಲ್‌ನಿಂದ ಹತ್ಯೆಗೊಳಗಾದ ನಾಲ್ವರಲ್ಲಿ ಓರ್ವ ಬೀದರ್‌ನವರು
‘ರಾಜ್ಯ ಸರ್ಕಾರ ತಲಾ 50 ಸಾವಿರ ಠೇವಣಿ ಇಡಬೇಕು. ಅನಧಿಕೃತ ಜಾಹೀರಾತು ಫಲಕ ಅಳವಡಿಸಲು ಅವಕಾಶ ನೀಡುವ ಕಟ್ಟಡಗಳ ಮಾಲೀಕರಿಗೂ ನೋಟಿಸ್ ಕಳುಹಿಸಬೇಕು. ಫ್ಲೆಕ್ಸ್ ಮೂಲಕ ಶುಭಾಶಯ ಕೋರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಮೇಲಾಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ಆಡಳಿತದ ಹೊಣೆ ಹೊತ್ತವರು ಈ ಬಗ್ಗೆ ಗಮನಹರಿಸಬೇಕು. ಮೂರು ವಾರಗಳಲ್ಲಿ ಕ್ರಮ ಕೈಗೊಂಡ ವರದಿ ಸಲ್ಲಿಕೆ ಮಾಡಬೇಕೆಂದು ಹೈಕೋರ್ಟ್ ಖಡಕ್ ನಿರ್ದೇಶನ ನೀಡಿದೆ.
ಮಾಯಿಗೇ ಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.