ಸುಮಾರು ಮೂರು ವರ್ಷಗಳ ಹಿಂದೆ ಕಾಗೆ ಹೊತ್ತೊಯ್ದಿದ್ದ ಚಿನ್ನದ ಬಳೆ ಈಗ ಮತ್ತೆ ಒಡತಿ ಕೈ ಸೇರಿದೆ ಘಟನೆ ಕೇರಳದ ಮಲಪ್ಪುರಂನ ತ್ರಿಕ್ಕಲಗೊಂಡ್‌ನಲ್ಲಿ ನಡೆದಿದೆ. ಕಾಗೆ ಹೊತ್ತೊಯ್ದ ಬಳೆ ಸಿಗಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಕುಟುಂಬಕ್ಕೆ ಆಶ್ಚರ್ಯ ಉಂಟಾಗಿದೆ. ಅದೂ ಮೂರು ವರ್ಷಗಳ ಬಳಿಕ!
ರುಕ್ಮಿಣಿ ಎಂಬವರು ಮೂರು ವರ್ಷಗಳ ಹಿಂದೆ ಕೆಲಸ ಮಾಡುತ್ತಿರುವಾಗ ಒಂದೂವರೆ ಪವನ್ ಅಂದರೆ ಸುಮಾರು 12 ಗ್ರಾಂ ಚಿನ್ನದ ಬಳೆಯನ್ನು ತೆಗೆದು ಬದಿಗಿಟ್ಟು ಕೆಲಸ ಮಾಡುತ್ತಿದ್ದರು. ಆದರೆ ದಿಢೀರ್ ಆಗಿ ಬಂದ ಕಾಗೆ ಬಳೆಯನ್ನು ಹೊತ್ತು ಹಾರಿತ್ತು. ಕೆಲವು ದಿನಗಳ ಕಾಲ ಬಳೆಯ ಹುಡುಕಾಟ ನಡೆಸಿದ್ದ ರುಕ್ಮಿಣಿ ಕುಟುಂಬ ಇನ್ನು ಬಳೆ ನಮಗೆ ಸಿಗದು ಎಂದು ಕೈಚೆಲ್ಲಿತ್ತು.
ಇದನ್ನು ಓದಿದ್ದೀರಾ? ಚೀನಾ | ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ‘ಡ್ರೋನ್’ – ವಿಡಿಯೋ ವೈರಲ್
ಆದರೆ ಅದೇ ಚಿನ್ನದ ಬಳೆ ರುಕ್ಮಿಣಿ ಮನೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಅನ್ವರ್ ಸಾದತ್ ಎಂಬವರ ಮನೆಯ ಹಿತ್ತಲ ಮಾವಿನ ಮರದಲ್ಲಿದ್ದ ಕಾಗೆ ಗೂಡಿನಲ್ಲಿ ಸಿಕ್ಕಿದೆ. ಮಾವಿನ ಹಣ್ಣನ್ನು ಕೊಯ್ಯಲೆಂದು ಮರವನ್ನು ಕುಲುಕಿಸಿದಾಗ ಚಿನ್ನ ಕೆಳಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.
ತಮಗೆ ಸಿಕ್ಕ ಈ ಚಿನ್ನವನ್ನು ಇಟ್ಟುಕೊಳ್ಳದೆ ಪ್ರಾಮಾಣಿಕತೆ ಮೆರೆದ ಅನ್ವರ್ ಸಾದತ್ ಕುಟುಂಬ ತ್ರಿಕ್ಕಲಂಗೋಡ್ ಸಾರ್ವಜನಿಕ ಗ್ರಂಥಾಲಯಕ್ಕೆ ನೀಡಿದ್ದಾರೆ. ಇದರ ಜಾಹೀರಾತು ನೋಡಿದ ರುಕ್ಮಿಣಿ ಪತಿಯೊಂದಿಗೆ ಗ್ರಂಥಾಲಯಕ್ಕೆ ಹೋಗಿ ಬಳೆ ತನ್ನದೇ ಎಂದು ಖಚಿತಪಡಿಸಿಕೊಂಡಿದ್ದಾರೆ.

ಹಾಗೆಯೇ ಈ ಚಿನ್ನ ಪತ್ತೆಹಚ್ಚಿದವರ ಕೈಯಿಂದಲೇ ಪಡೆಯಬೇಕು ಎಂದು ಮನವಿ ಮೇರೆಗೆ ಊರಿನವರು ಅನ್ವರ್ ಸಾದತ್ ಕೈಯಿಂದಲೇ ರುಕ್ಮಿಣಿ ಅವರಿಗೆ ಬಳೆಯನ್ನು ಕೊಡಿಸಿದ್ದಾರೆ. ಬಳೆ ತುಂಡಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ರುಕ್ಮಿಣಿ, “ಈ ಬಳೆ ಮತ್ತೆ ನನಗೆ ಸಿಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಇದು ಸಿನಿಮಾದಂತೆ ಸಂಭವಿಸಿದೆ” ಎಂದು ಹೇಳಿಕೊಂಡಿದ್ದಾರೆ.
