- ಆಗಸ್ಟ್ 2ರಂದು ರಾತ್ರಿ ನಡೆದ ಘಟನೆ
- ಇಬ್ಬರಿಗೆ ತೀವ್ರ ಗಾಯ ಆಸ್ಪತ್ರೆಗೆ ದಾಖಲು
ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ನೀರಿನ ಟ್ಯಾಂಕ್ ಕುಸಿದು ಬಿದ್ದು ಫಾಸ್ಟ್‌ಪುಡ್ ಅಂಗಡಿ ಮಾಲೀಕ ಹಾಗೂ ಓರ್ವ ಗ್ರಾಹಕ ಸಾವನ್ನಪ್ಪಿರುವ ಘಟನೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಆಗಸ್ಟ್ 2ರಂದು ರಾತ್ರಿ ನಡೆದಿದೆ. ಫಾಸ್ಟ್ ಫುಡ್ ಅಂಗಡಿ ಮಾಲೀಕ ಅರುಳ್ (40) ಹಾಗೂ ಗ್ರಾಹಕ ಸಾವನ್ನಪ್ಪಿದ್ದು, ಇತನ ಗುರುತು ಇನ್ನೂ ಪತ್ತೆಯಾಗಿಲ್ಲ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ನೀರಿನ ಟ್ಯಾಂಕ್ ಇತ್ತು. ಆ ಟ್ಯಾಂಕ್‌ನ ಕೆಳಗಡೆ ತಳ್ಳುವ ಗಾಡಿಯಲ್ಲಿ ಫಾಸ್ಟ್‌ಪುಡ್ ಅಂಗಡಿ ಇತ್ತು. ನೀರು ತುಂಬಿದ ಟ್ಯಾಂಕರ್‌ನಿಂದ ಗೋಡೆ ದುರ್ಬಲಗೊಂಡಿದೆ. ಈ ವೇಳೆ, ಗೋಡೆಯ ಜತೆಗೆ ನೀರು ತುಂಬಿದ ಟ್ಯಾಂಕರ್ ಕೂಡ ಕುಸಿದು ನೆಲಕ್ಕೆ ಬಿದ್ದಿದೆ.
ನೀರಿನ ಟ್ಯಾಂಕ್ ಹಾಗೂ ಗೋಡೆ ಫಾಸ್ಟ್‌ಪುಡ್ ಅಂಗಡಿಯ ಮೇಲೆ ಬಿದ್ದಿದೆ. ಈ ಸಮಯದಲ್ಲಿ ಅಂಗಡಿಯ ಮಾಲೀಕ ಹಾಗೂ ಮತ್ತೋರ್ವ ಗ್ರಾಹಕ ಅಂಗಡಿಯಲ್ಲಿ ಇದ್ದರು.
ಟ್ಯಾಂಕ್ ಜೊತೆಗೆ ಗೋಡೆಯೂ ನೆಲಕ್ಕೆ ಕುಸಿದ ಪರಿಣಾಮ ಅಂಗಡಿ ಮಾಲೀಕ ಹಾಗೂ ಒಬ್ಬ ಗ್ರಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿವಿ ಪುರಂನ ‘ತಿಂಡಿ ಬೀದಿ’ ರಸ್ತೆ ಅಭಿವೃದ್ಧಿ
ಈ ವೇಳೆ ಮಾತನಾಡಿದ ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್, “ಶಿವಾಜಿನಗರ ಬಸ್ ನಿಲ್ದಾಣದ ಬಳಿ ಇರುವ ಕಟ್ಟಡದಿಂದ ಟ್ಯಾಂಕರ್ ಜತೆಗೆ ಗೋಡೆಯು ಕುಸಿದು ಬಿದ್ದಿದೆ. ಇದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ 10:30 ಗಂಟೆಗೆ ಈ ಘಟನೆ ನಡೆದಿದೆ” ಎಂದು ತಿಳಿಸಿದರು.
“ಘಟನೆಯಲ್ಲಿ ಕಮಲ್ ಎಂಬಾತನಿಗೆ ತೀವ್ರ ಗಾಯಗಳಾಗಿವೆ. ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕಟ್ಟಡದ ಮೇಲಿನ ಟ್ಯಾಂಕ್ ಇಟ್ಟಿರುವ ಜಾಗ ಅವೈಜ್ಞಾನಿಕತೆಯಿಂದ ನಿರ್ಮಾಣವಾಗಿದೆ ಎಂದು ಶಂಕಿಸಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.