ರಾಜ್ಯಸಭೆಯಲ್ಲಿ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ ಅಂಗೀಕಾರ

Date:

ರಾಷ್ಟ್ರೀಯ ಭದ್ರತಾ ಯೋಜನೆಗಳು, ಲೋಕೋಪಯೋಗಿ ಯೋಜನೆಗಳು ಹಾಗೂ ದೇಶದ ಗಡಿಯ 100 ಕಿಲೋಮೀಟರ್ ವ್ಯಾಪ್ತಿಯನ್ನು ಅರಣ್ಯ ಭೂಮಿಗೆ ವಿನಾಯಿತಿ ನೀಡುವ ‘ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ’ಯನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿದೆ.

ಮಸೂದೆಯು ದೇಶದ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯತಂತ್ರದ ಯೋಜನೆಗಳಿಗೆ ಅಥವಾ ಭದ್ರತೆ ಮತ್ತು ರಕ್ಷಣಾ ಯೋಜನೆಗಳಿಗಾಗಿ 5-10 ಹೆಕ್ಟೇರ್‌ವರೆಗಿನ ಅರಣ್ಯ ಭೂಮಿಗೆ ಕಾಯಿದೆಯ ಷರತ್ತುಗಳಿಂದ ವಿನಾಯಿತಿ ನೀಡುತ್ತದೆ. ಅರೆಸೇನಾ ಪಡೆಗಳಿಗೆ ಶಿಬಿರಗಳನ್ನು ತೆರೆಯಲು ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಅವಕಾಶ ನಿಡುತ್ತದೆ.

ಈ ಮಸೂದೆಯನ್ನು ಜುಲೈ 26 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಬುಧವಾರ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಇದಕ್ಕೂ ಮುನ್ನ ಮಣಿಪುರ ಹಿಂಸಾಚಾರದ ಕುರಿತು ಪ್ರಸ್ತಾಪಿಸಿದ ವಿಪಕ್ಷಗಳು ಸಭಾತ್ಯಾಗ ಮಾಡಿ ಹೊರನಡೆಸಿದ್ದವು. ವಿಪಕ್ಷಗಳಿಲ್ಲದೆಯೇ ಮಸೂದೆಯನ್ನು ಮಂಡಿಸಿ, ಸರ್ಕಾರ ಅಂಗೀಕರಿಸಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜ್ಯಸಭೆಯಲ್ಲಿ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆಯನ್ನು ಮಂಡಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್, “1950 ಮತ್ತು 1980ರ ನಡುವೆ ಕಾಂಗ್ರೆಸ್ ನೇತೃತ್ವದ ಸರ್ಕಾರವು ದೇಶದಲ್ಲಿ ಸುಮಾರು 4.5 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬಳಸಿಕೊಂಡಿದೆ” ಎಂದು ಹೇಳಿದರು.

“ಅರಣ್ಯ ಭೂಮಿಯನ್ನು ಕಾಯ್ದಿರಿಸುವಿಕೆ ಮತ್ತು ಇತರ ಉದ್ದೇಶಗಳಿಗಾಗಿ ಅರಣ್ಯ ಭೂಮಿಯನ್ನು ಬಳಸಲು ಮತ್ತು ಅರಣ್ಯ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲು ರಾಜ್ಯಗಳು ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯುವ ಅಗತ್ಯವಿದೆ. ಅದನ್ನು ಈ ಮಸೂದೆಯು ಪ್ರಸ್ತಾಪಿಸಿದೆ” ಎಂದು ಅವರು ಹೇಳಿದ್ದಾರೆ.

“ಪ್ರಮುಖ ಹೆದ್ದಾರಿಗಳು, ಇತರ ಸಾರ್ವಜನಿಕ ಉಪಯುಕ್ತತೆಗಳು, ರೈಲ್ವೆ ಮಾರ್ಗಗಳು ಹಾಗೂ ವಸತಿಗಳಿಗಾಗಿ ಅರಣ್ಯ ಪ್ರವೇಶವನ್ನು ಒದಗಿಸುವುದು ಅಗತ್ಯವಿದೆ. ಅದಕ್ಕಾಗಿ, ಕಾನೂನಿನಲ್ಲಿರುವ ತೊಡಕುಗಳನ್ನು ನಿವಾರಿಸಲು ಅಗತ್ಯ ಮಾರ್ಪಾಡುಗಳನ್ನು ಮಸೂದೆ ಒಳಗೊಂಡಿದೆ” ಎಂದು ಅವರು ವಾದಿಸಿದ್ದಾರೆ.

1980ರ ಅರಣ್ಯ (ಸಂರಕ್ಷಣೆ) ಕಾಯಿದೆಯು ದೇಶದಲ್ಲಿ ಅರಣ್ಯಗಳ ಸಂರಕ್ಷಣೆಗೆ ಒಂದು ನಿರ್ಣಾಯಕ ಶಾಸನವಾಗಿದೆ. ಕಾಯ್ದಿರಿಸಿದ ಅರಣ್ಯಗಳನ್ನು ರಕ್ಷಿಸುವುದು, ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬಳಸಲು ಆಥವಾ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವುದು ಮತ್ತು ಮರು ಅರಣ್ಯೀಕರಣಕ್ಕಾಗಿ ನೈಸರ್ಗಿಕವಾಗಿ ಬೆಳೆದ ಮರಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯವಿದೆ ಎಂದು 1980ರ ಕಾಯ್ದೆ ಹೇಳುತ್ತಿದೆ.

ಮಸೂದೆಯಲ್ಲಿನ ತಿದ್ದುಪಡಿಗಳು ಏನು ಹೇಳುತ್ತವೆ?

ಅರಣ್ಯಗಳನ್ನು ಸಂರಕ್ಷಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುವ ‘ಮುನ್ನುಡಿ’ಯನ್ನು ಸೇರಿಸಲಾಗುತ್ತದೆ. ಜೀವವೈವಿಧ್ಯ ಮತ್ತು ಹವಾಮಾನ ಬದಲಾವಣೆಯಿಂದ ಪರಿಸರ ಸವಾಲುಗಳನ್ನು ಎದುರಿಸುವ ಉದ್ದೇಶವಿರುತ್ತದೆ ಎಂಬುದು ಸರ್ಕಾರದ ಹೇಳಿದೆ.

ಆದರೆ, ವಾಸ್ತವವಾಗಿ, ತಿದ್ದುಪಡಿಗಳು ಅರಣ್ಯ ಸಂರಕ್ಷಣೆಯಲ್ಲಿನ ಬಿಗಿ ನಿಯಮಗಳನ್ನು ಸಡಿಲಗೊಳಿಸುತ್ತವೆ. ದೇಶದ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯತಂತ್ರದ ಯೋಜನೆಗಳಿಗೆ ಅಥವಾ ಭದ್ರತೆ ಮತ್ತು ರಕ್ಷಣಾ ಯೋಜನೆಗಳಿಗಾಗಿ 5-10 ಹೆಕ್ಟೇರ್‌ವರೆಗಿನ ಅರಣ್ಯ ಭೂಮಿಗೆ ಸಹ ಕಾಯಿದೆಯ ಷರತ್ತುಗಳಿಂದ ವಿನಾಯಿತಿ ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಗಡಿಗಳಿಂದ 100 ಕಿ.ಮೀ ಸುತ್ತಳತೆಯ ಅರಣ್ಯ ಭೂಮಿಗೆ ಈ ಅಂಶ ಅನ್ವಯಿಸುತ್ತದೆ ಎಂಬುದು ಸಚಿವಾಲಯದ ವಾದ.

ಆದರೆ, ಖಾಸಗಿ ತೋಟಗಳು ಅಥವಾ ಅಧಿಕೃತವಾಗಿ ಅರಣ್ಯ ಎಂದು ಗುರುತಿಸದಿರುವ ಪ್ರದೇಶವನ್ನು ಮರು ಅರಣ್ಯೀಕರಣಗೊಳಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವಕಾಶ ನೀಡುತ್ತದೆ. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ 2030ರ ವೇಳೆಗೆ 300 ಕೋಟಿ ಟನ್‌ಗಳ ‘ಕಾರ್ಬನ್ ಸಿಂಕ್’ ಅನ್ನು ಅಭಿವೃದ್ಧಿಪಡಿಸುವ ಸರ್ಕಾರದ ಯೋಜನೆಗಳಿಗೆ ಪ್ರಸ್ತುತ ಕಾಯ್ದೆಯು ‘ಅಡಚಣೆ’ಯಾಗಿದೆ. ಈ ‘ಅಡಚಣೆ’ಯನ್ನು ‘ನಿವಾರಿಸಿಕೊಳ್ಳುವ’ ಸಲುವಾಗಿ ಹಾಲಿ ತಿದ್ದುಪಡಿಗಳನ್ನು ತರಲಾಗುತ್ತಿದೆ ಎಂಬ ಟೀಕೆ ಇದೆ.

ಮತ್ತೊಂದೆಡೆ, ರಾಜ್ಯಗಳು ಗಣಿಗಾರಿಕೆ ಕಾರ್ಯಾಚರಣೆಗಳಿಗಾಗಿ ಕಂಪನಿಗಳಿಗೆ ತೋಟಗಳಿಗೆ ಮೀಸಲಾದ ಅರಣ್ಯ ಪ್ರದೇಶಗಳನ್ನು ಹಂಚುತ್ತಿವೆ – ಇದು ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ, ಅರಣ್ಯಗಳನ್ನು ಕೈಗಾರಿಕಾ ಬಳಕೆಗಳಿಗೆ ಬಳಸಿಕೊಳ್ಳುವ ಮತ್ತು ಮರು ಅರಣ್ಯೀಕರಣಕ್ಕೆ ಸಹಾಯ ಮಾಡುವ ಕಾಯಿದೆಯ ಮೂಲ ಉದ್ದೇಶವನ್ನು ಮೀರಿ ಹೊಸ ಪರಿಹಾರಗಳನ್ನು ರೂಪಿಸಲು ತಿದ್ದುಪಡಿಗಳು ಅಗತ್ಯವಾಗಿವೆ ಎಂದು ಹೇಳಿಕೊಂಡಿದೆ.

ತಿದ್ದುಪಡಿಗಳಿಗೆ ಆಕ್ಷೇಪಣೆಗಳೇನು?

ಜೆಪಿಸಿ 31 ಸದಸ್ಯರನ್ನು ಒಳಗೊಂಡಿದೆ. ಅವರಲ್ಲಿ 18 ಮಂದಿ ಬಿಜೆಪಿಯವರು. ಸಾಮಾನ್ಯವಾಗಿ ಸಂಸತ್ತಿನ ಸ್ಥಾಯಿ ಸಮಿತಿ ಅಥವಾ ಆಯ್ಕೆ ಸಮಿತಿಗಳಿಗೆ ಕಳುಹಿಸಲಾದ ಮಸೂದೆಗಳನ್ನು ಈ ಸದಸ್ಯರು ಸಂಪೂರ್ಣವಾಗಿ ತನಿಖೆ ಮಾಡುತ್ತಾರೆ. ಅವರು ತಮ್ಮ ವರದಿಯಲ್ಲಿ ಹಲವು ದೃಷ್ಟಿಕೋನಗಳ ಕುರಿತು ಸ್ವತಂತ್ರ ಮೌಲ್ಯಮಾಪನ ಮಾಡುತ್ತಾರೆ. ಆದರೆ, ಸಮಿತಿಯು ಇಂತಹ ಯಾವುದೇ ಸಾಮೂಹಿಕ, ಸ್ವತಂತ್ರ ಮೌಲ್ಯಮಾಪನವನ್ನು ಮಾಡಿಲ್ಲವೆಂಬುದು ತಿಳಿದುಬಂದಿದೆ. ಕಾಂಗ್ರೆಸ್, ಟಿಎಂಸಿ ಹಾಗೂ ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳಿಂದ ಪ್ರಾಸಂಗಿಕವಾಗಿ ಆರು ಸದಸ್ಯರು ಅಸಮ್ಮತಿ ಸೂಚಿಸಿದ್ದಾರೆ. ಅಲ್ಲದೆ, ತಿದ್ದುಪಡಿ ಪ್ರಸ್ತಾವಗಳು 2022ರ ಜೂನ್‌ನಿಂದ ಸಾರ್ವಜನಿಕ ವಲಯದಲ್ಲಿವೆ. ಎನ್‌ಜಿಒಗಳು, ಪರಿಸರವಾದಿಗಳು ಹಾಗೂ ಆದಿವಾಸಿ-ಬುಡಕಟ್ಟು ಸಮುದಾಯಗಳು ತಮ್ಮ ಆಕ್ಷೇಪಗಳನ್ನು ಕೂಡ ಸೂಚಿಸಿವೆ.

ಅಲ್ಲದೆ, ಅರಣ್ಯ ಭೂಮಿಯ ಗಮನಾರ್ಹ ಭಾಗಗಳನ್ನು ಮತ್ತು ಅನೇಕ ಜೀವವೈವಿಧ್ಯದ ‘ಹಾಟ್ ಸ್ಪಾಟ್‌’ಗಳನ್ನು ಮಾರಾಟ ಮಾಡಲು, ಇತರ ಉದ್ದೇಶಗಳಿಗೆ ಬಳಸಿಕೊಳ್ಳಲು ತಿದ್ದುಪಡಿಯು ಅವಕಾಶ ನೀಡುತ್ತದೆ. ಈ ಕಾರಣದಿಂದ ಪರಿಸರ ವಿರೋಧಿಯಾಗಿದೆ ಎಂದೂ ತಕರಾರು ಎತ್ತಲಾಗಿತ್ತು.

ತಿದ್ದುಪಡಿ ಪ್ರಸ್ತಾಪಗಳು ಹಿಮಾಲಯನ್, ಟ್ರಾನ್ಸ್-ಹಿಮಾಲಯನ್ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಗಮನಾರ್ಹ ಅರಣ್ಯಗಳಿಗೆ ಹಾನಿಕಾರಕ ಎಂಬ ಅಭಿಪ್ರಾಯ ಬಹುತೇಕ ಅಕ್ಷೇಪಗಳಲ್ಲಿ ವ್ಯಕ್ತವಾಗಿದೆ. ದುರ್ಬಲ ಪರಿಸರ ಮತ್ತು ಭೂವೈಜ್ಞಾನಿಕ ಸೂಕ್ಷ್ಮ ಪ್ರದೇಶಗಳ ಜೀವವೈವಿಧ್ಯತೆಗೆ ಅಪಾಯವನ್ನು ಒಡುತ್ತವೆ. ಹವಾಮಾನ ವೈಪರೀತ್ಯಗಳನ್ನು ಪ್ರಚೋದಿಸುತ್ತದೆ ಎಂದು ಆಕ್ಷೇಪಗಳು ಎತ್ತಿ ಹೇಳಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್‌ರನ್ನು ಕೆಳಗಿಳಿಸಿ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಜರಂಗದಳ ಒತ್ತಾಯ

ಬಜೆಟ್ ಅಧಿವೇಶನದ ವೇಳೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್,...

ಪುಲ್ವಾಮ ದುರಂತದ ಬಗ್ಗೆ ಸತ್ಯ ಹೇಳಿದ್ದಕ್ಕೆ ಸತ್ಯಪಾಲ್ ಮಲಿಕ್‌ ಮೇಲೆ ಸಿಬಿಐ ದಾಳಿ: ಸಿಎಂ ಸಿದ್ದರಾಮಯ್ಯ

ಮಾಜಿ ರಾಜ್ಯಪಾಲರು ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸತ್ಯಪಾಲ್ ಮಲಿಕ್...

ಕೃಷ್ಣಾ ನದಿ ಸೇತುವೆ ಕಾಮಗಾರಿ | ಅಂದಾಜು ವೆಚ್ಚ ₹60ರಿಂದ ₹99 ಕೋಟಿಗೆ ಏರಿಕೆ: ಡಿಕೆ ಶಿವಕುಮಾರ್

"ಜಮಖಂಡಿ ಮತ್ತು ಅಥಣಿ ನಡುವೆ ಕೃಷ್ಣಾ ನದಿಯ ಸೇತುವೆ ನಿರ್ಮಾಣದ ಯೋಜನೆಯ...