ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ

Date:

Advertisements
ನಾಸೀರುದ್ದೀನ್ ಷಾ ಬುದ್ಧಿಜೀವಿ ಚಿಂತಕನಂತೆ, ಪರಿಪೂರ್ಣ ಕಲಾವಿದನಂತೆ, ಮಾಗಿದ ಅನುಭವಿಯಂತೆ, ಆಮ್ ಆದ್ಮಿಯಂತೆ- ಎಲ್ಲವೂ. ಈ ಸಂವೇದನಾಶೀಲ ನಟನಿಗೆ ಇಂದು 75ರ ಜನ್ಮದಿನ.

‘ನಟರು ತಮಗೆ ತಾವೇ ಸ್ಟಾರ್‌ಗಳೆಂದು, ಜಗತ್ತಿನ ಜನರನ್ನು ಸೆಳೆಯಬಲ್ಲ ಸೂಜಿಗಲ್ಲುಗಳೆಂದು ಭ್ರಮಿಸಿರುತ್ತಾರೆ. ನಟ ಅಂದರೆ ಯಾರು- ನಾವು ನೀವು. ನಟನೆ ಎಂದರೆ ಏನು- ಇತರ ಕೆಲಸಗಳಂತೆಯೇ ಅದು ಒಂದು. ಶ್ರದ್ಧೆ, ಕುಶಲತೆ, ಮನಸ್ಸು ಇದ್ದರೆ ಯಾರು ಬೇಕಾದರೂ ನಟರಾಗಬಹುದು. ಹಾಡುಗಾರರಾಗಬಹುದು. ಎಂತಹ ದನಿಗೂ ರಾಗ ಜೋಡಿಸಬಹುದು…’

ಮಿಥ್ ಮುರಿಯುವ, ಭ್ರಮೆ ಬಿಡಿಸುವ, ಸಾಮಾನ್ಯರ ಮಟ್ಟಕ್ಕೆ ಸರಳೀಕರಿಸಿ ಚಿಂತನೆಗಚ್ಚುವ ಇಂತಹ ಮಾತುಗಳನ್ನು ಆಡಿದವರು ಭಾರತೀಯ ಚಿತ್ರರಂಗದ ಕಾಮನ್‌ಮ್ಯಾನ್- ನಾಸೀರುದ್ದೀನ್ ಷಾ.

ನಾಸೀರುದ್ದೀನ್ ಷಾ ಎಂದಾಕ್ಷಣ ನೆನಪಾಗುವುದು ಎಪ್ಪತ್ತರ ಜಮಾನ. ‘ಜಾನೆ ಭಿ ದೋ ಯಾರೋ’ ಚಿತ್ರ. ಧೃತರಾಷ್ಟ್ರ ಪಾತ್ರದಾರಿಯ ‘ಯೇ ಕ್ಯಾ ಹೋ ರಹಾ ಹೈ’ ಡೈಲಾಗ್. ಮಹಾಭಾರತದ ಪಾತ್ರಗಳನ್ನು ರಂಗದ ಮೇಲೆ ತರುವ, ಸದ್ಯದ ಸಂದಿಗ್ಧ ಸಂದರ್ಭವನ್ನು ಅದರೊಂದಿಗೆ ಬೆಸೆಯುವ ಆ ಹೊಸತನದ ಕತೆಯೇ ಅವತ್ತಿಗೆ ಕೇಂದ್ರಬಿಂದುವಾಗಿತ್ತು. ಜೊತೆಗೆ ಲವಲವಿಕೆಯ ನಿರೂಪಣೆ, ರಂಜನೀಯ ಸಂಭಾಷಣೆ, ಕಲಾವಿದರ ಲವಲವಿಕೆಯ ನಟನೆ… ಆರೋಗ್ಯಕರ ಮನರಂಜನೆಯ ವಿನೂತನ ಮಾದರಿಯನ್ನೇ ಹುಟ್ಟುಹಾಕಿತ್ತು. ಕುಂದನ್ ಷಾ ಅವರ ಈ ಚಿತ್ರ ಆ ಕಾಲಕ್ಕೆ ಹೊಸತನದಿಂದ ಕೂಡಿದ್ದು, ಎಲ್ಲರ ನಾಲಗೆಯ ಮೇಲೆ ನಲಿದಾಡುತ್ತಲಿತ್ತು. ಇದೇ ಸಾಲಿಗೆ ಸೇರುವ ಇಂತಹದ್ದೇ ಚಿತ್ರಗಳೆಂದರೆ ‘ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೂ ಆತಾ ಹೈ’, ‘ಮೋಹನ್ ಜೋಷಿ ಹಾಜಿರ್ ಹೂಂ’ ಹಾಗೂ ‘ಉಮ್ರಾವ್ ಜಾನ್’.

ಹಾಗೆಯೇ ಬುದ್ಧಿಜೀವಿಗಳ ವಲಯದಲ್ಲಿ, ರಂಗಭೂಮಿ ಕ್ಷೇತ್ರದಲ್ಲಿ, ಮೀಡಿಯಾ ಸರ್ಕಲ್ ನಲ್ಲಿ ಷಾ ಎಂದಾಕ್ಷಣ ನೆನಪಾಗುವುದು- ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್, ಓಂ ಪುರಿ, ಫರೂಕ್ ಶೇಕ್, ರತ್ನಾ ಪಾಠಕ್‌ರಂತಹ ವಿಭಿನ್ನ ಕಲಾವಿದರ ಗುಂಪು. ಹಾಗೂ ನಿಶಾಂತ್, ಮಂಥನ್, ಗೋದೂಳಿ, ಭೂಮಿಕ, ಆಕ್ರೋಶ್, ಮಂಡಿ, ಮಾಸೂಮ್, ಸ್ಪರ್ಶ್, ಇಜಾಝತ್, ಅರ್ಧ್ ಸತ್ಯಗಳಂತಹ ಕಲಾತ್ಮಕ ಚಿತ್ರಗಳು.

ಇದನ್ನು ಓದಿದ್ದೀರಾ?: ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ

ಕಲಾತ್ಮಕ-ಕಮರ್ಷಿಯಲ್ ಎರಡೂ ರೀತಿಯ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡ ನಾಸೀರುದ್ದೀನ್ ಷಾ ಜನಿಸಿದ್ದು ದೇಶ-ಭಾಷೆ-ಗಡಿಗಳನ್ನು ಮೀರಿದ ಕುಟುಂಬದಲ್ಲಿ. ಉತ್ತರಪ್ರದೇಶದ ಬಾರಬಂಕಿಯಲ್ಲಿ. ಆಫ್ಘನ್ ಮೂಲದ, ಪಾಕಿಸ್ತಾನದೊಂದಿಗೂ ಕರುಳುಬಳ್ಳಿ ಸಂಬಂಧವಿರುವ; ಆ ಕಾಲಕ್ಕೇ ಉನ್ನತ ವ್ಯಾಸಂಗ, ಹುದ್ದೆ, ಜನಪ್ರಿಯತೆ ಗಳಿಸಿದ; ರೈಟರ್, ಆಕ್ಟರ್, ಕ್ರಿಕೆಟರ್, ಲೆಫ್ಟಿನೆಂಟ್ ಜನರಲ್ ಗಳಂತಹ ಅತ್ಯುನ್ನತ ಸ್ಥಾನಗಳನ್ನು ಹೊಂದಿದ್ದ ಕುಟುಂಬದಲ್ಲಿ. ಜುಲೈ 20, 1950ರಲ್ಲಿ ಜನಿಸಿದ ನಾಸೀರುದ್ದೀನ್‌ಗೆ ಸಹಜವಾಗಿ ಅಜ್ಮೀರ್, ನೈನಿತಾಲ್, ಅಲಿಘರ್, ಡೆಲ್ಲಿಗಳಂತಹ ಪ್ರತಿಷ್ಠಿತ ನಗರಗಳಲ್ಲಿ ಅತ್ಯುತ್ತಮ ಶಿಕ್ಷಣವೇ ಸಿಕ್ಕಿತ್ತು. ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ ಕುಟುಂಬದಲ್ಲಿ ಹತ್ತು ಹಲವು ಕ್ಷೇತ್ರಗಳ ದಿಗ್ಗಜರೊಂದಿಗೆ ಬೆರೆತು ಬೆಳೆಯುವ ಜೊತೆ ಜೊತೆಗೇ ಶಾಲಾ ಕಾಲೇಜುಗಳಲ್ಲಿ ಸಿಕ್ಕ ಗುರುಗಳು ನಾಸೀರುದ್ದೀನ್ ಷಾರ ಬೌದ್ಧಿಕ ಜಗತ್ತನ್ನು ವಿಸ್ತರಿಸಿದರು. ಹಾಗೆಯೇ ದೇಶ, ಧರ್ಮ, ಭಾಷೆಗಳನ್ನು ಮೀರಿ ಯೋಚಿಸುವ ಚಿಂತನಾಕ್ರಮವನ್ನು ಕಲಿಸಿದರು.

Naseeruddin Shah reveals Along with Shoaib Mansoors Khuda Ke Liye Manthan is the most important film Ive ever done 2
ಗಿರೀಶ್ ಕಾರ್ನಾಡ್ ಮತ್ತು ಸ್ಮಿತಾ ಪಾಟೀಲ್‌ರೊಂದಿಗೆ ಷಾ

ಹಾಗಾಗಿಯೇ ನಾಸೀರುದ್ದೀನ್ ಷಾ ಎಂದರೆ ಕೇವಲ ಬಾಲಿವುಡ್ ನಟನಲ್ಲ; ದೇಶ, ಭಾಷೆ, ಧರ್ಮಗಳನ್ನು ಮೀರಿದ ಮನುಷ್ಯ. ಇದಕ್ಕೆ ಉದಾಹರಣೆಯಾಗಿ ನಾವು ಅವರ ಮಿರ್ಜಾ ಗಾಲಿಬ್, ಭಾರತ್ ಏಕ್ ಖೋಜ್, ಮಿರ್ಚ್ ಮಸಾಲಾ, ಎ ವೆಡ್ನೆಸ್ ಡೇ, ಮಕ್ಬೂಲ್, ಖುದಾ ಕೇ ಲಿಯೇ, ಪರ್ಜಾನಿಯಾ, ಫಿರಾಖ್; ಕನ್ನಡದ ಕಾಸರವಳ್ಳಿಯವರ ಮನೆ ಚಿತ್ರಗಳನ್ನು ನೋಡಬಹುದು. ನಿರ್ವಹಿಸಿದ ಪಾತ್ರಗಳನ್ನು ಅಧ್ಯಯನಕ್ಕೊಳಪಡಿಸಬಹುದು.

ಹಾಗೆಯೇ ದೇಶ ವಿಭಜನೆ, ಹಿಂದೂ-ಮುಸ್ಲಿಂ ಕೋಮು ಸಂಘರ್ಷ, ಮಾನವೀಯ ಸಂಬಂಧಗಳ ಸುತ್ತ ಬರೆದ ಇಸ್ಮತ್ ಚುಗ್ತಾಯ್ ಮತ್ತು ಸಾದತ್ ಹಸನ್ ಮಾಂಟೋರ ಅಪರೂಪದ ಬರಹಗಳನ್ನು ರಂಗರೂಪಕ್ಕಿಳಿಸಿ, ಮೂಲಭೂತವಾದದ ಬಗ್ಗೆ ಚಿಂತನೆಗಚ್ಚಿದ್ದನ್ನೂ ಗಮನಿಸಬಹುದು. ಮುಂದುವರೆದು, ಸ್ಯಾಮ್ಯುಯಲ್ ಬೆಕೆಟ್, ಆ್ಯಂಟನ್ ಚೆಕಾಫ್, ಬರ್ನಾರ್ಡ್ ಷಾರ ಕೃತಿಗಳನ್ನು ನಾಟಕಗಳನ್ನಾಗಿಸಿ ವಿಭಿನ್ನ ಪ್ರಯೋಗಗಳ ಮೂಲಕ ಯಶಸ್ವಿಯಾದದ್ದನ್ನೂ ನೋಡಬಹುದು.

ಹಿಂದಿ ಚಿತ್ರರಂಗದ ಸಾಂಪ್ರದಾಯಿಕ ಸುರಸುಂದರಾಂಗರ ನಡುವೆ, ಚಾಕಲೇಟ್ ಹೀರೋಗಳ ಹಿಂಡಿನಲ್ಲಿ ತಮ್ಮ ಸಾಧಾರಣ ಮೈ ಕಟ್ಟು, ಮುಖಾರವಿಂದದಿಂದಲೇ ಪ್ರೇಕ್ಷಕರ ಮನಗೆದ್ದವರು ಹಾಗೂ ಸೂಕ್ಷ್ಮ ಸಂವೇದನಾಶೀಲ ವ್ಯಕ್ತಿತ್ವದಿಂದ ಮನೆ ಮಾತಾದವರು ನಾಸೀರುದ್ದೀನ್ ಷಾ. ಬೆಳ್ಳಿತೆರೆಯಲ್ಲಿ ರಂಗಭೂಮಿಯ ಆಪ್ತತೆಯನ್ನು; ರಂಗಸಜ್ಜಿಕೆಯಲ್ಲಿ ಸಿನಿಮಾದ ರೋಚಕತೆಯನ್ನು ತರಬಲ್ಲ ಅಭಿಜಾತ ಕಲಾವಿದರೆಂದರೆ ಅದು ನಾಸೀರುದ್ದೀನ್ ಷಾ. ಈ ಅಸಾಧಾರಣ ನಟನ ಚಿತ್ರಗಳು-ಪಾತ್ರಗಳು ಹಿಂದಿಗಷ್ಟೇ ಸೀಮಿತವಾಗದೆ, ಪ್ರಾದೇಶಿಕ ಭಾಷೆಗಳ ಚಿತ್ರಪ್ರೇಮಿಗಳ ಮೆಚ್ಚುಗೆಗೂ ಪಾತ್ರವಾಗಿದ್ದು ಸಾಮಾನ್ಯ ಸಂಗತಿಯಲ್ಲ.

ಇಂತಹ ನಾಸೀರುದ್ದೀನ್ ಷಾ ಬರೀ ನಟನೆಗಷ್ಟೇ ಸೀಮಿತರಾದವರಲ್ಲ. ದೇಶಕ್ಕೆ, ಬಹುತ್ವಕ್ಕೆ, ಸಹಬಾಳ್ವೆಗೆ, ಸೌಹಾರ್ದಕ್ಕೆ ಕಂಟಕ ಎದುರಾದಾಗಲೆಲ್ಲ, ಯಾವ ಅಂಜಿಕೆಯೂ ಇಲ್ಲದೆ, ತಮ್ಮ ಅನಿಸಿಕೆಯನ್ನು ಹಂಚಿಕೊಂಡವರು. ಅಭಿಪ್ರಾಯ ರೂಪಿಸಿದವರು. ಟೀಕೆ ಮತ್ತು ಪ್ರಶ್ನೆಗಳನ್ನು ಕೂಡ ಅಷ್ಟೇ ಮುಕ್ತವಾಗಿ ಸ್ವೀಕರಿಸಿದವರು. ಅಂತಹ ಕೆಲ ನಡೆ ಮತ್ತು ನುಡಿಗಳು ಹೀಗಿವೆ…

ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆದಾಗ, ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ಸಂಬಂಧ ಕಡಿದುಕೊಳ್ಳುವ ಮಾತನಾಡಿತು. ಆಗ ಷಾ, ‘ಭಾರತ ಮತ್ತು ಪಾಕಿಸ್ತಾನದ ಜನರ ನಡುವಿನ ನೇರ ಸಂಬಂಧವನ್ನು ಕಡಿತಗೊಳಿಸಲು ಕೆಲವರು ಬಯಸುತ್ತಾರೆ. ಆದರೆ ನನ್ನ ಸಂಬಂಧಿಗಳು-ಸ್ನೇಹಿತರು ಅಲ್ಲಿದ್ದಾರೆ, ನನ್ನನ್ನು ಯಾರೂ ತಡೆಯಲಾರರು’ ಎಂದರು. ಆಗ ಹಲವರು ಅವರಿಗೆ ‘ಪಾಕಿಸ್ತಾನಕ್ಕೆ ಹೋಗಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಲೇವಡಿ ಮಾಡಿದರು. ಅದಕ್ಕೆ ಷಾ, ‘ಕೈಲಾಸಕ್ಕೆ ಹೋಗಿ’ ಎಂದು ತಿರುಗೇಟು ನೀಡಿದ್ದರು.

144045 xaugjvzplv 1594143330
ಶಬಾನಾ ಆಜ್ಮಿಯೊಂದಿಗೆ ಷಾ

ಧರ್ಮದ್ವೇಷದ ದಳ್ಳುರಿಯಲ್ಲಿ ದೇಶ ದಹಿಸುತ್ತಿರುವ ದುರಿತ ಕಾಲದಲ್ಲೂ ದನಿ ಎತ್ತದ ಜನಪ್ರಿಯ ನಟ-ನಟಿಯರನ್ನು ಕುರಿತು ‘ತಾವು ತುಂಬಾ ಅಪಾಯಕ್ಕೆ ಒಳಗಾಗುತ್ತೇವೆ ಎಂದು ಭಾವಿಸಿ ಅವರು ಮೌನವಾಗಿರಬಹುದು. ಆದರೆ ನಂತರದ ದಿನಗಳಲ್ಲಿ ಅವರು ಇದಕ್ಕಿಂತ ಹೆಚ್ಚಿನದನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಲಿದ್ದಾರೆ’ ಎಂದಿದ್ದರು. ಮೌನವೆಷ್ಟು ಮಾರಕ ಎನ್ನುವುದನ್ನು ಮಾರ್ಮಿಕವಾಗಿ ಹೇಳಿದ್ದರು.

ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಎಂಬ ಮಹಿಳೆ, ಮುಸ್ಲಿಮರ ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದರು. ಅದಕ್ಕೆ ನಾಸೀರುದ್ದೀನ್ ಷಾ, ನೂಪುರ್ ಶರ್ಮಾಳ ದ್ವೇಷ ಕಾರುವ ಮಾತುಗಳನ್ನು ವೇನಂಗೆ(ವಿಷಕ್ಕೆ) ಹೋಲಿಸಿ, ಅತ್ಯಂತ ಕಟು ಶಬ್ದಗಳಿಂದ ಟೀಕಿಸಿದರು. ಆಕೆಯ ವಿರುದ್ಧ ಕ್ರಮ ಕೈಗೊಳ್ಳದ ಸರಕಾರದ ನಡೆಯನ್ನು ಕೂಡ ಲೇವಡಿ ಮಾಡಿದರು.

ಇಡೀ ದೇಶವೇ ‘ದ ಕಶ್ಮೀರ್ ಫೈಲ್ಸ್’ ಎಂಬ ಚಿತ್ರ ಕುರಿತು ಕಣ್ಣೀರು ಸುರಿಸುತ್ತಿದ್ದಾಗ ನಾಸೀರುದ್ದೀನ್ ಷಾ ‘ಆ ಸಿನಿಮಾ ಕಶ್ಮೀರಿ ಹಿಂದುಗಳ ಸಂಕಟದ ಕಾಲ್ಪನಿಕ ಕತೆ, ಸರಕಾರ ಅದನ್ನು ಪ್ರಚಾರ ಮಾಡುವ ಮೂಲಕ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ, ಇದು ಪ್ರಜಾಪ್ರಭುತ್ವದ ಅಣಕ’ ಎಂದು ಬಿಜೆಪಿಯ ಹಿಡನ್ ಅಜೆಂಡಾವನ್ನು ಬಯಲುಗೊಳಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದನಂತರ, ದೇಶಭಕ್ತಿ, ಇತಿಹಾಸ ಪುರುಷರ ಕತೆಗಳ ಸಿನಿಮಾಗಳು ಬರುತ್ತಿದ್ದಾಗ, ‘ಭವಿಷ್ಯದಲ್ಲಿ ಹುಸಿ ದೇಶಪ್ರೇಮದ ಸಿನಿಮಾಗಳು ಇನ್ನಷ್ಟು ಹೆಚ್ಚಲಿವೆ’ ಎಂದು ದೇಶದ ದುರ್ಗತಿಯ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆಯೇ ಸಾಲು ಸಾಲು ಪ್ರೊಪಗ್ಯಾಂಡ ಚಿತ್ರಗಳು ಬಂದುಹೋದವು.

ಇನ್ನು ಚಿತ್ರರಂಗದ ಐಲಾಟಗಳ ಬಗ್ಗೆ, ಸ್ಟೀರಿಯೋಟೈಪ್ ಮೀಡಿಯಾ ವಿಶ್ಲೇಷಣೆಗಳ ಬಗ್ಗೆ ಹಾಗೂ ಸಿನಿ ಜಗತ್ತಿನ ಬಗ್ಗೆ ಜನಮಾನಸದಲ್ಲಿರಬಹುದಾದ ಭಾವನೆಗಳನ್ನು, ಭ್ರಮೆಗಳನ್ನು, ಕಲ್ಪನೆಗಳನ್ನು ಕುರಿತು ಯಾವ ಮುಲಾಜು ಇಲ್ಲದೆ ಸಾರ್ವಜನಿಕವಾಗಿ ಹೇಳುವ ಧೈರ್ಯವನ್ನೂ ಗಮನಿಸಬಹುದು.

ಇತ್ತೀಚಿನ ದಿನಗಳಲ್ಲಿ ಭಾರೀ ಬಜೆಟ್‌ನ ದಕ್ಷಿಣ ಭಾರತದ ಸೂಪರ್ ಹಿಟ್ ಚಿತ್ರಗಳ ಕುರಿತು ನಾಸೀರುದ್ದೀನ್ ಷಾ, ‘ಆರ್‌ಆರ್‌ಆರ್ ಮತ್ತು ಪುಷ್ಪ ಚಿತ್ರಗಳು ನನಗೆ ಇಷ್ಟವಾಗಲಿಲ್ಲ. ಈ ಎರಡೂ ಚಿತ್ರಗಳಲ್ಲಿ ತೋರಿಸಲಾದ ಅತಿಯಾದ ಪುರುಷತ್ವದ ಚಿತ್ರಣದಿಂದಾಗಿ ನಾನು ಈ ಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಎಷ್ಟು ಮಹಿಳೆಯರು ಆರ್‌ಆರ್‌ಆರ್ ಇಷ್ಟಪಟ್ಟರು, ಈ ಚಿತ್ರಗಳನ್ನು ನೋಡುವುದರಿಂದ ಜನರಿಗೆ ಏನು ಸಿಗುತ್ತದೆ’ ಎಂದು ಪ್ರಶ್ನಿಸಿದ್ದರು.

ಇದನ್ನು ಓದಿದ್ದೀರಾ?: ಉತ್ಕಟ ಪ್ರೇಮದ ದುರಂತ ನಾಯಕ ಗುರುದತ್

ಪ್ರಶಸ್ತಿಗಳ ಬಗ್ಗೆ ಮಾತನಾಡುತ್ತ, ‘ಒಬ್ಬ ನಟ ಒಂದು ಪಾತ್ರ ಮಾಡಲು ತನ್ನ ಜೀವನ ಮತ್ತು ತನ್ನೆಲ್ಲವನ್ನು ಧಾರೆ ಎರೆದಿರುತ್ತಾನೆ. ಆತ ನನ್ನ ಪ್ರಕಾರ ಒಳ್ಳೆಯ ನಟ. ಒಂದು ಗುಂಪಿನಿಂದ ಒಬ್ಬರನ್ನು ಆರಿಸಿ- ಇವರು ವರ್ಷದ ಶ್ರೇಷ್ಠ ನಟ- ಎಂದು ಹೇಳುವುದು ಯಾವ ನ್ಯಾಯ? ನನಗೆ ಆ ಪ್ರಶಸ್ತಿಗಳ ಬಗ್ಗೆ ಹೆಮ್ಮೆ ಇಲ್ಲ. ನಾನು ಕೊನೆಯ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಲು ಕೂಡ ಹೋಗಲಿಲ್ಲ. ಆದ್ದರಿಂದ, ನನಗೆ ಬಂದ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ನನ್ನ ಮನೆಯ ವಾಶ್‌ರೂಮ್‌ನ ಬಾಗಿಲಿನ ಹಿಡಿಗಳನ್ನು ತಯಾರಿಸಲು ಬಳಸಿದ್ದೇನೆ’ ಎಂದಿದ್ದರು.

1043830 Wallpaper2
ಪತ್ನಿ ಮತ್ತು ಪುತ್ರನೊಂದಿಗೆ ಷಾ

ಮುಖ್ಯವಾಹಿನಿ ಚಿತ್ರಗಳು ಮತ್ತು ವಾಚನಾಭಿರುಚಿ ಕುರಿತು ಮಾತನಾಡುವಾಗ, ”ನಮ್ಮ ಮುಖ್ಯವಾಹಿನಿಯ ಸಿನಿಮಾಗಳು ಪ್ರೇಕ್ಷಕರ ಅಭಿರುಚಿಯನ್ನು ಶಾಶ್ವತವಾಗಿ ಹಾಳುಮಾಡಿವೆ. ಚಿತ್ರನಿರ್ಮಾಪಕ ಸತ್ಯಜಿತ್ ರೇ ತಮ್ಮ ‘ನಮ್ಮ ಚಿತ್ರಗಳು, ಅವರ ಚಿತ್ರಗಳು’ ಪುಸ್ತಕದಲ್ಲಿ ಈ ವಿಷಯವನ್ನು 50 ವರ್ಷಗಳ ಹಿಂದೆಯೇ ಉಲ್ಲೇಖಿಸಿದ್ದಾರೆ. ಅವರು ಭಾರತೀಯ ಚಿತ್ರಗಳನ್ನು ಕೆಳಗಿಳಿಸುತ್ತಿರಲಿಲ್ಲ, ಬದಲಿಗೆ ಭಾರತೀಯ ಚಿತ್ರನಿರ್ಮಾಪಕರನ್ನು ಅಂತಾರಾಷ್ಟ್ರೀಯ ಚಿತ್ರನಿರ್ಮಾಪಕರೊಂದಿಗೆ ಹೋಲಿಕೆ ಮಾಡುತ್ತಿದ್ದರು. ಭಾರತದಲ್ಲಿ ನೀವು ನೋಡುವ ಪ್ರತಿಯೊಂದು ಮುಖ್ಯವಾಹಿನಿಯ ಚಿತ್ರವು ‘ಮಹಾಭಾರತ’ದಿಂದ ಕೆಲವು ಅಂಶಗಳನ್ನು ಒಳಗೊಂಡಿರುತ್ತದೆ ಅಥವಾ ಶೇಕ್ಸ್‌ಪಿಯರ್‌ನಿಂದ. ಹಿಂದಿ ಮುಖ್ಯವಾಹಿನಿಯ ಸಿನಿಮಾಗಳಲ್ಲಿನ ಪ್ರತಿಯೊಂದು ಕ್ಲೀಷೆಯೂ ಶೇಕ್ಸ್‌ಪಿಯರ್‌ನಿಂದ ಭಾರೀ ಪ್ರಮಾಣದಲ್ಲಿ ಎರವಲು ಪಡೆದಿದೆ” ಎಂದಿದ್ದರು.

‘ಭಾರತೀಯ ಚಿತ್ರರಂಗದಲ್ಲಿ ಅಮಿತಾಭ್ ಬಚ್ಚನ್‌ಗೆ ಬಹಳ ಎತ್ತರದ ಸ್ಥಾನ-ಮಾನವಿದೆ. ನನಗೂ ಇದೆ. ಅವರಿಗೆ ಕಮರ್ಷಿಯಲ್ ಚಿತ್ರಗಳಲ್ಲಿದ್ದರೆ ನನಗೆ ಪರ್ಯಾಯ ಚಿತ್ರಗಳಲ್ಲಿ…’ ಎಂದು ಹೇಳುವ ನಾಸೀರುದ್ದೀನ್, ಜನಪ್ರಿಯ ನಟ ರಾಜೇಶ್ ಖನ್ನಾ ಕುರಿತು, ‘ಆತ ಅತ್ಯಂತ ಕಳಪೆ ನಟ’ ಎಂದಿದ್ದರು. ಹಾಗೆಯೇ ‘ಸ್ಟಾರ್ ಎಂದಾಕ್ಷಣ ಅವನಿಗೆ ಇಂಥದೇ ಕುರ್ಚಿ ಹಾಕಬೇಕು ಎನ್ನುವುದು, ಕತೆಯನ್ನು ಸ್ಟಾರ್ ಸುತ್ತ ಹೆಣೆಯುವುದು, ಪರೇಶ್ ರಾವಲ್ ಎಂದಾಕ್ಷಣ ಹಾಸ್ಯ ಎನ್ನುವುದು, ಅಮರೀಶ್ ಪುರಿ ಎಂದಾಕ್ಷಣ ಕೊಲೆಗಡುಕ ಎನ್ನುವುದು… ಎಲ್ಲ ನಾನ್ಸೆನ್ಸ್’ ಎಂದಿದ್ದರು.

ಹಾಗಂತ, ನಾಸೀರುದ್ದೀನ್ ಷಾ, ತಮ್ಮನ್ನು ಪರಿಪೂರ್ಣ ಮನುಷ್ಯ ಎಂದು ಕರೆದುಕೊಳ್ಳುವುದಿಲ್ಲ. ಅವರಲ್ಲೂ ಹಲವು ಐಬುಗಳಿವೆ. ಅಮಿತಾಭ್, ರಾಜೇಶ್ ಖನ್ನಾ ರೀತಿ ಅವರು ಕೂಡ ಅದೆಷ್ಟೋ ಚಿತ್ರಗಳಲ್ಲಿ ಹೀರೋ ಆಗಿ ಹುಡುಗಿಯರ ಸೊಂಟ ಬಳಸಿದ್ದಾರೆ. ಮರ ಸುತ್ತಿ, ಹಾಡಿ ಕುಣಿದಿದ್ದಾರೆ. ಗಾಸಿಪ್ ಕಾಲಂಗಳಲ್ಲಿ ಮಿಂಚಿದ್ದಾರೆ. ಕಪ್ಪು ಕನ್ನಡಕ, ಬಿಳಿ ಸೂಟುಬೂಟು ತೊಟ್ಟು ಗತ್ತು ಗಾಂಭೀರ್ಯ ಪ್ರದರ್ಶಿಸಿದ್ದಾರೆ. ಆದರೆ ಆ ಕ್ಷಣವೇ ಸ್ಟಾರ್ ಎಂಬ ಹ್ಯಾಂಗೋವರ್‌ನಿಂದ ಹೊರಬಂದು ಶ್ರೀಸಾಮಾನ್ಯನಾಗಿದ್ದಾರೆ. ಮೊಹ್ರಾ, ಸರ್ಫರೋಶ್, ಕ್ರಿಶ್‌ಗಳಂತಹ ಪಕ್ಕಾ ಕಮರ್ಷಿಯಲ್ಲಿ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ, ಹಾಸ್ಯಾಸ್ಪದ ಹಾವಭಾವಗಳ ನಟನೆ ನೀಡಿ ‘ಇದೆಲ್ಲ ಬ್ಯಾಂಕ್ ಬ್ಯಾಲೆನ್ಸ್ ‌ಗಾಗಿ’ ಎಂದು ಬದುಕಿನ ಕಟುವಾಸ್ತವವನ್ನು ಅರುಹಿದ್ದಾರೆ. ಇವರು ಕೂಡ ಎಲ್ಲರಂತೆಯೇ ಮಗನನ್ನು ಹೀರೋ ಮಾಡಲು ಹಣ, ಅನುಭವ ಮತ್ತು ಹಿರಿತನವನ್ನು ಅಡ ಇಟ್ಟು ಪ್ರಚಾರ ಮಾಡಿ, ‘ನಾನೂ ನಿಮ್ಮಂತೆಯೇ’ ಎಂದಿದ್ದಾರೆ. ಸಾಮಾನ್ಯನಲ್ಲಿ ಸಾಮಾನ್ಯನಾಗಿದ್ದಾರೆ.

‘ನಟರಾರೂ ಕಲಾಸೇವಕರಲ್ಲ. ನಟನಾಗಬೇಕೆಂಬುದಿದ್ದರೆ ಅದು ನೀವು ಜನಪ್ರಿಯ ವ್ಯಕ್ತಿಯಾಗಬೇಕೆಂಬ ಆಸೆಯಿಂದ, ಹುಡುಗಿಯರು ಸಿಗುತ್ತಾರೆಂಬ ಸ್ವಾರ್ಥದಿಂದ, ಜನ ನಿಮ್ಮ ಮಾತು ಕೇಳುತ್ತಾರೆಂಬ ಭ್ರಮೆಯಿಂದ…’ ಎಂಬ ಕಟುಸತ್ಯವನ್ನು ನುಡಿದು ಕಲಾವಿದರ ಸಿಟ್ಟನ್ನೂ ಶ್ರೀಸಾಮಾನ್ಯರ ಪ್ರೀತಿಯನ್ನೂ ಒಟ್ಟೊಟ್ಟಿಗೆ ಪಡೆದಿದ್ದಾರೆ.

ಹಾಗೆಯೇ, ಇಂದಿನ ಕೆಲ ‘ಭಿನ್ನ’ ನಿರ್ದೇಶಕರು ‘A film by…’ ಅಂತ ಹಾಕಿಕೊಳ್ಳುವುದರ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟಿನಿಂದ, ”A film by Satyajit ray ಅಂತ ಅವರು ಎಂದೂ ಹಾಕಿಕೊಳ್ಳಲಿಲ್ಲ. ಅದೂ ಅವರು ಎಲ್ಲಾ ವಿಭಾಗಗಳಲ್ಲಿ ನುರಿತವರಾಗಿ, ದುಡಿದವರಾಗಿ, ಅರಿತವರಾಗಿದ್ದರೂ ಸಹ. ಈಗಿನವರು ನಾಚಿಕೆ, ಅಂಜಿಕೆ ಇಲ್ಲದೆ ‘A film by…’ ಅಂತ ಹಾಕೋತಾರೆ. ಇದಕ್ಕಿಂತ ಕೊಳಕುತನ ಇನ್ನೊಂದಿಲ್ಲ. ಇದೆಲ್ಲ ಶುರುವಾಗಿದ್ದು ಶ್ಯಾಂ ಬೆನಗಲ್ ಎಂಬ ಮನುಷ್ಯನಿಂದ…” ಎಂದು ಯಾವ ಎಗ್ಗೂ ಇಲ್ಲದೆ ಹೇಳುತ್ತಾರೆ.

ಆ ತಕ್ಷಣವೇ ಸಿನಿಕರಾಗಿ, ‘ಈ ದೇಶದಲ್ಲಿ ಗ್ರೇಟ್ ಫಿಲ್ಮ್ ಅನ್ನೋದು ತಯಾರಾಗಲೇ ಇಲ್ಲ. ನನ್ನ ಕಾಲದಲ್ಲಾದ್ರು ಆಗುತ್ತ ಅಂದ್ರೆ ಅದೂ ಇಲ್ಲ… ಅವಕಾಶಗಳನ್ನು ಹಾಳು ಮಾಡುವವರೆ ಎಲ್ಲ…’ ಎಂದು ನಿಟ್ಟುಸಿರುಬಿಡುತ್ತಾರೆ. ಏನೋ ಹೊಳೆದಂತೆ, ‘ಇವತ್ತಿನ ಹೊಸ ಪೀಳಿಗೆಯ ಕಲಾವಿದರು, ತಂತ್ರಜ್ಞರಲ್ಲಿ ಅತಿಉತ್ಸಾಹವಿದೆ, ಆಧುನಿಕ ತಂತ್ರಜ್ಞಾನಕ್ಕೆ ಹಾತೊರೆಯುವ ಮನಸ್ಸಿದೆ. ಆದರೆ ಅದಕ್ಕೆ ತಕ್ಕಂತೆ ಓದು, ಅಧ್ಯಯನ, ಗ್ರಹಿಕೆ, ಚಿಂತನೆಯಿಲ್ಲ. ಹಣ ಮಾಡುವ ಜನಪ್ರಿಯರಾಗುವ ಹಪಾಹಪಿ ಇದೆ, ನಾಲ್ಕು ದಿನ ನಿಲ್ಲುವ ಚಿತ್ರ ಮಾಡುವ ಹಂಬಲವಿಲ್ಲ. ಇದು ಎಲ್ಲಾ ಕಾಲದಲ್ಲೂ ಹೀಗೆಯೇ ಅಲ್ಲವೇ…’ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ. ಹೋಗಲಿ ನಿಮಗಿಷ್ಟವಾದ ಚಿತ್ರಗಳಾದರೂ ಯಾವುವು ಎಂದರೆ, ‘ಮಾಸೂಮ್, ಸ್ಪರ್ಶ್, ಅರ್ಧ್ ಸತ್ಯ’ ಎನ್ನುತ್ತಾರೆ. ‘ಇವು ಗ್ರೇಟ್ ಫಿಲ್ಮ್‌ಗಳಲ್ಲ ನನಗಿಷ್ಟವಾದ ಚಿತ್ರಗಳಷ್ಟೇ’ ಎನ್ನುತ್ತಾರೆ.

ಇದನ್ನು ಓದಿದ್ದೀರಾ?: ಸ್ವಮರುಕದ ಬಲೆಯೊಳಗೆ ಸಿಲುಕಿಕೊಂಡ ಗುರುದತ್

‘ನನ್ನ ಮೊದಲ ಆಯ್ಕೆ ಮತ್ತು ಇಷ್ಟ ರಂಗಭೂಮಿಯಲ್ಲ, ಸಿನೆಮಾ. ನಾನು ನನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಸಿನೆಮಾ ನಟನಾಗಬೇಕೆಂಬ ಕನಸು ಕಂಡಿದ್ದೆ. ನನ್ನಪ್ಪನಿಗೆ ನಾನು ಡಾಕ್ಟರಾಗಬೇಕೆಂಬ, ನನಗೆ ಗ್ಯಾರಿ ಕೂಪರ್‌ನಂತಾಗಬೇಕೆಂಬ ಆಸೆಯಿತ್ತು. ಸಿಕ್ಕಾಪಟ್ಟೆ ಹಣ ಗಳಿಸಿ, ಅರಮನೆಯಂಥ ಮನೆಯಲ್ಲಿ ವಾಸಿಸುತ್ತ, ಕಪ್ಪು ಕನ್ನಡಕ ಬಿಳಿ ಸೂಟುಬೂಟು ಧರಿಸಿ ಓಡಾಡುವ, ಎಲ್ಲರೂ ಗುರುತಿಸುವ ಜನಪ್ರಿಯ ವ್ಯಕ್ತಿಯಾಗಬೇಕೆಂದು ಆಸೆಪಟ್ಟಿದ್ದೆ. ಆದರೆ ಈ ಥರ ಅಲ್ಲ…’ ಎಂದು ಇವತ್ತಿನ ಸ್ಥಿತಿಯನ್ನು ನೆನೆದು, ತಮ್ಮ ಬಗ್ಗೆ ತಾವೇ ವ್ಯಂಗ್ಯ ಮಾಡಿಕೊಂಡು ನಗಾಡಿದ್ದೂ ಇದೆ.

1658309163 naseeruddin shah2

ಹೀಗೆ ವಿಭಿನ್ನವಾಗಿ ಯೋಚಿಸುವ, ಆರೋಗ್ಯಕರವಾಗಿ ಚಿಂತಿಸುವ, ಹಿಂದೂ-ಮುಸ್ಲಿಮ್ ಸಮಸ್ಯೆಗಳಿಗೆ ಸ್ಪಂದಿಸುವ ನಾಸೀರುದ್ದೀನ್ ಷಾ ಬುದ್ಧಿಜೀವಿ ಚಿಂತಕನಂತೆ, ಪರಿಪೂರ್ಣ ಕಲಾವಿದನಂತೆ, ಮಾಗಿದ ಅನುಭವಿಯಂತೆ, ಆಮ್ ಆದ್ಮಿಯಂತೆ- ಎಲ್ಲವೂ ಏಕಕಾಲಕ್ಕೇ. ಹಾಗೆಯೇ ನಟಿ ರತ್ನಾ ಪಾಠಕ್‌ರ ಗಂಡ, ಮೂರು ಮಕ್ಕಳ ತಂದೆ, ಎಲ್ಲರಂತೆ ಭಾರತೀಯ ಪ್ರಜೆ. ಐದು ದಶಕಗಳಿಗೂ ಮೀರಿದ ರಂಗಭೂಮಿ, ಸಿನಿಮಾ, ಟಿವಿ ಸಹವಾಸದ ನಟನಾ ಬದುಕಿನಲ್ಲಿ, ಅವತ್ತಿನ ಉಮೇದನ್ನು ಇವತ್ತಿಗೂ ಜೀವಂತವಾಗಿರಿಸಿಕೊಂಡು ಬಂದ ಈ ಸಂವೇದನಾಶೀಲ ನಟನಿಗೆ ಇಂದು 75ರ ಜನ್ಮದಿನ. ಶುಭಾಶಯಗಳು ಷಾ…

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

Download Eedina App Android / iOS

X