ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಇದೂವರೆಗೂ 90 ಮಂದಿ ಆಸ್ಪತ್ರೆ ಸೇರಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ಭೀರಕ ಪರಿಸ್ಥಿತಿಯ ನಡುವೆ ಅಲ್ಲಿನ ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಐದು ಮಾದರಿಗಳ ಪೈಕಿ, ನಾಲ್ಕು ಮಾದರಿಗಳ ಫಲಿತಾಂಶ ಆ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಹೇಳಿವೆ.
ನೀರಿನ ಮಾದರಿಗಳನ್ನು ಪರೀಕ್ಷಿಸಿದ ಚಿತ್ರದುರ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಪ್ರಕರಣ ಹೊರಡಿಸಿದೆ. “ಗ್ರಾಮದಲ್ಲಿ ಸಂಗ್ರಹಿಸಲಾಗಿದ್ದ ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ಅಲ್ಲದೆ, ಮಲದ ಮಾದರಿಯನ್ನು ಪರೀಕ್ಷಿಸಲಾಗಿದ್ದು, ‘ವೈಬ್ರಿಯೋ ಸ್ಪೀಸಿಸ್ ಪಾಸಿಟಿವ್’ ಕಂಡುಬಂದಿದೆ” ಎಂದು ಹೇಳಿದೆ.
ಸದ್ಯ ಗ್ರಾಮಕ್ಕೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕರ್ತವ್ಯ ಲೋಪ ಎಸಗಿರುವ ನಗರ ನೀರು ಸರಬರಾಜು ವಿಭಾಗದ ಇಂಜಿನಿಯರ್ ಸೇರಿದಂತೆ ಇವರು ನೌಕರರನ್ನು ಅಮಾನತು ಮಾಡಲಾಗಿದೆ. ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಜಿಲ್ಲಾಡಳಿತದಿಂದ ಕವಾಡಿಗರ ಹಟ್ಟಿಯ ನಾಗರಿಕರಿಗೆ ಫುಡ್ ಕಿಟ್‌ಗಳನ್ನು ವಿತರಿಸಲಾಗಿದೆ.