ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಹಲವಾರು ಮಂದಿ ಅಸ್ವಸ್ಥರಾಗಿ ಅಸ್ಪತ್ರೆ ಸೇರಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ‘ಈ ಘಟನೆಗೆ ಗ್ರಾಮದಲ್ಲಿ ನಡೆದಿದ್ದ ಅಂತರ್ಜಾತಿ ಪ್ರೇಮ ವೈಷಮ್ಯ ಕಾರಣ. ಪ್ರಬಲ ಜಾತಿಯವರು ದಲಿತರು ಕುಡಿಯುವ ನೀರಿಗೆ ವಿಷ ಬೆರೆಸಿದ್ದರು’ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಈದಿನ.ಕಾಮ್ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಆರೋಪಗಳನ್ನು ಸ್ಥಳೀಯರು ತಳ್ಳಿ ಹಾಕಿದ್ದು, ಪ್ರೇಮ ಪ್ರಕರಣಕ್ಕೂ ಕಲುಷಿತ ನೀರಿನ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಒಂದು ವರ್ಷದ ಹಿಂದೆ ದಲಿತ ಹುಡುಗ ಮತ್ತು ಪ್ರಬಲ ಜಾತಿಯ ಬಾಲಕಿಯ ಪ್ರೇಮ ಪ್ರಕರಣ ಗ್ರಾಮದಲ್ಲಿ ವೈಷಮ್ಯ ಉಂಟುಮಾಡಿತ್ತು. ಬಾಲಕಿ ಅಪ್ತಾಪ್ತಳಾಗಿದ್ದ ಕಾರಣ, ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಯುವಕ ಇನ್ನೂ ಜೈಲಿನಲ್ಲಿದ್ದಾನೆ. ಒಂದು ವರ್ಷದ ಘಟನೆಯು ಇಂದಿನ ಪ್ರಕರಣಕ್ಕೆ ಕಾರಣವಾಗಿದೆ ಎಂದು ಹೇಳಲಾಗದು ಎಂದು ಸ್ಥಳೀಯರು ಹೇಳಿದ್ದಾರೆ.
ವರ್ಷದ ಹಿಂದಿನ ಜಾತಿ ವೈಷಮ್ಯ ಪ್ರಕರಣವನ್ನು ಇಂದಿನ ಪರಿಸ್ಥಿತಿಗೆ ತಳುಕು ಹಾಕಿ ನೋಡಲಾಗುತ್ತಿದೆ. ದ್ವೇಷ ಸಾಧಿಸಿಕೊಳ್ಳಲು ನೀರಿನ ಟ್ಯಾಂಕ್‌ಗೆ ವಿಷ ಹಾಕಲು ಸಾಧ್ಯವಿಲ್ಲ. ಆದರೂ, ನೀರು ಕುಡಿದು ಮೃತಪಟ್ಟವರ ಮರಣೋತ್ತರ ವರದಿ ಮತ್ತು ಎಫ್‌ಎಸ್‌ಎಲ್ ವರದಿಗಳು ಬಂದ ನಂತರ ಸತ್ಯಾಸತ್ಯತೆ ನಿರ್ಧಾರವಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಫ್‌ಎಸ್‌ಎಲ್ ವರದಿಯನ್ನು ಗುರುವಾರ ಸಂಜೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಬಿಡುಗಡೆ ಮಾಡಿದ್ದು, “ಗ್ರಾಮದಲ್ಲಿ ಸಂಗ್ರಹಿಸಲಾಗಿದ್ದ ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ಅಲ್ಲದೆ, ನೀರಿನ ಮಾದರಿಯಲ್ಲಿ ಯಾವುದೇ ವಿಷದ ಅಂಶ ಕಂಡುಬಂದಿಲ್ಲ” ಎಂದು ಹೇಳಿದ್ದಾರೆ.
ವರದಿಯು ಕಲುಷಿತ ನೀರಿನ ಪ್ರಕರಣಕ್ಕೂ, ಜಾತಿ ವೈಷಮ್ಯದ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ನಗರಸಭೆ ಆಡಳಿತದ ಮತ್ತು ನೀರು ಸರಬರಾಜು ವಿಭಾಗದ ಲೋಪದೋಷಗಳ ಕಾರಣದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.