- ಪ್ರತಿ ಖಾತಾಗೆ ₹10 ಸಾವಿರದಂತೆ ಒಟ್ಟು ₹7,90 ಲಕ್ಷ ಹಣ ನೀಡುವಂತೆ ಬೇಡಿಕೆ
- ಮುಕ್ತಾ ಡೆವಲಪರ್ಸ್ ಕಂಪನಿಯ ಮಾಲೀಕನಿಂದ ಲೋಕಾಯುಕ್ತ ಪೊಲೀಸರಿಗೆ ದೂರು
ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗೆ ಖಾತಾ ಮಾಡಿಕೊಡಲು ₹5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಂದಾಯ ನಿರೀಕ್ಷಕರೊಬ್ಬರು ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಬಿಬಿಎಂಪಿ ಕಂದಾಯ ನಿರೀಕ್ಷಕ ನಟರಾಜ್ ಹಾಗೂ ಮಧ್ಯವರ್ತಿ ಪವನ್ ಎಂಬುವವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಡಿಗೆಹಳ್ಳಿಯಲ್ಲಿ ಬೃಂದಾವನ ಅಪಾರ್ಟ್‌ಮೆಂಟ್ ಅನ್ನು ಮುಕ್ತಾ ಡೆವಲಪರ್ಸ್ ಕಂಪನಿ ನಿರ್ಮಾಣ ಮಾಡಿದೆ. ಈ ಬೃಂದಾವನದಲ್ಲಿ ಒಟ್ಟು 79 ಫ್ಲ್ಯಾಟ್‌ಗಳಿದ್ದು, ಫ್ಲ್ಯಾಟ್‌ಗಳ ಖಾತೆಗಾಗಿ ಕಂಪನಿ ಮಹದೇವಪುರ ವಲಯದ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿತ್ತು.
ಖಾತಾ ಮಾಡಿಕೊಡಲು ಬಿಬಿಎಂಪಿ ಕಂದಾಯ ನಿರೀಕ್ಷಕ ನಟರಾಜ್ ಪ್ರತಿ ಖಾತಾಗೆ ₹10 ಸಾವಿರದಂತೆ ಒಟ್ಟು ₹7,90 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ನೇಹಿತನ ಜನ್ಮದಿನಾಂಕ ಹೇಳಲು ನಿರಾಕರಣೆ; ವಿದ್ಯಾರ್ಥಿ ಮೇಲೆ ಯುವತಿಯ ಗುಂಪಿನಿಂದ ಹಲ್ಲೆ
ಈ ಬಗ್ಗೆ ಮುಕ್ತಾ ಡೆವಲಪರ್ಸ್ ಕಂಪನಿಯ ಮಾಲೀಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಮಹದೇವಪುರ ಬಿಬಿಎಂಪಿ ಕಚೇರಿಯಲ್ಲಿ ಮುಂಗಡವಾಗಿ ₹5 ಲಕ್ಷ ಹಣ ಪಡೆಯುವ ವೇಳೆ ನಟರಾಜ್ ಹಾಗೂ ಪವನ್ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.