ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಮಣ್ಣಿನ ಗಣೇಶ ಮೂರ್ತಿಗಳ ತಯಾರಕರು ಹರಿಹರ ನಗರಸಭಾ ಅಧ್ಯಕ್ಷರು ಮತ್ತು ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದ ಕುಂಬಾರ ಸಮುದಾಯದ ಮಣ್ಣಿನ ಗಣೇಶ ಮೂರ್ತಿಗಳ ತಯಾರಕರು ಹಕ್ಕೊತ್ಥಾಯ ಪತ್ರ ಸಲ್ಲಿಸಿದ್ದು, “ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತವೆ. ಮಾತ್ರವಲ್ಲದೆ, ವರ್ಷವಿಡೀ ಗಣೇಶ ಮೂರ್ತಿಗಳನ್ನು ತಯಾರಿ ಮಾಡುವ ಸ್ಥಳೀಯ ಕಲಾವಿದರಿಗೆ ಭಾರೀ ನಷ್ಟ ಉಂಟು ಮಾಡುತ್ತಿವೆ. ಕೇಂದ್ರ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದರೂ, ಅವುಗಳ ಮಾರಾಟವಾಗುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.
ಹಕ್ಕೊತ್ತಾಯ ಸಲ್ಲಿಸಿ ಮಾತನಾಡಿದ ಹಿರಿಯ ಕಲಾವಿದ ಕುಂಬಾರ ಶಂಕರಪ್ಪ, “ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಸ್ಥಳೀಯ ಆಡಳಿತ ಆದೇಶ ಹೊರಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಕಲಾವಿದ ಕುಂಬಾರ ವೀರೇಶ್ ಮಾತನಾಡಿ, “ಪಿಒಪಿ ಗಣೇಶ ಮೂರ್ತಿಗಳು ಸ್ಥಳೀಯ ಪಾರಂಪರಿಕ ಕಲಾವಿದರ ಉದ್ಯೋಗ ಕಿತ್ತುಕೊಳ್ಳುತ್ತವೆ, ಸಾರ್ವಜನಿಕರೂ ಕೂಡ ಪರಿಸರ ಹಾನಿ ಉಂಟು ಮಾಡುವ ಇವುಗಳನ್ನು ಕೊಂಡು ಕೊಳ್ಳಬಾರದು” ಎಂದರು.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಸಂಘದ ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್, ಸದಸ್ಯ ಆಟೋ ಹನುಮಂತಪ, ಮುಖಂಡ ಮಂಜುನಾಥ್, ಸುರೇಶ್ ಚಂದಾಪುರ್, ಹನುಮಂತಪ್ಪ, ಕುಂಬಾರ ಯುವ ಸೇನೆಯ ತಾಲೂಕು ಅಧ್ಯಕ್ಷ ಚಂದ್ರಶೇಖ ಕುಂಬಾರ್, ಸಮಾಜದ ಮುಖಂಡರಾದ ಕೆ.ಈರಪ್ಪ, ಟಿ.ಕೆ.ಮಲ್ಲಿಕಾರ್ಜುನ, ಕೆ. ಮಲ್ಲಿ ರಾರ್ಜುನ, ಬಿ.ವಾಗಿರ್, ಟಿ.ಕೆ ಮಂಜುನಾಥ್, ಗಿರೀಶ್ ಬಿ, ಮಿಥುನ್ ಕುಮಾರ್, ವಿನಾಯಕ ಇತರರು ಇದ್ದರು.