ಶಿವಮೊಗ್ಗ , ಕಂಬದಿಂದ ವಿದ್ಯುತ್ ಲೈನ್ ತುಂಡರಿಸಿ ಬಿದ್ದ ಪರಿಣಾಮ, ರಸ್ತೆ ಬದಿ ಹಸಿರು ಮೇಯುತ್ತಿದ್ದ ಹಸುವೊಂದು ಶಾಕ್ ನಿಂದ ಮೃತಪಟ್ಟ ಘಟನೆ, ಶಿವಮೊಗ್ಗ ನಗರದ ಹೊರವಲಯ ಆಲ್ಕೋಳದಲ್ಲಿ ಜು. 25 ರಂದು ನಡೆದಿದೆ.
ಮಂಗಳ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದೆ. ಮಳೆ ಸುರಿಯುತ್ತಿದ್ದ ವೇಳೆ ದಿಢೀರ್ ಆಗಿ ವಿದ್ಯುತ್ ಕಂಬದಿಂದ ಲೈನ್ ತುಂಡರಿಸಿ ರಸ್ತೆಗೆ ಬಿದ್ದಿದೆ.
ಈ ವೇಳೆ ಸಮೀಪದಲ್ಲಿಯೇ ಹಸಿರು ಮೇಯುತ್ತಿದ್ದ ಆಕಳು ಶಾಕ್ ನಿಂದ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗಾಡಿಕೊಪ್ಪದ ನಿವಾಸಿ ಪ್ರಭು ಎಂಬುವರಿಗೆ ಸದರಿ ಆಕಳು ಸೇರಿದ್ದಾಗಿದೆ. ಮೃತಪಟ್ಟ ಆಕಳಿನ ಮೌಲ್ಯ ಸರಿಸುಮಾರು 70 ಸಾವಿರ ರೂ.ಗಳಿಗೂ ಅಧಿಕ ಎಂದು ಮಾಲೀಕ ಪ್ರಭು ಅವರು ಮಾಹಿತಿ ನೀಡಿದ್ದಾರೆ.