‘ಈ ದಿನ’ ಸಂಪಾದಕೀಯ | …ಏಕೆಂದರೆ, ಇದು ಕರ್ನಾಟಕ ಪೊಲೀಸ್ ಇಲಾಖೆಯ ಮರ್ಯಾದೆ ಪ್ರಶ್ನೆ

Date:

Advertisements
ಒಂದು ವೇಳೆ, ಕರ್ನಾಟಕ ಪೊಲೀಸ್ ಇಲಾಖೆಯ ನಿಯಮಗಳಲ್ಲಿ, ಪೊಲೀಸರಾಗಿದ್ದರೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ತಕ್ಷಣ ಕೆಲಸದಿಂದ ವಜಾಗೊಳಿಸಿ ತನಿಖೆ ನಡೆಸುವ ನಿಯಮವೇನಾದರೂ ಇದ್ದಿದ್ದರೆ, ಅದೆಷ್ಟು ಮಂದಿ ಕಂಬಿಗಳ ಹಿಂದೆ ನಿಲ್ಲಬೇಕಿತ್ತು ಎಂಬ ಲೆಕ್ಕವನ್ನು ಪೊಲೀಸ್ ಇಲಾಖೆಯೇ ಕೊಡಬೇಕು

ಸೈಬರ್ ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸಲು ಕೇರಳದ ಕಲ್ಲಂಚೇರಿಗೆ ತೆರಳಿದ್ದ ಕರ್ನಾಟಕ ಪೊಲೀಸರ ತಂಡವೊಂದನ್ನು ಅಲ್ಲಿನ ಪೊಲೀಸರು ಬಂಧಿಸಿರುವ ಸುದ್ದಿ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಬಂಧಿತ ತಂಡದ ಮೇಲೆ, ಲಂಚಕ್ಕೆ ಬೇಡಿಕೆ ಮತ್ತು ಸುಲಿಗೆಯ ಆರೋಪವಿದೆ. ಈ ತಂಡ ವಾಪಸಾಗುತ್ತಿದ್ದ ಕಾರಿನಲ್ಲಿದ್ದ 3,95 ಲಕ್ಷ ರೂಪಾಯಿಯನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸರಣಿ ತುರ್ತು ಸಭೆಗಳನ್ನು ನಡೆಸಿದ್ದಾರೆ. ಜೊತೆಗೆ, ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಠಾಣೆಯ ಇನ್ಸ್‌ಪೆಕ್ಟರ್ ಸಹಿತ ನಾಲ್ವರು ಆರೋಪಿಗಳನ್ನು ಅಮಾನತು ಮಾಡಲಾಗಿದೆ.

ಕೇರಳದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಇಲಾಖೆ ಕೈಗೊಂಡ ಅಮಾನತು ಕ್ರಮವು, ದೊಡ್ಡ ಮುಜುಗರದಿಂದ ಪಾರಾಗುವ ತಕ್ಷಣದ ಸಣ್ಣ ನಡೆಯಷ್ಟೆ. ಒಂದು ವೇಳೆ, ಪೊಲೀಸ್ ಇಲಾಖೆಯ ನಿಯಮಗಳಲ್ಲಿ, ಪೊಲೀಸರಾಗಿದ್ದರೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ತಕ್ಷಣ ಕೆಲಸದಿಂದ ವಜಾಗೊಳಿಸಿ ತನಿಖೆ ನಡೆಸುವ ನಿಯಮವೇನಾದರೂ ಇದ್ದಿದ್ದರೆ, ಅದೆಷ್ಟು ಮಂದಿ ಕಂಬಿಗಳ ಹಿಂದೆ ನಿಲ್ಲಬೇಕಿತ್ತು ಎಂಬ ಲೆಕ್ಕವನ್ನು ಪೊಲೀಸ್ ಇಲಾಖೆಯೇ ಕೊಡಬೇಕು. ಏಕೆಂದರೆ, ಚುರುಕಿನ ತನಿಖೆ ನಡೆಸಿದ ಪ್ರಕರಣಗಳಿಗೆ ಸಡ್ಡು ಹೊಡೆಯುವಂತೆ, ಪೊಲೀಸರೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗತೊಡಗಿವೆ. ಇದನ್ನು ಸಾಬೀತು ಮಾಡಲು ಪಿಎಸ್‌ಐ ಹಗರಣಕ್ಕಿಂತ ದೊಡ್ಡ ಪುರಾವೆ ಬೇಕೇ? ಎಡಿಜಿಪಿ ಹಂತದ ಐಪಿಎಸ್ ಅಧಿಕಾರಿ ಕೂಡ ಈ ಹಗರಣದ ಆರೋಪಿ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು, ಇಲಾಖೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಹಿಂದೆ, ಒಂದಂಕಿ ಲಾಟರಿ ಹಗರಣದಲ್ಲೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಕೈವಾಡದ ಮಾತು ಕೇಳಿಬಂದಿತ್ತು.

ಈ ಸಂಪಾದಕೀಯ ಓದಿದ್ದೀರಾ?: ಕ್ಯಾಂಪಸ್ಸುಗಳಲ್ಲಿ ಜಾತಿ ನಿಂದನೆ- ಬಿಗಿ ಕಾಯಿದೆ ಜಾರಿಯಾಗಲಿ

ಸುಲಿಗೆ ಎಂಬುದು ರಾಜ್ಯ ಪೊಲೀಸ್ ಇಲಾಖೆಗೆ ಅಂಟಿದ ಬಹು ದೊಡ್ಡ ಕಳಂಕ. ರಾಜ್ಯದ ಬಹುತೇಕ ಎಲ್ಲ ಪಟ್ಟಣ-ನಗರಗಳ ಬೀದಿ ಬದಿಯ ವ್ಯಾಪಾರಿಗಳನ್ನು, ಸಣ್ಣ-ಪುಟ್ಟ ಅಂಗಡಿಯ ಮಾಲೀಕರನ್ನು ಕೇಳಿದರೆ, ಸುಲಿಗೆಕೋರ ಪೊಲೀಸರ ಭಯಾನಕ ಮುಖಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಈ ಸುಲಿಗೆಯ ಬಗ್ಗೆ ಮಾತನಾಡಿದರೆ, ಸಾಮಾಜಿಕ ತಾಣಗಳಲ್ಲಿ ಜನಸಾಮಾನ್ಯರು ಬರೆದರೆ, ‘ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂಬ ಆಣಿಮುತ್ತನ್ನು ಪೊಲೀಸ್ ಇಲಾಖೆಯ ಕಾನೂನು ಘಟಕದ ಮಂದಿ ಬಹಳ ಸಲೀಸಾಗಿ ತೇಲಿಬಿಡುವುದುಂಟು. ಆದರೆ, ಯಾವ ಅಧಿಕಾರ ಅಥವಾ ನಿಯಮ ಇಟ್ಟುಕೊಂಡು ಇಂಥದ್ದೊಂದು ಹಗಲುದರೋಡೆಯನ್ನು ಪೊಲೀಸರು ಮಾಡುತ್ತಿದ್ದಾರೆ ಎಂಬ ಬಗ್ಗೆ ಹಿರಿಯ ಅಧಿಕಾರಿಗಳಾಗಲೀ, ನ್ಯಾಯಾಲಯಗಳಾಗಲೀ ತಲೆಕೆಡಿಸಿಕೊಂಡಂತಿಲ್ಲ. ಏಕೆಂದರೆ, ಇಂಥವೆಲ್ಲ ಬಿಡಿ-ಬಿಡಿ ಪ್ರಕರಣಗಳಾಗಿ ವರದಿಯಾಗುತ್ತಿರುತ್ತವೆ. ಹಾಗಾಗಿ, “ಅಷ್ಟೇ ತಾನೇ ಬಿಡಿ…” ಎಂಬ ದಿವ್ಯ ನಿರ್ಲಕ್ಷ್ಯಕ್ಕೂ ಕಾರಣವಾಗಿವೆ. ಇಂತಹ ಸುಲಿಗೆಗಳನ್ನು ಒಟ್ಟಾರೆಯಾಗಿ ನೋಡಿದರೆ, ಈ ಭಯಾನಕ ದಂಧೆಯ ಸ್ವರೂಪ ದಂಗು ಬಡಿಸುತ್ತದೆ. ಇಂತಹ ಹತ್ತು-ಇಪ್ಪತ್ತು ರೂಪಾಯಿಯ ಸುಲಿಗೆಗಳೇ, ಲಕ್ಷ-ಕೋಟಿ ರೂಪಾಯಿ ಸುಲಿಗೆಗಳತ್ತ ಪೊಲೀಸರನ್ನು ಕೊಂಡೊಯ್ಯುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ, ನಿಜಕ್ಕೂ ಅಪರಾಧ ಚಟುವಟಿಕೆಗಳಿಂದ ಮುಕ್ತವಾಗುವ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆ ಪೊಲೀಸ್ ಇಲಾಖೆಗೆ ಇದ್ದರೆ, ಬೀದಿ ಬದಿಯ ಸುಲಿಗೆಗಳಿಗೆ ಮೊದಲು ಕಡಿವಾಣ ಹಾಕಬೇಕು. ಇಲ್ಲದಿದ್ದರೆ, ಸುಲಿಗೆ ಎಂಬುದು ಕರ್ನಾಟಕ ಪೊಲೀಸ್ ಇಲಾಖೆಯ ಹೆಗ್ಗುರುತಾಗುವ ಕಾಲ ಖಂಡಿತ ದೂರವಿಲ್ಲ.

Advertisements
ಈ ಸಂಪಾದಕೀಯ ಓದಿದ್ದೀರಾ?: ಬಡವರ ಜೀವಕ್ಕೆ ಕಂಟಕ ತರುತ್ತಿರುವ ಜೀವಜಲ; ಆಡಳಿತಶಾಹಿಯೇ ಹೊಣೆ

ಪೊಲೀಸ್ ಅಧಿಕಾರಿಗಳ ವಿರುದ್ಧ, ನೌಕರರ ವಿರುದ್ಧ ದೂರು ಹೇಳಿದರೆ ಉಳಿಗಾಲವಿಲ್ಲ ಎಂಬಂತಹ ಭೀತಿಯ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿ ಮಾಡಲಾಗಿದೆ. ಪೊಲೀಸರ ಲಂಚಾವತಾರ ಬಯಲು ಮಾಡುವಲ್ಲಿ ನಿರತರಾದ ಕರ್ನಾಟಕ ರಾಷ್ಟ್ರ ಸಮಿತಿಯ (ಕೆಆರ್‌ಎಸ್) ಕಾರ್ಯಕರ್ತರನ್ನು ಪೊಲೀಸರು ನಡೆಸಿಕೊಂಡ ರೀತಿ ಇದಕ್ಕೆ ತಾಜಾ ನಿದರ್ಶನ. ಇಂತಹ ಪ್ರಕರಣಗಳಲ್ಲಿ ಹಿರಿಯ ಅಧಿಕಾರಿಗಳು ಮತ್ತು ಗೃಹ ಸಚಿವರುಗಳು ಮೌನ ವಹಿಸುವುದು ನಾಚಿಕೆಗೇಡು. ಸುಲಿಗೆಯಂತಹ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಅದನ್ನು ಪ್ರಶ್ನಿಸುವ, ಬಯಲಿಗೆಳೆಯುವ ಜನಸಾಮಾನ್ಯರ ಮೇಲೆ ದರ್ಪ ತೋರುವುದು ಯಾವ ನಿಯಮದಡಿ ಸರಿ ಎಂಬುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕವಾಗಿ ಹೇಳಬೇಕಿದೆ. ಏಕೆಂದರೆ, ಅದೇ ಅಪರಾಧವನ್ನು ಜನಸಾಮಾನ್ಯರು ಮಾಡಿ, ಆರೋಪ ಸಾಬೀತಾದರೆ ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕೆಲವು ಎಚ್ಚರಿಕೆಗಳನ್ನು ರವಾನಿಸಿದ್ದುಂಟು. ಉಪ ಮುಖ್ಯಮಂತ್ರಿಯವರಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಸುಧಾರಿಸುವ ಕಾಳಜಿ ನಿಜಕ್ಕೂ ಇದ್ದರೆ, ಗೃಹ ಮಂತ್ರಿಗಳ ಜೊತೆ ಸೇರಿ ಕಾರ್ಯಯೋಜನೆ ರೂಪಿಸಲು ಇದು ಸಕಾಲ. ಏಕೆಂದರೆ, ಹಿರಿಯ ಪೊಲೀಸ್ ಅಧಿಕಾರಿಗಳೇ ಹಗರಣಗಳಲ್ಲಿ ಆರೋಪಿಗಳಾಗುತ್ತಿರುವ ಈ ಹೊತ್ತಿನಲ್ಲಿ ಜನಸಾಮಾನ್ಯರು ಸರ್ಕಾರದಿಂದ ಇಂಥದ್ದನ್ನು ನಿರೀಕ್ಷಿಸುವುದು ಸಹಜ ಮತ್ತು ಅನಿವಾರ್ಯ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೋಲೀಸರೆಂದರೆ serve the people ಎಂದರ್ಥ. ಆದರೆ ಸದ್ಯ ನಡೆಯುತ್ತಿರುವುದು ಪೋಲೀಸರೆಂದರೆ rule the people ಎಂದಾಗಿದೆ.

    ಮತ್ತೆ ಸಂಪಾದಕೀಯದಲ್ಲಿ ನ್ಯಾಯಾಲಯಗಳು ತಲೆಕೆಡಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ನಿಜವಾಗಿಯೂ ಪೋಲೀಸರಿಗೆ ಹೆಚ್ಚು ಭಯ ಇರುವುದೇ ನ್ಯಾಯಾಲಯಗಳಿಂದ. ಪೋಲೀಸರವಿರುದ್ಧದ ವೃತ್ತಿ ದುರ್ನಡತೆ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಕ್ರಮಗಳನ್ನು ಕೈಗೊಳ್ಳುವುದು ನ್ಯಾಯಾಲಯಗಳೇ ಹೊರತು ಸರಕಾರಗಳೋ ಹಿರಿಯ ಪೋಲೀಸ್ ಅಧಿಕಾರಿಗಳೋ ಅಲ್ಲ.

    ಪೋಲೀಸರ ಈ ರೀತಿಯ ವರ್ತನೆಗೆ ಜನಗಳೂ ಕೂಡಾ ಕಾರಣ.

    ಎಲ್ಲಿಯವರೆಗೆ ಹೆದರುವವರು ಇರುತ್ತಾರೋ, ಅಲ್ಲಿವರೆಗೂ ಹೆದರಿಸುವವರು ಇರುತ್ತಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X