ದೇವದುರ್ಗ ತಾಲೂಕಿನಲ್ಲಿ ನಡೆದಿರುವ ಮನರೇಗಾ, ವಸತಿ ಯೋಜನೆ ಹಗರಣಗಳ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ಅಕ್ರಮ ಬೆಳಕಿಗೆ ಬಂದಿದೆ. ಒಂದೇ ರಸ್ತೆಗೆ ಮೂರು ಯೋಜನೆಗಳಡಿ ಬಿಲ್ ಸಿದ್ದಪಡಿಸಿ, ಹಣ ಪಡೆದಿರುವ ಆರೋಪ ಕೇಳಿಬಂದಿದ್ದು, ಲೋಕೋಪಯೋಗಿ ಇಲಾಖೆಯ ಬೆಂಗಳೂರಿನ ಅಧಿಕಾರಿಗಳ ತಂಡ ದೇವದುರ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಚನ್ನಬಸಪ್ಪ ಮ್ಯಾಕಲ್ ಅವರ ಅವಧಿಯಲ್ಲಿ ಅನರ್ಹ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿತ್ತು. ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆದಿಲ್ಲ. ಒಂದೇ ಕಾಮಗಾರಿಗೆ ಮೂರು ಬಿಲ್ ಮಾಡಲಾಗಿದೆ. ಸರ್ಕಾರದ ಹಣ ದುರ್ಬಳಕೆಯಾಗಿದೆ ಎಂದು ಅನೇಕ ಸಂಘಟನೆಗಳು, ಸಾರ್ವಜನಿಕರು ದೂರು ನೀಡಿದ್ದರು.
ಲೋಕೋಪಯೋಗಿ ಇಲಾಖೆ, ಪಿಎಂಜಿಎಸ್‌ವೈ ಹಾಗೂ ಕೆಬಿಜೆಎನ್‌ಎಲ್ ಯೋಜನೆಗಳ ಅಡಿಯಲ್ಲಿ ಒಂದೇ ಕಾಮಗಾರಿಗೆ ಮೂರು ಬಿಲ್ ಪಾವತಿಸಲಾಗಿದೆ. 2019-20 ಸಾಲಿನಲ್ಲಿ ರಂಜಿತಾ ಕನ್ಸ್‌ಟ್ರಕ್ಷನ್ಸ್ ಕಂಪನಿಗೆ ಕೋಟಿ ಕೋಟಿ ರೂ.ಗಳ ಕಾಮಗಾರಿ ನೀಡಲಾಗಿದೆ. ಗುತ್ತಿಗೆ ನೀಡುವ ವೇಳೆ ಟೆಂಡರ್ ನಿಯಮ ಉಲ್ಲಂಘನೆಯಾಗಿದೆ. ಅನುದಾನ ದುರ್ಬಳಕೆಯನ್ನೂ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು.
ದೂರಿನ ಆಧಾರ ಮೇಲೆ ಅಧಿಕಾರಿಗಳ ತಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶಿಲನೆ ನಡೆಸಿದೆ. ಇಲಾಖಾವಾರು ಕಳೆದ ಐದು ವರ್ಷಗಳಲ್ಲಿ ಬಳಕೆಯಾಗಿರುವ ಅನುದಾನ, ಏಜೆನ್ಸಿ, ಗುತ್ತಿಗೆದಾರರಿಗೆ ಹಣ ಪಾವತಿಸಿರುವ ಅನುದಾನ ಕುರಿತು ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ತಿಳಿದುಬಂದಿದೆ.