ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಬಂಗಾಳಿ ಭಾಷೆಯನ್ನು ಎರಡನೇ ಭಾಷೆಯಾಗಿ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಪಶ್ಚಿಮ ಬಂಗಾಳದ ಸಂಪುಟ ಸೋಮವಾರ(ಆಗಸ್ಟ್ 7) ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಖಾಸಗಿ ಶಾಲೆಗಳ ವಿರುದ್ಧದ ದೂರುಗಳನ್ನು ಪರಿಶೀಲಿಸಲು ಶಿಕ್ಷಣ ಆಯೋಗವನ್ನು ಸ್ಥಾಪಿಸಲು ತನ್ನ ಒಪ್ಪಿಗೆ ನೀಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬಂಗಾಳಿಯನ್ನು ಎರಡನೇ ಭಾಷೆಯಾಗಿ ಕಲಿಯಲು ಆಯ್ಕೆಗಳಿದ್ದರೂ, ಹೆಚ್ಚಿನ ವಿದ್ಯಾರ್ಥಿಗಳು ಹಿಂದಿ ಅಥವಾ ಇತರ ಭಾಷೆಗಳಿಗೆ ಆದ್ಯತೆ ನೀಡುತ್ತಾರೆ. ಇದರ ಪರಿಣಾಮವಾಗಿ, ವಿದ್ಯಾರ್ಥಿಗಳು ಬೆಂಗಾಳಿ ಭಾಷೆಯನ್ನು ಸರಿಯಾಗಿ ಕಲಿಯುತ್ತಿಲ್ಲ. ಆದಕಾರಣ ರಾಜ್ಯದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಬಂಗಾಳಿ ಭಾಷೆಯನ್ನು ಎರಡನೇ ಭಾಷೆಯಾಗಿ ಕಡ್ಡಾಯಗೊಳಿಸಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ. ಆರೋಗ್ಯ ಆಯೋಗದ ಮಾದರಿಯಲ್ಲಿ ನಿವೃತ್ತ ನ್ಯಾಯಾಧೀಶರನ್ನು ಮುಖ್ಯಸ್ಥರನ್ನಾಗಿ ಶಿಕ್ಷಣ ಆಯೋಗವನ್ನು ಸ್ಥಾಪಿಸಲಾಗುವುದು” ಎಂದು ಅಧಿಕಾರಿ ತಿಳಿಸಿದ್ದಾರೆ.
“ಸಾಂಕ್ರಾಮಿಕ ಸಮಯದಲ್ಲಿ, ಖಾಸಗಿ ಶಾಲೆಗಳು ಬೋಧನಾ ಶುಲ್ಕವನ್ನು ಅತಿಯಾಗಿ ಹೆಚ್ಚಿಸಿರುವ ಬಗ್ಗೆ ನಮಗೆ ಹಲವಾರು ದೂರುಗಳು ಬಂದವು. ಅಲ್ಲದೆ, ಪಠ್ಯಕ್ರಮ ಮತ್ತು ಪರೀಕ್ಷೆಗಳನ್ನು ನಡೆಸಿದ ರೀತಿಯ ಬಗ್ಗೆಯೂ ದೂರುಗಳಿವೆ. ಈ ಆಯೋಗವು ಇವೆಲ್ಲ ಸಮಸ್ಯೆಗಳನ್ನು ಪರಿಶೀಲಿಸುತ್ತದೆ” ಎಂದು ಅಧಿಕಾರಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗುಜರಾತ್ | ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಎಎಪಿ ಮೈತ್ರಿ
ಬಂಗಾಳಿಯನ್ನು ಎರಡನೇ ಭಾಷೆಯಾಗಿ ಕಡ್ಡಾಯಗೊಳಿಸುವ ನಿರ್ಧಾರವನ್ನು ಸ್ವಾಗತಿಸಿದ ‘ಬಂಗಾಳ ಪೊಕ್ಕೋ’ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಬ್ರತ್ಯಾ ಬಸು ಅವರನ್ನು ಅಭಿನಂದಿಸಿದೆ.
“ಬಂಗಾಳದ ಜನರು ಈ ನಿರ್ಧಾರಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದರು” ಎಂದು ಬಂಗಾಳಿ ಭಾಷೆಯ ಪ್ರಚಾರಕ್ಕಾಗಿ ಕೆಲಸ ಮಾಡುವ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಕೌಸಿಕ್ ಮೈತಿ ಹೇಳಿದರು.
ರಾಜ್ಯದಲ್ಲಿ ಏಳು ಹೊಸ ಜಿಲ್ಲೆಗಳ ರಚನೆ ಕುರಿತು ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಮಿತಿ ರಚನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಭೆಯಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಪುಟ ತೆಗೆದುಕೊಂಡ ನಿರ್ಧಾರಗಳು ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ನಿರ್ಧಾರಗಳ ಅನುಷ್ಠಾನಕ್ಕೆ 15 ದಿನಗಳ ಗಡುವನ್ನು ನಿಗದಿಪಡಿಸಿದರು. ಅನುಷ್ಠಾನದ ಕುರಿತು ಮುಖ್ಯಮಂತ್ರಿ ಕಚೇರಿಗೆ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.