ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
“ನುಂಗಿ”
ಅವನು ಜಗವ ನುಂಗಿ,
ಜಗವು ಅವನ ನುಂಗಿ,
ಸೀಮೆಯ ನಿಸ್ಸೀಮೆ ನುಂಗಿ,
ಗುಹೇಶ್ವರನೆಂಬ ನಾಮವ
ಲಿಂಗವು ನುಂಗಿತ್ತು.
ವಚನಾರ್ಥ:
ಇಲ್ಲಿ ಅವನು ಅಂದರೆ ಶರಣ. ನುಂಗು ಅಂದರೆ ಐಕ್ಯನಾಗು ಅಥವಾ ವಿಲೀನನಾಗು ಎಂದರ್ಥ. ಶರಣನು ಜಗತ್ತಿನಲ್ಲಿ ಐಕ್ಯನಾಗಿ, ಜಗತ್ತಿನಲ್ಲಿ ಶರಣನು ಐಕ್ಯನಾಗಿ, ಬಯಲಿನಲ್ಲಿ ಬಟ್ಟಬಯಲು ಐಕ್ಯವಾಗಿ ಕೊನೆಯಲ್ಲಿ ಗುಹೇಶ್ವರನು ಲಿಂಗದಲ್ಲಿ ಐಕ್ಯವಾಗುವ ಪ್ರಕ್ರಿಯೆ ವಚನದಲ್ಲಿ ಚಿತ್ರಿತವಾಗಿದೆ. ಮನುಷ್ಯ ತನ್ನ ಜೀವನ ಗತಿಯಲ್ಲಿ ಮುಂದುವರಿದಂತೆಲ್ಲ ಜಗತ್ತನ್ನೇ ಜಯಿಸಿ ಅರಗಿಸಿ ನುಂಗಿಕೊಳ್ಳಲು ಹೋಗುತ್ತಾನೆ. ಅಂತಿಮವಾಗಿ ಜಗತ್ತು ಆತನನ್ನು ನುಂಗಿಕೊಳ್ಳುತ್ತದೆ. ಸೀಮೆಯ ಅಂದರೆ ಬಯಲನ್ನು ಬಟ್ಟಬಯಲು ನುಂಗುತ್ತದೆ. ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯ ಎಂದು ಅಲ್ಲಮನ ಮಹತ್ವದ ಇನ್ನೊಂದು ವಚನವಿದೆ. ಎಲ್ಲವನ್ನೂ ಎಲ್ಲವೂ ನುಂಗಿದ ನಂತರ ಕೊನೆಯಲ್ಲಿ ಉಳಿಯುವುದು ಗುಹೇಶ್ವರ ಲಿಂಗ.
ಪದ ಪ್ರಯೋಗಾರ್ಥ:
ಹದಿಮೂರು ಪದಗಳ ಚಿಕ್ಕ ವಚನದಲ್ಲಿ ನುಂಗಿ ಎನ್ನುವ ಪದ ನಾಲ್ಕು ಬಾರಿ ಪ್ರಯೋಗವಾಗಿದೆ. ನುಂಗುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ವಚನದಲ್ಲಿ ಬಿಂಬಿಸುತ್ತದೆ. ನುಂಗುವುದು ಅಂದರೆ ಯಾವುದೇ ಪ್ರಚೋದನೆಯಿಲ್ಲದೆ ಅಹಿಂಸಾತ್ಮಕವಾಗಿ ಒಬ್ಬರೊಲ್ಲಬ್ಬರು ಲೀನರಾಗುವ ಪ್ರಸಂಗ. ನುಂಗಿ ಎಂಬ ಪದದ ಅನನ್ಯ ಪ್ರಯೋಗವನ್ನು ಬೇಂದ್ರೆಯವರ ಅದ್ಭುತವಾದ ಆದ್ಯಾತ್ಮಿಕ ಕವಿತೆ “ಚಾಂಗದೇವ ಪಾಸಷ್ಟಿ”ಯಲ್ಲಿ ಕಾಣಬಹುದು. ಕವಿತೆಯಲ್ಲಿ ಬರುವ ಚಾಂಗದೇವ ಮತ್ತು ಜ್ಞಾನದೇವ ಎಂಬ ಇಬ್ಬರು ಸಂತರ ಸಂಗಮ ಸಂವಾದದ ಸಂದರ್ಭದಲ್ಲಿ ಬೇಂದ್ರೆ ಹೀಗೆ ಹೇಳುತ್ತಾರೆ. “ನಾ ನಿನ್ನ ನುಂಗಿ ನೀ ನನ್ನ ನುಂಗಿ ಇಂಗಿತ್ತು ಸರ್ವನಾಮ, ಆತ್ಮಾರ್ಥವಾಗಿ ಆ ನಾನು ನೀನು ತಣಿಸಿತ್ತು ಆತ್ಮ ಕಾಮ”. ಅಲ್ಲಮನ ವಚನದಲ್ಲಿ ಮತ್ತು ಬೇಂದ್ರೆ ಕವಿತೆಯಲ್ಲಿ ಬಳಕೆಯಾಗಿರುವ ನುಂಗಿ ಎಂಬ ಪದಕ್ಕೆ ಸಮಾನ ಉದ್ದೇಶ ಮತ್ತು ಸನ್ನಿವೇಶಗಳಿವೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.