- ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಸಂತೋಷ್ ರಾವ್ ಮನೆ
- ಮಾನವೀಯ ಕಾರ್ಯ ನಡೆಸಿದ ಸೌಜನ್ಯಪರ ಹೋರಾಟಗಾರರ ತಂಡ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಕಾರ್ಕಳದ ಸಂತೋಷ್ ರಾವ್ ಮನೆಯನ್ನು ಸೌಜನ್ಯಪರ ಹೋರಾಟಗಾರರ ತಂಡವೇ ಖುದ್ದು ಮುತುವರ್ಜಿ ವಹಿಸಿ, ಅವರ ಮನೆಯನ್ನು ಬೆಳಗಿಸಿದ ಮಾನವೀಯ ಕಾರ್ಯ ನಡೆದಿದೆ.
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಮತ್ತು ಸಮಾನ ಮನಸ್ಕರ ತಂಡ ಕಳೆದ ಮೂರು ದಿನಗಳಿಂದ ಸಂತೋಷ್ ರಾವ್ ಮನೆಯ ಧೂಳು ತೆಗೆಸಿ, ಸುಣ್ಣ-ಬಣ್ಣ ಬಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಅಲ್ಲದೇ, ನಿವೃತ್ತ ಶಿಕ್ಷಕರಾಗಿರುವ, ಸಂತೋಷ್ ರಾವ್ ತಂದೆ ಸುಧಾಕರ ರಾವ್ ಅವರಿಗೆ ಕ್ಷೌರ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಗುರುವಂದನಾ ಕಾರ್ಯಕ್ರಮ ಮಾಡಿದ್ದಾರೆ. ಬಳಿಕ ಮನೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಮತ್ತೆ ಮನೆಗೆ ಹೊಸ ಕಳೆಯನ್ನು ನೀಡಲು ಶ್ರಮಿಸಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟ ಬಳಿಕ, ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿರುವ ಸಂತೋಷ್ ರಾವ್ ಮನೆಯವರ ಕಡೆ ಸಂಬಂಧಿಕರೂ ಸೇರಿದಂತೆ ಗ್ರಾಮಸ್ಥರು ಕಾಲಿಡುತ್ತಿರಲಿಲ್ಲ. ಅಲ್ಲದೇ, ಮಗನ ಕೊರಗಿನಲ್ಲೇ ಸಂತೋಷ್ ತಾಯಿ ಕೂಡ 2016ರಲ್ಲಿ ನಿಧನ ಹೊಂದಿದ್ದರು. ತಾಯಿ ಹೋದ ನಂತರ ಸಂತೋಷ್ ಮನೆಯ ಧೂಳು ಹೊಡೆದು ವರ್ಷಗಳೇ ಸಂದಿತ್ತು. ಮನೆಯ ಕೋಣೆಗಳ ಗೋಡೆಗಳಲ್ಲೆಲ್ಲ ಹುತ್ತ ಬೆಳೆದಿದ್ದವು. ಸಂತೋಷ್ ರಾವ್ ತಂದೆ ಸುಧಾಕರ ರಾವ್ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು. ಸಂತೋಷ್ ಮನೆಯ ಪರಿಸ್ಥಿತಿಯನ್ನು ಈ ದಿನ.ಕಾಮ್ ತಂಡ ಇತ್ತೀಚೆಗೆ ಭೇಟಿ ನೀಡಿದ್ದ ವೇಳೆಯೂ ವರದಿ ಮಾಡಿತ್ತು.
ಇದನ್ನು ಓದಿದ್ದೀರಾ? ಸೌಜನ್ಯ ಪ್ರಕರಣ Exclusive | ಯಾರದ್ದೋ ಷಡ್ಯಂತ್ರಕ್ಕೆ ನಮ್ಮ ಕುಟುಂಬ ಛಿದ್ರಗೊಂಡಿದೆ- ಸುಧಾಕರ ರಾವ್
ಇಂದು ಸಂತೋಷ್ ಮನೆಯಲ್ಲಿ ಗುರುವಂದನಾ ಕಾರ್ಯಕ್ರಮ ಮಾಡುವ ಮೂಲಕ ಮತ್ತೆ ಹೊಸ ಬೆಳಕು ಹರಿಯಲು ಸೌಜನ್ಯಪರ ಹೋರಾಟಗಾರರ ತಂಡವೇ ಮಾನವೀಯ ಕಾರ್ಯ ನಡೆಸಿದೆ ಎಂಬುದು ವಿಶೇಷ.

ಜ್ಯೋತಿ ಬೆಳಗಿಸಿದ ಬಳಿಕ ಮಾತನಾಡಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ‘ವ್ಯವಸ್ಥಿತ ಷಡ್ಯಂತ್ರದ ಮೂಲಕ ನಿಮ್ಮ ಮಗನನ್ನು ಸೌಜನ್ಯ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅದು ಆಗಬಾರದಿತ್ತು. ಒಂದಲ್ಲ ಒಂದು ದಿನ ಎಲ್ಲ ಸತ್ಯ ಹೊರಬರಲಿದೆ. ಅಮಾಯಕನಾಗಿರುವ ನಿಮ್ಮ ಮಗನಿಗೆ ಸರ್ಕಾರದಿಂದ ಪರಿಹಾರ ದೊರಕಿಸಲು ಹೋರಾಟ ನಡೆಯಲಿದೆ’ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಣಿಪುರದಿಂದ ‘ಈ ದಿನ’ ಪ್ರತ್ಯಕ್ಷ ವರದಿ | ಬಿಜೆಪಿ ಆರಂಭಿಸಿರುವ ’ಮೈತೇಯಿ ಗರ್ಭಿಣಿಯರ ಶಿಬಿರ’ದಲ್ಲಿ…
ಬಳಿಕ ಮಾತನಾಡಿದ ಒಡನಾಡಿ ಸ್ಟ್ಯಾನ್ಲಿ, ಈಗ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯವೇ ಹೇಳಿದೆ. ಹಾಗಾಗಿ, ಸಂತೋಷ್ ಕುಟುಂಬ ಸಂಬಂಧಿಕರು ಮತ್ತು ಗ್ರಾಮಸ್ಥರು ಅವರನ್ನು ಹತ್ತಿರ ಮಾಡಿಕೊಂಡು ಸಾಂತ್ವನ ಹೇಳಬೇಕು. ನಾವು ಮೈಸೂರಿನಲ್ಲಿರುವವರು. ಹಾಗಾಗಿ ನಮಗೆ ಎಲ್ಲ ದಿನ ಬರಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಈ ಊರಿನವರು ಮತ್ತು ಸಂಬಂಧಿಕರು ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು’ ಎಂದು ವಿನಂತಿಸಿದರು.
ಗುರುವಂದನೆ ಆಯೋಜಿಸಿದ್ದಕ್ಕೆ ಸುಧಾಕರ ರಾವ್ ಹಾಗೂ ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಧನ್ಯವಾದವಿತ್ತು, ಭಾವುಕರಾದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನವೀನ್ ರೈ, ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.