ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ: ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ; ನಾಳೆ ಪ್ರಧಾನಿ ಉತ್ತರ

ರಾಹುಲ್ ಮತ್ತು ನರೇಂದ್ರ ಮೋದಿ
Rahul and narendra modi

ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಮಂಗಳವಾರದಿಂದ ಲೋಕಸಭೆಯಲ್ಲಿ ಚರ್ಚೆ ಆರಂಭವಾಗಿದೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಚರ್ಚೆಯ ಕುರಿತು ಉತ್ತರ ನೀಡಲಿದ್ದು, ಬಳಿಕ ಮತದಾನ ನಡೆಯಲಿದೆ.

ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡದಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೋಕಸಭೆಗೆ ಎಳೆದು ತರುವ ಸಲುವಾಗಿಯೇ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟ ಅವಿಶ್ವಾಸ ನಿರ್ಣಯ ಮಂಡಿಸಿದೆ.

ಅವಿಶ್ವಾಸ ನಿರ್ಣಯದ ಬಗ್ಗೆ ನಡೆದ ಚರ್ಚೆಯಲ್ಲಿ ಇಂದು (ಆಗಸ್ಟ್ 09) ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪ್ರಧಾನಿ ಅವರು ಮಣಿಪುರಕ್ಕೆ ಹೋಗಿಲ್ಲ, ಏಕೆಂದರೆ ಅವರು ಅದನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ. ನೀವು ಮಣಿಪುರವನ್ನು ವಿಭಜಿಸಿದ್ದೀರಿ. ಮಣಿಪುರವು ಭಾರತದ ಒಂದು ಹೃದಯದ ಧ್ವನಿ. ನೀವು ಆ ಧ್ವನಿಯನ್ನು ಕೊಂದಿದ್ದೀರಿ. ನೀವು ದೇಶದ್ರೋಹಿಗಳು. ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ಇನ್ನೊಬ್ಬರು ತಾಯಿ ಭಾರತ ಮಾತೆ. ನೀವು ಅವಳನ್ನು ಮಣಿಪುರದಲ್ಲಿ ಕೊಂದಿದ್ದೀರಿ. ಅದಕ್ಕಾಗಿಯೇ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುವುದಿಲ್ಲ. ನೀವು ಭಾರತ ಮಾತೆಯ ರಕ್ಷಕರಲ್ಲ, ಅವಳ ಹಂತಕರು” ಎಂದು ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮಣಿಪುರದಿಂದ ‘ಈ ದಿನ’ ಪ್ರತ್ಯಕ್ಷ ವರದಿ | ಬಿಜೆಪಿ ಆರಂಭಿಸಿರುವ ’ಮೈತೇಯಿ ಗರ್ಭಿಣಿಯರ ಶಿಬಿರ’ದಲ್ಲಿ…

“ನೀವು ಎಲ್ಲೆಡೆ ಸೀಮೆಎಣ್ಣೆ ಎರಚಿದ್ದೀರಿ, ನೀವು ಮಣಿಪುರಕ್ಕೆ ಬೆಂಕಿ ಹಚ್ಚಿದ್ದೀರಿ. ಈಗ ಹರಿಯಾಣದಲ್ಲಿ ಅದೇ ಪ್ರಯತ್ನ ಮಾಡುತ್ತಿದ್ದೀರಿ. ಪ್ರಧಾನಿ ಮೋದಿಯವರು ಭಾರತದ ಜನರ ಮಾತು ಕೇಳದಿದ್ದರೆ, ಅವರು ಯಾರ ಮಾತು ಆಲಿಸುತ್ತಾರೆ?’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಮಣಿಪುರದಲ್ಲಿ ಮಗನನ್ನು ಗುಂಡಿನ ದಾಳಿಯಿಂದ ಕಳೆದುಕೊಂಡ ಮಹಿಳೆಯೊಂದಿಗೆ ತಾನು ನಡೆಸಿದ್ದ ಸಂಭಾಷಣೆಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ‘ಇಡೀ ರಾತ್ರಿ, ನಾನು ನನ್ನ ಮಗನ ಶವದೊಂದಿಗೆ ಮಲಗಿದ್ದೆ, ನಾನು ಹೆದರಿ ನನ್ನ ಮನೆಯಿಂದ ಹೊರಬಂದೆ’ ಎಂದು ಆ ಮಹಿಳೆ ತನ್ನ ಬಳಿ ಹೇಳಿದ ಕರುಣಾಜನಕ ಕಥೆಯನ್ನು ಸದನದಲ್ಲಿ ವಿವರಿಸಿದರು.

ಪ್ರಧಾನಿ ಉತ್ತರದ ನಂತರ ಅವಿಶ್ವಾನ ನಿರ್ಣಯದ ಮತ

ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ದಲ್ಲಿ ಅವಿಶ್ವಾಸ ನಿರ್ಣಯ ಗೆಲ್ಲುವಷ್ಟು ಮತಗಳಿಲ್ಲ. ಆದರೂ ಅವಿಶ್ವಾಸ ನಿಲುವಳಿ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೋಕಸಭೆಗೆ ಎಳೆದು ತರವುದಕ್ಕಾಗಿಯೇ ನಿರ್ಣಯ ಮಂಡಿಸಲಾಗಿದೆ. ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಈವರೆಗೂ ಸಂಸತ್ತಿನಲ್ಲಿ ಹೇಳಿಕೆ ನೀಡಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅವರು ಭಾಷಣ ಮಾಡಲೇಬೇಕಾಗುತ್ತದೆ. ಮೋದಿ ಅವರನ್ನು ಹೇಗಾದರೂ ಮಾಡಿ ಸಂಸತ್ತಿನಲ್ಲಿ ಭಾಷಣ ಮಾಡಿಸಬೇಕೆಂದು ವಿಪಕ್ಷಗಳು ಈ ನಿಲುವಳಿ ಮಂಡಿಸಿವೆ. ಮೋದಿ ಗುರುವಾರ ಸದನದಲ್ಲಿ ಮಾತನಾಡಲಿದ್ದು, ಮಣಿಪುರ ವಿಷಯವನ್ನೂ ಪ್ರಸ್ತಾಪಿಸಲಿದ್ದಾರೆ.

ಇದು 2018ರ ಜು.20ರ ನಂತರ ಲೋಕಸಭೆ ಕಾಣಲಿರುವ ಮೊದಲ ಅವಿಶ್ವಾಸ ನಿಲುವಳಿಯಾಗಿದೆ. ಆಗ ನಿರ್ಣಯ ಮತಕ್ಕೆ ಹಾಕಿದಾಗ ಎನ್‌ಡಿಎಗೆ 325 ಹಾಗೂ ವಿಪಕ್ಷಗಳಿಗೆ ಕೇವಲ 126 ಮತ ಬಿದ್ದಿದ್ದವು.

ಅವಿಶ್ವಾಸ ನಿರ್ಣಯಕ್ಕೆ ಸದನದ ಬಲಾಬಲ

ಲೋಕಸಭೆ ಒಟ್ಟು ಬಲಾಬಲ: 543

ಈಗಿರುವ ಸ್ಥಾನ: 540

ಬಹುಮತಕ್ಕೆ: 271

ಎನ್‌ಡಿಎ: 330

ಇಂಡಿಯಾ ಕೂಟ: 140

ಇತರರು: 60

LEAVE A REPLY

Please enter your comment!
Please enter your name here