ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

Date:

Advertisements

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು ಸಾಕ್ಷಿಯಾಗಿರುವೆ. ಆತನ ತೀರ್ಪಿನಿಂದ ಸಂತೃಪ್ತನಾಗಿದ್ದೇನೆ. ಆತನನ್ನು ಭೇಟಿಯಾಗುವ ಖಾತರಿಯಿದೆ. ಮತ್ತು ದೇವರ ಬಳಿಯಿರುವುದು ಉತ್ತಮವಾದದ್ದು ಮತ್ತು ಶಾಶ್ವತವಾದದ್ದು ಎಂದು ಖಚಿತವಾಗಿದೆ. ಓ ದೇವರೇ, ನನ್ನನ್ನು ಶಹೀದರ ಸಾಲಿನಲ್ಲಿ ಸ್ವೀಕರಿಸು, ನನ್ನ ಭೂತಕಾಲದ ಮತ್ತು ಭವಿಷ್ಯದ ಪಾಪಗಳನ್ನು ಕ್ಷಮಿಸು, ನನ್ನ ರಕ್ತವನ್ನು ನನ್ನ ಜನರು ಮತ್ತು ಕುಟುಂಬದ ಸ್ವಾತಂತ್ರ್ಯದ ಮಾರ್ಗವನ್ನು ಬೆಳಗಿಸುವ ಬೆಳಕಾಗಿಸು…

ಸಾಮಾನ್ಯವಾಗಿ ಕೆಲವು ವ್ಯಕ್ತಿಗಳು ತಮ್ಮ ಜೀವನ ಕೊನೆಯಾದ ನಂತರ ತಮ್ಮ ಆಸ್ತಿ(ಈ ಪದವನ್ನು ಅದರ ವಿಸ್ತೃತ ಅರ್ಥದಲ್ಲಿ ಬಳಸಲಾಗಿದೆ) ಯಾರಿಗೆ ಹಂಚಿಕೆಯಾಗಬೇಕೆಂಬ ನಿಟ್ಟಿನಲ್ಲಿ ಉಯಿಲನ್ನು ಬರೆದಿಡುತ್ತಾರೆ. ಒಡಹುಟ್ಟಿದ ಮಕ್ಕಳ ನಡುವೆ ಸೌಹಾರ್ದ ಸಂಬಂಧವಿರದೆ, ಮನಸ್ತಾಪ, ದ್ವೇಷ, ಅಸೂಯೆ ಇತ್ಯಾದಿಗಳು ಮನೆಮಾಡಿದ್ದರೆ, ಹೆತ್ತವರು ಉಯಿಲನ್ನು ಬರೆಯುವ ವಾಡಿಕೆಯಿದೆ.  ಉಯಿಲು ಇದ್ದರೂ, ಹೆತ್ತವರು ಗತಿಸಿದ ಮೇಲೆ ವಾರಸುದಾರರು ಪರಸ್ಪರ ಜಟಾಪಟಿ ಮಾಡುವುದನ್ನು ಕಂಡಿದ್ದೇವೆ; ಕೇಳಿದ್ದೇವೆ. 

ಆದರೆ ಇಲ್ಲಿ ಪ್ರಸ್ತಾಪಿಸಲ್ಪಡುತ್ತಿರುವುದು ಒಬ್ಬ ಪತ್ರಕರ್ತನ ಭಿನ್ನ ಉಯಿಲು. ಆತ ಇಪ್ಪತ್ತೆಂಟು ವರ್ಷದ ಒಬ್ಬ ಯುವ ಪ್ಯಾಲೆಸ್ತೀನಿ ಪತ್ರಕರ್ತ ಅನಸ್-ಅಲ್-‌ಶರೀಫ್.‌ ವಿಡಿಯೋಗ್ರಾಫರ್‌ ಕೂಡ ಆಗಿದ್ದ ಅನಸ್‌ 1996ರಲ್ಲಿ ಗಾಝಾ ಪಟ್ಟಿಯಲ್ಲಿರುವ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಜನ್ಮವನ್ನು ತಳಯುತ್ತಾನೆ. ಗಾಝಾದ ಅಲ್- ಅಖ್ಸಾ ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ(ಮಾಸ್‌ ಕಮ್ಯುನಿಕೇಷನ್)‌ ವಿಷಯದಡಿ ರೇಡಿಯೊ ಮತ್ತು ಟೆಲಿವಿಷನ್‌ ಕುರಿತು ವಿಶೇಷ ವ್ಯಾಸಂಗವನ್ನು ಮಾಡುತ್ತಾನೆ. ಶಿಕ್ಷಣವನ್ನು ಪಡೆದ ತರುವಾಯ ಅಲ್-ಶಮಲ್‌ ಮೀಡಿಯಾ ನೆಟ್‌ವರ್ಕ್ನಲ್ಲಿ ಕೆಲಸವನ್ನು ಮಾಡಲು ಶುರು ಮಾಡುತ್ತಾನೆ. ನಂತರ ಖತಾರ್‌ ಮೂಲದ ಅಲ್ ಜಝೀರಾ Al Jazeera ಮಾಧ್ಯಮ ಸಂಸ್ಥೆಗೆ ಸೇರುತ್ತಾನೆ. ಅದರ ಉತ್ತರ ಗಾಝಾದ ವರದಿಗಾರನಾಗಿ ಕೆಲಸವನ್ನು ಮಾಡಲು ತೊಡಗುತ್ತಾನೆ.

Advertisements
Anas al Sharif image 3
ಯುದ್ಧ ಭೂಮಿಯಿಂದ ವರದಿ ನೀಡುತ್ತಿದ್ದ ಅನಸ್‌

ಪ್ರಪಂಚಕ್ಕೇ ತಿಳಿದಿರುವ ಹಾಗೆ, ಅಕ್ಟೋಬರ್‌ 7, 2023ರಂದು ಹಮಾಸ್‌ ಸಂಘಟನೆಯ ದಾರುಣ ದಾಳಿಯಲ್ಲಿ ಸುಮಾರು 1200 ಇಸ್ರೇಲಿಗರು ಹತ್ಯೆಯಾದರು; ಸುಮಾರು 250 ಮಂದಿಯನ್ನು ಒತ್ತಯಾಳುಗಳನ್ನಾಗಿ ಗಾಝಾಗೆ ಕೊಂಡೊಯ್ಯಲಾಯಿತು. ನಂತರ ಪ್ರಾರಂಭವಾದ ಹಾಗೂ ಇಂದೂ ಜರಗುತ್ತಿರುವ ಗಾಝಾ ಪಟ್ಟಿಯ ಮೇಲಿನ ಇಸ್ರೇಲಿ ಮಿಲಿಟರಿ ಪಡೆಗಳ ದಾಳಿಗಳಲ್ಲಿ ಸುಮಾರು 62,000 ಪ್ಯಾಲೆಸ್ತೀನರು ಕೊಲ್ಲಲ್ಪಟ್ಟಿದ್ದಾರೆ. ಗತಿಸಿದವರಲ್ಲಿ ಸಾಕಷ್ಟು ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.  ಪ್ರಸ್ತುತ ಅಲ್ಲಿ ಭೀಕರ ಕ್ಷಾಮದ ಸ್ಥಿತಿ ಉದ್ಭವಿಸಿದೆ. ಪೌಷ್ಟಿಕಾಂಶದ ಕೊರತೆಯಿಂದ ಉಂಟಾದ ಅಲ್ಲಿನ ಮಕ್ಕಳ ಹೃದಯವಿದ್ರಾವಕ ಪರಿಸ್ಥಿತಿಯ ಚಿತ್ರಗಳನ್ನು ವೀಕ್ಷಿಸುವುದಕ್ಕೆ ತುಂಬ ವೇದನೆಯಾಗುತ್ತದೆ. ಇವನೆಲ್ಲ ದಿಟ್ಟತನದಿಂದ ಅನಸ್‌ ಇತರ ತನ್ನ ಸಹೋದ್ಯೋಗಿಗಳ ಜೊತೆ ಸೇರಿ ವರದಿ ಮಾಡುತ್ತ ಸಾಗುತ್ತಾನೆ.

ಉತ್ತರ ಗಾಝಾದಿಂದ ಪ್ಯಾಲೆಸ್ತೀನರು ಜಾಗ ಖಾಲಿ ಮಾಡಬೇಕೆಂದು ಇಸ್ರೇಲಿನ ಮಿಲಿಟರಿ ಪಡೆಗಳು ಹುಕುಂ ನೀಡಿದಾಗ, ಅದನ್ನು ಧಿಕ್ಕರಿಸಿ, ಅನಸ್‌ ಧೈರ್ಯದಿಂದ ತನ್ನ ವರದಿಗಾರಿಕೆಯನ್ನು ಮುಂದುವರೆಸುತ್ತಾನೆ. ಗಾಝಾ ಮೇಲಿನ ಇಸ್ರೇಲಿ ದಾಳಿ ಶುರುವಾದ ಸುಮಾರು ಒಂದೆರಡು ತಿಂಗಳಲ್ಲೇ ಅನಸ್‌ ನ ತಂದೆ ಅಸ್ವಸ್ಥತೆಯ ಕಾರಣದಿಂದ ಜಬಾಲಿಯಾ ನಿರಾಶ್ರಿತರ ಶಿಬಿರದಿಂದ ಹೊರಬರಲು ಸಾಧ್ಯವಾಗಿರುವುದಿಲ್ಲ.  ನಂತರ ಆ ಶಿಬಿರದ ಮೇಲೆ ಆಕ್ರಮಣವಾದಾಗ ಅವರು ಅಸುನೀಗುತ್ತಾರೆ. ಅನಾಸ್‌ಗೆ ಇಸ್ರೇಲಿ ಮಿಲಿಟರಿ ಪಡೆಗಳಿಂದ ತನ್ನ ಸ್ಥಳದಿಂದ ತೊರೆಯಲು ಬೆದರಿಕೆಯ ಕರೆಗಳು ಬರುತ್ತಿರುತ್ತವೆ. ಅವುಗಳನ್ನು ಲೆಕ್ಕಸದೇ, ಅನಸ್‌ ತನ್ನ ಕೆಲಸದಲ್ಲಿ ನಿರತನಾಗುತ್ತಾನೆ ; ವಿಶ್ವಕ್ಕೆ ಗಾಝಾದಲ್ಲಿ  ಇಸ್ರೇಲಿಗರಿಂದ ಜರಗುತ್ತಿರುವ ಜನಾಂಗ ಹತ್ಯೆಗಳ ನಾನಾ ಕಥೆಗಳನ್ನು ತಿಳಿಸುತ್ತಾನೆ! ಹೀಗೆ ಉನ್ನತ ಮಟ್ಟದ ವೃತ್ತಿಪರತೆಯ ಬದ್ಧತೆಯನ್ನು ತೋರಿಸುತ್ತಾನೆ!

ಮೊನ್ನೆ ಅಂದರೆ ಆಗಸ್ಟ್‌ 10, 2025ರಂದು ಗಾಝಾದ ಅಲ್-ಶಿಫಾ ಆಸ್ಪತ್ರೆಯ ಹೊರಗಿದ್ದ ಪತ್ರಕರ್ತರ ಟೆಂಟ್‌ ಮೇಲೆ ಇಸ್ರೇಲಿ ಮಿಲಿಟರಿ ಪಡೆಯ ಡ್ರೋನ್‌ ದಾಳಿ ಜರುಗಿತು. ಅದರಲ್ಲಿ ಇಬ್ಬರು ವರದಿಗಾರರು – ಅನಸ್-ಅಲ್-‌ಶರೀಫ್ ಮತ್ತು ಮೊಹಮ್ಮದ್‌ ಮತ್ತು ಮೂವರು ಕ್ಯಾಮೆರಾಮೆನ್‌ಗಳು ಹತ್ಯೆಯಾದರು. ಇಸ್ರೇಲ್‌ ಮಿಲಿಟರಿ ಪಡೆ ಅನೇಕ ತಿಂಗಳಿಂದ ಅನಸ್‌ ಹಮಾಸ್‌ ಸಂಘಟನೆಯ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವನೆಂದು ಆಪಾದಿಸುತ್ತಲೇ ಬಂದಿತ್ತು. ಈ ಕಾರಣದಿಂದಲೇ ಅತ ಮತ್ತು ಆತನ ಸಹೋದ್ಯೋಗಿಗಳು ಇದ್ದ ಟೆಂಟನ್ನು ಧ್ವಂಸ ಮಾಡಲಾಯಿತು ಎಂಬರ್ಥದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಆದರೆ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಆಲ್ ಝಸಿರಾ ಇದನ್ನು ತಳ್ಳಿ ಹಾಕಿವೆ.

will

ಅನಸ್‌ ಇದೇ ವರ್ಷದ ಏಪ್ರಿಲ್‌ 6ರಂದು ಸಾಮಾಜಿಕ ಜಾಲತಾಣವಾದ X ನಲ್ಲಿ ಪ್ಯಾಲೆಸ್ತೀನರನ್ನು ಉದ್ದೇಶಿಸಿ ತನ್ನ ಉಯಿಲು ಮತ್ತು ಅಂತಿಮ ಸಂದೇಶವನ್ನು ಹಾಕಿದ್ದ. ಅದು ಹೀಗಿದೆ…

“ಇದು ನನ್ನ ಅಂತಿಮ ಸಂದೇಶವಾಗಿದೆ. ಈ ಮಾತುಗಳು ನಿಮಗೆ ತಲುಪಿದರೆ, ಇಸ್ರೇಲ್ ನನ್ನನ್ನು ಕೊಂದು ನನ್ನ ಧ್ವನಿಯನ್ನು ಸದ್ದಿಲ್ಲದಂತೆ ಮಾಡಿರುವುದು ಯಶಸ್ವಿಯಾಗಿದೆ ಎಂದು ತಿಳಿಯಿರಿ.

ಮೊದಲಿಗೆ, ನಿಮಗೆ ಶಾಂತಿ, ದೇವರ ಕರುಣೆ ಮತ್ತು ಆಶೀರ್ವಾದಗಳು ಒದಗಲಿ. ಜಬಾಲಿಯಾ ಶರಣಾರ್ಥಿ ಶಿಬಿರದ ಕಿರಿದಾದ ರಸ್ತೆಗಳು ಮತ್ತು ಬೀದಿಗಳಲ್ಲಿ ನಾನು ಕಣ್ಣುತೆರೆದಾಗಿನಿಂದ, ನನ್ನ ಜನರಿಗೆ ಬೆಂಬಲವಾಗಿರಲು ಮತ್ತು ಅವರ ಧ್ವನಿಯಾಗಿರಲು ಎಲ್ಲ ಪ್ರಯತ್ನ ಮತ್ತು ಶಕ್ತಿಯನ್ನು ನೀಡಿದ್ದೇನೆ ಎಂದು ದೇವರಿಗೆ ಗೊತ್ತಿದೆ. ನನ್ನ ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಇಸ್ರೇಲ್ ಆಕ್ರಮಿತವಾಗಿರುವ ನಮ್ಮ ಮೂಲ ಊರಾದ ಅಸ್ಕಲಾನ್ (ಅಲ್-ಮಜ್ದಲ್)ಗೆ ಮರಳುವವರೆಗೆ ದೀರ್ಘಕಾಲ ಬದುಕಬೇಕೆಂಬುದು ನನ್ನ ಆಸೆಯಾಗಿತ್ತು. ಆದರೆ ದೇವರ ಇಚ್ಛೆಯೇ ಮೊದಲು ಬಂದಿತು ಮತ್ತು ಆತನ ತೀರ್ಪು ಅಂತಿಮವಾಗಿದೆ.

ನಾನು ನೋವನ್ನು ಜೀವಿಸಿದ್ದೇನೆ, ದುಃಖ ಮತ್ತು ಕಳೆದುಕೊಳ್ಳುವಿಕೆಯನ್ನು ಹಲವು ಬಾರಿ ಅನುಭವಿಸಿದ್ದೇನೆ. ಆದರೂ, ಸತ್ಯವನ್ನು ಯಾವುದೇ ಭಯ, ಕಳಂಕವಿಲ್ಲದೆ, ಯಥಾವತ್ತಾಗಿ ತಿಳಿಸಲು ಒಮ್ಮೆಯೂ ಹಿಂಜರಿಯಲಿಲ್ಲ. ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ನಮ್ಮ ಜನರು ಎದುರಿಸಿರುವ ಕಗ್ಗೊಲೆಯನ್ನು ತಡೆಯಲು ಏನೂ ಮಾಡದವರಿಗೆ, ನಮ್ಮ ಕೊಲೆಯನ್ನು ಒಪ್ಪಿಕೊಂಡವರಿಗೆ, ನಮ್ಮ ಉಸಿರನ್ನು ಕಟ್ಟಿಹಾಕಿದವರಿಗೆ, ನಮ್ಮ ಮಕ್ಕಳ ಮತ್ತು ಮಹಿಳೆಯರ ಛಿದ್ರವಾದ ದೇಹಗಳಿಂದ ಹೃದಯವೇ ಕದಲದವರಿಗೆ ದೇವರು ಸಾಕ್ಷಿಯಾಗಿರಲಿ.

ನಾನು ನಿಮಗೆ ಪ್ಯಾಲೆಸ್ಟೈನ್‌ನ ಜವಾಬ್ದಾರಿಯನ್ನು ವಹಿಸುತ್ತೇನೆ—ಮುಸ್ಲಿಮರ ಕಿರೀಟದ ರತ್ನ, ಈ ಜಗತ್ತಿನ ಪ್ರತಿಯೊಬ್ಬ ಸ್ವತಂತ್ರ ವ್ಯಕ್ತಿಯ ಹೃದಯದ ಸ್ಪಂದನ. ಅದರ ಜನರನ್ನು, ತಮ್ಮ ಕನಸು ಕಾಣಲು ಅಥವಾ ಶಾಂತಿ ಮತ್ತು ಸುರಕ್ಷತೆಯಲ್ಲಿ ಬದುಕಲು ಸಮಯವೇ ದೊರೆಯದ, ಇಸ್ರೇಲ್‌ನ ಸಾವಿರಾರು ಟನ್‌ಗಳ ಬಾಂಬ್‌ಗಳಿಂದ ಮತ್ತು ಕ್ಷಿಪಣಿಗಳಿಂದ ಛಿದ್ರವಾಗಿ, ಗೋಡೆಗಳ ಮೇಲೆ ಚೆಲ್ಲಾಪಿಲ್ಲಿಯಾದ ಶುದ್ಧ ದೇಹದ ಮಕ್ಕಳನ್ನು ನಾನು ನಿಮಗೆ ಒಪ್ಪಿಸುತ್ತೇನೆ. ಸಂಕೋಲೆಗಳಿಂದ ನಿಮ್ಮನ್ನು ಮೌನಗೊಳಿಸಲು ಬಿಡಬೇಡಿ, ಗಡಿಗಳಿಂದ ನಿಮ್ಮನ್ನು ತಡೆಯಲು ಅವಕಾಶ ಕೊಡಬೇಡಿ. ನಮ್ಮ ಕಸಿಯಲ್ಪಟ್ಟ ಮಾತೃಭೂಮಿಯ ಮೇಲೆ ಘನತೆ ಮತ್ತು ಸ್ವಾತಂತ್ರ್ಯದ ಸೂರ್ಯ ಉದಯಿಸುವವರೆಗೆ ಭೂಮಿಯ ಮತ್ತು ಜನರ ಮುಕ್ತಿಗಾಗಿ ಸೇತುವೆಗಳಾಗಿರಿ.

ನನ್ನ ಕುಟುಂಬವನ್ನು ನಾನು ನಿಮಗೆ ಒಪ್ಪಿಸುತ್ತೇನೆ. ನನ್ನ ಕಣ್ಣಿನ ಕಾಯ, ನನ್ನ ಪ್ರೀತಿಯ ಮಗಳು ಶಾಮ್‌ಳನ್ನು, ಅವಳನ್ನು ಬೆಳೆಯುವುದನ್ನು ನಾನು ಕನಸಿನಂತೆ ಕಾಣಲು ದಿನಗಳು ಅವಕಾಶ ನೀಡಲಿಲ್ಲ. ನನ್ನ ಪ್ರೀತಿಯ ಮಗ ಸಲಾಹ್‌ನನ್ನು, ಅವನು ನನ್ನ ಜವಾಬ್ದಾರಿಗಳನ್ನು ಹೊರಲು ಮತ್ತು ಮಿಷನ್ ಮುಂದುವರಿಸಲು ಸಾಕಷ್ಟು ಬಲಿಷ್ಠನಾಗುವವರೆಗೆ ಅವನೊಂದಿಗೆ ಸಾಥ್‌ನೀಡಲು ನಾನು ಬಯಸಿದ್ದೆ. ನನ್ನ ಪ್ರೀತಿಯ ತಾಯಿಯನ್ನು, ಅವರ ಆಶೀರ್ವಾದದ ಪ್ರಾರ್ಥನೆಗಳು ನನ್ನನ್ನು ಇಂದಿನ ಸ್ಥಾನಕ್ಕೆ ಕೊಂಡೊಯ್ದವು, ಅವರ ಪ್ರಾರ್ಥನೆಗಳು ನನ್ನ ಕೋಟೆಯಾಗಿದ್ದವು, ಅವರ ಬೆಳಕು ನನ್ನ ಮಾರ್ಗವನ್ನು ಬೆಳಗಿತು. ದೇವರು ಅವರ ಹೃದಯವನ್ನು ಬಲಪಡಿಸಲಿ ಮತ್ತು ನನ್ನ ಪರವಾಗಿ ಅವರಿಗೆ ಉತ್ತಮ ಪ್ರತಿಫಲವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಜೀವನದ ಸಂಗಾತಿಯಾದ, ನನ್ನ ಪ್ರೀತಿಯ ಪತ್ನಿ ಉಮ್ ಸಲಾಹ್, ಬಯಾನ್‌ನನ್ನು ಸಹ ನಾನು ನಿಮಗೆ ಒಪ್ಪಿಸುತ್ತೇನೆ. ಯುದ್ಧವು ನಮ್ಮನ್ನು ದೀರ್ಘ ತಿಂಗಳುಗಳವರೆಗೆ ಬೇರ್ಪಡಿಸಿತು. ಆದರೂ ಅವಳು ನಮ್ಮ ಒಡಂಬಡಿಕೆಗೆ ನಿಷ್ಠೆಯಿಂದ, ಒಲಿವ್ ಮರದ ಕಾಂಡದಂತೆ ಬಾಗದೆ, ತಾಳ್ಮೆಯಿಂದ ಮತ್ತು ಶಕ್ತಿಯಿಂದ, ನನ್ನ ಅನುಪಸ್ಥಿತಿಯಲ್ಲಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಳೆ. ದೇವರ ನಂತರ ಅವರೊಂದಿಗೆ ನಿಲ್ಲಲು ನಾನು ನಿಮಗೆ ಒಪ್ಪಿಸುತ್ತೇನೆ.

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು ಸಾಕ್ಷಿಯಾಗಿರುವೆ. ಆತನ ತೀರ್ಪಿನಿಂದ ಸಂತೃಪ್ತನಾಗಿದ್ದೇನೆ. ಆತನನ್ನು ಭೇಟಿಯಾಗುವ ಖಾತರಿಯಿದೆ. ಮತ್ತು ದೇವರ ಬಳಿಯಿರುವುದು ಉತ್ತಮವಾದದ್ದು ಮತ್ತು ಶಾಶ್ವತವಾದದ್ದು ಎಂದು ಖಚಿತವಾಗಿದೆ. ಓ ದೇವರೇ, ನನ್ನನ್ನು ಶಹೀದರ ಸಾಲಿನಲ್ಲಿ ಸ್ವೀಕರಿಸು, ನನ್ನ ಭೂತಕಾಲದ ಮತ್ತು ಭವಿಷ್ಯದ ಪಾಪಗಳನ್ನು ಕ್ಷಮಿಸು ಮತ್ತು ನನ್ನ ರಕ್ತವನ್ನು ನನ್ನ ಜನರು ಮತ್ತು ಕುಟುಂಬದ ಸ್ವಾತಂತ್ರ್ಯದ ಮಾರ್ಗವನ್ನು ಬೆಳಗಿಸುವ ಬೆಳಕಾಗಿಸು. ನಾನು ಕೊರತೆಯಾದರೆ ಕ್ಷಮಿಸಿ, ಕರುಣೆಯಿಂದ ಪ್ರಾರ್ಥಿಸಿ, ಏಕೆಂದರೆ ನಾನು ನನ್ನ ಒಡಂಬಡಿಕೆಯನ್ನು ಜಾಗೃತವಾಗಿರಿಸಿದ್ದೇನೆ ಮತ್ತು ಬದಲಾಯಿಸಿಲ್ಲ ಅಥವಾ ಬಿಟ್ಟುಕೊಟ್ಟಿಲ್ಲ.

ಗಾಜಾವನ್ನು ಮರೆಯಬೇಡಿ… ಮತ್ತು ನಿಮ್ಮ ಶುದ್ಧ ಪ್ರಾರ್ಥನೆಗಳಲ್ಲಿ ನನ್ನನ್ನು ಮರೆಯಬೇಡಿ.

ಅನಸ್ ಜಮಾಲ್ ಅಲ್-ಶರೀಫ್
06 ಏಪ್ರಿಲ್ 2025

ಇದು ಎಂತಹ ಮನಕಲಕುವ ಹಾಗೂ ಭಿನ್ನ ಬಗೆಯ ಉಯಿಲು!

ಒಂದು ಮೂಲದ ಅನ್ವಯ ಗಾಝಾ ಪಟ್ಟಿಯಲ್ಲಿ ಅಕ್ಟೋಬರ್‌ 7, 2023ರ ತರುವಾಯ ಸುಮಾರು 260ಕ್ಕೂ ಹೆಚ್ಚು ಪತ್ರಕರ್ತರು ಇಸ್ರೇಲಿ ಮಿಲಿಟರಿ ದಾಳಿಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ! ಅನಸ್-ಅಲ್-‌ಶರೀಫ್‌ನಿಗೆ, ಆತನ ಕಾರ್ಯತತ್ಪರತೆ ಹಾಗೂ ಬದ್ಧತೆಗೆ ಒಂದು ಸಲಾಮು.

Five Palestine Aljazeera journalists killed by Israeli Defence Force
ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

1 COMMENT

  1. ಮನಕಲಕುವ ಒಂದು ಜೀವ , ಸಾವಿನ ನಂತರವೂ ಕಾಡುತ್ತದೆ ಎಂದಾದರೆ ಅದು ಬದ್ಧತೆಯ ಅಸ್ಮಿತೆ ! ಅದಕ್ಕೆ ಮನುಕುಲದ ಜೀವ ಸೆಲೆ ತುಂಬಿಕೊಂಡಿದೆಯೇ ಹೊರತು ದೇಶ ಧರ್ಮದ ನೆಲೆಯಿಲ್ಲ . ಅವಾಸ್ತವಿಕ, ಅತಾರ್ಕಿಕ ಸರಹದ್ದುಗಳು , ವಿಚ್ಚಿದ್ರಕಾರಿ ದಮನಗಳು ಇಂತಹ ಮನಸ್ಸುಗಳನ್ನು ವಿಭಜಿಸಿಲ್ಲಾ ಎಂಬುದು ನಿತ್ಯ ಸತ್ಯ . ಉಯಿಲು , ಒಂದು ಸ್ಥಿತ್ಯಂತರದ ನಿರಂತರ ಆಶೋತ್ತರಗಳ , ಜನ ಸಮುದಾಯದ ಪ್ರಜ್ಞೆ !
    ಪ್ರಜ್ಞಾವಂತರು ಎಚ್ಚರಗೊಳ್ಳುವ , ಸಾಧ್ಯ ಮಾಡಿಕೊಳ್ಳುವ ಪರಿ ! ನಿರಂತರ ಪ್ರಕ್ರಿಯೆ , ಜೀವ ಧಾತು !
    ರಮೇಶ್ ಚಂದ್ ಎಚ್ ಸಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X