ಚುನಾವಣಾ ವಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ನಡೆಸುತ್ತಿದೆ. ಒಂದು ವೇಳೆ, ಎಸ್‌ಐಆರ್ ಪ್ರಕ್ರಿಯೆಯು ಕಾನೂನುಬಾಹಿರ ಎನ್ನುವುದು ದೃಢಪಟ್ಟರೆ, ಅದರ ಫಲಿತಾಂಶ ಮತ್ತು ಅದರ ಅಡಿಯಲ್ಲಿ ಸಿದ್ದಪಡಿಸಲಾದ ಮತದಾರಪಟ್ಟಿಯನ್ನು ಸೆಪ್ಟೆಂಬರ್‌ನಲ್ಲೂ ರದ್ದು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಚುನಾವಣಾ ಆಯೋಗವು ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪೌರತ್ವವನ್ನು ಪರಿಶೀಲಿಸುತ್ತಿದೆ. ಪೌರತ್ವದ ದಾಖಲೆಗಳನ್ನು ಕೇಳುತ್ತಿದೆ. ಪರೋಕ್ಷವಾಗಿ ಎನ್‌ಆರ್‌ಸಿಯನ್ನು ಜಾರಿಗೊಳಿಸುವ ರೀತಿಯಲ್ಲಿದೆ. ಈ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹಲವರು ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ, ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ‘ಎಸ್‌ಐಆರ್’ ಪ್ರಕ್ರಿಯೆಯನ್ನು ಮುಂದುವರೆಸಬಹುದು. ಆದರೆ, ಮತದಾರರ ದಾಖಲೆಯಾಗಿ ಆಧಾರ್ ಕಾರ್ಡ್‌ಅನ್ನೂ ಪರಿಗಣಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಇದೀಗ, ಇತ್ತೀಚೆಗೆ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಲ್ಲಿ ಹಲವರ ಹೆಸರುಗಳನ್ನು ಬಿಡಲಾಗಿದೆ. ಬದುಕಿರುವವರೂ ಸತ್ತಿದ್ದಾರೆಂದು ಪಟ್ಟಿಯಿಂದ ಹೊರಹಾಕಲಾಗಿದೆ. ಈ ಬಗ್ಗೆ ಅರ್ಜಿದಾರರು ಸಲ್ಲಿಸಿದ್ದ ಅಫಿಡವಿಟ್‌ಅನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸೂರ್ಯಕಾಂತ್ ಗಮನಿಸಿದ್ದಾರೆ. ಒಂದು ವೇಳೆ, ಎಸ್‌ಐಆರ್ ಕಾನೂನುಬಾಹಿರವೆಂದು ಕಂಡುಬಂದಲ್ಲಿ, ಆ ಪ್ರಕ್ರಿಯೆಯನ್ನು ಸೆಪ್ಟೆಂಬರ್‌ನಲ್ಲೂ ರದ್ದುಗೊಳಿಸಬಹುದು ಎಂದು ಹೇಳಿದ್ದಾರೆ.
ಪೌರತ್ವವನ್ನು ನಿರ್ಧರಿಸುವುದು ಕೇಂದ್ರ ಗೃಹ ಸಚಿವಾಲಯದ ಬರುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಪ್ರತಿವಾದ ಮಂಡಿಸಿರುವ ಆಯೋಗ, “ಆಧಾರ್ ಕಾರ್ಡ್, ಪಾನ್ ಕಾರ್ಡ್ ಮಾತ್ರವಲ್ಲದೆ, ಸ್ವತಃ ಚುನಾವಣಾ ಆಯೋಗವೇ ನೀಡಿರುವ ಮತದಾರರ ಗುರುತುಚೀಟಿ ಕೂಡ ಮತದಾತದಾರರು ತಾನು ಭಾರತೀಯ ಪ್ರಜೆ ಎಂಬುದನ್ನು ಸಾಬೀತು ಪಡಿಸುವ ಪೌರತ್ವ ದಾಖಲೆಯಲ್ಲ” ಎಂದು ಹೇಳಿದೆ.
ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, “ಮತದಾರರ ಪಟ್ಟಿಗೆ ನಾಗರಿಕರನ್ನು ಸೇರಿಸುವುದು ಮತ್ತು ನಾಗರಿಕರ ಅಲ್ಲದವರನ್ನು ಕೈಬಿಡುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ಆಧಾರ್ ಪೌರತ್ವದ ಪುರಾವೆಯಲ್ಲ. ಆದರೆ, ಭಾರತೀಯರ ಪೌರತ್ವವನ್ನು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಅಧಿಕಾರ ಇದೆಯೇ ಎಂಬುದನ್ನು ಮೊದಲ ಇತ್ಯರ್ಥ ಮಾಡಬೇಕಿದೆ. ಪೌರತ್ವದ ಪುರಾವೆ ಕೇಳುವ ಅಧಿಕಾರ ಆಯೋಗಕ್ಕೆ ಇಲ್ಲದಿದ್ದರೆ, ಅಲ್ಲಿಗೆ ಎಲ್ಲವೂ ಮುಗಿಯುತ್ತದೆ” ಎಂದು ಹೇಳಿದ್ದಾರೆ.