ಥಿನ್ನರ್ ಬಾಟಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ತಂದೆ ಮತ್ತು ಮಗ ಬೆಂಕಿಯಲ್ಲಿ ಸಿಲುಕಿಕೊಂಡು 4 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಧಾರವಾಡದ ಸಂತೋಷ ನಗರದಲ್ಲಿ ನಿನ್ನೆ (ಆ.15) ನಡೆದಿದೆ.
ಮೃತ ಬಾಲಕ ಅಗಸ್ತ್ಯ ಮಾಶ್ಯಾಳ್‌ನ ತಂದೆ ಚಂದ್ರಕಾಂತ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.
ಅಗಸ್ತ್ಯನ ತಾಯಿ ಬಾಣಂತಿ ಇರುವುದರಿಂದ ಬಿಸಿ ತಾಗಿಸಲು ಅಗ್ಗಿಷ್ಟಿಕೆಯನ್ನು ಬಳಸಲಾಗುತ್ತಿದ್ದು, ಅಗ್ಗಿಷ್ಟಿಕೆಗೆ ಬೆಂಕಿ ಹಚ್ಚಲು ಬಾಲಕನ ಅಜ್ಜಿ ಪ್ರಯತ್ನಿಸುತ್ತಿದ್ದರು. ನಿರಂತರ ಮಳೆಯಿಂದ ಅಗ್ಗಿಷ್ಟಿಕೆಯಲ್ಲಿದ್ದ ಕಟ್ಟಿಗೆ ಹಸಿಯಾಗಿ ಬೆಂಕಿ ಹತ್ತುತ್ತಿರಲಿಲ್ಲ. ಆಗ ಚಂದ್ರಕಾಂತ್, ಸ್ವಲ್ಪ ಥಿನ್ನರ್ ಹಾಕುವಂತೆ ಹೇಳಿದ್ದಾರೆ. ಥಿನ್ನರ್ ಹಾಕುತ್ತಿದ್ದಂತೆ ಬೆಂಕಿ ಜೋರಾಗಿ ಥಿನ್ನರ್ ಬಾಟಲ್ಗೂ ಹೊತ್ತಿಕೊಂಡಿದೆ.
ದಿಢೀರನೆ ಥಿನ್ನರ್ ಬಾಟಲ್ ಅನ್ನು ಹೊರಗೆ ಎಸೆಯಲು ಅಗಸ್ತ್ಯನ ಅಜ್ಜಿ ಪ್ರಯತ್ನಿಸಿದಾಗ, ಬಾಟಲ್ ತಪ್ಪಿ, ಚಂದ್ರಕಾಂತ್ ಮತ್ತು ಅಗಸ್ತ್ಯ ಇದ್ದ ಕೋಣೆಯೊಳಗೆ ಹೋಗಿದೆ. ಏಕಾಏಕಿ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡು ಚಂದ್ರಕಾಂತ್ ಮತ್ತು ಆಗಸ್ತ್ಯ ಕೋಣೆಯಲ್ಲೇ ಸಿಲುಕಿಕೊಂಡಿದ್ದಾರೆ. ಕೋಣೆಯಲ್ಲಿದ್ದ ಚಂದ್ರಕಾಂತ್ ಮತ್ತು ಅಗಸ್ತ್ಯನನ್ನು ರಕ್ಷಿಸಿ ಹೊರಗೆ ಕರೆದುಕೊಂಡು ಬರುವಷ್ಟರಲ್ಲಿ ಇಬ್ಬರಿಗೂ ಸಾಕಷ್ಟು ಸುಟ್ಟಗಾಯಗಳಾಗಿದ್ದವು. ಇಬ್ಬರನ್ನೂ ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಕೂಡ, ಬಾಲಕ ಅಗಸ್ತ್ಯ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಧಾರವಾಡ | ನಿಜ ಜೀವನದಲ್ಲಿ ʼತಲೆದಂಡʼ ನಾಟಕದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಡಿಸಿ ದಿವ್ಯ ಪ್ರಭು
ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.